ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯೋಬನ ಗ್ರಂಥ
27ನೇ ಅಧ್ಯಾಯ
- Verse 1: ಯೋಬನು ಮತ್ತೆ ಪ್ರಸ್ತಾಪವೆತ್ತಿ ಹೀಗೆಂದನು:
- Verse 2: “ನನಗೆ ನ್ಯಾಯ ದೊರಕಿಸದ ಜೀವಂತ ದೇವರಾಣೆ, ನನ್ನ ಮನಸ್ಸನು ಕಹಿಯಾಗಿಸಿದ ಸರ್ವಶಕ್ತನಾಣೆ.
- Verse 3: ನನ್ನಲ್ಲಿ ಜೀವ ಉಸಿರಾಡುತ್ತಿರುವವರೆಗೆ, ನನ್ನ ಮೂಗಲ್ಲಿ ದೇವರು ಊದಿದ ಶ್ವಾಸವಿರುವವರೆಗೆ,
- Verse 4: ನನ್ನ ತುಟಿ ಅನ್ಯಾಯವನು ನುಡಿಯದು ನನ್ನ ನಾಲಿಗೆ ಎಷ್ಟುಮಾತ್ರಕ್ಕೂ ಮೋಸದ ಮಾತನಾಡದು.
- Verse 5: ನೀವು ನ್ಯಾಯವಂತರೆಂದು ನಾನು ಒಪ್ಪಿದರೆ ನನಗಿರಲಿ ಧಿಕ್ಕಾರ! ನಾನು ಸತ್ಯತೆಯನ್ನು ಕಳೆದುಕೊಳ್ಳಲಾರೆ ಸಾಯುವ ತನಕ.
- Verse 6: ನ್ಯಾಯನೀತಿಯನ್ನು ಬಿಡದೆ ಹಿಡಿವೆನು ಭದ್ರವಾಗಿ ನನ್ನ ಬಾಳಿನ ಯಾವ ದಿನದಂದೂ ನಿಂದಿಸಿದ್ದಿಲ್ಲ ನನ್ನ ಮನಸ್ಸಾಕ್ಷಿ.
- Verse 7: ನನ್ನ ಹಗೆಗೆ ದುಷ್ಟತನ ಗತಿಯಾಗಲಿ ಅನೀತಿವಂತನ ಪಾಡು ನನ್ನ ವಿರೋಧಿಗೆ ಒದಗಲಿ.
- Verse 8: ದೇವರೇ ದುಷ್ಟನ ಪ್ರಾಣ ತೆಗೆವ ಕಾಲಕ್ಕೆ ಅವನಿಗೆಲ್ಲಿಂದ ಬಂದೀತು ಭರವಸೆ!
- Verse 9: ಅವನಿಗೆ ಕಷ್ಟದುಃಖ ಬಂದೊದಗಲು ದೇವರು ಆಲೈಸುವನೆ ಅವನ ಮೊರೆಯನು?
- Verse 10: ಅವನು ಆನಂದಿಸುವನೆ ಸರ್ವಶಕ್ತನಲಿ? ಪ್ರಾರ್ಥನೆ ಮಾಡುವನೆ ಸರ್ವದಾ ಆತನಲಿ?
- Verse 11: ದೇವರ ಹಸ್ತಬಲವನು ಕುರಿತು ಬೋಧಿಸುವೆನು ಸರ್ವಶಕ್ತನ ಯೋಜನೆಯನು ನಿಮಗೆ ಮರೆಮಾಚೆನು.
- Verse 12: ಇಗೋ, ನೀವೆಲ್ಲರೂ ಇದನು ನೋಡಿದ್ದೀರಿ ಖುದ್ದಾಗಿ ಮತ್ತೆ ಏಕೆ ವಾದಿಸುತ್ತೀರಿ ವ್ಯರ್ಥವಾಗಿ?”
- Verse 13: “ಹೀಗಿರುತ್ತವೆ ದುಷ್ಟನಿಗೆ ದೇವರಿಂದ ದೊರಕುವ ಪಾಲು ಹಿಂಸಾಚಾರಿಗೆ ಸರ್ವಶಕ್ತನಿಂದ ಸಿಗುವ ಸೊತ್ತು:
- Verse 14: ಅವನಿಗೆ ಮಕ್ಕಳು ಹೆಚ್ಚಿದರೂ ಕತ್ತಿಗೆ ತುತ್ತಾಗುವರು ಅವನ ಸಂತತಿಯವರಿಗೆ ಊಟದ ಕೊರತೆ ತಪ್ಪದು.
- Verse 15: ಅವನ ಮನೆಯವರಲ್ಲಿ ಉಳಿದವರು ಗುಳಿಸೇರುವರು ವ್ಯಾಧಿಯಿಂದ ಅವನ ವಿಧವೆಯರು ಅವನಿಗೆ ನೆರವಾಗುವರು ಉತ್ತರಕ್ರಿಯೆಗಳಿಂದ.
- Verse 16: ಅವನು ಬೆಳ್ಳಿಯನ್ನು ಕೂಡಿಸಿಟ್ಟಿದ್ದರೂ ಧೂಳಿನಷ್ಟು, ವಸ್ತ್ರಗಳನು ಗುಡ್ಡೆ ಮಾಡಿಟ್ಟಿದ್ದರೂ ಮಣ್ಣಿನಷ್ಟು.
- Verse 17: ಸಜ್ಜನರು ಧರಿಸಿಕೊಳ್ಳುವರು ಆ ವಸ್ತ್ರಗಳನು ನಿರ್ದೋಷಿಗಳು ಹಂಚಿಕೊಳ್ಳುವರು ಆ ಬೆಳ್ಳಿಯನು.
- Verse 18: ಜೇಡರ ಹುಳದ ಗೂಡಿನಂತೆ ಕಾವಲುಗಾರನ ಗುಡಿಸಿಲಂತೆ ಬಡಕಲಾಗುವುದು ಅವನು ಕಟ್ಟಿಕೊಂಡ ಮನೆ.
- Verse 19: ಅವನು ನಿದ್ರಿಸಹೋಗುತ್ತಾನೆ ಹಣವಂತನಾಗಿ ಕಣ್ಣು ತೆರೆಯುತ್ತಲೆ ಇಲ್ಲವಾಗಿರುತ್ತದೆ ಆಸ್ತಿ! ಮತ್ತೆ ಇರುತ್ತಾನೆ ನಿದ್ರೆ ಕಾಣದವನಾಗಿ
- Verse 20: ವಿಪತ್ತುಗಳು ಅವನನ್ನು ಹಿಂದಟ್ಟಿ ಹಿಡಿಯುವುವು ಹೊಳೆಯಂತೆ ಬಿರುಗಾಳಿ ಅವನನ್ನು ಅಪಹರಿಸುವುದು ರಾತ್ರಿಯಲ್ಲೆ.
- Verse 21: ಅವನು ತೂರಿಹೋಗದಿರನು ಮೂಡಣಗಾಳಿ ಬಡಿಯುವುದರಿಂದ ಅವನನ್ನು ಹೊಡೆದು ಹಾರಿಸಿಬಿಡುವುದು ಅವನಿರುವ ಜಾಗದಿಂದ,
- Verse 22: ಅವನ ಮೇಲೆ ಅದು ಬೀಸುತ್ತದೆ ನಿರ್ದಾಕ್ಷಿಣ್ಯದಿಂದ ತಪ್ಪಿಸಿಕೊಳ್ಳಲು ಅವನು ಯತ್ನಿಸುತ್ತಾನೆ ಅದರ ಹೊಡೆತದಿಂದ.
- Verse 23: ಜನರು ಹಾಸ್ಯಮಾಡುತ್ತಾರೆ ಚಪ್ಪಾಳೆ ತಟ್ಟಿ ಅವನನ್ನು ಹೊರಗಟ್ಟುತ್ತಾರೆ ಛೀಮಾರಿ ಹಾಕಿ.”