ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
35ನೇ ಅಧ್ಯಾಯ
- Verse 1: ನನ್ನೊಡನೆ ವ್ಯಾಜ್ಯ ಮಾಡುವವರೊಡನೆ ವ್ಯಾಜ್ಯ ಮಾಡು I ನನ್ನೊಡನೆ ಕದನ ಮಾಡುವವರೊಡನೆ ಪ್ರಭು, ಕದನ ಮಾಡು
- Verse 2: ಖಡ್ಗ ಗುರಾಣಿಗಳನು ಧರಿಸಿಕೊ I ನನಗೆ ರಕ್ಷಣೆಯಾಗಿ ನಿಂತುಕೊ II
- Verse 3: ತಡೆ ನೀನು ಬಿಲ್ಲು ಬರ್ಜಿಯಿಂದ ಬೆನ್ನಟ್ಟಿಬರುವ ವೈರಿಯನು I ನೀಡೆನ್ನ ಮನಕೆ, ನೀನೆ ರಕ್ಷಕನೆಂಬ ಅಭಯವನು II
- Verse 4: ನನ್ನ ಕೊಲೆಗೆ ಯತ್ನಿಸುವವನು ತಲೆ ತಗ್ಗಿಸಲಿ ನಿರಾಶೆಗೊಂಡು I ನನಗೆ ಕೇಡನು ಮಾಡುವವರು ಓಡಿಹೋಗಲಿ ಗಲಿಬಿಲಿಗೊಂಡು II
- Verse 5: ಬಿರುಗಾಳಿಗೆ ತರಗೆಲೆಯಂತೆ ತೂರಿಹೋಗಲಿ I ಪ್ರಭುವಿನ ದೂತನವರನು ಬೆನ್ನಟ್ಟಿ ಹೋಗಲಿ II
- Verse 6: ಇಳಿಜಾರು, ಕಾರಿರುಳು ಇರುವ ಹಾದಿಯಲಿ I ಪ್ರಭುವಿನ ದೂತನವರನು ಓಡಿಸಿಬಿಡಲಿ II
- Verse 7: ನಿಷ್ಕಾರಣ ಕೊಲೆಮಾಡಲೆನ್ನ ಬಲೆಯೊಡ್ಡಿಹರು I ಆ ಕಾರಣ ಪ್ರಾಣ ತೆಗೆಯಲು ಗುಂಡಿ ತೋಡಿಹರು II
- Verse 8: ಒಡ್ಡಿದ ಬಲೆಯಲಿ ಒಡ್ಡಿದವನೇ ಪಟಕ್ಕನೆ ಸಿಕ್ಕಿಬೀಳಲಿ I ತೋಡಿದ ಗುಣಿಯಲಿ ತೋಡಿದವನೇ ತಟಕ್ಕನೆ ಬಿದ್ದುಹೋಗಲಿ II
- Verse 9: ಆಗೆನ್ನ ಮನವು ಆನಂದಗೊಳ್ಳುವುದು ಪ್ರಭುವಿನಲಿ I ಆಹ್ಲಾದಗೊಳ್ಳುವುದು ಆತನಿತ್ತಾ ರಕ್ಷಣೆಯಲಿ II
- Verse 10: “ಬಿಡಿಸಿದೆ ಬಡವನನು ದರೋಡೆಗಾರರಿಂದ I ರಕ್ಷಿಸಿದೆ ದುರ್ಬಲನನು ಬಲಾಢ್ಯರಿಂದ I ಹೇ ಪ್ರಭು, ನಿನಗೆ ಸಮಾನರಾರೆಂದು” I ಹೊಗಳುವುವು ನನ್ನೆಲುಬುಗಳೊಂದೊಂದು II
- Verse 11: ಸುಳ್ಳುಸಾಕ್ಷಿಗಳೆದ್ದಿಹರು ನನಗೆ ವಿರುದ್ಧ I ಹೊರಿಸುತಿಹರು ನನಗೇ ತಿಳಿಯದ ಅಪರಾಧ II
- Verse 12: ಎಸಗುತಿಹರು ಉಪಕಾರಕೆ ಅಪಕಾರ I ಮಾಡಿಹರೆನ್ನನು ನಿರ್ಗತಿಕ ಪಿಂಜಾರ II
- Verse 13: ಅವರು ಅಸ್ವಸ್ಥರಾಗಿರಲು ಶೋಕವಸ್ತ್ರಧಾರಿಯಾದೆ I ತಲೆಬಾಗಿ ಜಪಿಸಿದೆ, ನಾ ಮನನೊಂದು ಉಪವಾಸವಿದ್ದೆ II
- Verse 14: ಶೋಕತಪ್ತನಾದೆ ಗೆಳೆಯನಿಗೊ ಬಳಗದವನಿಗೊ ಎಂಬಂತೆ I ಅತ್ತು ಪ್ರಲಾಪಿಸಿದೆ ತಾಯನು ಕಳೆದುಕೊಂಡ ತಬ್ಬಲಿಯಂತೆ II
- Verse 15: ನನಗೆ ಆಪತ್ತೊದಗಲದೊ ಸಂತೋಷಿಸಿದರು ಸಭೆಗೂಡಿ I ಸೂರೆಮಾಡಿದರು ತಿರುತಿರುಗಿ ಆ ಭ್ರಷ್ಟರೊಟ್ಟುಗೂಡಿ II
- Verse 16: ಅಣಕಿಸಿ ಹಾಸ್ಯಮಾಡಿದರು ಕೀಟಲೆಗಾರರಂತೆ I ಕಟಕಟನೆ ಹಲ್ಲುಕಡಿದರು ಕಡುಕೋಪಿಗಳಂತೆ II
- Verse 17: ಇನ್ನೆಷ್ಟರವರೆಗೆ ಪ್ರಭು, ನೀ ಸುಮ್ಮನಿರುವೆ ನೋಡುತ? I ಬಿಡಿಸೆನ್ನ ಹಾವಳಿಯಿಂದ, ಸಿಂಹಗಳ ಬಾಯಿಂದ II
- Verse 18: ಮಹಾಸಭೆಯಲ್ಲಾಗ ನಿನ್ನನು ಕೊಂಡಾಡುವೆ I ಬಹುಜನರ ಮುಂದೆ ನಿನ್ನ ಗುಣಗಾನ ಮಾಡುವೆ II
- Verse 19: ಕಳ್ಳ ವೈರಿಗಳೆನ್ನ ನೋಡಿ ಹಿಗ್ಗಲು ಬಿಡಬೇಡ I ಈ ಕಾರಣ ಶತ್ರುಗಳು ಕಣ್ಣು ಮಿಟುಕಿಸುವುದು ಬೇಡ II
- Verse 20: ಸಮಾಧಾನಕರವಲ್ಲ ಅವರಾಡುವ ನುಡಿಗಳು I ಮುಗ್ಧನಾಡಿಗರನು ಮೋಸಗೊಳಿಸುವಾ ಮಾತುಗಳು II
- Verse 21: ಎನ್ನೀ ಪರಿಸ್ಥಿತಿಯನು ಕಂಡು ಅವರು ಬಾಯಿ ಕಿಸಿದು I ನುಡಿದರು, “ಆಹಾ! ಕಣ್ಣಾರೆ ಕಂಡೆವಲ್ಲಾ” ಎಂದು II
- Verse 22: ನೀನೇ ನೋಡಿರುವೆ ಪ್ರಭು, ಇನ್ನು ಸುಮ್ಮನಿರಬೇಡ I ನನ್ನೊಡೆಯಾ, ನನಗಿನ್ನಾದರು ದೂರವಾಗಿರಬೇಡ II
- Verse 23: ನನ್ನ ನ್ಯಾಯವನು ನಿರ್ಣಯಿಸು ದೇವಾ ಎಚ್ಚೆತ್ತು I ನನ್ನ ವಿವಾದವನು ವಿಚಾರಿಸು ಪ್ರಭು ನೀನೆದ್ದು ನಿಂತು II
- Verse 24: ಹೇ, ದೇವಾ, ನಿನ್ನ ನೀತಿಗನುಸಾರ ತೀರ್ಪುಕೊಡು I ಶತ್ರುಗಳೆನ್ನ ವಿಷಯದಲ್ಲಿ ಹರ್ಷಗೊಳ್ಳದಂತೆ ಮಾಡು II
- Verse 25: ತಮ್ಮಾಸೆ ಕೈಗೂಡಿತೆನಲು ಅವರಿಗಿರಬಾರದು ಅವಕಾಶ I ಅವನನು ಕಬಳಿಸಿಬಿಟ್ಟೆವು ಎಂದು ಕೊಚ್ಚಿಕೊಳ್ಳುವ ಸಂತೋಷ II
- Verse 26: ನನಗಾದ ಕೇಡನು ನೋಡಿ ಹಿಗ್ಗುವವರಿಗಾಗಲಿ ಸಿಗ್ಗು I ನನ್ನನು ಕುಗ್ಗಿಸಿ ಮೆರೆವವರನು ಮುಚ್ಚಲಿ ಲಜ್ಜೆಯ ಮುಸುಕು II
- Verse 27: ನನಗೆ ನ್ಯಾಯ ಬಯಸುವವರು ನಲಿದು ಮಾಡಲಿ ಜಯಕಾರ I “ದಾಸನ ಹಿತೈಷಿ ಪ್ರಭುಗೆ, ಜೈ” ಎಂಬ ನಿರಂತರ ಪ್ರಚಾರ II
- Verse 28: ಆಗೆನ್ನ ಜಿಹ್ವೆ ಸಾರುವುದು ನಿನ್ನ ನೀತಿಯನು I ದಿನವೆಲ್ಲಾ ವರ್ಣಿಸುವುದು ನಿನ್ನ ಕೀರ್ತಿಯನು II