पवित्र बाइबिल
ಹಳೆಯ ಒಡಂಬಡಿಕೆ
ಕೀರ್ತನೆಗಳು
98ನೇ ಅಧ್ಯಾಯ
1 : ಹಾಡಿರಿ ಪ್ರಭುವಿಗೆ ಹೊಸಗೀತೆಯೊಂದನು I ಎಸಗಿಹನಾತನು ಪವಾಡಕಾರ್ಯಗಳನು I ಗಳಿಸಿತಾತನ ಕೈ ಪೂತಭುಜ ಗೆಲುವನು II
2 : ಪ್ರಕಟಿಸಿಹನಾ ಪ್ರಭು ತನ್ನ ಮುಕ್ತಿವಿಧಾನವನು I ರಾಷ್ಟ್ರಗಳಿಗೆ ತೋರಿಸಿಹನು ಜೀವೋದ್ಧಾರಕಾ ಶಕ್ತಿಯನು II
3 : ಕಂಡುಬಂದಿತು ಜಗದ ಎಲ್ಲೆ ಎಲ್ಲೆಗೆ I ನಮ್ಮ ದೇವ ಸಾಧಿಸಿದ ಜಯಗಳಿಕೆ II ಸ್ಮರಿಸಿಕೊಂಡನಾ ಪ್ರಭು ತನ್ನ ಪ್ರೀತಿಯನು I ಇಸ್ರಯೇಲ್ ಕುಲದ ಬಗ್ಗೆ ತನ್ನ ಸತ್ಯತೆಯನು II
4 : ಭೂನಿವಾಸಿಗಳೇ, ಮಾಡಿರಿ ಜಯಕಾರ ಪ್ರಭುವಿಗೆ I ಮುದದಿ ಹಾಡಿರಿ, ಮಾಡಿರಿ ಸುಮಧುರ ಭಜನೆ II
5 : ಪ್ರಭುವನು ಸ್ತುತಿಸಿರಿ ಕಿನ್ನರಿಯೊಂದಿಗೆ I ಭಜಿಸಿರಿ ಆತನನು ವಾದ್ಯಮೇಳದೊಂದಿಗೆ II
6 : ಊದಿರಿ ಕೊಂಬನು, ತುತೂರಿಯನು I ಉದ್ಘೋಷಿಸಿರಿ ಪ್ರಭು ರಾಜನನು II
7 : ಗರ್ಜಿಸಲಿ ಸಮುದ್ರವು ಅದರಲ್ಲಿರುವುದೆಲ್ಲವು I ಕೀರ್ತಿಸಲಿ ಜಗವು, ಅದರೊಳು ವಾಸಿಸುವ ಜನರೆಲ್ಲರು II
8 : ಚಪ್ಪಾಳೆ ಹೊಡೆಯಲಿ ನದಿಗಳು I ತಟ್ಟಾಡಲಿ ಬೆಟ್ಟಗುಡ್ಡಗಳು II
9 : ಏಕೆನೆ ಬರುವನಾತ ಇಹಲೋಕಕೆ ನ್ಯಾಯತೀರಿಸಲು I ಜಗಕು, ಜನತೆಗು, ನ್ಯಾಯನೀತಿಗನುಸಾರ ತೀರ್ಪುಕೊಡಲು II