P. O. C ബൈബിള്
ಹಳೆಯ ಒಡಂಬಡಿಕೆ
ಪರಮಗೀತೆ
1ನೇ ಅಧ್ಯಾಯ
- Verse 1: ಸೊಲೊಮೋನನ ಪರಮಗೀತೆ : ನಲ್ಲೆ :
- Verse 2: ಚುಂಬಿಸೆನ್ನನು ನಿನ್ನ ತುಟಿಗಳಿಂದ ನಿನ್ನ ಪ್ರೀತಿ ಅತಿ ಮಧುರ ಮಧುಪಾನಕ್ಕಿಂತ.
- Verse 3: ನೀನು ಹಚ್ಚಿಕೊಂಡಿರುವ ತೈಲ ಎನಿತು ಸುವಾಸನೀಯ ಸುರಿದ ಪರಿಮಳದಂತೆ ವ್ಯಾಪ್ತ ನಿನ್ನ ನಾಮಾಂಕಿತ ಕನ್ಯೆಯರೆಲ್ಲರು ನಿನ್ನನು ಪ್ರೀತಿಸದಿರಲು ಅಸಾಧ್ಯ.
- Verse 4: ನನ್ನನ್ನು ತುಸು ಎಳೆ, ಓಡೋಣ ನಾವು ಮುಂದಕ್ಕೆ; ಅರಸನಾಗಿರು ನನಗೆ ಕರೆದೊಯ್ಯಿ ನನ್ನನ್ನು ಅಂತಃಪುರಕ್ಕೆ. ಹರ್ಷಿಸೋಣ, ಒಂದಿಗೆ ಆನಂದಿಸೋಣ ಮಧುಪಾನಕ್ಕಿಂತ ನಿನ್ನ ಪ್ರೀತಿ ಸ್ತುತ್ಯಾರ್ಹ ನಿನ್ನನ್ನು ಪ್ರೀತಿಸುವುದು ಎನಿತು ಸಹಜ!
- Verse 5: ಓ ಜೆರುಸಲೇಮಿನ ಮಹಿಳೆಯರೇ, ನಾನು ಕಪ್ಪಾಗಿರುವೆ ಕೇದಾರಿನ ಗುಡಾರಗಳಂತೆ ಆದರೂ ಚೆಲುವೆ ಸೊಲೊಮೋನನಾ ಪರದೆಗಳಂತೆ.
- Verse 6: ದಿಟ್ಟಿಸಿ ನೋಡಬೇಡಿ ನನ್ನ ರೂಪವನ್ನೆ ನಾ ಕಪ್ಪಾಗಿರುವುದು ಸೂರ್ಯನ ತಾಪದಿಂದಲೆ. ಸಿಟ್ಟುಗೊಂಡರು ಸಹೋದರರು ನನ್ನ ಮೇಲೆ ಅಟ್ಟಿದರು ನನ್ನನು ತೋಟಕಾಯುವುದಕ್ಕೆ ಗಮನ ಕೊಡಲಾಗಲಿಲ್ಲ ನನ್ನ ತನು ತೋಟಕ್ಕೆ.
- Verse 7: ನನ್ನ ಪ್ರಾಣಪ್ರಿಯನೇ ಹೇಳು: ನಿನ್ನ ಮಂದೆಯನ್ನು ನೀನು ಮೇಯಿಸುವುದೆಲ್ಲಿ? ನಡುಹಗಲಲ್ಲಿ ಅದು ವಿಶ್ರಮಿಸುವುದೆಲ್ಲಿ? ನಾನೇಕೆ ಅಲೆಯಬೇಕು ಮುಸುಕು ಹಾಕಿದವಳಂತೆ ನಿನ್ನ ಗೆಳೆಯರ ಮಂದೆಗಳ ಹಿಂದೆ? ನಲ್ಲ :
- Verse 8: ಸ್ತ್ರೀಯರಲ್ಲಿ ಅತಿ ಸುಂದರಿಯೇ, ನಿನಗಿದು ಗೊತ್ತಿಲ್ಲವಾದರೆ ಹೋಗು ಕುರಿಹಿಂಡಿನ ಜಾಡಿನಲ್ಲೆ ಮೇಯಿಸು ನಿನ್ನ ಮೇಕೆಮರಿಗಳನೆ ಕುರುಬರ ಗುಡಾರಗಳ ಸಮೀಪದಲ್ಲೆ.
- Verse 9: ಫರೋಹನ ರಥವನ್ನೆಳೆವ ಹೆಣ್ಣುಕುದುರೆಗೆ ಹೋಲಿಸಿರುವೆ ನಾ ನಿನ್ನನು ಪ್ರಿಯಳೇ.
- Verse 10: ಎಷ್ಟು ಅಂದವಾಗಿವೆ ನಿನ್ನ ಕೆನ್ನೆಗಳು ಕಿವಿಯೋಲೆಗಳಿಂದ! ನಿನ್ನ ಕೊರಳು ಕಂಠಹಾರಗಳಿಂದ!
- Verse 11: ಮಾಡಿಸುವೆ ನಿನಗೆ ಬಂಗಾರದ ಅಂಚು, ಬೆಳ್ಳಿಯ ಕುಚ್ಚು. ನಲ್ಲೆ :
- Verse 12: ಅತ್ತ ರಾಜನು ಮಂಚದ ಮೇಲೆ ಮಲಗಿಕೊಂಡಿರಲು ಇತ್ತ ಬೀರುತ್ತಿತ್ತು ನನ್ನ ಪರಿಮಳ ತೈಲ ಸುವಾಸನೆಯನು.
- Verse 13: ನನ್ನ ಭಾಗ್ಯಕ್ಕೆ ನನ್ನ ನಲ್ಲ ಸ್ತನಗಳ ಮಧ್ಯೆಯಿರುವ ಪರಿಮಳ ಚೀಲ.
- Verse 14: ನನ್ನ ಪಾಲಿಗೆ ನನ್ನ ಪ್ರಿಯನು ಏನ್ಗೆದಿಯ ತೋಟದ ಹೂಗೊಂಚಲು. ನಲ್ಲ :
- Verse 15: ಆಹಾ, ನನ್ನ ಪ್ರಿಯಳೇ, ನೀನೆಷ್ಟು ಚೆಲುವೆ ಆಹಾ, ನೀನೆಷ್ಟು ಕೋಮಲೆ ನಿನ್ನ ನೇತ್ರಗಳು ಪಾರಿವಾಳಗಳಂತೆ! ನಲ್ಲೆ :
- Verse 16: ಆಹಾ, ಎನ್ನಿನಿಯಾ, ನೀನೆಷ್ಟು ಸುಂದರ ನೀನೆಷ್ಟು ಮನೋಹರ!
- Verse 17: ನಮ್ಮ ಹಾಸಿಗೆ ಪಚ್ಚೆಪಸರೇ, ನಮ್ಮ ಮೇಲ್ಛಾವಣಿ ತುರಾಯಿ ಮರಗಳೇ ಅದರ ತೊಲೆಗಳು ದೇವದಾರು ವೃಕ್ಷಗಳೇ.