வேதாகமம்
ಹಳೆಯ ಒಡಂಬಡಿಕೆ
ಕೀರ್ತನೆಗಳು
55ನೇ ಅಧ್ಯಾಯ
- Verse 1: ಹೇ ದೇವಾ, ಕಿವಿಗೊಡು ನನ್ನ ಪ್ರಾರ್ಥನೆಗೆ I ವಿಮುಖನಾಗಬೇಡ ನನ್ನ ವಿಜ್ಞಾಪನೆಗೆ II
- Verse 2: ನನ್ನ ಮನವಿಯನಾಲಿಸು, ದಯಪಾಲಿಸು ಸದುತ್ತರವನು I ಚಿಂತಾಕ್ರಾಂತನಾದ ನಾನು ಪ್ರಲಾಪಿಸುತ್ತಿರುವೆನು II
- Verse 3: ಶತ್ರುಗರ್ಜನೆಯಿಂದ, ದುರುಳರ ಹಿಂಸೆಯಿಂದ I ಅವರೆನಗೆ ಬರಮಾಡಿರುವ ಆತಂಕದಿಂದ I ದ್ವೇಷಿಸುತಿಹರೆನ್ನನು ಕೋಪಾವೇಶದಿಂದ II
- Verse 4: ನನ್ನ ಹೃದಯವು ನೊಂದು ಬೆಂದಿದೆ I ಮರಣ ಭಯವು ಆವರಿಸಿಕೊಂಡಿದೆ II
- Verse 5: ನಡುಗುತ್ತಿರುವೆ ಭಯದಿಂದ I ಕುಸಿಯುತ್ತಿರುವೆ ದಿಗಿಲಿನಿಂದ II
- Verse 6: ‘ಆಹಾ ರೆಕ್ಕೆಗಳು ನನಗಿತ್ತಾದರೆ ಪಾರಿವಾಳದಂತೆ I ಹಾರಿ ಹೋಗಿ ನೆಮ್ಮದಿಯಿಂದಿರಬಹುದಿತ್ತು’ ಎನ್ನುತ್ತಿದ್ದೆ II
- Verse 7: ದೂರ, ಬಲುದೂರ ಹಾರಿ ಹೋಗುತ್ತಿದ್ದೆ I ನಿರ್ಜನ ಪ್ರದೇಶದಲಿ ವಾಸಿಸುತ್ತಿದ್ದೆ II
- Verse 8: ಹುಡುಕುತ್ತಿದ್ದೆ ನಾ ಗೂಡನು ತವಕದಿಂದ I ಪಾರಾಗುತ್ತಿದ್ದೆ ಬಿರುಗಾಳಿ ಮಳೆಯಿಂದ II
- Verse 9: ಭ್ರಾಂತಗೊಳಿಸು ಶತ್ರುವನು, ಗಲಿಬಿಲಿಗೊಳಿಸು ಅವರ ನುಡಿಯನು I ನಗರದಲಿ ನಾ ಕಾಣುತ್ತಿರುವೆ ಪ್ರಭೂ, ಹಿಂಸೆ ಕಲಹವನು II
- Verse 10: ಗೋಡೆ ಸುತ್ತಲೂ ತಿರುಗುತಿಹರವರು ಹಗಲಿರುಳು I ನಗರದೊಳಗೆ ತುಂಬಿವೆ ಅಕ್ರಮ ಅನಾಚಾರಗಳು II
- Verse 11: ಅದರ ಮಧ್ಯೆಯೇ ಇವೆ ವಿನಾಶಕರ ಶಕ್ತಿಗಳು I ಅದರ ಬೀದಿಬಿಟ್ಟು ತೊಲಗವು ಮೋಸ ವಂಚನೆಗಳು II
- Verse 12: ನಾ ಸಹಿಸಿಕೊಳ್ಳುತ್ತಿದ್ದೆ ದೂಷಿಸುವವನು ಶತ್ರುವಾಗಿದ್ದರೆ I ನಾನವಿತುಕೊಳ್ಳುತ್ತಿದ್ದೆ ದ್ವೇಷಿಸುವವನು ವೈರಿಯಾಗಿದ್ದರೆ II
- Verse 13: ಆದರೆ ಇದನ್ನೆಲ್ಲಾ ನನಗೆ ಮಾಡಿದವನು ನೀನು I ನನಗೆ ಸರಿಯಾದವನು, ಗೆಳೆಯನು, ನನ್ನಾಪ್ತಮಿತ್ರನು II
- Verse 14: ತೆರಳಲಿಲ್ಲವೆ ನಾವೀರ್ವರು ದೇವಾಲಯಕೆ I ಭಕ್ತರೊಂದಿಗೆ ಮಧುರ ಸಂಭಾಷಣೆಯೊಂದಿಗೆ? II
- Verse 15: ಮರಣ ತಟ್ಟನೆ ಆ ದುಷ್ಟರ ಮೇಲೆರಗಲಿ I ಜೀವಸಹಿತ ಪಾತಾಳಕ್ಕವರು ಇಳಿಯಲಿ I ಕೆಟ್ಟತನ ಮನೆಮಾಡಿದೆ ಅವರ ಮಧ್ಯದಲಿ II
- Verse 16: ನಾನಾದರೋ ಮೊರೆಯಿಡುವೆ ದೇವರಿಗೆ I ರಕ್ಷಣೆ ನೀಡದಿರನು ಪ್ರಭು ನನಗೆ II
- Verse 17: ತ್ರಿಕಾಲದೊಳು ಗೋಗರೆದು ಯಾಚಿಸುವೆನು I ಎನ್ನಯ ಮೊರೆಗಾತನು ಕಿವಿಗೊಡದಿರನು II
- Verse 18: ನನ್ನ ಸುತ್ತಲೂ ಶತ್ರುವ್ಯೂಹವಿರುವಲ್ಲಿ I ರಕ್ಷಿಸುವನೆನ್ನನು ನಾ ನಡೆಸುವ ದಾಳಿಯಲಿ II
- Verse 19: ಆದಿಯಿಂದಾಳುವ ದೇವನು ಅವರ ಸೊಕ್ಕಡಗಿಸದೆ ಬಿಡನು I ಪರಿವರ್ತಿಸಲಾಗದು ದೇವಭಯವಿಲ್ಲದವರ ಹೃದಯವನು II
- Verse 20: ಮಿತ್ರರ ಮೇಲೆ ಕೈಯೆತ್ತಿರುವನು ಆ ನನ್ನ ಗೆಳೆಯನು I ತಾನು ಮಾಡಿದ ಒಪ್ಪಂದವನು ತಾನೆ ಮೀರಿ ನಡೆದಿಹನು II
- Verse 21: ಅವನ ಬಾಯಿ ಬೆಣ್ಣೆಗಿಂತ ನಯ, ಆದರೆ ಹೃದಯ ಕಲಹಭರಿತ I ನುಡಿ ಎಣ್ಣೆಗಿಂತ ನುಣುಪು, ಆದರೆ ಬಿಚ್ಚುಗತ್ತಿಗಿಂತ ಹರಿತ II
- Verse 22: ಪ್ರಭುವಿನ ಮೇಲೆ ಹಾಕು ನಿನ್ನ ಚಿಂತಾಭಾರವನು I ಉದ್ಧರಿಸುವನು, ಸಜ್ಜನರನೆಂದಿಗೂ ಕದಲಗೊಡಿಸನು II
- Verse 23: ದುರ್ಜನರನು ದೇವಾ, ನೀ ದಬ್ಬಿಬಿಡುವೆ ಪಾತಾಳಕೆ I ಅರ್ಧಾಯುಷ್ಯವನೂ ಬಾಳಬಿಡೆ ವಂಚಕ ಕೊಲೆಗಾರರಿಗೆ I ನಾನಾದರೋ ಓ ದೇವಾ, ನೆಮ್ಮಿಗೊಂಡಿರುವೆ ನಿನಗೆ II