ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಸಂಖ್ಯಾಕಾಂಡ
27ನೇ ಅಧ್ಯಾಯ
- Verse 1: ಜೋಸೆಫನ ಕುಮಾರ ಮನಸ್ಸೆಯ ವಂಶಕ್ಕೆ ಸೇರಿದವನು ಚಲ್ಪಹಾದ ಎಂಬವನು. ಇವನು ಮಾಕೀರನ ಮರಿಮಗ, ಗಿಲ್ಯಾದನ ಮೊಮ್ಮಗ ಹಾಗು ಹೇಫರನ ಮಗ. ಈ ಚಲ್ಪಹಾದನಿಗೆ ಮಹ್ಲಾ, ನೋವಾ, ಹೊಗ್ಲಾ, ಮಿಲ್ಕಾ ಮತ್ತು ತಿರ್ಚಾ ಎಂಬ ಹೆಣ್ಣು ಮಕ್ಕಳಿದ್ದರು.
- Verse 2: ಇವರು ದೇವದರ್ಶನದ ಗುಡಾರದ ಬಾಗಿಲಿನ ಬಳಿಯಿದ್ದ ಮೋಶೆ, ಮಹಾಯಾಜಕ ಎಲ್ಲಾಜಾರ್, ಕುಲಾಧಿಪತಿಗಳು ಹಾಗು ಸರ್ವಸಮೂಹದವರ ಮುಂದೆ ಬಂದು ತಮ್ಮ ಒಂದು ವಿಜ್ಞಾಪನೆಯನ್ನು ಮುಂದಿಟ್ಟರು:
- Verse 3: “ನಮ್ಮ ತಂದೆ ಮರುಭೂಮಿಯಲ್ಲಿ ಸತ್ತುಹೋದರು. ಅವರು ಕೋರಹನ ಜತೆ ಸೇರಿ ಸರ್ವೇಶ್ವರನಿಗೆ ವಿರುದ್ಧ ಪ್ರತಿಭಟಿಸಿದವರಲ್ಲ. ಅವರು ಸತ್ತದ್ದು ತಮ್ಮ ಸ್ವಂತ ಪಾಪದ ನಿಮಿತ್ತ. ಅವರಿಗೆ ಗಂಡುಮಕ್ಕಳಿರಲಿಲ್ಲ.
- Verse 4: ನಮ್ಮ ತಂದೆಗೆ ಗಂಡುಮಗನಿಲ್ಲದ ಮಾತ್ರಕ್ಕೆ ಅವರ ಹೆಸರನ್ನು ಕುಲದಿಂದ ತೆಗೆದುಹಾಕುವುದು ನ್ಯಾಯವೇ? ನಮ್ಮ ತಂದೆಯ ಸ್ವಂತದವರಲ್ಲಿ ನಮಗೂ ಸೊತ್ತನ್ನು ಕೊಡಿ,” ಎಂದು ಕೇಳಿಕೊಂಡರು.
- Verse 5: ಮೋಶೆ ಅವರ ವಿಜ್ಞಾಪನೆಯನ್ನು ಸರ್ವೇಶ್ವರನ ಸಮ್ಮುಖದಲ್ಲಿ ವಿಚಾರಿಸಿದನು. ಅವರು ಆತನಿಗೆ ಹೀಗೆಂದು ವಿಧಿಸಿದರು:
- Verse 6: “ಚಲ್ಪಹಾದನ ಹೆಣ್ಣುಮಕ್ಕಳು ಹೇಳುವುದು ನ್ಯಾಯವಾಗಿದೆ.
- Verse 7: ಅವರ ತಂದೆಯ ಸ್ವಂತದವರಲ್ಲಿ ಅವರಿಗೂ ಸೊತ್ತನ್ನು ಕೊಡು. ತಂದೆಯ ಸೊತ್ತು ಅವರಿಗೆ ಸೇರಲಿ.
- Verse 8: ಇದಲ್ಲದೆ ಇಸ್ರಯೇಲರಿಗೆ ನೀನು ಹೀಗೆಂದು ಆಜ್ಞಾಪಿಸು: ಯಾವನಾದರು ಮಗನಿಲ್ಲದೆ ಸತ್ತರೆ ಅವನ ಸೊತ್ತು ಅವನ ಮಗಳಿಗೆ ಸೇರಬೇಕು.
- Verse 9: ಮಗಳು ಇಲ್ಲದ ಪಕ್ಷಕ್ಕೆ ಅವನ ಸೊತ್ತು ಅವನ ಅಣ್ಣತಮ್ಮಂದಿರಿಗೆ ಸೇರಬೇಕು.
- Verse 10: ಅಣ್ಣತಮ್ಮಂದಿರಿಲ್ಲದ ಪಕ್ಷಕ್ಕೆ ತಂದೆಯ ಅಣ್ಣತಮ್ಮಂದಿರಿಗೆ ಸೇರಬೇಕು.
- Verse 11: ಇವರೂ ಇಲ್ಲದಿದ್ದರೆ ಕುಲದವರಲ್ಲಿ ಸಮೀಪ ಬಂಧುವಿಗೆ ಸೇರಬೇಕು; ಇವನೇ ಅದನ್ನು ಅನುಭೋಗಿಸಲಿ. ಸರ್ವೇಶ್ವರನಾದ ನಾನು ನಿನಗೆ ಅಪ್ಪಣೆಮಾಡಿದ ಈ ತೀರ್ಮಾನವು ಇಸ್ರಯೇಲರಿಗೆ ನ್ಯಾಯವಿಧಿಯಾಗಿರಲಿ.”
- Verse 12: ಸರ್ವೇಶ್ವರ ಮೋಶೆಗೆ ಹೀಗೆಂದರು: “ನೀನು ಈ ಅಬಾರೀಮ್ ಬೆಟ್ಟವನ್ನು ಹತ್ತಿ ಇಸ್ರಯೇಲರಿಗೆ ನಾನು ವಾಗ್ದಾನ ಮಾಡಿದ ನಾಡನ್ನು ನೋಡು.
- Verse 13: ನೋಡಿದ ಮೇಲೆ ನಿನ್ನ ಅಣ್ಣ ಆರೋನನು ಮರಣಹೊಂದಿ ಪಿತೃಗಳ ಬಳಿಗೆ ಸೇರಿದಂತೆ ನೀನು ಕೂಡ ಸೇರಬೇಕು.
- Verse 14: ಚಿನ್ ಮರುಭೂಮಿಯಲ್ಲಿ ಇಸ್ರಯೇಲ್ ಸಮಾಜದವರು ನನ್ನೊಡನೆ ವಿವಾದಿಸಿದರು. ಆಗ ನೀವಿಬ್ಬರೂ ನನ್ನ ಗೌರವವನ್ನು ಅವರ ಮುಂದೆ ಕಾಪಾಡದೆಹೋದಿರಿ; ನನ್ನ ಆಜ್ಞೆಯನ್ನು ಉಲ್ಲಂಘಿಸಿದಿರಿ. ಆದ್ದರಿಂದ ನೀವು ಆ ನಾಡನ್ನು ಸೇರಬಾರದು.” ಚಿನ್ ಮರುಭೂಮಿಯಲ್ಲಿನ ಕಾದೇಶಿನಲ್ಲಿರುವ ಮೆರಿಬಾ ಜಲಾಶಯದ ಬಳಿ ನಡೆದ ಘಟನೆಯನ್ನು ಸೂಚಿಸುತ್ತಾ ಇದನ್ನು ನುಡಿದರು.
- Verse 15: ಆಗ ಮೋಶೆ ಸರ್ವೇಶ್ವರನಿಗೆ:
- Verse 16: “ಸರ್ವೇಶ್ವರಾ, ಎಲ್ಲ ಪ್ರಾಣಿಗಳಿಗೆ ಜೀವದಾತ ದೇವರೇ, ನಿಮ್ಮವರಾದ ಈ ಸಮಾಜದವರು ಕುರುಬನಿಲ್ಲದ ಕುರಿಗಳಾಗಬಾರದು.
- Verse 17: ಆದುದರಿಂದ ಅವರ ಕೆಲಸಕಾರ್ಯಗಳನ್ನು ನಿರ್ವಹಿಸುವುದಕ್ಕೂ ಅವರನ್ನು ಮುನ್ನಡೆಸುವುದಕ್ಕೂ ಹಿಂದಕ್ಕೆ ಕರೆದುತರುವುದಕ್ಕೂ ಒಬ್ಬ ನಾಯಕನನ್ನು ನೇಮಿಸಿ,” ಎಂದು ಮನವಿಮಾಡಿಕೊಂಡನು.
- Verse 18: ಅದಕ್ಕೆ ಸರ್ವೇಶ್ವರ, “ನೂನನ ಮಗ ಯೆಹೋಶುವನು ಆತ್ಮವರ ಸಂಪನ್ನನು.
- Verse 19: ಅವನನ್ನು ಮಹಾಯಾಜಕನಾದ ಎಲ್ಲಾಜಾರನ ಮುಂದೆ ಹಾಗು ಸಮಾಜದವರೆಲ್ಲರ ಮುಂದೆ ನಿಲ್ಲಿಸು; ಅವನ ಮೇಲೆ ಹಸ್ತನಿಕ್ಷೇಪಮಾಡಿ ಅವರ ಸಮ್ಮುಖದಲ್ಲೆ ಅಧಿಕಾರ ವಹಿಸಿಕೊಡು.
- Verse 20: ಸಮಾಜದವರೆಲ್ಲರು ಅವನಿಗೆ ವಿಧೇಯರಾಗಿ ಇರುವಂತೆ ನಿನಗಿರುವ ಗೌರವವನ್ನು ಅವನಿಗೆ ಕೊಡು.
- Verse 21: ದೈವೇಚ್ಛೆಯನ್ನು ತಿಳಿದುಕೊಳ್ಳಲು ಅವನು ಮಹಾಯಾಜಕ ಎಲ್ಲಾಜಾರನ ಹತ್ತಿರ ಬರಬೇಕು. ಎಲ್ಲಾಜಾರನು ಸರ್ವೇಶ್ವರನ ಸನ್ನಿಧಿಯಲ್ಲಿ ‘ಊರಿಮ್’ ಎಂಬ ವಸ್ತುವಿನ ಮೂಲಕ ಅವನ ಪರವಾಗಿ ವಿಚಾರಿಸುವನು, ಯೆಹೋಶುವನು ಮತ್ತು ಇಸ್ರಾಯೇಲ್ ಸಮಾಜದವರೆಲ್ಲರು ಅವನ ಮಾತಿನಂತೆ ಹೊರಡಬೇಕು ಹಾಗು ಹಿಂದಿರುಗಬೇಕು,” ಎಂದು ಆಜ್ಞಾಪಿಸಿದರು.
- Verse 22: ಸರ್ವೇಶ್ವರನ ಅಪ್ಪಣೆಯ ಮೇರೆಗೆ ಮೋಶೆ ಯೆಹೋಶುವನನ್ನು ಮಹಾಯಾಜಕ ಎಲ್ಲಾಜಾರನ ಮತ್ತು ಸಮಾಜದವರೆಲ್ಲರ ಮುಂದೆ ನಿಲ್ಲಿಸಿ
- Verse 23: ಅವನ ಮೇಲೆ ಹಸ್ತನಿಕ್ಷೇಪ ಮಾಡಿ ಅವನಿಗೆ ಅಧಿಕಾರವನ್ನು ವಹಿಸಿಕೊಟ್ಟನು.