P. O. C ബൈബിള്
ಹಳೆಯ ಒಡಂಬಡಿಕೆ
ಕೀರ್ತನೆಗಳು
147ನೇ ಅಧ್ಯಾಯ
1 : ನಮ್ಮ ದೇವರನು ಹೊಗಳಿ ಹಾಡುವುದು ಉಚಿತ I ಆತನ ಸ್ತುತಿ ಮನೋಹರ, ಅದು ಬಲುಸೂಕ್ತ II
2 : ನಿರ್ಮಿಸುತಿಹನು ಪ್ರಭು ಮರಳಿ ಜೆರುಸಲೇಮನು I ಬಂದು ಸೇರಿಸುತಿಹನು ಚದರಿದ ಇಸ್ರಯೇಲರನು II
3 : ವಾಸಿಮಾಡುವನು ಮುರಿದ ಮನಸ್ಸುಳ್ಳವರನು I ಕಟ್ಟಿ ಗುಣಪಡಿಸುವನು ಅವರ ಗಾಯಗಳನು II
4 : ನಿಯಮಿಸಿಹನು ತಾರೆಗಳ ಸಂಖ್ಯೆಯನು I ಇಟ್ಟಿಹನು ಪ್ರತಿಯೊಂದಕೂ ಹೆಸರನು II
5 : ನಮ್ಮ ಪ್ರಭು ಘನವಂತ, ಪರಾಕ್ರಮಿ I ಅಪರಿಮಿತವಾದುದು ಆತನ ಜ್ಞಾನನಿಧಿ II
6 : ಆಧಾರವಾಗಿಹನು ಪ್ರಭು ದೀನರಿಗೆ I ತುಳಿದುಬಿಡುವನು ದುರ್ಜನರನು ನೆಲಕೆ II
7 : ಧನ್ಯವಾದವಿತ್ತು ಹಾಡಿರಿ ಪ್ರಭುವನು I ಕಿನ್ನರಿಯೊಡನೆ ಭಜಿಸಿರಿ ನಮ್ಮ ದೇವನನು II
8 : ಕವಿಸುವನಾತ ಮೋಡಗಳನು ಗಗನದಲಿ I ಸುರಿಸುವನು ಮಳೆಯನು ಬುವಿಯಲಿ I ಬೆಳೆಸುವನು ಹುಲ್ಲನು ಬೆಟ್ಟಗಳಲಿ II
9 : ಪಶುಗಳಿಗೂ ಕೂಗುವ ಕಾಗೆಮರಿಗಳಿಗೂ I ಒದಗಿಸುವನು ಬೇಕಾದ ಆಹಾರಗಳನು II
10 : ಅಶ್ವಬಲದಲಿ ಆತನಿಗೆ ಇಷ್ಟವಿಲ್ಲ I ಶೂರನ ಶಕ್ತಿಯನವನು ಮೆಚ್ಚುವುದಿಲ್ಲ II
11 : ಮೆಚ್ಚುವನಾತ ತನ್ನಲಿ ಭಯಭಕ್ತಿಯುಳ್ಳವರನು I ತನ್ನಚಲ ಪ್ರೀತಿಯಲಿ ಭರವಸೆಯುಳ್ಳವರನು II
12 : ಜೆರುಸಲೇಮೇ, ಕೀರ್ತಿಸು ಪ್ರಭುವನು I ಸಿಯೋನೇ, ಸ್ತುತಿಸು ನಿನ್ನ ದೇವರನು II
13 : ಬಲಪಡಿಸಿಹನಾತ ನಿನ್ನ ಹೆಬ್ಬಾಗಿಲ ಅಗುಳಿಗಳನು I ಆಶೀರ್ವದಿಸಿಹನು ನಿನ್ನಲ್ಲಿರುವ ಮಕ್ಕಳನು II
14 : ನಿನ್ನ ಪ್ರಾಂತದೊಳಗೆಲ್ಲಾ ಇರುವುದು ನೆಮ್ಮದಿ I ನೀಡುವನು ನಿನಗೆ ಅತ್ಯುತ್ತಮ ಗೋದಿ II
15 : ಕಳಿಸುವನು ಧರೆಗೆ ತನ್ನ ಆಣತಿ I ಸಿದ್ಧಿಯಾಗುವುದದು ಬಲು ಶೀಘ್ರದಿ II
16 : ಸುರಿಸುವನು ಹಿಮವನು ಉಣ್ಣೆಯಂತೆ I ಹರಡುವನು ಇಬ್ಬನಿಯನು ಬೂದಿಯಂತೆ II
17 : ಸುರಿಸುವನು ಆಲಿಕಲ್ಲನು ರೊಟ್ಟಿ ತುಂಡುಗಳಂತೆ I ಕೊರೆಯುವ ಚಳಿಯನು ಕಳಿಸುವನು ಸಹಿಸಲಾಗದಂತೆ II
18 : ಕರಗುವುವು ಆ ಕಲ್ಲುಗಳು ಆತನ ಅಪ್ಪಣೆಗೆ I ಹರಿಯುವುದು ನೀರು ಆತ ಕಳುಹಿಸುವ ಗಾಳಿಗೆ II
19 : ತಿಳಿಸಿಹನು ತನ್ನ ವಾಕ್ಯವನು ಯಕೋಬ್ಯರಿಗೆ I ತನ್ನ ವಿಧಿನಿಯಮಗಳನು ಇಸ್ರಯೇಲರಿಗೆ II
20 : ಬೇರಾವ ಜನಾಂಗಕ್ಕೂ ಆತ ಹೀಗೆ ಮಾಡಿಲ್ಲ I ಆತನ ವಿಧಿನಿಯಮಗಳನು ಅವರಿಗೆ ತಿಳಿಸಿಲ್ಲ I ಅಲ್ಲೆಲೂಯ! II