पवित्र बाइबिल
ಹಳೆಯ ಒಡಂಬಡಿಕೆ
ಕೀರ್ತನೆಗಳು
71ನೇ ಅಧ್ಯಾಯ
1 : ಆಶ್ರಯಕೋರಿ ಹೇ ಪ್ರಭು, ನಾ ಬಂದಿರುವೆ I ಆಶಾಭಂಗವಾಗದಿರಲೆಂದು ನಾ ಬೇಡುವೆ II
2 : ಸತ್ಯಸ್ವರೂಪನೆ, ನನ್ನ ಬಿಡಿಸಿ ರಕ್ಷಿಸಯ್ಯಾ I ನನಗೆ ಕಿವಿಗೊಟ್ಟು ಪ್ರಭು ನನ್ನನುದ್ಧರಿಸಯ್ಯಾ II
3 : ನೀನಾಗಿರು ನನಗಾಶ್ರಯದುರ್ಗ, ಕೋಟೆಕೊತ್ತಲು I ನೀನೇ ನನ್ನ ದುರ್ಗ, ಕೋಟೆ ನನ್ನನು ರಕ್ಷಿಸಲು II
4 : ದುರುಳರ ಕೈಯಿಂದೆನ್ನನು ದೇವಾ, ಬಿಡಿಸಯ್ಯಾ I ಕ್ರೂರ ಕೇಡಿಗರ ವಂಶದಿಂದೆನ್ನನು ತಪ್ಪಿಸಯ್ಯಾ II
5 : ಸ್ವಾಮಿ ದೇವಾ, ನೀನೇ ನನ್ನ ಭರವಸೆ I ಬಾಲ್ಯದಿಂದಲೂ ನೀನೇ ನನ್ನ ನಂಬಿಕೆ II
6 : ಹುಟ್ಟಿನಿಂದಲೆ ನಾ ನಿನಗಂಟಿಕೊಂಡಿರುವೆನಯ್ಯಾ I ಗರ್ಭದಿಂದಲೆ ನೀ ಎನ್ನನು ಕರೆದುತಂದೆಯಯ್ಯಾ I ನಿರಂತರವೂ ನಿನ್ನನು ಕೊಂಡಾಡುತ್ತಿರುವೆನಯ್ಯಾ II
7 : ಹಲವರಿಗೆ ನಾನೊಂದು ಒಗಟು I ನೀನೆನಗೆ ಬಲವಾದ ನೆಲೆಗಟ್ಟು II
8 : ನಿನ್ನ ಗುಣಗಾನ ನನ್ನ ಬಾಯ್ತುಂಬ I ನಿನ್ನ ಘೋಷಣೆ ನನಗೆ ದಿನವಾದ್ಯಂತ II
9 : ವೃದ್ಧಾಪ್ಯದಲಿ ನನ್ನ ತಳ್ಳಿಬಿಡಬೇಡಯ್ಯಾ I ಶಕ್ತಿ ಕುಂದುತ್ತಿರುವಾಗ ಕೈಬಿಡಬೇಡಯ್ಯಾ II
10 : ನನಗೆದುರಾಗಿ ಶತ್ರುಗಳಾಲೋಚಿಸುತಿಹರಯ್ಯಾ I ನನ್ನ ಕೊಲೆಗಾಗಿ ಒಂದುಗೂಡಿ ಹೊಂಚಿಸುತಿಹರಯ್ಯಾ II
11 : “ಹಿಡಿಯಿರಿ ಬೆನ್ನಟ್ಟಿ, ದೇವನವನನ್ನು ಕೈಬಿಟ್ಟಿಹನು I ರಕ್ಷಿಸುವಂಥವರಾರು ಇನ್ನಿಲ್ಲ” ಎನ್ನುತಿಹರು II
12 : ಓ ದೇವಾ, ದೂರವಾಗಿರಬೇಡಯ್ಯಾ I ನೆರವಾಗಲು ಬೇಗ ತ್ವರೆಮಾಡಯ್ಯಾ II
13 : ಆಶಾಭಂಗವು ದಹಿಸಿಬಿಡಲಿ ನನ್ನ ಪ್ರಾಣ ಕಂಟಕರನು I ನಿಂದಾಪಮಾನ ಕವಿದುಬಿಡಲಿ ನನಗೆ ಕೇಡು ಬಗೆವವರನು II
14 : ನಾನಂತು ನಂಬಿರುವೆ ನಿನ್ನ ನಿರಂತರವಾಗಿ I ನಿನ್ನನು ಕೀರ್ತಿಸುತ್ತಿರುವೆ ಅಧಿಕಾಧಿಕವಾಗಿ II
15 : ವರ್ಣಿಸುವೆನು ದಿನವೆಲ್ಲ ನಿನ್ನ ನ್ಯಾಯನೀತಿಯನು I ವಿವರಿಸಲು ಅಸದಳವಾದ ನಿನ್ನಗಣಿತ ರಕ್ಷಣೆಯನು II
16 : ಸ್ವಾಮಿ ದೇವಾ, ಸ್ಮರಿಸುವೆನು ನಿನ್ನ ಮಹತ್ಕಾರ್ಯಗಳನೆ I ಪ್ರಕಟಪಡಿಸುವೆನು ನಿನ್ನೊಬ್ಬನ ನ್ಯಾಯನೀತಿಯನೆ II
17 : ದೇವಾ, ಬಾಲ್ಯಾರಭ್ಯ ನನಗೆ ಬೋಧಿಸಿರುವೆಯಲ್ಲವೆ? I ನಿನ್ನ ಅದ್ಭುತಕಾರ್ಯಗಳನೆಂದಿಗು ನಾ ಘೋಷಿಸುತ್ತಿರುವೆ II
18 : ದೇವಾ, ನರೆಯ ಮುದುಕನಾಗಿರುವಾಗ ನನ್ನ ಕೈ ಬಿಡಬೇಡಯ್ಯಾ I ನಿನ್ನ ಪರಾಕ್ರಮವನು ಮುಂದಿನ ಪೀಳಿಗೆಗೆ ಸಾರುವ ತನಕ ಬೇಡವಯ್ಯಾ I ನಿನ್ನ ಪ್ರತಾಪವನು ತಲತಲಾಂತರದವರೆಗೆ ಪ್ರಕಟಿಸುವೆನಯ್ಯಾ II
19 : ನಿನ್ನ ಶಕ್ತಿ, ನಿನ್ನ ನೀತಿ ದೇವಾ, ಗಗನ ಮುಟ್ಟುತ್ತಿಹವು I ಮಹತ್ಕಾರ್ಯಗಳೆಸಗಿದ ನಿನಗೆ ದೇವಾ, ಯಾರು ಸಾಟಿಯು? II
20 : ದೇವಾ, ಈಡು ಮಾಡಿದೆಯೆನ್ನನು ಕಷ್ಟಸಂಕಟಗಳಿಗೆ I ಪುನಶ್ಚೇತನಗೊಳಿಸೀಗ, ಭೂತಳದಿಂದೆತ್ತು ಮೇಲಕೆ II
21 : ನನ್ನ ಗೌರವವನು ಅಧಿಕರಿಸಯ್ಯಾ I ಮರಳಿ ನೆಮ್ಮದಿಯನು ಪಾಲಿಸಯ್ಯಾ II
22 : ನಿನ್ನ ಸತ್ಯತೆಗಾಗಿ ಓ ಎನ್ನ ದೇವಾ I ಕಿನ್ನರಿಯನು ನುಡಿಸುತಾ ಭಜಿಸುವೆನಯ್ಯಾ II ಇಸ್ರಯೇಲಿನ ಆ ಪರಮಪಾವನ ಸ್ವಾಮಿಯ I ವೀಣೆವಾದ್ಯದೊಂದಿಗೆ ಕೀರ್ತಿಸುವೆನಯ್ಯಾ II
23 : ಮಧುರದನಿಗೈವುದು ಎನ್ನಧರ ನಿನ್ನ ಗುಣಗಾನದಲಿ I ನೀನುದ್ಧರಿಸಿದ ಎನ್ನ ಮನ ಭಾಗಿಯಾಗುವುದಾ ಗಾನದಲಿ II
24 : ನನಗೆ ಕೇಡು ಬಗೆದವರಿದೋ ಪಡೆದರು ನಿಂದೆ ಅಪಮಾನವನು I ದಿನವೆಲ್ಲ ವರ್ಣಿಪುದೆನ್ನ ನಾಲಿಗೆ ನಿನ್ನೀ ನೀತಿಸಾಧನೆಯನು II