ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯಾಜಕಕಾಂಡ
15ನೇ ಅಧ್ಯಾಯ
- Verse 1: ಸರ್ವೇಶ್ವರ ಸ್ವಾಮಿ ಮೋಶೆ ಮತ್ತು ಆರೋನರಿಗೆ ಹೀಗೆಂದರು:
- Verse 2: “ನೀವು ಇಸ್ರಯೇಲರಿಗೆ ಆಜ್ಞಾಪಿಸಬೇಕಾದದ್ದೇನೆಂದರೆ - ಒಬ್ಬ ವ್ಯಕ್ತಿಯ ಜನನೇಂದ್ರಿಯದಿಂದ ಮೇಹಸ್ರಾವವಾದರೆ ಆ ಕಾರಣ ಆ ವ್ಯಕ್ತಿ ಅಶುದ್ಧನು.
- Verse 3: ಆ ಸ್ರಾವವು ಹರಿಯುತ್ತಿದ್ದರೂ ನಿಂತುಹೋಗಿದ್ದರೂ ಆ ದೇಹಸ್ಥಿತಿಯಿಂದ ಅವನು ಅಶುದ್ಧನು.
- Verse 4: ಅಂಥವನು ಮಲಗಿರುವ ಪ್ರತಿಯೊಂದು ಹಾಸಿಗೆಯೂ ಕೂತಿರುವ ಪ್ರತಿಯೊಂದು ಆಸನವೂ ಅಶುದ್ಧ.
- Verse 5: ಅವನ ಹಾಸಿಗೆಯನ್ನು ಮುಟ್ಟಿದವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಬೇಕು; ಅವನು ಆ ದಿನದ ಸಂಜೆಯವರೆಗೆ ಅಶುದ್ಧನು.
- Verse 6: ಸ್ರಾವವುಳ್ಳವನು ಕುಳಿತಿದ್ದ ಆಸನದ ಮೇಲೆ ಕುಳಿತುಕೊಂಡವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಬೇಕು; ಅವನು ಆ ಸಂಜೆಯವರೆಗೆ ಅಶುದ್ಧನಾಗಿರುವನು.
- Verse 7: ಅವನ ಶರೀರವನ್ನು ಮುಟ್ಟಿದವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನ ಮಾಡಬೇಕು; ಅವನು ಆ ಸಂಜೆಯವರೆಗೆ ಅಶುದ್ಧನಾಗಿರುವನು.
- Verse 8: ಶುದ್ಧನಾಗಿರುವವನ ಮೇಲೆ ಸ್ರಾವವುಳ್ಳವನು ಉಗುಳಿದರೆ ಅವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಬೇಕು; ಅವನು ಆ ಸಂಜೆಯವರೆಗೆ ಅಶುದ್ಧನಾಗಿರುವನು.
- Verse 9: ಸ್ರಾವವುಳ್ಳವನು ಕುಳಿತಿದ್ದ ತಡಿಯು ಅಶುದ್ಧ.
- Verse 10: ಅವನ ಕೆಳಗಿದ್ದ ಯಾವ ವಸ್ತುವನ್ನಾದರೂ ಮುಟ್ಟಿದವನು ಆ ಸಂಜೆಯವರೆಗೆ ಅಶುದ್ಧನಾಗಿರುವನು. ಅಂಥ ವಸ್ತುವನ್ನು ಎತ್ತಿದವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಬೇಕು. ಅವನು ಆ ಸಂಜೆಯವರೆಗೆ ಅಶುದ್ಧನಾಗಿರುವನು.
- Verse 11: ಸ್ರಾವವುಳ್ಳವನು ಕೈಗಳನ್ನು ತೊಳೆದುಕೊಳ್ಳದೆ ಯಾರನ್ನು ಮುಟ್ಟಿದರೂ ಆ ಮನುಷ್ಯನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಬೇಕು; ಅವನು ಆ ಸಂಜೆಯವರೆಗೆ ಅಶುದ್ಧನಾಗಿರುವನು.
- Verse 12: ಸ್ರಾವವುಳ್ಳವನು ಮುಟ್ಟಿದ ಮಣ್ಣಿನ ಪಾತ್ರೆಯನ್ನು ಒಡೆದುಬಿಡಬೇಕು. ಅವನು ಮರದ ಪಾತ್ರೆಯನ್ನು ಮುಟ್ಟಿದರೆ ಅದನ್ನು ನೀರಿನಿಂದ ತೊಳೆಯಬೇಕು.
- Verse 13: ಸ್ರಾವವುಳ್ಳವನ ಸ್ರಾವವು ನಿಂತು ವಾಸಿಯಾದಾಗ ಅವನು ಶುದ್ಧ ಮಾಡಿಸಿಕೊಳ್ಳುವುದಕ್ಕೆ ಆಗಿನಿಂದ ಏಳು ದಿನಗಳನ್ನು ಎಣಿಸಿಕೊಂಡು ತನ್ನ ಬಟ್ಟೆಗಳನ್ನು ಒಗೆದುಕೊಂಡು ಒರತೆ ನೀರಿನಿಂದ ತನ್ನ ಶರೀರವನ್ನು ತೊಳೆದುಕೊಂಡು ಶುದ್ಧನಾಗುವನು.
- Verse 14: ಎಂಟನೆಯ ದಿನ ಎರಡು ಬೆಳವಕ್ಕಿಗಳನ್ನಾಗಲಿ ಎರಡು ಮರಿ ಪಾರಿವಾಳಗಳನ್ನಾಗಲಿ ತೆಗೆದುಕೊಂಡು ದೇವದರ್ಶನದ ಗುಡಾರದ ಬಾಗಿಲಿಗೆ ಸರ್ವೇಶ್ವರನ ಸನ್ನಿಧಿಗೆ ಬಂದು ಯಾಜಕನಿಗೆ ಒಪ್ಪಿಸಬೇಕು.
- Verse 15: ಯಾಜಕನು ದೋಷಪರಿಹಾರಕ ಬಲಿಗಾಗಿ ಒಂದನ್ನೂ ದಹನಬಲಿಯಾಗಿ ಇನ್ನೊಂದನ್ನೂ ಸಮರ್ಪಿಸಬೇಕು. ಹೀಗೆ ಯಾಜಕನು ಅವನ ಸ್ರಾವದ ವಿಷಯದಲ್ಲಿ ಸರ್ವೇಶ್ವರನ ಸನ್ನಿಧಿಯಲ್ಲಿ ಅವನ ಪರವಾಗಿ ದೋಷಪರಿಹಾರ ಮಾಡುವನು.
- Verse 16: “ಒಬ್ಬನಿಗೆ ವೀರ್ಯಸ್ಖಲನವಾದರೆ ಅವನು ಸರ್ವಾಂಗಸ್ನಾನ ಮಾಡಬೇಕು; ಅವನು ಆ ಸಾಯಂಕಾಲದವರೆಗೆ ಅಶುದ್ಧನಾಗಿರುವನು.
- Verse 17: ಯಾವ ಬಟ್ಟೆಯ ಮೇಲಾಗಲಿ ತೊಗಲಿನ ಮೇಲಾಗಲಿ ವೀರ್ಯವು ಬಿದ್ದರೆ ಅದನ್ನು ನೀರಿನಿಂದ ತೊಳೆಯಬೇಕು, ಅದು ಸಾಯಂಕಾಲದವರೆಗೆ ಅಶುದ್ಧವಾಗಿರುವುದು.
- Verse 18: ಪುರುಷನಿಗೆ ಸ್ತ್ರೀಸಂಗದಿಂದ ವೀರ್ಯಸ್ಖಲನವಾದರೆ ಅವರಿಬ್ಬರೂ ಸ್ನಾನಮಾಡಿಕೊಳ್ಳಬೇಕು; ಅವರು ಸಂಜೆಯವರೆಗೆ ಅಶುದ್ಧರಾಗಿರುವರು.
- Verse 19: “ಮಹಿಳೆಗೆ ರಕ್ತಸ್ರಾವವಾದರೆ ಅವಳು ಏಳು ದಿನಗಳ ತನಕ ಪ್ರತ್ಯೇಕವಾಗಿರಬೇಕು. ಅವಳನ್ನು ಮುಟ್ಟಿದವರು ಆ ದಿನದ ಸಂಜೆಯವರೆಗೆ ಅಶುದ್ಧರಾಗುವರು.
- Verse 20: ಅವಳು ಮುಟ್ಟಾಗಿರುವಾಗ ಯಾವುದರ ಮೇಲೆ ಮಲಗಿದರೂ ಕುಳಿತುಕೊಂಡರೂ ಅದು ಅಶುದ್ಧವಾಗಿರುವುದು.
- Verse 21: ಅವಳ ಹಾಸಿಗೆಯನ್ನು ಮುಟ್ಟಿದವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಬೇಕು. ಅವನು ಸಂಜೆಯವರೆಗೆ ಅಶುದ್ಧನಾಗಿರುವನು.
- Verse 22: ಅವಳು ಯಾವುದರ ಮೇಲೆ ಕುಳಿತಿದ್ದಳೋ ಅದನ್ನು ಮುಟ್ಟಿದವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಬೇಕು. ಅವನು ಸಂಜೆಯವರೆಗೆ ಅಶುದ್ಧನಾಗಿರುವನು.
- Verse 23: ಅವಳು ಮಲಗಿದ್ದ ಹಾಸಿಗೆಯ ಮೇಲಾಗಲಿ, ಕುಳಿತಿದ್ದ ಸ್ಥಳದ ಮೇಲಾಗಲಿ ಇದ್ದ ಯಾವುದನ್ನಾದರೂ ಮುಟ್ಟಿದವನು ಸಂಜೆಯವರೆಗೆ ಅಶುದ್ಧನಾಗಿರುವನು.
- Verse 24: ಪುರುಷನು ಒಂದು ವೇಳೆ ಅಂಥವಳೊಡನೆ ಸಂಗಮಿಸಿ ಅವಳ ರಜಸ್ಸು ಅವನಿಗೆ ತಗಲಿದರೆ ಅವನು ಏಳು ದಿನಗಳ ತನಕ ಅಶುದ್ಧನಾಗಿರುವನು. ಅಷ್ಟರಲ್ಲಿ ಅವನು ಯಾವ ಹಾಸಿಗೆಯ ಮೇಲೆ ಮಲಗಿಕೊಂಡರೂ ಅದು ಅಶುದ್ಧವಾಗಿರುವುದು.
- Verse 25: “ಮಹಿಳೆಗೆ ಮುಟ್ಟಿನ ಕಾಲದಲ್ಲಿ ಮಾತ್ರವಲ್ಲದೆ ಬೇರೆ ದಿನಗಳಲ್ಲೂ ರಕ್ತಸ್ರಾವವಾದರೆ, ಇಲ್ಲವೆ ಮುಟ್ಟಿನ ಕಾಲದಲ್ಲಿ ತಕ್ಕದ್ದಕ್ಕಿಂತ ಹೆಚ್ಚು ದಿನಗಳು ರಕ್ತಸ್ರಾವವಾದರೆ, ಅವಳು ತಿಂಗಳಿನ ಮುಟ್ಟಿನಿಂದ ಹೇಗೆ ಅಶುದ್ದಳೋ ಹಾಗೆಯೇ ಆ ಸ್ರಾವವಾಗುವ ದಿನಗಳೆಲ್ಲಾ ಅಶುದ್ಧಳಾಗಿರುವಳು.
- Verse 26: ಆ ಸ್ರಾವವಿರುವ ತನಕ ಅವಳು ಯಾವ ಹಾಸಿಗೆಯ ಮೇಲೆ ಮಲಗಿದರೂ, ಅದು ಮುಟ್ಟಿನ ಕಾಲದಲ್ಲಿ ಮಲಗಿದ ಹಾಸಿಗೆಯಂತೆಯೇ, ಅಶುದ್ಧವಾಗುವುದು. ಅವಳು ಯಾವುದರ ಮೇಲೆ ಕುಳಿತುಕೊಂಡರೂ ಅದು ಮುಟ್ಟಿನ ಕಾಲದಲ್ಲಿ ಕುಳಿತುಕೊಂಡ ವಸ್ತುವಿನಂತೆ ಅಶುದ್ಧವಾಗಿರುವುದು.
- Verse 27: ಆ ವಸ್ತುಗಳನ್ನು ಮುಟ್ಟಿದವನು ಅಶುದ್ಧನಾದುದರಿಂದ ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಬೇಕು; ಅವನು ಸಂಜೆಯವರೆಗೆ ಅಶುದ್ಧನಾಗಿರುವನು.
- Verse 28: ಅವಳಿಗೆ ರಕ್ತಸ್ರಾವ ನಿಂತ ದಿನದಿಂದ ಅವಳು ಏಳು ದಿನಗಳನ್ನು ಲೆಕ್ಕಿಸಿಕೊಂಡು ತರುವಾಯ ಶುದ್ಧಳಾಗುವಳು.
- Verse 29: ಎಂಟನೆಯ ದಿನದಲ್ಲಿ ಅವಳು ಎರಡು ಬೆಳವಕ್ಕಿಗಳನ್ನಾಗಲಿ, ಎರಡು ಪಾರಿವಾಳದ ಮರಿಗಳನ್ನಾಗಲಿ, ದೇವದರ್ಶನದ ಗುಡಾರದ ಬಾಗಿಲಿಗೆ ಯಾಜಕನ ಬಳಿಗೆ ತರಬೇಕು.
- Verse 30: ಯಾಜಕನು ದೋಷಪರಿಹಾರಕ ಬಲಿಗಾಗಿ ಒಂದನ್ನೂ ದಹನಬಲಿಗಾಗಿ ಇನ್ನೊಂದನ್ನೂ ಸಮರ್ಪಿಸಬೇಕು. ಹೀಗೆ ಯಾಜಕನು ಅವಳ ಸ್ರಾವದಿಂದುಂಟಾದ ಅಪರಿಶುದ್ಧತೆಯ ವಿಷಯವಾಗಿ ಸರ್ವೇಶ್ವರನ ಸನ್ನಿಧಿಯಲ್ಲಿ ಅವಳ ಪರವಾಗಿ ದೋಷಪರಿಹಾರ ಮಾಡುವನು.
- Verse 31: “ಇಸ್ರಯೇಲರು ಅಶುದ್ಧತೆಗೆ ದೂರವಾಗಿರುವಂತೆ ನೀವು ಅವರನ್ನು ಈ ರೀತಿಯಾಗಿ ಕಾಪಾಡಬೇಕು. ಅವರು ಅಪವಿತ್ರರಾಗಿದ್ದು ತಮ್ಮ ಮಧ್ಯದಲ್ಲಿರುವ ನನ್ನ ಗುಡಾರವನ್ನು ಹೊಲೆಮಾಡಿದರೆ ನಾಶವಾದಾರು.
- Verse 32: ಮೇಹಸ್ರಾವವುಳ್ಳವನು, ವೀರ್ಯಸ್ಖಲನದಿಂದ ಅಶುದ್ಧನಾದವನು,
- Verse 33: ಮುಟ್ಟಾದ ಮಹಿಳೆ ಸ್ರಾವವುಂಟಾಗುವ ಸ್ತ್ರೀ ಪುರುಷರು ಹಾಗು ಅಶುದ್ಧಳಾದ ಮಹಿಳೆಯನ್ನು ಸಂಗಮಿಸಿದವನು ಇವರ ವಿಷಯವಾದ ನಿಯಮಗಳು ಇವು.