ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
32ನೇ ಅಧ್ಯಾಯ
- Verse 1: ಯಾರ ಪಾಪ ಪರಿಹಾರವಾಗಿದೆಯೋ I ಯಾರ ದ್ರೋಹ ವಿಮೋಚನೆಯಾಗಿದೆಯೋ - ಅವರೇ ಧನ್ಯರು II
- Verse 2: ಯಾರಪರಾಧವನು ಪ್ರಭು ಎಣಿಸಿಲ್ಲವೋ I ಯಾರಂತರಂಗದಲಿ ಕುತಂತ್ರವಿಲ್ಲವೋ ಅವರೇ ಧನ್ಯರು II
- Verse 3: ಪಾಪ ನಿವೇದನೆ ಮಾಡದೆ ನಾ ಮೌನದಿಂದಿರಲು I ದಿನವೆಲ್ಲ ನರಳಿ ಸವೆದುಹೋದವು ನನ್ನೆಲುಬುಗಳು II
- Verse 4: ಪ್ರಭುವಿನ ಶಿಕ್ಷಾಹಸ್ತ ನನ್ನ ಮೇಲೆ ಭಾರವಾಗಿತ್ತು ಹಗಲಿರುಳು I ಬೇಸಿಗೆಯ ನೀರಿನಂತೆ ಬತ್ತಿಹೋಗಿತ್ತು ನನ್ನ ಶರೀರದ ತಿರುಳು II
- Verse 5: ಆಗ ನಾ ನಿವೇದಿಸಿದೆ ನಿನಗೆ ನನ್ನ ಪಾಪವನು I ಮರೆಮಾಡಲಿಲ್ಲ ನಿನ್ನಿಂದ ನನ್ನ ದ್ರೋಹವನು II “ಪ್ರಭು ಮುಂದೆ ನನ್ನ ತಪ್ಪುಗಳನ್ನೊಪ್ಪಿಕೊಳ್ವೆ” ಎಂದೆನು I ಆಗ ನೀ ಪರಿಹರಿಸಿದೆ ನನ್ನ ಪಾಪದೋಷವನು II
- Verse 6: ಎಂತಲೇ ಭಕ್ತರೆಲ್ಲರು ನಿನ್ನ ಪ್ರಾರ್ಥಿಸಲಿ ಸಕಾಲದಲಿ I ಹುಚ್ಚುಹೊಳೆ ಉಕ್ಕಿಬಂದಾಗ ನೀ ಸಿಕ್ಕಲಿಲ್ಲವೆನ್ನದಿರಲಿ II
- Verse 7: ನೀನೆ ನನಗೆ ಮರೆಯು, ಆಪತ್ತಿನಲಾಸರೆಯು I ನನ್ನನು ಆವರಿಸುವ ಉದ್ಧಾರಕ ನಾದವು II
- Verse 8: ಪ್ರಭು ಇಂತೆಂದನು : “ಕಲಿಸುವೆನು, ನಾ ನಿನಗೆ ತಿಳಿಸುವೆನು ಸನ್ಮಾರ್ಗವನು I ಕಟಾಕ್ಷಿಸಿ ನಿನ್ನನು, ಈವೆನು ಸದಾಲೋಚನೆಯನು II
- Verse 9: ‘ಬುದ್ಧಿಹೀನರಾಗದಿರಿ ಕತ್ತೆ, ಕುದುರೆಗಳಂತೆ I ಸ್ವಾಧೀನವಾಗವವು ಕಟ್ಟುಕಡಿವಾಣವಿಲ್ಲದೆ’ II
- Verse 10: ‘ದುಷ್ಟರ ಕಷ್ಟನಷ್ಟಗಳು ಅನೇಕ I ಪ್ರಭುವನು ನಂಬಿದವರ ಸುತ್ತ ಮರುಕ’ ” II
- Verse 11: ಸಜ್ಜನರೇ ಸಂತೋಷಿಸಿರಿ, ಉಲ್ಲಾಸಿಸಿರಿ ಪ್ರಭುವಿನಲಿ I ಯಥಾರ್ಥಚಿತ್ತರೇ, ಜಯಕಾರಮಾಡಿ ಆತನ ವಿಷಯದಲಿ II