पवित्र बाइबिल
ಹಳೆಯ ಒಡಂಬಡಿಕೆ
ವಿಮೋಚನಕಾಂಡ
25ನೇ ಅಧ್ಯಾಯ
- Verse 1: ಮೋಶೆಗೆ ಸರ್ವೇಶ್ವರ ಸ್ವಾಮಿ ಹೀಗೆಂದು ಹೇಳಿದರು:
- Verse 2: “ಇಸ್ರಯೇಲರು ನನಗಾಗಿ ಕಾಣಿಕೆಯನ್ನು ಮೀಸಲಿಡಬೇಕೆಂದು ಅವರಿಗೆ ಹೇಳು. ಮನಃಪೂರ್ವಕವಾಗಿ ಕೊಡುವವರಿಂದಲೇ ಆ ಕಾಣಿಕೆಯನ್ನು ಸ್ವೀಕರಿಸಬೇಕು.
- Verse 3: ನೀನು ಅವರಿಂದ ಸ್ವೀಕರಿಸತಕ್ಕ ಕಾಣಿಕೆಗಳು ಇವು: ಚಿನ್ನ, ಬೆಳ್ಳಿ, ತಾಮ್ರ,
- Verse 4: ನೀಲಿ, ಊದ ಕಡುಗೆಂಪು ವರ್ಣಗಳುಳ್ಳ ದಾರಗಳು, ನಾರುಮಡಿಗಳು, ತುಪ್ಪಟದ ಬಟ್ಟೆಗಳು,
- Verse 5: ಹದಮಾಡಿದ ಕೆಂಪುಬಣ್ಣದ ಕುರಿದೊಗಲುಗಳು, ಕಡಲುಹಂದಿಯ ತೊಗಲುಗಳು,
- Verse 6: ಜಾಲೀಮರ, ದೀಪಕ್ಕೆ ಬೇಕಾದ ಎಣ್ಣೆ, ಅಭಿಷೇಕ ತೈಲಕ್ಕೆ ಹಾಗು ಪರಿಮಳ ಧೂಪಕ್ಕೆ ಬೇಕಾದ ಸುಗಂಧದ್ರವ್ಯಗಳು,
- Verse 7: ಪ್ರಧಾನ ಯಾಜಕನ ಕವಚಕ್ಕೆ ಬೇಕಾದ ಗೋಮೇಧಕ ರತ್ನಗಳು, ಮತ್ತು ಪದಕದ ಚೀಲದಲ್ಲಿ ಕೆತ್ತಬೇಕಾದ ನಾನಾ ರತ್ನಗಳು.
- Verse 8: ನಾನು ಜನರ ಮಧ್ಯೆ ವಾಸಿಸುವುದಕ್ಕೆ ನನಗೊಂದು ಗುಡಾರವನ್ನು ಕಟ್ಟಿಸಬೇಕು.
- Verse 9: ನಾನು ನಿಮಗೆ ತೋರಿಸುವ ಮಾದರಿಯ ಪ್ರಕಾರವೇ ಆ ಗುಡಾರವನ್ನೂ ಅದರಲ್ಲಿನ ಎಲ್ಲ ಸಾಮಾಗ್ರಿಗಳನ್ನೂ ಮಾಡಿಸಬೇಕು.
- Verse 10: “ನೀನು ಜಾಲೀಮರದಿಂದ ಒಂದು ಮಂಜೂಷವನ್ನು ಮಾಡಿಸಬೇಕು. ಅದು ಎರಡುವರೆ ಮೊಳ ಉದ್ದ, ಒಂದುವರೆ ಮೊಳ ಅಗಲ, ಹಾಗು ಒಂದುವರೆ ಮೊಳ ಎತ್ತರವಾಗಿರಲಿ.
- Verse 11: ಅಪ್ಪಟ ಬಂಗಾರದ ತಗಡುಗಳನ್ನು ಅದರ ಹೊರಗಡೆ ಮತ್ತು ಒಳಗಡೆ ಹೊದಿಸಿರಬೇಕು. ಅದರ ಮೇಲೆ ಸುತ್ತಲೂ ಚಿನ್ನದ ತೋರಣ ಕಟ್ಟಿಸಬೇಕು.
- Verse 12: ನಾಲ್ಕು ಬಂಗಾರದ ಬಳೆಗಳನ್ನು ಎರಕಹೊಯಿಸಿ ಅದರ ನಾಲ್ಕು ಮೂಲೆಗಳಲ್ಲಿ, ಅಂದರೆ ಒಂದೊಂದು ಕಡೆಗಳಲ್ಲಿ ಎರಡೆರಡು ಬಳೆಗಳನ್ನು ಇಡಬೇಕು.
- Verse 13: ಆ ಮಂಜೂಷವನ್ನು ಹೊರುವುದಕ್ಕಾಗಿ ಜಾಲೀಮರದ ದೊಣ್ಣೆಗಳನ್ನು ಮಾಡಿಸಿ, ಅವುಗಳಿಗೆ ಚಿನ್ನದ ತಗಡುಗಳನ್ನು ಹೊದಿಸಿ,
- Verse 14: ಮಂಜೂಷದ ಎರಡು ಕಡೆಗಳಲ್ಲಿರುವ ಬಳೆಗಳಲ್ಲಿ ಸೇರಿಸಬೇಕು.
- Verse 15: ಆ ದೊಣ್ಣೆಗಳನ್ನು ಮಂಜೂಷದ ಬಳೆಗಳಿಂದ ತೆಗೆಯದೆ ಅವುಗಳಲ್ಲಿಯೇ ಇಟ್ಟಿರಬೇಕು.
- Verse 16: ಆ ಮಂಜೂಷದೊಳಗೆ ನಾನು ನಿನಗೆ ಕೊಡುವ ಆಜ್ಞಾಶಾಸನವನ್ನು ಇಡಬೇಕು.
- Verse 17: “ಇದೂ ಅಲ್ಲದೆ, ಅಪ್ಪಟ ಬಂಗಾರದ ಒಂದು ಕೃಪಾಸನವನ್ನು ಮಾಡಿಸಬೇಕು. ಅದು ಎರಡುವರೆ ಮೊಳ ಉದ್ದ ಹಾಗು ಒಂದುವರೆ ಮೊಳ ಅಗಲದ್ದಾಗಿರಬೇಕು.
- Verse 18: ಕೃಪಾಸನದ ಎರಡು ಕೊನೆಗಳಲ್ಲಿ ಕೆರೂಬಿಯರ ಎರಡು ಬಂಗಾರದ ಆಕಾರಗಳನ್ನು ನಕಾಸಿ ಕೆಲಸದಿಂದ ಮಾಡಿಸಬೇಕು.
- Verse 19: ಕೃಪಾಸನದ ಒಂದೊಂದು ಕೊನೆಯಲ್ಲಿ ಒಂದೊಂದು ಕೆರೂಬಿಯನ್ನು ಮಾಡಿಸಿ ಕೃಪಾಸನಕ್ಕೆ ಜೋಡಿಸಬೇಕು.
- Verse 20: ಆ ಕೆರೂಬಿಗಳು ಮೇಲಕ್ಕೆ ರೆಕ್ಕೆಗಳನ್ನು ಚಾಚಿರುವಂತೆಯೂ ಕೃಪಾಸನವನ್ನು ರೆಕ್ಕೆಗಳಿಂದ ಮುಚ್ಚುವಂತೆಯೂ ಇರಬೇಕು. ಅವುಗಳ ಮುಖಗಳು ಎದುರುಬದುರಾಗಿ ಕೃಪಾಸನವನ್ನು ನೋಡುತ್ತಿರಬೇಕು.
- Verse 21: ಆ ಕೃಪಾಸನವನ್ನು ಮಂಜೂಷದ ಮೇಲಿಡಬೇಕು. ನಾನು ನಿನಗೆ ಕೊಡುವ ಅಜ್ಞಾಶಾಸನಗಳನ್ನು ಆ ಮಂಜೂಷದೊಳಗೆ ಇಡಬೇಕು.
- Verse 22: ಅಲ್ಲಿಯೇ ನಾನು ನಿಮಗೆ ದರ್ಶನವನ್ನು ಕೊಡುವೆನು. ಕೃಪಾಸನದ ಮೇಲೆ ಅಜ್ಞಾಶಾಸನಗಳನ್ನಿಟ್ಟಿರುವ ಮಂಜೂಷದ ಮೇಲಿನ ಎರಡು ಕೆರೂಬಿಗಳ ನಡುವೆಯೇ ನಾನಿದ್ದು ನಿನ್ನ ಸಂಗಡ ಮಾತಾಡುವೆನು. ನೀನು ಇಸ್ರಯೇಲರಿಗೆ ಆಜ್ಞಾಪಿಸಬೇಕಾಗಿರುವ ಎಲ್ಲ ವಿಷಯಗಳನ್ನು ತಿಳಿಸುವೆನು.
- Verse 23: “ಜಾಲೀ ಮರದಿಂದ ಒಂದು ಮೇಜನ್ನು ಮಾಡಿಸು. ಅದು ಎರಡು ಮೊಳ ಉದ್ದ ಒಂದು ಮೊಳ ಅಗಲ ಹಾಗು ಒಂದುವರೆ ಮೊಳ ಎತ್ತರವಾಗಿರಲಿ.
- Verse 24: ಅದಕ್ಕೆ ಅಪ್ಪಟ ಬಂಗಾರದ ತಗಡುಗಳನ್ನು ಹೊದಿಸಿ ಸುತ್ತಲೂ ತೋರಣ ಕಟ್ಟಿಸಬೇಕು.
- Verse 25: ಮೇಜಿನ ಸುತ್ತಲು ಅಂಗೈ ಅಗಲದ ಅಡ್ಡಪಟ್ಟಿಯನ್ನು ಮಾಡಿಸಿ ಅದಕ್ಕೂ ಚಿನ್ನದ ತೋರಣ ಕಟ್ಟಿಸಬೇಕು.
- Verse 26: ನಾಲ್ಕು ಚಿನ್ನದ ಬಳೆಗಳನ್ನು ಮಾಡಿಸಿ ಮೇಜಿನ ನಾಲ್ಕು ಕಾಲುಗಳಿಗೆ ಹಾಕಿಸಬೇಕು.
- Verse 27: ಆ ಬಳೆಗಳು ಅಡ್ಡಪಟ್ಟಿಗೆ ಹತ್ತಿಕೊಂಡಿರಬೇಕು. ಮೇಜನ್ನು ಎತ್ತುವುದಕ್ಕಾಗಿ ದೊಣ್ಣೆಗಳನ್ನು ಅವುಗಳಲ್ಲಿ ಸೇರಿಸಬೇಕು.
- Verse 28: ಆ ದೊಣ್ಣೆಗಳನ್ನು ಜಾಲೀಮರದಿಂದ ಮಾಡಿಸಿ ಅವುಗಳಿಗೆ ಚಿನ್ನದ ತಗಡುಗಳನ್ನು ಹೊದಿಸಬೇಕು. ಇವುಗಳಿಂದಲೇ ಆ ಮೇಜನ್ನು ಎತ್ತಬೇಕು.
- Verse 29: ಮೇಜಿನ ಮೇಲಿಡಬೇಕಾದ ತಟ್ಟೆಗಳನ್ನು, ಧೂಪಾರತಿಗಳನ್ನು, ಹೂಜಿಗಳನ್ನು, ಪಾನಾರ್ಪಣೆಗೆ ಬೇಕಾದ ಬಟ್ಟಲುಗಳನ್ನು ಅಪ್ಪಟ ಬಂಗಾರದಿಂದಲೇ ಮಾಡಿಸಬೇಕು.
- Verse 30: ಸಮ್ಮುಖದಲ್ಲಿ ರೊಟ್ಟಿಗಳನ್ನು ಯಾವಾಗಲೂ ಆ ಮೇಜಿನ ಮೇಲೆ ನನ್ನ ಮುಂದೆ ಇಟ್ಟಿರಬೇಕು.
- Verse 31: “ಅಪ್ಪಟ ಬಂಗಾರದಿಂದ ಒಂದು ದೀಪವೃಕ್ಷವನ್ನು ಮಾಡಿಸಬೇಕು. ಅದರ ಬುಡವನ್ನು ಹಾಗು ಕಾಂಡವನ್ನು ನಕಾಸಿ ಕೆಲಸದಿಂದ ಮಾಡಿಸಬೇಕು. ಆ ದೀಪವೃಕ್ಷವೆಲ್ಲಾ ಅಖಂಡವಾಗಿರಬೇಕು. ಹೂಗಳಿಂದ, ಹೂಮೊಗ್ಗುಗಳಿಂದ ಕೂಡಿ ಅಲಂಕಾರವಾಗಿ ಕೆತ್ತಿರಬೇಕು.
- Verse 32: ಆ ವೃಕ್ಷದ ಒಂದೊಂದು ಕಡೆಯಲ್ಲಿ ಮೂರು ಮೂರು ಕೊಂಬೆಗಳಂತೆ ಆರು ಕೊಂಬೆಗಳಿರಬೇಕು.
- Verse 33: ಪ್ರತಿಯೊಂದು ಕೊಂಬೆಯಲ್ಲೂ ಬಾದಾಮಿ ಹೂವುಗಳಂತಿರುವ ಮೂರು ಮೂರು ಪುಷ್ಪಾಲಂಕಾರಗಳಿರಬೇಕು. ಒಂದೊಂದು ಅಲಂಕಾರಕ್ಕೆ ಒಂದು ಮೊಗ್ಗು ಹಾಗು ಒಂದು ಹೂ ಇರಬೇಕು. ಆರು ಕೊಂಬೆಗಳನ್ನೂ ಹಾಗೇ ಮಾಡಿಸಬೇಕು.
- Verse 34: ದೀಪವೃಕ್ಷದ ಕಾಂಡದಲ್ಲಿ ಮೊಗ್ಗುಗಳೂ ಹೂಗಳೂ ಇರುವ ಬಾದಾಮಿ ಹೂವುಗಳಂತೆ ನಾಲ್ಕು ಪುಷ್ಪಾಲಂಕಾರಗಳು ಇರಬೇಕು.
- Verse 35: ಎರಡೆರಡು ಕೊಂಬೆಗಳು ಕವಲು ಒಡೆದಿರುವ ಸ್ಥಳಗಳಲ್ಲೆಲ್ಲಾ ಒಂದೊಂದು ಮೊಗ್ಗಿರಬೇಕು.
- Verse 36: ಮೊಗ್ಗುಗಳನ್ನೂ ಕೊಂಬೆಗಳನ್ನೂ ಒಳಗೊಂಡ ದೀಪವೃಕ್ಷವನ್ನೆಲ್ಲಾ ಅಪ್ಪಟ ಬಂಗಾರವನ್ನು ಉಪಯೋಗಿಸಿ ನಕಾಸಿ ಕೆಲಸದಿಂದ ಮಾಡಿಸಬೇಕು.
- Verse 37: ಅದಕ್ಕೆ ಏಳು ಹಣತೆಗಳನ್ನು ಮಾಡಿಸಬೇಕು. ಆ ಹಣತೆಗಳಲ್ಲಿ ದೀಪಹಚ್ಚಿದಾಗ ಅವುಗಳ ಬೆಳಕು ಮುಂಭಾಗದಲ್ಲಿ ಪ್ರಕಾಶಿಸುವುದು.
- Verse 38: ದೀಪದ ಕುಡಿ ತೆಗೆಯುವ ಕತ್ತರಿಗಳನ್ನೂ ಬಟ್ಟಲುಗಳನ್ನೂ ಚೊಕ್ಕ ಬಂಗಾರದಿಂದ ಮಾಡಿಸಬೇಕು.
- Verse 39: ಆ ದೀಪವೃಕ್ಷವನ್ನು ಅದರ ಎಲ್ಲ ಉಪಕರಣಗಳನ್ನು ಮಾಡಿಸಲು ಒಂದು ತಲಾಂತು ಅಪ್ಪಟ ಬಂಗಾರವನ್ನು ಉಪಯೋಗಿಸಬೇಕು.
- Verse 40: ಬೆಟ್ಟದಲ್ಲಿ ನಾನು ನಿನಗೆ ತೋರಿಸಿದ ಮಾದರಿಯಂತೆಯೇ ಎಲ್ಲವನ್ನು ಎಚ್ಚರಿಕೆಯಿಂದ ಮಾಡಿಸಬೇಕು.