ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಹೋಶೇಯ
12ನೇ ಅಧ್ಯಾಯ
- Verse 1: “ಎಫ್ರಯಿಮ್ ಕೇವಲ ಗಾಳಿಗೆ ಕುರಿಗಾಹಿ; ಅದು ದಿನವಿಡೀ ಗುದ್ದಾಡುತ್ತಿರುವುದು ಮೂಡಣಗಾಳಿಯನ್ನೇ. ಅದು ಮೋಸವನ್ನೂ ಹಿಂಸೆಯನ್ನೂ ನಿರಂತರವಾಗಿ ಹೆಚ್ಚಿಸುತ್ತಿದೆ. ಅಸ್ಸೀರಿಯದೊಂದಿಗೆ ಒಪ್ಪಂದಮಾಡಿಕೊಳ್ಳುತ್ತಿದೆ. ಈಜಿಪ್ಟಿಗೆ ಎಣ್ಣೆಯನ್ನು ಕಾಣಿಕೆಯಾಗಿ ಕಳುಹಿಸುತ್ತಿದೆ.”
- Verse 2: ಸರ್ವೇಶ್ವರ ಜುದೇಯದ ಮೇಲೆ ಆಪಾದನೆ ಹೊರಿಸಿದ್ದಾರೆ. ಯಕೋಬನನ್ನು ಅದರ ನಡತೆಗೆ ತಕ್ಕಂತೆ ದಂಡಿಸುತ್ತಾರೆ. ಅದರ ಕೃತ್ಯಗಳಿಗನುಸಾರವಾಗಿ ಪ್ರತೀಕಾರ ಮಾಡುತ್ತಾರೆ.
- Verse 3: ಯಕೋಬನು ಅಣ್ಣನ ಜೊತೆ ತಾಯಿಯ ಗರ್ಭದಲ್ಲಿರುವಾಗಲೇ ಅವನ ಹಿಮ್ಮಡಿಯನ್ನು ಹಿಡಿದು ವಂಚಿಸಿದನು. ಪ್ರಾಯಕ್ಕೆ ಬಂದಮೇಲೆ ದೇವರೊಡನೆ ಹೋರಾಡಿದನು.
- Verse 4: ಹೌದು, ಯಕೋಬನು ದೇವದೂತನ ಸಂಗಡ ಹೋರಾಡಿ ಗೆದ್ದನು. ಅಳುತ್ತಾ ಆತನ ಅನುಗ್ರಹಕ್ಕಾಗಿ ಯಾಚಿಸಿದನು. ಆತನು ಬೇತೇಲಿನಲ್ಲಿ ದೇವರನ್ನು ಕಂಡನು. ದೇವರು ಅಲ್ಲಿ ಆತನೊಂದಿಗೆ ಮಾತನಾಡಿದರು.
- Verse 5: ಅವರೇ ಸರ್ವಶಕ್ತನಾದ ದೇವರು; ಸರ್ವೇಶ್ವರ ಎಂಬುದೇ ಅವರನ್ನು ಸ್ಮರಿಸುವ ನಾಮಧೇಯ.
- Verse 6: ಆದುದರಿಂದ ಇಸ್ರಯೇಲ್, ನೀನು ದೇವರ ಕಡೆ ತಿರುಗಿಕೋ, ನೀತಿ ಪ್ರೀತಿಗಳಿಗೆ ಅನುಗುಣವಾಗಿ ನಡೆ. ನಿರಂತರವಾಗಿ ದೇವರನ್ನು ನಿರೀಕ್ಷಿಸಿಕೊಂಡಿರು.
- Verse 7: ಸರ್ವೇಶ್ವರ ಇಂತೆನ್ನುತ್ತಾರೆ: “ಇಸ್ರಯೇಲ್ ಮೋಸದ ತಕ್ಕಡಿ ಹಿಡಿದು ವ್ಯಾಪಾರಮಾಡುವ ಕಾನಾನ್ಯರಂತೆ ಇದೆ. ಇತರರಿಂದ ಕಸಿದುಕೊಳ್ಳಬೇಕೆಂಬುದೇ ಅದರ ದುರಾಸೆ.”
- Verse 8: ಎಫ್ರಯಿಮ್ ಹೇಳಿಕೊಳ್ಳುವುದೇನೆಂದರೆ: “ನಾನು ಐಶ್ವರ್ಯವಂತನಾಗಿಬಿಟ್ಟೆ, ನನಗಾಗಿ ಆಸ್ತಿಪಾಸ್ತಿಯನ್ನು ಗಳಿಸಿಕೊಂಡಿದ್ದೇನೆ. ನನ್ನ ಗಳಿಕೆಯಲ್ಲಿ ಪಾಪವೆಂಬ ದೋಷವೇನೂ ಇಲ್ಲ.”
- Verse 9: ಆದರೆ ಈಜಿಪ್ಟಿನಿಂದ ನಿನ್ನನ್ನು ಬಿಡಿಸಿಕೊಂಡು ಬಂದಾಗಿನಿಂದಲೂ ನಿನ್ನ ಸರ್ವೇಶ್ವರನಾದ ದೇವರಾದ ನಾನು, ಯಾತ್ರಾದಿನಗಳಲ್ಲಿ ನೀನು ವನವಾಸ ಮಾಡಿದಂತೆ ನಿಮ್ಮನ್ನು ಪುನಃ ಗುಡಾರದವಾಸಕ್ಕೆ ಗುರಿಪಡಿಸುವೆನು.
- Verse 10: “ಪ್ರವಾದಿಗಳೊಂದಿಗೆ ಮಾತನಾಡಿದ್ದೇನೆ. ಅವರಿಗೆ ಹಲವಾರು ದರ್ಶನಗಳನ್ನು ದಯಪಾಲಿಸಿದ್ದೇನೆ. ಅವರ ಮುಖಾಂತರ ಸಾಮತಿಗಳನ್ನು ಹೇಳಿ ಜನರಿಗೆ ಮುನ್ನೆಚ್ಚರಿಕೆ ನೀಡಿದ್ದೇನೆ.
- Verse 11: ಆದರೂ ಗಿಲ್ಯಾದಿನಲ್ಲಿ ಅಧರ್ಮ ನೆಲೆಗೊಂಡಿದೆ. ಅದಕ್ಕೆ ದುರ್ಗತಿ ಕಾದಿದೆ. ಗಿಲ್ಗಾಲಿನಲ್ಲಿ ಬಸವನಿಗೆ ಯಜ್ಞಗಳನ್ನು ಅರ್ಪಿಸಲಾಗುತ್ತಿದೆ. ಅಲ್ಲಿನ ಯಜ್ಞವೇದಿಗಳು ಪುಡಿಪುಡಿಯಾಗುವುವು; ಉಳುವ ನೇಗಿಲಿಗೆ ಸಿಕ್ಕುವ ಕಲ್ಲುಕುಪ್ಪೆಗಳಾಗುವುವು.”
- Verse 12: ಯಕೋಬನು ಮೆಸಪಟೋಮಿಯಕ್ಕೆ ಓಡಿಹೋಗಬೇಕಾಯಿತು. ಅಲ್ಲಿ ಮದುವೆಗೋಸ್ಕರ ಜೀತಮಾಡಿದನು; ವಧುವಿಗೋಸ್ಕರ ಕುರಿ ಕಾಯ್ದನು.
- Verse 13: ದೇವರು ಪ್ರವಾದಿಯನ್ನು ಕಳುಹಿಸಿ, ಇಸ್ರಯೇಲನ್ನು ಈಜಿಪ್ಟಿನಿಂದ ಬಿಡುಗಡೆ ಮಾಡಿದರು. ಪ್ರವಾದಿಯ ಮುಖಾಂತರ ಇಸ್ರಯೇಲಿಗೆ ರಕ್ಷಣೆ ದೊರಕಿತು.
- Verse 14: ಎಫ್ರಯಿಮ್ ದೇವರನ್ನು ಉಗ್ರವಾಗಿ ರೇಗಿಸಿದೆ; ರಕ್ತಾಪರಾಧವನ್ನು ಅದರ ಮೇಲೆ ಹೊರಿಸಲಾಗುವುದು. ಅದು ಮಾಡಿದ ಅವಮಾನಕ್ಕೆ ಪ್ರತಿಯಾಗಿ ದೇವರು ಅದನ್ನು ಅವಮಾನಕ್ಕೆ ಗುರಿಪಡಿಸುವರು.