పరిశుద్ధ గ్రంథము
ಹಳೆಯ ಒಡಂಬಡಿಕೆ
ಕೀರ್ತನೆಗಳು
30ನೇ ಅಧ್ಯಾಯ
- Verse 1: ನಿನಗೆನ್ನ ವಂದನೆ ಪ್ರಭು, ನನ್ನನುದ್ಧರಿಸಿದೆ I ಶತ್ರುಗಳೆನ್ನ ಕುರಿತು ಹಿಗ್ಗದಂತೆ ಮಾಡಿದೆ II
- Verse 2: ‘ಹೇ ಪ್ರಭು, ಎನ್ನ ದೇವಾ ‘ ಎಂದೆ I ನಾ ಮೊರೆಯಿಡೆ, ನೀ ಗುಣಪಡಿಸಿದೆ II
- Verse 3: ಪಾತಾಳದಿಂದೆನ್ನ ಪ್ರಾಣವನು ಮೇಲೆತ್ತಿದೆ I ಎನ್ನ ಬದುಕಿಸಿದೆ ದೇವಾ, ಸಮಾಧಿ ಸೇರಗೊಡದೆ II
- Verse 4: ಭಕ್ತರೇ, ಸಂಕೀರ್ತಿಸಿರಿ ಪ್ರಭುವನು I ಮಾಡಿರಿ ಆತನ ನಾಮಸ್ಮರಣೆಯನು II
- Verse 5: ಆತನ ಕೋಪ ಕ್ಷಣಮಾತ್ರ I ಆತನ ಕೃಪೆ ಜೀವನ ಪರಿಯಂತ II ಇರುಳು ಬರಲು ಇರಬಹುದು ಅಳಲು I ನಲಿವು ಉಲಿವುದು ಹಗಲು ಹರಿಯಲು II
- Verse 6: ನಾನಾದರೋ ಉಲ್ಲಾಸದಿಂದಿರುವಾಗಲೂ I ನನ್ನನು ಅಲ್ಲಾಡಿಸಲಾಗದೆಂದೆ ಯಾರಿಂದಲೂ II
- Verse 7: ಪ್ರಭು, ನಿನ್ನ ಕೃಪೆ ನನ್ನ ಗುಡ್ಡಕ್ಕೆ ಅಡಿಬಂಡೆ I ನಿನ್ನ ಮುಖ ಮರೆಯಾದುದೆ ನಾ ಕಳವಳಗೊಂಡೆ II
- Verse 8: ಹೇ ಪ್ರಭು, ಮೊರೆಯಿಟ್ಟೆನು ನಿನಗೆ I ಬಿನ್ನವಿಸಿದೆನು ನನ್ನೊಡೆಯನಿಗೆ II
- Verse 9: “ನನ್ನ ಪ್ರಾಣ ನಷ್ಟದಿಂದ ನಿನಗೇನು ಫಲ? I ಸಮಾಧಿಗೆ ನಾನಿಳಿದರೆ ನಿನಗೇನು ಲಾಭ?” II “ಸತ್ತವರ ಬೂದಿ ನಿನ್ನ ಸ್ತುತಿಸಬಲ್ಲುದೆ? I ನಿನ್ನ ಸತ್ಯತೆಯನ್ನದು ಸಾರಲು ಬಲ್ಲುದೆ?” II
- Verse 10: “ಆಲಿಸು ಪ್ರಭು, ಕರುಣಿಸು, ನೆರವಾಗು ಬೇಗ” I ಎಂದು ಪ್ರಭು ನಾನಿನ್ನನು ಪ್ರಾರ್ಥಿಸಿದಾಗ II
- Verse 11: ಎನ್ನ ಗೋಳಾಟವನು ನೀ ಕುಣಿದಾಟವಾಗಿಸಿದೆ I ಎನ್ನ ಗೋಣಿತಟ್ಟನು ಹರ್ಷಾಭರಣವಾಗಿಸಿದೆ II
- Verse 12: ಎಂದೇ ಮೌನವಿರದೆ ಎನ್ನ ಮನವು ನಿನಗೆ ಹಾಡಲಿ ಕೀರ್ತನೆ I ಹೇ ಪ್ರಭು, ಎನ್ನ ದೇವ, ನಿನಗೆನ್ನ ಅನಂತ ಧನ್ಯ ವಂದನೆ II