ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
2 ಅರಸುಗಳು
12ನೇ ಅಧ್ಯಾಯ
- Verse 1: ಯೆಹೋವಾಷನು ಯೇಹುವಿನ ಆಳ್ವಿಕೆಯ ಏಳನೆಯ ವರ್ಷದಲ್ಲಿ ಅರಸನಾಗಿ ಜೆರುಸಲೇಮಿನಲ್ಲಿ ನಲವತ್ತು ವರ್ಷ ಆಳಿದನು. ಬೇರ್ಷೆಬದವಳಾದ ಚಿಬ್ಯಳು ಅವನ ತಾಯಿ.
- Verse 2: ಯಾಜಕನಾದ ಯೆಹೋಯಾದವನು ಅವನಿಗೆ ಬೋಧಕನಾಗಿದ್ದನು. ಆಗ ಅವನು ಸರ್ವೇಶ್ವರನ ದೃಷ್ಟಿಯಲ್ಲಿ ಒಳ್ಳೆಯವನಾಗಿಯೇ ನಡೆದುಕೊಳ್ಳುತ್ತಿದ್ದನು.
- Verse 3: ಆದರೆ ಅವನು ಪೂಜಾಸ್ಥಳಗಳನ್ನು ತೆಗೆದುಹಾಕಲಿಲ್ಲ. ಆದುದರಿಂದ ಜನರು ಅವುಗಳಲ್ಲಿ ಬಲಿಗಳನ್ನೂ ಧೂಪಗಳನ್ನೂ ಅರ್ಪಿಸುತ್ತಿದ್ದರು.
- Verse 4: ಯೆಹೋವಾಷನು ಯಾಜಕರಿಗೆ, “ಸರ್ವೇಶ್ವರನ ಆಲಯಕ್ಕೆ ಸೇರುವ ಎಲ್ಲಾ ಪರಿಶುದ್ಧ ದ್ರವ್ಯವನ್ನು, ಅಂದರೆ ಜನಗಣತಿಯಲ್ಲಿ ಎಣಿಕೆಯಾದ ಪ್ರತಿಯೊಬ್ಬನು ತಂದುಕೊಡುವ ಹಣ, ದೇವರಿಗೆ ಪ್ರತಿಷ್ಟಿತನಾದ ವ್ಯಕ್ತಿ ತನ್ನ ಪ್ರಾಣವನನ್ನು ಬಿಡಿಸಿಕೊಳ್ಳುವುದಕ್ಕಾಗಿ ತೆರುವ ಹಣ, ಜನರು ಸರ್ವೇಶ್ವರನ ಆಲಯಕ್ಕೆ ಸ್ವೇಚ್ಛೆಯಿಂದ ತಂದು ಒಪ್ಪಿಸುವ ಹಣ, ಇವುಗಳನ್ನು ತೆಗೆದುಕೊಂಡು ದೇವಾಲಯವು ಎಲ್ಲೆಲ್ಲಿ ಶಿಥಿಲವಾಗಿ ಇರುತ್ತದೆ ಎಂದು ನೋಡಿ ಅದನ್ನು ಸರಿಮಾಡುವುದಕ್ಕಾಗಿ ವಿನಿಯೋಗಿಸಿರಿ.
- Verse 5: ಪ್ರತಿಯೊಬ್ಬನೂ ತನ್ನ ತನ್ನ ಪರಿಚಿತರಿಂದಲೇ ಹಣ ತೆಗೆದುಕೊಳ್ಳಬೇಕು,” ಎಂದು ಆಜ್ಞಾಪಿಸಿದನು.
- Verse 6: ಯಾಜಕರು ಅರಸನಾದ ಯೆಹೋವಾಷನ ಆಳ್ವಿಕೆಯ ಇಪ್ಪತ್ತಮೂರನೆಯ ವರ್ಷದವರೆಗೂ ದೇವಾಲಯದ ದುರಸ್ತುಕಾರ್ಯವನ್ನು ಕೈಗೊಂಡಿರಲಿಲ್ಲ.
- Verse 7: ಆದುದರಿಂದ ಅವನು ಯೆಹೋಯಾದಾವ ಮೊದಲಾದ ಯಾಜಕರನ್ನು ಕರೆದು, “ನೀವು ಈವರೆಗೂ ದೇವಾಲಯವನ್ನೇಕೆ ದುರಸ್ತು ಮಾಡಲಿಲ್ಲ? ಇನ್ನು ಮುಂದೆ ನಿಮ್ಮ ಪರಿಚಿತರು ತಂದುಕೊಡುವ ಹಣವನ್ನು ನಿಮ್ಮ ಕೈಯಲ್ಲಿಟ್ಟುಕೊಳ್ಳದೆ. ಕೂಡಲೆ ಅದನ್ನು ದೇವಾಲಯದ ದುರಸ್ತಿಗಾಗಿ ಕೊಡಿ,” ಎಂದು ಹೇಳಿದನು.
- Verse 8: ಆಗ ಯಾಜಕರು, “ನಾವು ಇನ್ನು ಮುಂದೆ ಜನರಿಂದ ಹಣ ತೆಗೆದುಕೊಳ್ಳುವುದಿಲ್ಲ, ದೇವಾಲಯದ ದುರಸ್ತಿಗಾಗಿ ಕೈಹಾಕುವುದಿಲ್ಲ,” ಎಂಬುದಾಗಿ ಮಾತುಕೊಟ್ಟರು.
- Verse 9: ಯಾಜಕನಾದ ಯೆಹೋಯಾದಾವನು ಒಂದು ಪೆಟ್ಟಿಗೆಯನ್ನು ತೆಗೆದುಕೊಂಡು ಬಂದು, ಅದರ ಮುಚ್ಚಳದಲ್ಲಿ ತೂತುಮಾಡಿ, ಅದನ್ನು ಸರ್ವೇಶ್ವರನ ಆಲಯದ ಬಾಗಿಲಿನ ಬಲಗಡೆಯಲ್ಲಿ, ಬಲಿಪೀಠದ ಹತ್ತಿರ ಇಟ್ಟನು. ದ್ವಾರಪಾಲಕರಾದ ಯಾಜಕರು ಸರ್ವೇಶ್ವರನ ಆಲಯಕ್ಕೆ ತರಲಾದ ಹಣವನ್ನೆಲ್ಲಾ ಅದರಲ್ಲಿಯೇ ಹಾಕಿಸುತ್ತಿದ್ದರು.
- Verse 10: ಪೆಟ್ಟಿಗೆಯಲ್ಲಿ ತಕ್ಕಷ್ಟು ಹಣಕೂಡಿದೆಯೆಂದು ಕಂಡುಬಂದಾಗೆಲ್ಲಾ, ರಾಜಲೇಖಕನು ಹಾಗು ಮಹಾಯಾಜಕನು ಬಂದು ಅದನ್ನು ಚೀಲಗಳಲ್ಲಿ ಹಾಕಿ, ತೂಕಮಾಡಿ, ಸರ್ವೇಶ್ವರನ ಆಲಯದ ಹಣವು ಇಷ್ಟಿಷ್ಟು ಆಯಿತೆಂದು ಬರೆದುಕೊಂಡು,
- Verse 11: ಅದನ್ನು ಆಲಯದ ಕೆಲಸವನ್ನು ನಡಿಸುವ ಮೇಸ್ತ್ರಿಗಳಿಗೆ ಒಪ್ಪಿಸುತ್ತಿದ್ದರು; ಇವರು ಅದನ್ನು ಅಲ್ಲಿ ಕೆಲಸಮಾಡುವ ಬಡಗಿ, ಶಿಲ್ಪಿ, ಉಪ್ಪಾರ, ಕಲ್ಲುಕುಟಿಕ ಅವರ ಸಂಬಳಕ್ಕಾಗಿಯೂ
- Verse 12: ಮರ, ಕೆತ್ತಿದ ಕಲ್ಲು, ಇವುಗಳನ್ನು ಕೊಂಡುಕೊಳ್ಳುವುದಕ್ಕಾಗಿಯೂ ಉಪಯೋಗಿಸುತ್ತಿದ್ದರು.
- Verse 13: ಸರ್ವೇಶ್ವರನ ಆಲಯಕ್ಕೆ ತರಲಾದ ಹಣವನ್ನು ದುರಸ್ತುಕಾರ್ಯದವರ ಸಂಬಳಕ್ಕಾಗಿ ಉಪಯೋಗಿಸಿದರೇ ಹೊರತು,
- Verse 14: ಸರ್ವೇಶ್ವರನ ಆಲಯದ ಬೆಳ್ಳಿ ಬಟ್ಟಲು, ಕತ್ತರಿ, ಬೋಗುಣಿ, ತುತೂರಿ, ಬೆಳ್ಳಿ, ಬಂಗಾರದ ಪಾತ್ರೆ, ಇವುಗಳನ್ನು ಮಾಡುವುದಕ್ಕಾಗಿ ಉಪಯೋಗಿಸಲಿಲ್ಲ.
- Verse 15: ಕೆಲಸಗಾರರಿಗೆ ಸಂಬಳಕೊಡುವ ಮೇಸ್ತ್ರಿಗಳು ನಂಬಿಕಸ್ತರಾಗಿದ್ದುದರಿಂದ ಅವರ ವಶಕ್ಕೆ ಕೊಡಲಾದ ಹಣದ ಲೆಕ್ಕವನ್ನು ಯಾರೂ ಕೇಳಲಿಲ್ಲ.
- Verse 16: ಅಪರಾಧಪ್ರಾಯಶ್ಚಿತ್ತಕ್ಕಾಗಿ ಹಾಗು ದೋಷಪರಿಹಾರಕ್ಕಾಗಿ ತರಲಾದ ಹಣ ಯಾಜಕರ ಭಾಗವಾಗಿತ್ತು. ಅದು ಸರ್ವೇಶ್ವರನ ಆಲಯಕ್ಕೆ ಸೇರುತ್ತಿರಲಿಲ್ಲ.
- Verse 17: ಇದೇ ಕಾಲದಲ್ಲಿ ಸಿರಿಯಾದವರ ಅರಸನಾದ ಹಜಾಯೇಲನು ಬಂದು ಗತ್ ಊರಿಗೆ ಮುತ್ತಿಗೆಹಾಕಿ ಅದನ್ನು ಸ್ವಾಧೀನಪಡಿಸಿಕೊಂಡು ಅಲ್ಲಿಂದ ಜೆರುಸಲೇಮಿಗೆ ದಾಳಿಯಿಡಲು ಹೊರಟನು.
- Verse 18: ಜುದೇಯದ ಅರಸ ಯೆಹೋವಾಷನು ಇದನ್ನು ಕೇಳಿ, ತಾನು ಮತ್ತು ತನ್ನ ಪೂರ್ವಿಕರಾದ ಯೆಹೋಷಾಫಾಟ್, ಯೆಹೋರಾಮ್, ಅಹಜ್ಯಾ ಎಂಬ ಯೆಹೂದರಾಜರು ದೇವಸ್ಥಾನಕ್ಕೆ ಕಾಣಿಕೆಯಾಗಿ ಕೊಟ್ಟ ಒಡವೆಗಳನ್ನು ಹಾಗು ಸರ್ವೇಶ್ವರನ ಆಲಯದ ಮತ್ತು ಅರಮನೆ ಭಂಡಾರಗಳಲ್ಲಿ ಇದ್ದ ಬಂಗಾರದ ವಸ್ತುಗಳನ್ನು ಸಿರಿಯಾದವರ ಅರಸನಾದ ಹಜಾಯೇಲನಿಗೆ ಕಳುಹಿಸಿದನು. ಆಗ ಅವನು ಜೆರುಸಲೇಮನ್ನು ಬಿಟ್ಟುಹೋದನು.
- Verse 19: ಯೆಹೋವಾಷನ ಉಳಿದ ಚರಿತ್ರೆ ಹಾಗು ಅವನ ಕಾರ್ಯಕಲಾಪಗಳು ಜುದೇಯ ರಾಜರ ಇತಿಹಾಸ ಎಂಬ ಗ್ರಂಥದಲ್ಲಿ ಲಿಖಿತವಾಗಿವೆ.
- Verse 20: ಯೆಹೋವಾಷನ ಉದ್ಯೋಗಸ್ಥರು ಅವನಿಗೆ ವಿರೋಧವಾಗಿ ಒಳಸಂಚು ಮಾಡಿದರು.
- Verse 21: ಅವರಲ್ಲಿ ಶಿಮೆಯಾತನ ಮಗ ಯೋಜಾಕಾರ್, ಶೋಮೇರನ ಮಗ ಯೆಹೋಜಾಬಾದ್ ಎಂಬವರು ಸಿಲ್ಲಾ ಊರಿಗೆ ಹೋಗುವ ಗುಟ್ಟಾದ ದಾರಿಯಲ್ಲಿರುವ ಮಿಲ್ಲೋಕೋಟೆಯಲ್ಲಿ ಅವನನ್ನು ಕೊಂದರು. ಅವನ ಜನರು ಅವನ ಶವವನ್ನು ದಾವೀದನಗರದೊಳಗೆ ಅವನ ಕುಟುಂಬ ಸ್ಮಶಾನಭೂಮಿಯಲ್ಲಿ ಸಮಾಧಿಮಾಡಿದರು. ಅವನಿಗೆ ಬದಲಾಗಿ ಅವನ ಮಗ ಅಮಚ್ಯನು ಅರಸನಾದನು.