पवित्र बाइबिल
ಹಳೆಯ ಒಡಂಬಡಿಕೆ
2 ಅರಸುಗಳು
5ನೇ ಅಧ್ಯಾಯ
1 : ಸಿರಿಯಾದ ರಾಜನಿಗೆ ನಾಮಾನ್ ಎಂಬೊಬ್ಬ ಸೇನಾಪತಿಯಿದ್ದನು. ಸರ್ವೇಶ್ವರಸ್ವಾಮಿ ಇವನ ಮುಂಖಾತರ ಸಿರಿಯಾದವರಿಗೆ ಜಯವನ್ನು ಅನುಗ್ರಹಿಸಿದ್ದರು. ಆದ್ದರಿಂದ ರಾಜನು ಇವನನ್ನು ಮಹಾಪುರುಷನೆಂದೂ ಸನ್ಮಾನ್ಯನೆಂದೂ ಗೌರವಿಸುತ್ತಿದ್ದನು. ಆದರೆ ಪರಾಕ್ರಮಶಾಲಿಯಾದ ಇವನು ಭೀಕರ ಚರ್ಮರೋಗದಿಂದ ನರಳುತ್ತಿದ್ದನು.
2 : ಸಿರಿಯಾದವರು, ಒಮ್ಮೆ ಸುಲಿಗೆಗಾಗಿ ಇಸ್ರಯೇಲರ ಪ್ರಾಂತ್ಯಕ್ಕೆ ಹೋಗಿಬರುವಾಗ, ಅಲ್ಲಿನ ಒಬ್ಬ ಹುಡುಗಿಯನ್ನು ಹಿಡಿದುಕೊಂಡು ಬಂದರು. ಆಕೆ ನಾಮಾನನ ಹೆಂಡತಿಗೆ ದಾಸಿಯಾದಳು.
3 : ಒಂದು ದಿನ ಆಕೆ ತನ್ನ ಯಜಮಾನಿಗೆ, “ನಮ್ಮ ದಣಿಯವರು ಸಮಾರಿಯದಲ್ಲಿರುವ ಪ್ರವಾದಿಯ ಹತ್ತಿರ ಇದ್ದಿದ್ದರೆ ಎಷ್ಟೋ ಒಳ್ಳೇದಾಗುತ್ತಿತ್ತು; ಅವರು ಇವರನ್ನು ಈ ಚರ್ಮರೋಗದಿಂದ ಗುಣಪಡಿಸುತ್ತಿದ್ದರು,” ಎಂದು ಹೇಳಿದಳು.
4 : ನಾಮಾನನು ರಾಜನ ಸನ್ನಿಧಿಗೆ ಹೋಗಿ, ಇಸ್ರಯೇಲ್ ನಾಡಿನ ಹುಡುಗಿ ಹೇಳಿದ್ದನ್ನು ತಿಳಿಸಿದನು.
5 : ಅವನು, “ನೀನು ಅಲ್ಲಿಗೆ ಹೋಗಿ ಬಾ; ನಾನು ನಿನ್ನ ಕೈಯಲ್ಲಿ ಇಸ್ರಯೇಲರ ಅರಸನಿಗೆ ಒಂದು ಪತ್ರವನ್ನು ಕೊಡುತ್ತೇನೆ,” ಎಂದನು. ನಾಮಾನನು ಮೂವತ್ತು ಸಾವಿರ ಬೆಳ್ಳಿ, ಆರು ಸಾವಿರ ಬಂಗಾರ ನಾಣ್ಯಗಳನ್ನೂ, ಹತ್ತು ದುಸ್ತು ಬಟ್ಟೆಗಳನ್ನೂ ತೆಗೆದುಕೊಂಡು ಸಮಾರಿಯಕ್ಕೆ ಹೋದನು;
6 : ತಂದ ಪತ್ರವನ್ನು ಇಸ್ರಯೇಲರ ಅರಸನಿಗೆ ಕೊಟ್ಟನು. ಅದರಲ್ಲಿ, “ನನ್ನ ಸೇವಕ ನಾಮಾನನನ್ನು ನಿಮ್ಮ ಬಳಿಗೆ ಕಳುಹಿಸಿದ್ದೇನೆ; ನೀವು ಅವನ ಚರ್ಮರೋಗವನ್ನು ವಾಸಿಮಾಡತಕ್ಕದ್ದೆಂದು ಈ ಪತ್ರದಿಂದ ತಿಳಿದುಕೊಳ್ಳಿ,” ಎಂಬುದಾಗಿ ಬರೆದಿತ್ತು.
7 : ಇಸ್ರಯೇಲರ ಅರಸನು ಈ ಪತ್ರವನ್ನು ಓದಿದ ಕೂಡಲೆ, ಸಿಟ್ಟಿನಿಂದ ಬಟ್ಟೆಗಳನ್ನು ಹರಿದುಕೊಂಡು, ತನ್ನ ಪರಿವಾರದವರಿಗೆ, “ತಾನು ಕಳುಹಿಸಿದ ವ್ಯಕ್ತಿಯನ್ನು ಚರ್ಮರೋಗದಿಂದ ನಾನು ವಾಸಿಮಾಡಬೇಕಂತೆ! ಇದು ಎಂಥ ಅಪ್ಪಣೆ; ನಾನೇನು ದೇವರೋ? ಜೀವದಾನ ಮಾಡುವುದಕ್ಕಾಗಲಿ ಜೀವಹರಣ ಮಾಡುವುದಕ್ಕಾಗಲಿ ನನಗೆ ಸಾಮರ್ಥ್ಯವುಂಟೇ? ಇವನು ನನ್ನೊಡನೆ ಯುದ್ಧಮಾಡುವುದಕ್ಕೆ ನೆಪ ಹುಡುಕುತ್ತಾನಲ್ಲದೆ ಮತ್ತೇನು? ನೀವೇ ಆಲೋಚಿಸಿ ನೋಡಿ,” ಎಂದು ಹೇಳೀದನು.
8 : ಇಸ್ರಯೇಲರ ಅರಸನು ಸಿಟ್ಟಿನಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡನೆಂಬುದನ್ನು ದೈವಪುರುಷ ಎಲೀಷನು ಕೇಳಿದನು. ದೂತರ ಮುಖಾಂತರ ಅವನಿಗೆ, “ನೀವು ನಿಮ್ಮ ಬಟ್ಟೆಗಳನ್ನು ಹರಿದುಕೊಂಡದ್ದೇಕೆ? ಅವನನ್ನು ನನ್ನ ಬಳಿಗೆ ಕಳುಹಿಸಿ; ಇಸ್ರಯಲರಲ್ಲಿ ಒಬ್ಬ ಪ್ರವಾದಿ ಇದ್ದಾನೆಂಬುದು ಅವನಿಗೆ ಗೊತ್ತಾಗಲಿ,” ಎಂದು ಹೇಳಿ ಕಳುಹಿಸಿದನು.
9 : ನಾಮಾನನು ರಥರಥಾಶ್ವಗಳೊಡನೆ ಎಲೀಷನ ಮನೆಗೆ ಹೋಗಿ ಬಾಗಿಲಿನ ಮುಂದೆ ನಿಂತನು.
10 : ಎಲೀಷನು ಅವನಿಗೆ, “ಹೋಗಿ ಜೋರ್ಡನ್ ನದಿಯಲ್ಲಿ ಏಳು ಸಾರಿ ಸ್ನಾನಮಾಡು; ಆಗ ನಿನ್ನ ದೇಹ ಮೊದಲಿದ್ದಂತಾಗುವುದು; ನೀನು ಶುದ್ಧನಾಗುವೆ,” ಎಂದು ಹೇಳಿಕಳುಹಿಸಿದನು.
11 : ನಾಮಾನನು ಇದನ್ನು ಕೇಳಿ ಕೋಪಗೊಂಡನು . “ಇದೇನು ! ಇವನು ಖಂಡಿತ ವಾಗಿ ಹೊರಗೆಬಂದು ನಿಂತು, ತನ್ನ ದೇವರಾದ ಸರ್ವೇಶ್ವರ ನ ಹೆಸರು ಹೇಳಿ, ನನ್ನ ಚರ್ಮ ದ ಮೇಲೆ ಕೈಯಾಡಿಸಿ , ರೋಗ ವಾಸಿ ಮಾಡುವನೆಂದು ನೆನಸಿದೆ .
12 : ದಮಸ್ಕದ ಅಬಾನಾ ಹಾಗು ಪರ್ಪರ್ ಎಂಬ ನದಿಗಳು ಇಸ್ರಯೇಲರ ಎಲ್ಲಾ ನದಿ ಹೊಳೆಗಳಿಗಿಂತ ಉತ್ತಮವಾಗಿವೆಯಲ್ಲವೇ? ಸ್ನಾನದಿಂದ ವಾಸಿಯಾಗುವ ಹಾಗಿದ್ದರೆ ನಾನು ಅವುಗಳಲ್ಲಿಯೇ ಸ್ನಾನಮಾಡಬಹುದಿತ್ತಲ್ಲವೇ?” ಎಂದು ಹೇಳಿ, ಬಹಳ ಸಿಟ್ಟಿನಿಂದ ಹೊರಟುಹೋದನು.
13 : ಆಗ ಅವನ ಸೇವಕರು ಹತ್ತಿರಬಂದು, “ಯಜಮಾನರೇ, ಪ್ರವಾದಿ ಒಂದು ಕಠಿಣವಾದ ಕೆಲಸವನ್ನು ಹೇಳಿದ್ದರೆ ಅದನ್ನು ಮಾಡುತ್ತಿದ್ದಿರಲ್ಲವೆ? ಹಾಗಾದರೆ ‘ಸ್ನಾನಮಾಡಿ, ಶುದ್ಧರಾಗುವಿರಿ’ ಎಂದು ಹೇಳಿದರೆ ಏಕೆ ಅದರಂತೆ ಮಾಡಬಾರದು?” ಎಂದರು.
14 : ಅವನು ಅಂತೆಯೇ ಜೋರ್ಡನಿಗೆ ಹೋಗಿ, ಏಳು ಸಾರಿ ಅದರಲ್ಲಿ ಮುಳುಗಿ ಎದ್ದನು. ಕೂಡಲೆ ದೈವಪುರುಷನ ಮಾತಿಗನುಸಾರ ಅವನ ದೇಹ ಒಂದು ಮಗುವಿನ ದೇಹದಂತೆ ಶುದ್ಧವಾಯಿತು.
15 : ಅನಂತರ ನಾಮಾನನು ತನ್ನ ಪರಿವಾರದವರೊಡನೆ ಹಿಂದಿರುಗಿ ದೈವಪುರುಷನ ಬಳಿಗೆ ಹೋಗಿ ಅವನ ಮುಂದೆ ನಿಂತನು. “ಇಸ್ರಯೇಲ್ ನಾಡಿನಲ್ಲಿರುವ ದೇವರ ಹೊರತು, ಲೋಕದಲ್ಲಿ ಬೇರೆ ದೇವರು ಇಲ್ಲವೇ ಇಲ್ಲವೆಂಬುದು ಈಗ ನನಗೆ ಗೊತ್ತಾಯಿತು; ತಾವು ದಯವಿಟ್ಟು ಈ ಕಾಣಿಕೆಯನ್ನು ಅಂಗೀಕರಿಸಬೇಕು,” ಎಂದು ಹೇಳಿದನು.
16 : ಅದಕ್ಕೆ ಎಲೀಷನು, “ನಾನು ಸನ್ನಿಧಿಸೇವೆ ಮಾಡುತ್ತಿರುವ ಸರ್ವೇಶ್ವರನಾಣೆ, ನಿನ್ನಿಂದ ಏನೂ ತೆಗೆದುಕೊಳ್ಳುವುದಿಲ್ಲ,” ಎಂದನು. ನಾಮಾನನು ಎಷ್ಟು ಒತ್ತಾಯಪಡಿಸಿದರೂ ಅವನು ತೆಗೆದುಕೊಳ್ಳಲೇ ಇಲ್ಲ.
17 : ಆಗ ಅವನು ಎಲೀಷನಿಗೆ, “ತಾವು ಏನನ್ನೂ ಸ್ವೀಕರಿಸದಿದ್ದರೆ ತಮ್ಮ ಸೇವಕನಾದ ನನಗೆ ಎರಡು ಹೇಸರಕತ್ತೆಗಳು ಹೊರುವಷ್ಟು ಮಣ್ಣನ್ನು ಕೊಡಿಸಬೇಕೆಂದು ಬೇಡಿಕೊಳ್ಳುತ್ತೇನೆ. ನಾನು ಇನ್ನು ಮುಂದೆ ಎಲ್ಲಾ ದೇವತೆಗಳನ್ನು ಬಿಟ್ಟು ಸರ್ವೇಶ್ವರಸ್ವಾಮಿ ಒಬ್ಬರಿಗೇ ದಹನಬಲಿಗಳನ್ನು ಸಮರ್ಪಿಸಬೇಕೆಂದಿರುತ್ತೇನೆ.
18 : ಆದರೆ ಈ ವಿಷಯದಲ್ಲಿ ಸರ್ವೇಶ್ವರ ನನ್ನನ್ನು ಕ್ಷಮಿಸಲಿ; ನನ್ನ ಒಡೆಯ ಆರಾಧನೆಗೋಸ್ಕರ ರಿಮ್ಮೋನನ ದೇವಸ್ಥಾನಕ್ಕೆ ಹೋಗಿ, ನನ್ನ ಕೈಹಿಡಿದು, ಆ ದೇವತೆಗೆ ನಮಸ್ಕಾರ ಮಾಡುವಾಗ ನಾನೂ ನಮಸ್ಕಾರ ಮಾಡಬೇಕಾಗುವುದು. ಈ ಒಂದು ವಿಷಯದಲ್ಲಿ ಮಾತ್ರ ಸರ್ವೇಶ್ವರ ನನಗೆ ಕ್ಷಮೆಯನ್ನು ಅನುಗ್ರಹಿಸಬೇಕು,” ಎಂದನು.
19 : ಎಲೀಷನು, “ಸಮಾಧಾನದಿಂದ ಹೋಗು,” ಎಂದು ಉತ್ತರಕೊಟ್ಟನು. ಅವನು ಹೊರಟುಹೋದನು.
20 : ನಾಮಾನನು ಸ್ವಲ್ಪದೂರಕ್ಕೆ ಹೋದನಂತರ ದೈವಪುರುಷನಾದ ಎಲೀಷನ ಸೇವಕ ಗೇಹಜಿಯು ಮನಸ್ಸಿನಲ್ಲೇ, “ನನ್ನ ಯಜಮಾನ ಆ ಸಿರಿಯಾದ ನಾಮಾನನಿಂದ ಏನೂ ತೆಗೆದುಕೊಳ್ಳದೆ ಅವನನ್ನು ಹಾಗೆಯೇ ಕಳುಹಿಸಿಬಿಟ್ಟರಲ್ಲಾ! ಸರ್ವೇಶ್ವರನಾಣೆ, ನಾನು ಅವನ ಹಿಂದೆ ಓಡುತ್ತಾ ಹೋಗಿ, ಅವನಿಂದ ಸ್ವಲ್ಪವನ್ನಾದರೂ ಬಾಚಿಕೊಂಡು ಬರುವೆನು,” ಎಂದುಕೊಂಡು ಹೊರಟನು.
21 : ನಾಮಾನನು ತನ್ನ ಹಿಂದೆ ಓಡುತ್ತಾ ಬರುವ ಗೇಹಜಿಯನ್ನು ಕಂಡು, ರಥದಿಂದಿಳಿದು, ಅವನನ್ನು ಎದುರುಗೊಂಡನು, “ಕ್ಷೇಮವೇ,” ಎಂದು ಕೇಳಿದನು.
22 : ಅವನು, “ಕ್ಷೇಮ; ಎಫ್ರಯಿಮ್ ಗುಡ್ಡಪ್ರದೇಶದಿಂದ ಪ್ರವಾದಿಮಂಡಲಿಯವರಾದ ಇಬ್ಬರು ಯೌವನಸ್ಥರು ಬಂದಿರುತ್ತಾರೆ. ಆದುದರಿಂದ ಅವರಿಗಾಗಿ ಬೇಗನೆ ಮೂರುಸಾವಿರ ಬೆಳ್ಳಿಯ ನಾಣ್ಯಗಳನ್ನೂ ಎರಡು ದುಸ್ತು ಬಟ್ಟೆಗಳನ್ನೂ ತೆಗೆದುಕೊಂಡು ಬರಬೇಕೆಂಬುದಾಗಿ ನನ್ನ ಯಜಮಾನ ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದರು,” ಎಂದು ಉತ್ತರಕೊಟ್ಟನು.
23 : ನಾಮಾನನು, “ಆರು ಸಾವಿರ ನಾಣ್ಯವನ್ನಾದರೂ ತೆಗೆದುಕೊಳ್ಳಬಾರದೇ,” ಎಂದು ಅವನನ್ನು ಒತ್ತಾಯಪಡಿಸಿ, ಅದನ್ನು ಎರಡು ಚೀಲಗಳಲ್ಲಿ ಹಾಕಿಸಿ, ಆ ಚೀಲಗಳನ್ನೂ ಎರಡು ದುಸ್ತು ಬಟ್ಟೆಗಳನ್ನೂ ಇಬ್ಬರು ಸೇವಕರ ಮೇಲೆ ಹೊರಿಸಿ, ಅವರನ್ನು ಗೇಹಜಿಯ ಸಂಗಡ ಕಳುಹಿಸಿದನು. ಅವರು ಹೊತ್ತುಕೊಂಡು ಇವನ ಮುಂದೆ ನಡೆದರು.
24 : ಗುಡ್ಡವನ್ನು ಮುಟ್ಟಿದಾಗ, ಗೇಹಜಿಯು ಅವುಗಳನ್ನು ತೆಗೆದುಕೊಂಡು, ಮನೆಯಲ್ಲಿ ಅಡಗಿಸಿಬಿಟ್ಟು, ಆಳುಗಳನ್ನು ಕಳುಹಿಸಿಬಿಟ್ಟನು.
25 : ಅವರು ಹೋದನಂತರ, ಇವನು ತನ್ನ ಯಜಮಾನನ ಬಳಿಗೆ ಬಂದನು. ಎಲೀಷನು ಅವನನ್ನು, “ಗೇಹಜಿಯೇ, ಎಲ್ಲಿಗೆ ಹೋಗಿ ಬಂದೆ?” ಎಂದು ಕೇಳಿದನು. ಅದಕ್ಕೆ ಅವನು, “ನಿಮ್ಮ ಸೇವಕನಾದ ನಾನು ಎಲ್ಲಿಯೂ ಹೋಗಲಿಲ್ಲ,” ಎಂದು ಉತ್ತರಕೊಟ್ಟನು.
26 : ಆಗ ಎಲೀಷನು, “ಒಬ್ಬನು ರಥದಿಂದಿಳಿದು ಬಂದು ನಿನ್ನನ್ನು ಎದುರುಗೊಂಡದ್ದು ನನ್ನ ಜ್ಞಾನದೃಷ್ಟಿಗೆ ಕಾಣಿಸಲಿಲ್ಲವೆಂದು ನೆನಸುತ್ತೀಯೋ? ದ್ರವ್ಯ, ಬಟ್ಟೆಗಳು, ಎಣ್ಣೇಮರದ ತೋಪುಗಳು, ದ್ರಾಕ್ಷೀತೋಟಗಳು, ಕುರಿದನಗಳು, ಗಂಡಾಳು, ಹೆಣ್ಣಾಳುಗಳು, ಇವನ್ನು ಸಂಪಾದಿಸುವುದಕ್ಕೆ ಇದು ಸಮಯವೇ?
27 : ನಾಮಾನನ ಚರ್ಮರೋಗವು ನಿನ್ನನ್ನೂ ನಿನ್ನ ಸಂತಾನದವರನ್ನೂ ಸದಾಕಾಲ ಬಾಧಿಸುವುದು,” ಎಂದನು. ಕೂಡಲೆ ಅವನಿಗೆ ಆ ರೋಗ ಹತ್ತಿತು. ಅವನು ಹಿಮದಂತೆ ಬಿಳುಪಾಗಿ, ಅಲ್ಲಿಂದ ಹೊರಟುಹೋದನು.