P. O. C ബൈബിള്
ಹಳೆಯ ಒಡಂಬಡಿಕೆ
ನ್ಯಾಯಸ್ಥಾಪಕರು
1ನೇ ಅಧ್ಯಾಯ
- Verse 1: ಯೆಹೋಶುವನು ಮರಣಹೊಂದಿದ ಬಳಿಕ ಇಸ್ರಯೇಲರು ಕಾನಾನ್ಯರೊಡನೆ ಯುದ್ಧಮಾಡಲು ತಮ್ಮಲ್ಲಿ ಯಾವ ಕುಲ ಮುಂದಾಗಿ ಹೋಗಬೇಕೆಂದು ಸರ್ವೇಶ್ವರಸ್ವಾಮಿಯನ್ನು ವಿಚಾರಿಸಿದರು.
- Verse 2: “ಯೆಹೂದ ಕುಲ ಹೋಗಲಿ; ಇಗೋ, ನಾಡನ್ನು ಅವರ ಕೈಗೆ ಒಪ್ಪಿಸಿದ್ದೇನೆ,” ಎಂದರು ಸರ್ವೇಶ್ವರ.
- Verse 3: ಆಗ ಯೆಹೂದಕುಲದವರು ತಮ್ಮ ಸೋದರರಾದ ಸಿಮೆಯೋನ್ಯರಿಗೆ, “ಕಾನಾನ್ಯರೊಡನೆ ಯುದ್ಧಮಾಡಲು ನೀವೂ ನಮ್ಮ ಸಂಗಡ ಸ್ವಂತಪ್ರಾಂತ್ಯಕ್ಕೆ ಬನ್ನಿ; ಅನಂತರ ನಾವೂ ನಿಮ್ಮ ಸಂಗಡ ನಿಮ್ಮ ಸ್ವಂತಪ್ರಾಂತ್ಯಕ್ಕೆ ಬರುತ್ತೇವೆ,” ಎಂದು ಹೇಳಿದರು.
- Verse 4: ಅವರು ಒಪ್ಪಿ ಯೆಹೂದ ಕುಲದವರ ಜೊತೆ ಯುದ್ಧಕ್ಕೆ ಹೋದರು. ಸರ್ವೇಶ್ವರ ಕಾನಾನ್ಯರನ್ನು ಹಾಗು ಪೆರಿಜ್ಜೀಯರನ್ನು ಅವರ ಕೈವಶ ಮಾಡಲು ಅವರು ಹತ್ತುಸಾವಿರ ಶತ್ರುಗಳನ್ನು ಬೆಜೆಕಿನಲ್ಲಿ ಸೋಲಿಸಿದರು.
- Verse 5: ಅದೋನೀಬೆಜೆಕನನ್ನು ಅಲ್ಲಿ ಎದುರುಗೊಂಡು ಯುದ್ಧಮಾಡಿ ಸೋಲಿಸಿದರು.
- Verse 6: ಅದೋನೀಬೆಜೆಕನು ಅಲ್ಲಿಂದ ಓಡಿಹೋಗುತ್ತಿರುವಾಗ ಅವನನ್ನು ಹಿಂದಟ್ಟಿ ಹಿಡಿದು ಅವನ ಕೈಕಾಲುಗಳ ಹೆಬ್ಬೆರಳುಗಳನ್ನು ಕತ್ತರಿಸಿಬಿಟ್ಟರು.
- Verse 7: ಆಗ ಅದೋನೀಬೆಜೆಕನು, “ಎಪ್ಪತ್ತು ಮಂದಿ ಅರಸರ ಕೈಕಾಲುಗಳ ಹೆಬ್ಬೆರಳುಗಳನ್ನು ನಾನು ಕತ್ತರಿಸಿದೆ; ನನ್ನ ಊಟದ ಮೇಜಿನ ಕೆಳಗೆ ಬೀಳುತ್ತಿದ್ದ ಚೂರುಪಾರುಗಳನ್ನು ಅವರು ತಿನ್ನುತ್ತಿದ್ದರು; ನಾನು ಅವರಿಗೆ ಮಾಡಿದಂತೆಯೇ ದೇವರು ನನಗೆ ಮಾಡಿದ್ದಾರೆ,” ಎಂದನು. ಅವನನ್ನು ಜೆರುಸಲೇಮಿಗೆ ಕರೆತರಲು ಅವನು ಅಲ್ಲೇ ನಿಧನನಾದನು.
- Verse 8: ಯೆಹೂದ ಕುಲದವರು ಜೆರುಸಲೇಮಿನೊಡನೆ ಯುದ್ಧಮಾಡಿದರು. ಆ ಜನರನ್ನು ಕತ್ತಿಗೆ ತುತ್ತಾಗಿಸಿ ಅವರ ಪಟ್ಟಣವನ್ನು ಸುಟ್ಟುಹಾಕಿದರು.
- Verse 9: ಅನಂತರ ಅವರು ಪರ್ವತಪ್ರದೇಶ, ದಕ್ಷಿಣಸೀಮೆ ಮತ್ತು ತಗ್ಗುಪ್ರದೇಶ ಇವುಗಳಿಗೆ ಹೋಗಿ ಅಲ್ಲಿದ್ದ ಕಾನಾನ್ಯರೊಡನೆ ಯುದ್ಧಮಾಡಿದರು.
- Verse 10: ‘ಕಿರ್ಯತರ್ಬ’ ಎಂದು ಈ ಮುಂದೆ ಹೆಸರುಗೊಂಡಿದ್ದ ಹೆಬ್ರೋನಿಗೆ ಹೋಗಿ ಅಲ್ಲಿದ್ದ ಕಾನಾನ್ಯರ ಮೇಲೆ ದಾಳಿಮಾಡಿ ಅವರಲ್ಲಿ ಶೇಷೈ, ಅಹೀಮನ್, ತಲ್ಮೈ ಎಂಬವರನ್ನು ಸೋಲಿಸಿದರು.
- Verse 11: ಅಲ್ಲಿಂದ ದೆಬೀರಿನವರೆಗೆ ತೆರಳಿ ಅಲ್ಲಿಯವರ ವಿರುದ್ಧ ಯುದ್ಧಮಾಡಿದರು. ದೆಬೀರಕ್ಕೆ ಇದಕ್ಕೆ ಮುಂಚೆ ‘ಕಿರ್ಯತ್ ಸೇಫೆರ್’ ಎಂಬ ಹೆಸರಿತ್ತು.
- Verse 12: ಕಿರ್ಯತ್ ಸೇಫೆರನ್ನು ಹಿಡಿದುಕೊಳ್ಳುವವನಿಗೆ ತನ್ನ ಮಗಳು ‘ಅಕ್ಷಾ’ ಎಂಬಾಕೆಯನ್ನು ಕೊಟ್ಟು ಮದುವೆ ಮಾಡುವುದಾಗಿ ಕಾಲೇಬನು ಹೇಳಿದ್ದನು.
- Verse 13: ಅಂತೆಯೇ ಅವನ ತಮ್ಮನೂ ಕೆನಜನ ಮಗನೂ ಆದ ಒತ್ನೀಯೇಲನು ಅದನ್ನು ಹಿಡಿದುಕೊಂಡಾಗ ಕಾಲೇಬನು ತನ್ನ ಮಗಳು ಅಕ್ಷಾ ಎಂಬಾಕೆಯನ್ನು ಆತನಿಗೆ ಮದುವೆಮಾಡಿಕೊಟ್ಟನು.
- Verse 14: ಆಕೆ ಬಂದಾಗ ತನ್ನ ತಂದೆಯ ಬಳಿ ಭೂಮಿಯನ್ನು ಕೇಳುವಂತೆ ಗಂಡನನ್ನು ಪ್ರೇರೇಪಿಸಿದಳು. ಆಕೆ ಕತ್ತೆಯಿಂದ ಇಳಿಯುವಾಗ ಕಾಲೇಬನು, “ನಿನಗೇನು ಬೇಕು,” ಎಂದು ಕೇಳಲು ಅವಳು, “ನನ್ನನ್ನು ಬೆಂಗಾಡಿಗೆ ಕೊಟ್ಟುಬಿಟ್ಟಿರಿ,
- Verse 15: ಬುಗ್ಗೆಗಳಿರುವ ಭೂಮಿಯನ್ನು ದಾನವಾಗಿ ಕೊಡಿ,” ಎಂದಳು. ಕಾಲೇಬನು ಆಕೆಗೆ ಮೇಲಿನ ಹಾಗು ಕೆಳಗಿನ ಬುಗ್ಗೆಗಳನ್ನು ದಾನ ಮಾಡಿದನು.
- Verse 16: ಕೇನ್ಯನೂ ಮೋಶೆಯ ಮಾವನೂ ಆದ ಹೋಬಾಬನ ವಂಶದವರು ಖರ್ಜೂರ ನಗರದಿಂದ ಹೊರಟು ಯೆಹೂದ ಕುಲದವರ ಜೊತೆಯಲ್ಲಿ ಆರಾದಿನ ದಕ್ಷಿಣದಲ್ಲಿರುವ ಯೆಹೂದ ಮರುಭೂಮಿಗೆ ಬಂದು ಅಲ್ಲಿಯ ಜನರ ಸಂಗಡ ವಾಸಮಾಡಿದರು.
- Verse 17: ತರುವಾಯ ಯೆಹೂದಕುಲದವರು ತಮ್ಮ ಬಂಧುಗಳಾದ ಸಿಮೆಯೋನ್ ಕುಲದವರ ಸಂಗಡ ಹೋಗಿ ‘ಚೆಫತ್’ ಎಂಬ ಪಟ್ಟಣದಲ್ಲಿದ್ದ ಕಾನಾನ್ಯರನ್ನು ಸೋಲಿಸಿ ಆ ಪಟ್ಟಣವನ್ನು ಹಾಳುಮಾಡಿ ಅದನ್ನು ‘ಹೋರ್ಮಾ’ ಎಂದು ಕರೆದರು.
- Verse 18: ಅನಂತರ ಅವರು ಗಾಜಾ, ಅಷ್ಕೆಲೋನ್, ಎಕ್ರೋನ್ ಎಂಬ ಪಟ್ಟಣಗಳನ್ನೂ ಅವುಗಳ ಮೇರೆಗಳನ್ನೂ ಸ್ವಾಧೀನಮಾಡಿಕೊಂಡರು.
- Verse 19: ಸರ್ವೇಶ್ವರ ಯೆಹೂದಕುಲದವರ ಸಂಗಡ ಇದ್ದುದರಿಂದ ಅವರು ಪರ್ವತ ಪ್ರದೇಶಗಳನ್ನೆಲ್ಲಾ ಸ್ವತಂತ್ರಿಸಿಕೊಂಡರು. ಆದರೆ ತಗ್ಗಿನ ಪ್ರದೇಶಗಳಲ್ಲಿ ವಾಸಿಸುವವರಿಗೆ ಕಬ್ಬಿಣ ರಥಗಳಿದ್ದುದರಿಂದ ಅವರನ್ನು ಹೊರಗಟ್ಟಲು ಆಗಲಿಲ್ಲ.
- Verse 20: ಮೋಶೆ ಆಜ್ಞಾಪಿಸಿದಂತೆ ಅವರು ಕಾಲೇಬನಿಗೆ ಹೆಬ್ರೋನ್ ಪಟ್ಟಣವನ್ನು ಕೊಟ್ಟರು; ಅವನು ಅನಾಕನ ಮೂರು ಮಂದಿ ಮಕ್ಕಳನ್ನು ಅಲ್ಲಿಂದ ಅಟ್ಟಿಬಿಟ್ಟನು.
- Verse 21: ಜೆರುಸಲೇಮಿನಲ್ಲಿದ್ದ ಯೆಬೂಸಿಯರನ್ನು ಹೊರಡಿಸಲು ಬೆನ್ಯಾಮೀನ್ಯರಿಂದ ಆಗದೆಹೋಯಿತು. ಅವರು ಇಂದಿನವರೆಗೂ, ಬೆನ್ಯಾಮೀನ್ಯರ ಸಂಗಡ ಜೆರುಸಲೇಮಿನಲ್ಲೇ ವಾಸವಾಗಿ ಇದ್ದಾರೆ.
- Verse 22: ಇವರ ಹಾಗೆಯೇ ಜೋಸೆಫನ ಕುಲದವರು ಹೊರಟು ಬೇತೇಲಿಗೆ ಬಂದರು. ಸರ್ವೇಶ್ವರಸ್ವಾಮಿ ಅವರೊಂದಿಗೆ ಇದ್ದರು.
- Verse 23: ಅವರು ‘ಲೂಜ್’ ಎಂದು ಕರೆಯಲಾದ ಬೇತೇಲ್ ಊರನ್ನು ಸಂಚರಿಸಿ ನೋಡಲು ಗೂಢಚಾರರನ್ನು ಕಳುಹಿಸಿದರು.
- Verse 24: ಇವರು ಆ ಊರೊಳಗಿಂದ ಬರುತ್ತಿದ್ದ ಒಬ್ಬ ವ್ಯಕ್ತಿಯನ್ನು ಕಂಡು, “ದಯಮಾಡಿ, ಪಟ್ಟಣದೊಳಗೆ ನುಗ್ಗಬಹುದಾದ ದಾರಿಯನ್ನು ನಮಗೆ ತೋರಿಸಿಕೊಡು; ನಾವು ನಿನಗೆ ಒಳ್ಳೆಯದನ್ನೇ ಮಾಡುತ್ತೇವೆ,” ಎಂದರು. ಅವನು ಅವರಿಗೆ ಆ ದಾರಿಯನ್ನು ತೋರಿಸಿದನು.
- Verse 25: ಹೀಗೆ ಅವರು ಆ ಪಟ್ಟಣವನ್ನು ಕತ್ತಿಗೆ ತುತ್ತಾಗಿಸಿದರು. ಆದರೆ ಆ ವ್ಯಕ್ತಿಯನ್ನು ಮತ್ತು ಅವನ ಕುಟುಂಬದವರನ್ನು ಕಳುಹಿಸಿಬಿಟ್ಟರು.
- Verse 26: ಅವನು ಹಿತ್ತಿಯರ ದೇಶಕ್ಕೆ ಹೋಗಿ ಒಂದು ಪಟ್ಟಣವನ್ನು ಕಟ್ಟಿಕೊಂಡು ಅದಕ್ಕೆ ‘ಲೂಜ್’ ಎಂದು ಹೆಸರಿಟ್ಟನು. ಅದಕ್ಕೆ ಇಂದಿನವರೆಗೂ ಅದೇ ಹೆಸರು ಉಳಿದಿದೆ.
- Verse 27: ಮನಸ್ಸೆಕುಲದವರು ಬೇತ್ ಷೆಯಾನ್, ತಾನಾಕ್, ದೋರ್, ಇಬ್ಲೆಯಾಮ್, ಮೆಗಿದ್ದೋ ಎಂಬ ಪಟ್ಟಣಗಳನ್ನೂ ಅವುಗಳ ಗ್ರಾಮಗಳನ್ನೂ ಸ್ವಾಧೀನಮಾಡಿಕೊಳ್ಳಲಿಲ್ಲ, ಆದುದರಿಂದ ಕಾನಾನ್ಯರು ಆ ಪ್ರಾಂತ್ಯಗಳಲ್ಲೇ ವಾಸಿಸುವುದಕ್ಕೆ ನಿರ್ಧರಿಸಿಕೊಂಡರು.
- Verse 28: ಇಸ್ರಯೇಲರು ಬಲಗೊಂಡ ಮೇಲೆ ಅವರನ್ನು ದಾಸತ್ವದಲ್ಲಿ ಇಟ್ಟುಕೊಂಡರೇ ಹೊರತು ಅಲ್ಲಿಂದ ಅಟ್ಟಿಬಿಡಲಿಲ್ಲ.
- Verse 29: ಎಫ್ರಯಿಮ್ ಕುಲದವರು ಗೆಜೆರಿನಲ್ಲಿದ್ದ ಕಾನಾನ್ಯರನ್ನು ಹೊರಡಿಸಿಬಿಡಲಿಲ್ಲ. ಆದುದರಿಂದ ಅವರು ಅವರ ನಡುವೆಯೇ ವಾಸಿಸಿದರು.
- Verse 30: ಜೆಬುಲೂನ್ ಕುಲದವರು ಕಿಟ್ರೋನ್, ನಹಲೋಲ್ ಎಂಬ ಪಟ್ಟಣಗಳ ನಿವಾಸಿಗಳನ್ನು ಅಟ್ಟಿಬಿಡಲಿಲ್ಲ. ಆದರೆ ಆ ಕಾನಾನ್ಯರು ಅವರಿಗೆ ಗುಲಾಮರಾಗಿ ಅವರ ಮಧ್ಯದಲ್ಲೇ ವಾಸಮಾಡಿದರು.
- Verse 31: ಆಶೇರ್ಯ ಕುಲದವರು ಆಕ್ಕೋ, ಚೀದೋನ್, ಆಹ್ಲಾಬ್, ಅಕ್ಜೀಬ್, ಹೆಲ್ಬಾ, ರೆಹೋಬ್ ಎಂಬ ಪಟ್ಟಣಗಳನ್ನು ಸ್ವಾಧೀನಮಾಡಿಕೊಳ್ಳಲಿಲ್ಲ;
- Verse 32: ಅವರು ಆ ದೇಶದ ಕಾನಾನ್ಯರನ್ನು ಹೊರಡಿಸದೆ ಅವರ ಮಧ್ಯದಲ್ಲೇ ವಾಸಮಾಡಿದರು.
- Verse 33: ನಫ್ತಾಲಿ ಕುಲದವರು ಬೇತ್ ಷೆಮೆಷ್, ಬೇತನಾತ್ ಎಂಬ ಊರುಗಳನ್ನು ಸ್ವತಂತ್ರಿಸಿಕೊಳ್ಳದೆ ಅಲ್ಲಿಯ ನಿವಾಸಿಗಳಾದ ಕಾನಾನ್ಯರ ಮಧ್ಯದಲ್ಲೇ ವಾಸಮಾಡಿದರು. ಮತ್ತು ಆ ಬೇತ್ ಷೆಮೆಷ್, ಬೇತನಾತ್ ಊರುಗಳ ಜನರು ಅವರಿಗೆ ಗುಲಾಮರಾದರು.
- Verse 34: ಇದಲ್ಲದೆ ಅಮೋರಿಯರು ದಾನ್ ಕುಲದವರನ್ನು ತಗ್ಗಿನ ಪ್ರದೇಶಕ್ಕೆ ಇಳಿಯಗೊಡದೆ ಹಿಂದಟ್ಟಿ ಬೆಟ್ಟಗಳಿಗೆ ಓಡಿಸಿಬಿಟ್ಟರು.
- Verse 35: ಹೀಗೆ ಅಮೋರಿಯರು ಹರ್ ಹೆರೆಸ್, ಅಯ್ಯಾಲೋನ್, ಶಾಲ್ಬೀಮ್ ಎಂಬ ಊರುಗಳಲ್ಲೇ ವಾಸಿಸಲು ನಿರ್ಧಾರಮಾಡಿದರು. ಆದರೆ ಜೋಸೆಫ್ ಕುಲದವರ ಪ್ರಭಾವ ಹೆಚ್ಚಾದ ಮೇಲೆ ಅವರಿಗೆ ಗುಲಾಮರಾದರು.
- Verse 36: ಅಮೋರಿಯರ ಮೇರೆಯು ಅಕ್ರಬ್ಬೀಮ್ ಕಣಿವೆಯಲ್ಲಿರುವ ಬಂಡೆಯಿಂದ ಮೇಲಕ್ಕೆ ವಿಸ್ತರಿಸಿಕೊಂಡಿದೆ.