పరిశుద్ధ గ్రంథము
ಹಳೆಯ ಒಡಂಬಡಿಕೆ
ಕೀರ್ತನೆಗಳು
45ನೇ ಅಧ್ಯಾಯ
1 : ಉಜ್ವಲಾಲೋಚನೆಯೊಂದು ತುಡುಕುತಿದೆ ಮನದಲಿ I ರಚಿಸಲಿರುವೆ ಮಹಾರಾಜನಿಗೊಂದು ಗೀತಾಂಜಲಿ I ನನ್ನ ಜಿಹ್ವೆ, ಸಜ್ಜಾದ ಬರಹಗಾರನ ಲೇಖನಿ II
2 : ನರಮಾನವರೊಳು ನೀ ಸುರಸುಂದರ I ನಿನ್ನ ಮುಖವಾಣಿ ಅತ್ಯಂತ ಮಧುರ I ದೇವಾನುಗ್ರಹ ನಿನಗಿದೆ ನಿರಂತರ II
3 : ಕಟ್ಟಿಕೋ ಶೂರನೇ, ಪಟ್ಟಗತ್ತಿಯನು ಸೊಂಟಕೆ I ಸಂಭ್ರಮ, ಶೋಭೆ, ಸಡಗರ ಸಲ್ಲತಕ್ಕವು ನಿನಗೆ II
4 : ಹೊರಡು ಒಡ್ಡೋಲಗದಿಂದ ವಾಹನಾರೂಢನಾಗಿ I ತೆರಳು ಭುಜಬಲದಿ ಮಹತ್ಕಾರ್ಯವೆಸಗುವವನಾಗಿ I ಹೆಣಗು ಸತ್ಯಕ್ಕಾಗಿ, ನ್ಯಾಯನೀತಿಪರನಾಗಿ II
5 : ನಿನ್ನಂಬು ಬಾಣಗಳು ಹರಿತವಾದುವು I ರಾಜದ್ರೋಹಿಗಳನು ಅವು ಇರಿಯುವುವು I ಜನಾಂಗಗಳು ನಿನ್ನ ಪಾದಕ್ಕೆರಗುವುವು II
6 : ಅಮರವಾದುದು ಹೇ ದೇವಾ, ನಿನ್ನ ಸಿಂಹಾಸನ I ನ್ಯಾಯಸ್ಥಾಪಕವಾದುದು ನಿನ್ನ ರಾಜದಂಡ II
7 : ಪ್ರೀತಿಸಿದೆ ನೀನು ಧರ್ಮವನು ದ್ವೇಷಿಸಿದೆ ಅಧರ್ಮವನು I ಆನಂದ ತೈಲದಿಂದಭಿಷೇಕಿಸಿಹನು ನಿನ್ನ, ದೇವನು I ಮಿತ್ರರಿಗಿಂತ ಮಿಗಿಲಾಗಿ ಅಭಿಷೇಕಿಸಿಹನು ಆತನು ನಿನ್ನನು II
8 : ಘಮಘಮಿಸುತಿದೆ ನಿನ್ನುಡಿಗೆ ರಸಗಂಧ, ಅಗರು, ಚಂದನಗಳಿಂದ I ಮನರಂಜನೆಗೊಳ್ಳುತಿರುವೆ ದಂತ ಮಂದಿರದುನ್ನತ ವಾದ್ಯಗಳಿಂದ II
9 : ರಾಜಕುವರಿಯರಿಹರು ನಿನ್ನ ಸ್ತ್ರೀ ಪರಿವಾರದಲಿ I ಪಟ್ಟದ ರಾಣಿಯು ನಿಂತಿಹಳು ನಿನ್ನ ಬಲಪಾರ್ಶ್ವದಲಿ I ಓಫಿರ್ ನಾಡಿನ ಚಿನ್ನಾಭರಣಗಳಿಂದ ಭೂಷಿತಳಾಗಿ II
10 : ಎಲೌ ಕುವರಿಯೇ, ಕೇಳು, ಎನ್ನ ಮಾತಿಗೆ ಕಿವಿಗೊಡು I ನಿನ್ನ ಜನರನು, ತೌರು ಮನೆಯನು ಮರೆತುಬಿಡು II
11 : ಆಗ ಬಯಸುವನು ರಾಜ ನಿನ್ನ ಲಾವಣ್ಯವನು I ಆತನ ಪಾದಕ್ಕೆರಗು, ಆತನೇ ನಿನಗೊಡೆಯನು II
12 : ಟೈರ್ ನಾಡಿಗರು ನಿನಗೆ ಕಾಣಿಕೆಯಿತ್ತು ಸನ್ಮಾನಿಸುವರು I ಸಿರಿವಂತ ಪ್ರಜೆಗಳು ನಿನ್ನುಪಕಾರವನು ಕೋರಿಬರುವರು II
13 : ರಾಜಕುವರಿ ವಿರಾಜಿಸುತಿಹಳು ಅಂತಃಪುರದಲಿ I ಮೆರೆಯುತಿಹಳು ಜರತಾರಿ ವಸ್ತ್ರಾಭರಣಗಳಲಿ II
14 : ಭೂಷಿತಳಾಗಿಹಳಾಕೆ ಕಸೂತಿಕೆಲಸದ ವಸ್ತ್ರಗಳಿಂದ I ಬರುತಿಹಳು ರಾಜನ ಬಳಿಗೆ ಸಖಿಯರ ಪರಿವಾರ ಸಮೇತ II
15 : ಆಗಮಿಸುತಿಹರಿದೋ ಸಂಭ್ರಮ ಸಡಗರದಿಂದ I ಪ್ರವೇಶಿಸುತಿಹರು ಅರಮನೆಯನು ಉತ್ಸಾಹದಿಂದ II
16 : ನಿನ್ನ ಪುತ್ರರು ಅಲಂಕರಿಸುವರು ಪೂರ್ವಜರ ಸ್ಥಾನವನು I ನೇಮಕಗೊಳ್ಳುವರು ಉತ್ತರಾಧಿಕಾರಿಗಳಾಗಿ ಜಗದೊಳು II
17 : ನಿನ್ನ ನಾಮಸ್ಮರಣೆಯನುಳಿಸುವೆನು ಚಿರಕಾಲ I ಹೊಗಳುವರು ಸಕಲ ಜನರು ನಿನ್ನನು ಅನುಗಾಲ II