வேதாகமம்
ಹಳೆಯ ಒಡಂಬಡಿಕೆ
ಯೋಬನ ಗ್ರಂಥ
6ನೇ ಅಧ್ಯಾಯ
1 : ಅದಕ್ಕೆ ಉತ್ತರವಾಗಿ ಯೋಬನು ಹೀಗೆಂದನು :
2 : “ನನ್ನ ವಿಪತ್ತನು ತೂಕಮಾಡಿ ನೋಡಿದರೆ ಒಳಿತು ನನ್ನ ದುಃಖಗಳನು ತಕ್ಕಡಿಗೆ ಹಾಕಿದರೆ ಲೇಸು.
3 : ಆಗ ತಿಳಿಯುವುದು ನನ್ನ ವಿಪತ್ತು ಕಡಲ ತೀರದ ಮರಳಿಗಿಂತ ಭಾರವೆಂದು. ಎಂತಲೇ ನಾನಾಡಿದ ಮಾತು ದುಡುಕಿನಿಂದ ಆಡಿದ ಮಾತುಗಳೆಂದು.
4 : ನನ್ನ ಮನದೊಳು ಸರ್ವಶಕ್ತನ ಬಾಣಗಳು ನಾಟಿವೆ ನನ್ನ ಅಂತರಂಗದೊಳು ಅವುಗಳ ವಿಷ ಹೀರಲಾಗುತ್ತಿದೆ ದೇವರಿಂದ ಬಂದ ಆತಂಕಗಳು ನನ್ನನು ಸುತ್ತುವರೆದಿವೆ.
5 : ಹುಲ್ಲಿರಲು ಕಾಡುಕತ್ತೆ ಅರಚೀತೆ? ಮೇವಿರಲು ಗೂಳಿ ಎತ್ತು ಗುಟುರೀತೆ?
6 : ಉಪ್ಪಿಲ್ಲದ ಸಪ್ಪೆಯನು ತಿನ್ನುತ್ತೇವೆಯೆ? ಮೊಟ್ಟೆಯೊಳಗಿನ ಲೋಳೆಯಲಿ ರುಚಿಯಿದೆಯೆ?
7 : ಮುಟ್ಟಲು ಕೂಡ ಅಸಹ್ಯವಾದುವು ಕಾಯಿಲೆಯಲ್ಲಿ ನನಗೆ ಆಹಾರವಾದವು.
8 : ಅಯ್ಯೋ, ನನ್ನ ವಿಜ್ಞಾಪನೆ ನೆರವೇರುವುದಿಲ್ಲವೇಕೆ? ದೇವರು ನನ್ನ ಕೋರಿಕೆಯನ್ನು ಈಡೇರಿಸುವುದಿಲ್ಲವೇಕೆ?
9 : ದೇವರು ನನ್ನನ್ನು ನಸುಕಿಬಿಡಬಾರದೆ? ತನ್ನ ಕೈಯನ್ನು ಚಾಚಿ ಸಂಹರಿಸಿಬಿಡಬಾರದೆ?
10 : ಆಗ ನಾನು ಸಾಂತ್ವನ ಪಡೆಯುತ್ತಿದ್ದೆ ಮಿತಿಯಿಲ್ಲದ ಯಾತನೆಯಲ್ಲೂ ಆದರ ಹೊಂದುತ್ತಿದ್ದೆ. ಪರಮಪಾವನನ ಮಾತನು ಬಿಡದೆ ಅನುಸರಿಸಿದೆನಲ್ಲವೆ?
11 : ನಾನು ನಿರೀಕ್ಷೆಯಿಂದಿರಲು ನನಗಾಧಾರವೇನು? ನಾನು ತಾಳ್ಮೆಯಿಂದಿರಲು ನನ್ನ ಅಂತ್ಯಸ್ಥಿತಿಯೇನು?
12 : ನನ್ನ ಬಲವು ಕಲ್ಲಿನ ಬಲವೊ? ನನ್ನ ದೇಹ ಕಂಚಿನ ದೇಹವೊ?
13 : ನನಗೆ ಯಾವ ಸಹಾಯವೂ ಇಲ್ಲವಲ್ಲ! ನನ್ನ ತ್ರಾಣ ತೊಲಗಿಹೋಗಿದೆಯಲ್ಲಾ!
14 : ಸಂಕಟದಲ್ಲಿ ಆಗದಾ ನೆಂಟನಿಗೆ ಸರ್ವಶಕ್ತನಲ್ಲಿ ಭಯಭಕ್ತಿ ಇರುವುದುಂಟೆ?
15 : ಹರಿದು ಓಡುವ ತೊರೆಯಂತೆ ಉಕ್ಕಿ ಹರಿಯುವ ಪ್ರವಾಹದಂತೆ ದ್ರೋಹವೆಸಗಿದ್ದಾರೆ ಸೋದರರು ನನಗೆ.
16 : ಕಪ್ಪಾಗಿದೆ ಆ ತೊರೆಗಳ ನೀರು ಮಂಜುಗಡ್ಡೆಯಿಂದ ಕದಡಿಹೋಗಿವೆ ಹಿಮಗಡ್ಡೆಯಿಂದ.
17 : ಆ ತೊರೆಗಳು ಮಾಯವಾಗುತ್ತವೆ ಬೇಸಿಗೆ ಬಂದಾಗ ಬತ್ತಿಹೋಗುತ್ತವೆ ಸೆಕೆಯಾದಾಗ.
18 : ಪ್ರಯಾಣಮಾಡುವ ವರ್ತಕರು ಇಂಥ ತೊರೆಗಳ ಮಾರ್ಗವಾಗಿ ಮರಳುಗಾಡಿನಲ್ಲೆ ನಾಶವಾಗುವರು ಅಲೆದಲೆದು ನೀರಿಗಾಗಿ.
19 : ಅವುಗಳಿಗಾಗಿ ಹಂಬಲಿಸುತ್ತದೆ ಆ ತೇಮದ ಪ್ರಯಾಣಿಕರ ತಂಡ ಅವುಗಳಿಗಾಗಿ ಹಾತೊರೆಯುತ್ತದೆ ಶೆಬದ ವರ್ತಕರ ಪಂಗಡ.
20 : ಆಶಿಸಿದಷ್ಟೂ ಆಶಾಭಂಗಪಡುತ್ತಾರೆ ಆ ಪ್ರಯಾಣಿಕರು ನಂಬಿದಷ್ಟೂ ನಿರೀಕ್ಷೆಗೆಡುತ್ತಾರೆ ಆ ವರ್ತಕರು.
21 : ಅಂತೆಯೇ ನನ್ನ ವಿಷಯದಲ್ಲಿ ನೀವು ವರ್ತಿಸುತ್ತೀರಿ ನನ್ನ ಈ ವಿಪತ್ತನು ಕಂಡಕೂಡಲೇ ಹಿಂಜರಿಯುತ್ತೀರಿ.
22 : ದಾನ ನೀಡಿರೆಂದು ನಿಮ್ಮನು ಬಿನ್ನವಿಸಿದೆನೋ? ನಿಮ್ಮಾಸ್ತಿಯಿಂದ ಲಂಚವನು ಕೋರಿದೆನೋ?
23 : ವಿರೋಧಿಯ ಕೈಯಿಂದ ನನ್ನನು ಬಿಡಿಸಿರೆಂದು ಕೇಳಿಕೊಂಡೆನೋ? ಹಿಂಸಕರಿಂದ ನನ್ನನು ವಿಮೋಚಿಸಿರೆಂದು ಬೇಡಿಕೊಂಡೆನೋ?
24 : ನಾನು ಮಾಡಿದ ತಪ್ಪೇನೆಂಬುದನು ತಿಳಿಸಿರಿ ನನಗೆ ನಾನು ಮೌನದಿಂದಿರುವೆನು, ಉಪದೇಶಮಾಡಿರಿ ನನಗೆ.
25 : ನ್ಯಾಯವಾದ ಮಾತು ಎಷ್ಟೋ ಶಕ್ತಿಯುತ ನಿಮ್ಮ ತರ್ಕವಾದರೋ ನಿರರ್ಥಕ.
26 : ಕೇವಲ ಮಾತುಗಳಿಂದ ಖಂಡಿಸಬೇಕೆಂದಿರುವಿರೊ? ದೆಸೆಗೆಟ್ಟವನ ಮಾತು ಗಾಳಿಪಾಲಾಗತಕ್ಕದಲ್ಲವೊ?
27 : ಅನಾಥನನ್ನು ಕೊಂಡುಕೊಳ್ಳಲು ಚೀಟುಹಾಕುತ್ತೀರಿ ಆಪ್ತನನ್ನು ಮಾರಿಬಿಡಲು ವ್ಯಾಪಾರಮಾಡುತ್ತೀರಿ.
28 : ಈಗ ದಯವಿಟ್ಟು ನೋಡಿ ನನ್ನ ಕಡೆಗೆ ಸುಳ್ಳಾಡೆನು ನಿಮ್ಮ ಮುಖದೆದುರಿಗೆ.
29 : ದಯಮಾಡಿ ಮತ್ತೆ ಆಲೋಚಿಸಿರಿ ಅನ್ಯಾಯವಾಗದಂತೆ ಮರಳಿ ವಿಮರ್ಶಿಸಿರಿ ನನ್ನ ಸತ್ಯತೆ ತಿಳಿಯುವಂತೆ.
30 : ರುಚಿ ವಿಷಯದಲ್ಲಿ ನಾಲಿಗೆ ತಪ್ಪುಮಾಡುತ್ತದೆಯೇ? ಸತ್ಯಾಸತ್ಯಗಳ ವಿವೇಚನೆ ನನಗಿಲ್ಲವೇ?’