ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಹಬಕ್ಕೂಕ
3ನೇ ಅಧ್ಯಾಯ
- Verse 1: ಸರ್ವೇಶ್ವರಾ, ಕೇಳಿರುವೆ ನಿನ್ನ ಕೀರ್ತಿಯನು ಬೆರಗಾದೆ ಕೇಳಿ ನಿನ್ನ ಮಹತ್ಕಾರ್ಯವನು.
- Verse 2: ಮರಳಿ ಮಾಡು ನಮ್ಮೀಕಾಲದಲಿ ಅವುಗಳನು ಪ್ರಚುರಪಡಿಸು ಪ್ರಸ್ತುತಕಾಲದಲಿ ಅವುಗಳನು ರೋಷಗೊಂಡರೂ ಮರೆಯದಿರು ಕರುಣೆಯನು
- Verse 3: ಬರುತಿಹನು ದೇವನು ಎದೋಮಿನಿಂದ ಆ ಪರಮಪಾವನಸ್ವಾಮಿ ಪಾರಾನ್ ಪರ್ವತದಿಂದ. ಆವರಿಸುವುದು ಆತನ ಪ್ರಭಾವ ಆಕಾಶಮಂಡಲವನು ತುಂಬಿಹುದು ಆತನ ಮಹಿಮೆ ಭೂಮಂಡಲವನು.
- Verse 4: ರವಿಯಂತಿದೆ ಆತನ ತೇಜಸ್ಸಿನ ಮೆರೆತ ಕಿರಣಗಳು ಹೊರಹೊಮ್ಮುತಿವೆ ಆತನ ಕರಗಳಿಂದ ಮರೆಯಾಗಿದೆ ಅಲ್ಲೇ ಆತನ ಶಕ್ತಿಸಾಮರ್ಥ್ಯ.
- Verse 5: ಸಾಗುತಿದೆ ವ್ಯಾಧಿ ಆತನ ಮುಂದೆ ಬರುತಿದೆ ಮೃತ್ಯು ಆತನ ಹಿಂದೆ.
- Verse 6: ಕಂಪಿಸುತ್ತದೆ ಭೂಮಿ ಆತ ನಿಂತಾಗ ಅದರುತ್ತದೆ ಲೋಕ ಆತ ದಿಟ್ಟಿಸಿದಾಗ ಸೀಳಿಹೋಗುತ್ತವೆ ಪುರಾತನಪರ್ವತಗಳು ಕುಸಿದುಬೀಳುತ್ತವೆ ಸನಾತನ ಗಿರಿಗಳು ಅನಾದಿಯಿಂದ ಹಾಗೆಯೆ ಆತನ ಆಗಮನಗಳು.
- Verse 7: ಇಗೋ, ತಳಮಳಗೊಂಡಿವೆ ಕೂಷಾನಿನ ಗುಡಾರಗಳು ನಡುಗುತ್ತಿವೆ ಮಿದ್ಯಾನ್ ನಾಡಿನ ಡೇರೆಗಳು.
- Verse 8: ಮೋಡಗಳ ಮೇಲೆ ನೀ ಆಗಮಿಸಿದೆ ಏಕೆ? ಜಯರಥಗಳಲ್ಲಿ ಆಸೀನನಾಗಿ ಬಂದೆ ಏಕೆ? ಸರ್ವೇಶ, ನಿನಗೆ ರೌದ್ರವೇ ನದಿಗಳ ಮೇಲೆ? ಸಿಟ್ಟುಸಿಡುಕವೇ ಹೊಳೆಗಳ ಮೇಲೆ? ರೋಷಾವೇಷವೇ ಸಮುದ್ರದ ಮೇಲೆ?
- Verse 9: ತೆಗೆದಿಟ್ಟೆ ಬಿಲ್ಲನು ತೋಳಿನಿಂದ ಹೊರಡಿಸಿದೆ ಬಾಣಗಳನು ಅದರಿಂದ ಸೀಳಿರುವೆ ಭೂಮಿಯನು ನದಿಗಳಿಂದ.
- Verse 10: ನಿನ್ನ ನೋಡಿ ತಳಮಳಗೊಳ್ಳುತ್ತವೆ ಬೆಟ್ಟಗಳು ಹರಿಯುತ್ತವೆ ಆಗಸದಿಂದ ಪ್ರವಾಹಗಳು ಕೈಯೆತ್ತಿ ಭೋರ್ಗರೆಯುತ್ತವೆ ಸಾಗರಗಳು.
- Verse 11: ಹಾರಿ ಓಡುವ ನಿನ್ನ ಬಾಣಗಳ ಬೆಳಕಿಗೆ ಥಳಥಳಿಸುವ ನಿನ್ನ ಈಟಿಯ ಹೊಳಪಿಗೆ ಸೂರ್ಯಚಂದ್ರ ಅಡಗುತ್ತವೆ ಗೂಡಿನೊಳಗೆ.
- Verse 12: ಧರೆಯನು ನೀ ಹಾದುಹೋಗುವೆ ರೌದ್ರದಿಂದ ರಾಷ್ಟ್ರಗಳನು ತುಳಿದುಹಾಕುವೆ ರೋಷದಿಂದ.
- Verse 13: ಹೊರಟಿರುವೆ ನಿನ್ನ ಪ್ರಜೆಗಳ ರಕ್ಷಣೆಗೆ ನಿನ್ನ ಅಭಿಷಿಕ್ತನ ಜೀವೋದ್ಧಾರಕೆ. ಬಡಿದುಹಾಕಿರುವೆ ದುರುಳನ ಬುರುಡೆಯನು ನೆಲಸಮಮಾಡಿರುವೆ ಅವನ ಮನೆಯನು.
- Verse 14: ದೀನರನು ಗುಟ್ಟಾಗಿ ದಮನಮಾಡಿ ಹಿಗ್ಗುವವರಂತೆ ನನ್ನ ಚದರಿಸಲು ಬಂದರು ಅವನ ಭಟರು ಬಿರುಗಾಳಿಯಂತೆ ಅವನ ಆಯುಧಗಳಿಂದಲೆ ಅವರ ತಲೆಯನು ನೀ ಬಡಿದೆ.
- Verse 15: ಅಶ್ವಗಳನ್ನೇರಿ ನೀ ಸಮುದ್ರವನು ದಾಟಿದೆ ನೊರೆಗರೆಯುವ ಜಲರಾಶಿಯನು ಹಾದುಹೋದೆ.
- Verse 16: ಇದಕೇಳಿ ನಡುನಡುಗಿತು ನನ್ನ ಒಡಲು ಅದುರಿದವು ಆ ಶಬ್ದಕ್ಕೆ ನನ್ನ ತುಟಿಗಳು ಕೊಳೆತಂತಾದವು ನನ್ನೆಲುಬುಗಳು ನಿಂತಲ್ಲೇ ತತ್ತರಿಸಿದವು ನನ್ನ ಕಾಲುಗಳು ಆಪತ್ತು ಬಂದೊದಗುವುದು ನಮ್ಮನ್ನು ಆಕ್ರಮಿಸುವವರಿಗೆ ಕಾದಿರುವೆ ನಾನು ಸಹನಶೀಲನಾಗಿ ಅಂದಿನವರೆಗೆ.
- Verse 17: ಅಂಜೂರದ ಮರ ಚಿಗುರದೆಹೋದರೂ ದ್ರಾಕ್ಷಾಲತೆಗಳಲ್ಲಿ ಹಣ್ಣು ಕಾಣದೆಹೋದರೂ ಎಣ್ಣೆಮರಗಳ ಉತ್ಪತ್ತಿಯು ಶೂನ್ಯವಾದರೂ ಹೊಲಗದ್ದೆಗಳು ಆಹಾರ ಕೊಡದೆಹೋದರೂ ಕುರಿಹಟ್ಟಿಗಳು ಬರಿದಾಗಿಹೋದರೂ ಕೊಟ್ಟಿಗೆಗಳಲ್ಲಿ ದನಕರುಗಳು ಇಲ್ಲವಾದರೂ,
- Verse 18: ಸಂತೋಷಿಸುವೆ ನಾನು ಸರ್ವೇಶ್ವರನಲಿ ಆನಂದಿಸುವೆ ನನ್ನ ಉದ್ಧಾರಕ ದೇವನಲಿ.
- Verse 19: ಸ್ವಾಮಿ ಸರ್ವೇಶ್ವರ ನೀಡುವನೆನಗೆ ಧೀರತೆ ಚುರುಕುಗೊಳಿಸುವನಾತ ನನ್ನ ಕಾಲುಗಳನು ಜಿಂಕೆಯಂತೆ ಮಾಡುವನು ಬೆಟ್ಟಗುಡ್ಡಗಳಲಿ ನಾನು ಓಡಾಡುವಂತೆ.