ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯೆಶಾಯ
43ನೇ ಅಧ್ಯಾಯ
- Verse 1: ಈಗಲಾದರೋ ಯಕೋಬ ವಂಶವೇ, ಇಸ್ರಯೇಲ್ ಸಂತಾನವೇ ಕೇಳು : ನಿನ್ನನ್ನು ಸೃಷ್ಟಿಸಿದ, ರೂಪಿಸಿದ ಸರ್ವೇಶ್ವರನ ನುಡಿಯನ್ನು ಕೇಳು; “ಭಯಪಡಬೇಡ, ನಿನ್ನನ್ನು ರಕ್ಷಿಸಿದಾತ ನಾನಲ್ಲವೆ? ನಿನ್ನನ್ನು ಹೆಸರು ಹಿಡಿದು ಕರೆದಾತ ನಾನಲ್ಲವೆ? ನೀನು ನನ್ನವನೇ ಅಲ್ಲವೆ?
- Verse 2: ನಾನೇ ಇರುವೆ ನಿನ್ನ ಸಂಗಡ ನೀ ಜಲರಾಶಿಯನ್ನು ದಾಟುವಾಗ ಮುಳುಗಿಸದು ನದಿ ನೀ ಅದನ್ನು ಹಾದುಹೋಗುವಾಗ ಸುಡದು ಬೆಂಕಿ, ದಹಿಸದು ಜ್ವಾಲೆ, ಅದರ ಮಧ್ಯೆ ನೀ ನಡೆಯುವಾಗ.
- Verse 3: ನಿನ್ನ ದೇವರಾದ ಸರ್ವೇಶ್ವರ ನಾನು, ಇಸ್ರಯೇಲರ ಪರಮಪಾವನ ಸ್ವಾಮಿ, ನಿನ್ನ ರಕ್ಷಕ ನಾನು. ಈಡುಮಾಡಿದ್ದೇನೆ ಈಜಿಪ್ಟನ್ನು ನಿನ್ನ ವಿಮೋಚನೆಗಾಗಿ ಕೊಟ್ಟಿದ್ದೇನೆ ಸುಡಾನ್ ಸೆಬಾ ನಾಡುಗಳನ್ನು ನಿನಗೆ ಈಡಾಗಿ.
- Verse 4: ನೀನೆನ್ನ ದೃಷ್ಟಿಗೆ ಅಮೂಲ್ಯನು, ಘನವಂತನು, ಅತಿಪ್ರಿಯನು. ಎಂದೇ ನಿನ್ನ ಪ್ರಾಣರಕ್ಷಣೆಗಾಗಿ ತ್ಯಜಿಸುವೆನು ಜನರನ್ನೂ ಜನಾಂಗಗಳನ್ನೂ.
- Verse 5: ಭಯಪಡಬೇಡ, ನಾನಿರುವೆ ನಿನ್ನ ಸಂಗಡ ಕರೆತರುವೆ ನಿನ್ನ ಸಂತತಿಯನ್ನು ಮೂಡಣದಿಂದ ಒಟ್ಟುಗೂಡಿಸುವೆ ನಿನ್ನವರನ್ನು ಪಡುವಣದಿಂದ.
- Verse 6: ನಾನಪ್ಪಣೆ ಕೊಡುವೆ ‘ಬೀಳ್ಕೊಡು’ ಎಂದು ಬಡಗಲಿಗೆ ‘ತಡೆಯಬೇಡ’ ಎಂದು ನಾನೇ ಹೇಳುವೆ ತೆಂಕಲಿಗೆ. ಹೀಗೆ ಬರಮಾಡುವೆ ನನ್ನ ಕುವರರನ್ನು ದೂರದಿಂದ ಬರಮಾಡುವೆ ನನ್ನ ಕುವರಿಯರನ್ನು ದಿಗಂತಗಳಿಂದ.
- Verse 7: ಕರೆತರುವೆ ಈ ಪರಿ ನನ್ನ ನಾಮಧಾರಿಗಳೆಲ್ಲರನು ನನ್ನ ಮಹಿಮೆಗಾಗಿ ನಾನು ಸೃಷ್ಟಿಸಿ ರೂಪಿಸಿದವರನು.
- Verse 8: ಕರೆಗೊಡಿರಿ ಆ ಜನರಿಗೆ ಕಣ್ಣಿದ್ದರೂ ಕುರುಡರಾದವರಿಗೆ ಕಿವಿಯಿದ್ದರೂ ಕಿವುಡಾದವರಿಗೆ.
- Verse 9: ಬರಲಿ, ಎಲ್ಲಾ ಜನಾಂಗಗಳು ಒಟ್ಟಿಗೆ ನೆರೆಯಲಿ, ಸಕಲ ದೇಶಿಯರು ಇಲ್ಲಿಯೇ. ಅವರ ದೇವರುಗಳಲ್ಲಿ ಭವಿಷ್ಯವನ್ನು ನುಡಿಯಬಲ್ಲವರು ಯಾರು? ಗತಿಸಿದ ಘಟನೆಗಳನ್ನು ಮುಂತಿಳಿಸಿದವರಾರು? ಕರೆತರಲಿ, ಆ ದೇವರುಗಳು ಸಾಕ್ಷಿಗಳನು ಸ್ಥಾಪಿಸಿಕೊಳ್ಳಲಿ, ತಾವು ಸತ್ಯವಂತರೆಂಬುದನು; ರುಜುಪಡಿಸಲಿ ಕೇಳುವವರಿಗೆ ತಮ್ಮ ಮಾತು ನಿಜವೆಂಬುದನು.
- Verse 10: ಇಂತೆನ್ನುತ್ತಾರೆ ಸರ್ವೇಶ್ವರ : “ನೀವೇ ನನಗೆ ಸಾಕ್ಷಿಗಳು; ನನ್ನಿಂದ ಆಯ್ಕೆಯಾದ ನನ್ನ ದಾಸರು; ಏಕೆನೆ ನಾನೇ ಪರಮಾತ್ಮನೆಂದು ಅರಿತು, ವಿಶ್ವಾಸವಿಟ್ಟು, ಗ್ರಹಿಸಬೇಕಾದವರು; ದೇವರಾರೂ ನನಗಿಂತ ಮುಂದೆ ಇರಲಿಲ್ಲ ನನ್ನಾನಂತರವೂ ಇರುವುದಿಲ್ಲ.
- Verse 11: “ನಾನು, ನಾನೇ ಸರ್ವೇಶ್ವರ, ನನ್ನ ಹೊರತು ಇಲ್ಲ ಬೇರೆ ಉದ್ಧಾರಕ.
- Verse 12: ಶ್ರುತಪಡಿಸಿದವನು ನಾನೇ, ಉದ್ಧರಿಸಿದವನು ನಾನೇ, ಘೋಷಿಸಿದವನು ನಾನೇ. ಇದನ್ನು ಮಾಡಿಲ್ಲ ಅನ್ಯದೇವರಾರು ನಿಮ್ಮ ಮಧ್ಯೆ. ನನಗೆ ಸಾಕ್ಷಿಗಳು ನೀವೇ, ದೇವರು ನಾನೊಬ್ಬನೇ.
- Verse 13: ಹೌದು, ನಾನೇ ಪರಮಾತ್ಮ ಆದಿಯಿಂದ ಬಿಡಿಸುವವರಾರು ಇಲ್ಲ ನನ್ನ ಕೈಯಿಂದ ನಾಗೈದುದನು ತಡೆಯಲಾಗದು ಯಾರಿಂದ.” ಈ ಪರಿ ನುಡಿದಿಹನು ಸರ್ವೇಶ್ವರನು, ನಿಮ್ಮ ಉದ್ಧಾರಕನು, ಇಸ್ರಯೇಲಿನ ಪರಮಪಾವನನು;
- Verse 14: “ಬಾಬಿಲೋನಿಯಗೆ ಕಳುಹಿಸುವೆ ಒಬ್ಬಾತನನು ನಿಮಗಾಗಿ ಮುರಿವನಾತ ಆ ಕಾರಾಗೃಹದ ಕಂಬಿಗಳನು ತುಂಡುತುಂಡಾಗಿ ಬಾಬಿಲೋನಿಯರ ಕೂಗಾಟವನು ಮಾರ್ಪಡಿಸುವೆನು ಗೋಳಾಟವನ್ನಾಗಿ.
- Verse 15: ನಾನೇ ಸರ್ವೇಶ್ವರನು, ನಿಮ್ಮ ಪರಮಪೂಜ್ಯನು ಇಸ್ರಯೇಲಿನ ಸೃಷ್ಟಿಕರ್ತನು, ನಿಮ್ಮ ಅರಸನು.”
- Verse 16: ಸಮುದ್ರದ ಮಧ್ಯೆ ದಾರಿಮಾಡಿದವನಾರೋ, ಭೋರ್ಗರೆವ ಜಲರಾಶಿಗಳಲ್ಲಿ ಮಾರ್ಗವೇರ್ಪಡಿಸಿದವನಾರೋ,
- Verse 17: ಅಶ್ವರಥಭಟಸೈನ್ಯಗಳನ್ನು ಹೊರಡಿಸಿದವನಾರೋ, ಅವು ಬಿದ್ದು ಏಳಲಾಗದೆ, ಬತ್ತಿಕರಗಿಹೋಗುವಂತೆ ಮಾಡಿದವನಾರೋ, ಆ ಸ್ವಾಮಿ ಸರ್ವೇಶ್ವರ ನುಡಿದ ಮಾತಿದೋ;
- Verse 18: “ಗತಿಸಿಹೋದ ಘಟನೆಗಳನ್ನು ನೆನೆಯಬೇಕಾಗಿಲ್ಲ ಪುರಾತನ ಕಾರ್ಯಗಳ ನೆನಸಿಕೊಳ್ಳಬೇಕಾಗಿಲ್ಲ.
- Verse 19: ಇಗೋ, ನೂತನ ಕಾರ್ಯವನು ನಾನೆಸಗುವೆ ಈಗಲೇ ಅದು ತಲೆದೋರುತಲಿದೆ, ನಿಮಗೆ ಕಾಣುವುದಿಲ್ಲವೇ? ಮಾರ್ಗವನ್ನು ಏರ್ಪಡಿಸುವೆ ಮರುಭೂಮಿಯಲಿ, ಹರಿಸುವೆ ತೊರೆಗಳನ್ನು ಅರಣ್ಯದಲಿ.
- Verse 20: ಕಾಡುಮೃಗಗಳು, ನರಿ, ಉಷ್ಟ್ರಪಕ್ಷಿಗಳು ಕೂಗಿ ಕೊಂಡಾಡುವುವು ನನ್ನನು. ಏಕೆನೆ ಕೊಡುವೆನು ನೀರನ್ನು ಮರುಭೂಮಿಯಲಿ ಹರಿಸುವೆನು ತೊರೆನದಿಗಳನ್ನು ಅರಣ್ಯದಲಿ.
- Verse 21: ನಾ ಸೃಷ್ಟಿಸಿದ ಆಪ್ತ ಜನಕೆ ನೀಡುವೆನು ಜಲಪಾನವನು; ಎಂದೇ ಸ್ತುತಿಸಿಕೊಂಡಾಡುವರು ನನ್ನನು.”
- Verse 22: “ಯಕೋಬೇ, ನೀನೆನ್ನ ನಾಮಸ್ಮರಣೆ ಮಾಡದೆಹೋದೆ; ಇಸ್ರಯೇಲೇ, ನನ್ನ ವಿಷಯದಲ್ಲಿ ನೀನು ಬೇಸರಗೊಂಡೆ.
- Verse 23: ಕುರಿಮೇಕೆಗಳನ್ನು ನೀನು ತರಲಿಲ್ಲ ನನಗೆ ಹೋಮಕ್ಕಾಗಿ ಬಲಿಗಳನ್ನು ಅರ್ಪಿಸಲಿಲ್ಲ ನನ್ನ ಘನತೆಗಾಗಿ ನಾ ನಿನ್ನನು ಒತ್ತಾಯಿಸಲಿಲ್ಲ ನೈವೇದ್ಯಕ್ಕಾಗಿ ನಾ ನಿನ್ನನು ಬೇಸರಗೊಳಿಸಲಿಲ್ಲ ಧೂಪಾರತಿಗಾಗಿ.
- Verse 24: ನನಗೋಸ್ಕರ ನೀನು ಹಣ ತೆತ್ತು ಅಗರಬತ್ತಿ ತರಲಿಲ್ಲ ಯಜ್ಞಪಶುಗಳ ವಪೆಯಿಂದ ನನ್ನನ್ನು ತೃಪ್ತಿಪಡಿಸಲಿಲ್ಲ. ಬದಲಿಗೆ ನನ್ನನ್ನು ಪೀಡಿಸಿರುವೆ ನಿನ್ನ ಪಾಪಗಳಿಂದ ಬೇಸರಗೊಳಿಸಿರುವೆ ನನ್ನನು ನಿನ್ನ ದೋಷಗಳಿಂದ.
- Verse 25: ಆದರೂ ನಾನೇ ನಾನಾಗಿ ಅಳಿಸಿಬಿಡುವೆ ನಿನ್ನ ದ್ರೋಹಗಳನು, ನನ್ನ ನೆನಪಿನಿಂದ ತೆಗೆದುಹಾಕುವೆ ನಿನ್ನ ಪಾಪಗಳನು.
- Verse 26: ಮಂಡಿಸು ನನ್ನ ವಿರುದ್ಧ ನಿನ್ನ ಆಪಾದನೆಯನ್ನು; ಒಟ್ಟಿಗೆ ವಾದಿಸೋಣ ಮಂಡಿಸು ನಿನ್ನ ನ್ಯಾಯವನ್ನು; ನೀನು ನಿರ್ದೋಷಿಯೆಂದು ರುಜುಪಡಿಸು ನೋಡೋಣ.
- Verse 27: ಪಾಪಿಷ್ಟನಾಗಿದ್ದನು ನಿನ್ನ ಮೂಲಪಿತೃವು ನನಗೆ ದ್ರೋಹಿಗಳಾಗಿದ್ದರು ನಿನ್ನ ಪರವಾದಿಗಳು ನನ್ನ ಪವಿತ್ರಾಲಯವನ್ನು ಹೊಲೆಮಾಡಿದರು ನಿನ್ನ ಅಧಿಪತಿಗಳು.
- Verse 28: ಎಂದೇ ಗುರಿಮಾಡಿದೆ ಯಕೋಬನ್ನು ಶಾಪಕ್ಕೆ ಈಡುಪಡಿಸಿದೆ ಇಸ್ರಯೇಲನ್ನು ನಿಂದೆದೂಷಣೆಗೆ.”