పరిశుద్ధ గ్రంథము
ಹಳೆಯ ಒಡಂಬಡಿಕೆ
ಉಪದೇಶಕ
7ನೇ ಅಧ್ಯಾಯ
- Verse 1: ಸುಗಂಧ ತೈಲಕ್ಕಿಂತ ಒಳ್ಳೆಯ ಹೆಸರು ಲೇಸು, ಜನನದ ದಿನಕ್ಕಿಂತ ಮರಣದ ದಿನ ಲೇಸು.
- Verse 2: ಔತಣ ನಡೆವ ಮನೆಗೆ ಹೋಗುವುದಕ್ಕಿಂತ ಗೋಳಾಟವಿರುವ ಮನೆಗೆ ಹೋಗುವುದು ಲೇಸು, ಎಲ್ಲಾ ಮಾನವರ ಅಂತಿಮ ಗತಿ ಸಾವೇ. ಜೀವಂತರು ಇದನ್ನು ಮನಸ್ಸಿನಲ್ಲಿಡುವರು.
- Verse 3: ನಗೆಗಿಂತ ಅಳುವು ಲೇಸು; ಮುಖದಲ್ಲಿ ದುಃಖ, ಹೃದಯಕ್ಕೆ ಸುಖ..
- Verse 4: ಜ್ಞಾನಿಯ ಹೃದಯ ಶೋಕದ ಆಲಯ; ಮೂಢನ ಹೃದಯ ಹಿಗ್ಗಿನ ನಿಲಯ.
- Verse 5: ಅಜ್ಞಾನಿಗಳ ಸ್ತುತಿಗೀತೆಗಿಂತ ಸುಜ್ಞಾನಿಗಳ ಗದರಿಕೆ ಲೇಸು.
- Verse 6: ಮೂಢರ ನಗೆಚಾಟಿಕೆ, ಮಡಕೆಯಡಿ ಉರಿವ ಮುಳ್ಳುಕಡ್ಡಿಯ ಚಟಪಟ. ಇದೂ ಸಹ ನಿರರ್ಥಕ.
- Verse 7: ದಬ್ಬಾಳಿಕೆ ಬುದ್ಧಿವಂತನನ್ನೂ ಹುಚ್ಚನನ್ನಾಗಿಸುತ್ತದೆ; ಲಂಚಕೋರತನ ಅಂತರಂಗವನ್ನೂ ಕೆಡಿಸುತ್ತದೆ.
- Verse 8: ಆದಿಗಿಂತ ಅಂತ್ಯ ಲೇಸು; ಗರ್ವಕ್ಕಿಂತ ತಾಳ್ಮೆ ಲೇಸು.
- Verse 9: ತವಕಬೇಡ ಕೋಪಮಾಡಲಿಕ್ಕೆ; ಕೋಪಕ್ಕೆ ನೆಲೆ ಮೂಢನ ಎದೆ.
- Verse 10: ಹಿಂದಿನ ಕಾಲ ಈ ಕಾಲಕ್ಕಿಂತ ಮೇಲಾದುದಕ್ಕೆ ಕಾರಣ ಕೇಳಬೇಡ; ಇದು ಬುದ್ಧಿವಂತನು ಕೇಳುವ ಪ್ರಶ್ನೆಯಲ್ಲ.
- Verse 11: ಜ್ಞಾನವು ಆಸ್ತಿಗಿಂತ ಪ್ರಯೋಜನಕರ; ಜೀವಿತರಿಗೆ ಅದು ಎಷ್ಟೋ ಲಾಭಕರ.
- Verse 12: ಧನವು ಹೇಗೋ ಹಾಗೆ ಜ್ಞಾನವೂ ಆಶ್ರಯ; ಜ್ಞಾನದ ವೈಶಿಷ್ಟ್ಯವೆಂದರೆ ಅದು ಜ್ಞಾನಿಗೆ ಜೀವದಾಯಕ.
- Verse 13: ದೇವರ ಸೃಷ್ಟಿಕಾರ್ಯವನ್ನು ಗಮನಿಸು; ಅವರು ಸೊಟ್ಟಗೆ ಮಾಡಿದ್ದನ್ನು ನೆಟ್ಟಗೆ ಮಾಡುವವರು ಯಾರು?
- Verse 14: ಸುಖದಿನದಲ್ಲಿ ಸಂತೋಷದಿಂದಿರು, ದುಃಖದಿನದಲ್ಲಿ ಆಲೋಚಿಸಿನೋಡು; ಮನುಷ್ಯನು ತನ್ನ ಆಯುಸ್ಸು ಕಳೆದ ಮೇಲೆ ಸಂಭವಿಸುವುದೇನೆಂದು ಗ್ರಹಿಸಲಾಗದಂತೆ ದೇವರು ಇವುಗಳನ್ನು ಒಂದರ ಮೇಲೊಂದನ್ನು ಬರಮಾಡುತ್ತಾರೆ.
- Verse 15: ಸಜ್ಜನನು ಸದ್ಧರ್ಮಿಯಾಗಿ ಜೀವಿಸುತ್ತಾ ಗತಿಸಿಹೋಗುತ್ತಾನೆ; ದುರ್ಜನನಾದರೋ ಅಧರ್ಮದಲ್ಲಿ ಬಹುಕಾಲ ಬದುಕುತ್ತಾನೆ. ಇದನ್ನು ಎಲ್ಲಾ ನನ್ನ ನಿರರ್ಥಕ ಜೀವನದಲ್ಲಿ ಎಷ್ಟೋ ನೋಡಿದ್ದೇನೆ.
- Verse 16: ಧರ್ಮಿಷ್ಠನಾಗಿ ಬಾಳುವುದರಲ್ಲಿ ಆಗಲಿ, ಜ್ಞಾನಾರ್ಜನೆಯಲ್ಲಾಗಲಿ ಮಿತಿಮೀರಿ ವರ್ತಿಸಬೇಡ; ನಿನ್ನನ್ನು ನೀನೇ ವಿನಾಶಕ್ಕೆ ಗುರಿಮಾಡಿಕೊಳ್ಳಬೇಡ.
- Verse 17: ದುರ್ನಡತೆಯಲ್ಲೇ ಆಗಲಿ, ಬುದ್ಧಿಹೀನತೆಯಲ್ಲೇ ಆಗಲಿ ಮಿತಿಮೀರಿ ವರ್ತಿಸುವುದು ಸಲ್ಲ. ಕಾಲ ಬರುವ ಮೊದಲೇ ಸಾವಿಗೆ ತುತ್ತಾಗಬೇಡ.
- Verse 18: ನೀನು ಒಂದನ್ನು ಹಿಡಿದುಕೊಂಡು ಇನ್ನೊಂದನ್ನೂ ಕೈಬಿಡದಿರುವುದು ಒಳಿತು. ದೇವರಲ್ಲಿ ಭಯಭಕ್ತಿಯುಳ್ಳವರು ಇವೆರೆಡರಿಂದಲೂ ಪಾರು.
- Verse 19: ಹತ್ತು ಅಧಿಕಾರಿಗಳಿಂದ ಪಟ್ಟಣಕ್ಕೆ ಉಂಟಾಗುವ ದೃಢತೆಗಿಂತ ಜ್ಞಾನಿಗೆ ಜ್ಞಾನದಿಂದ ದೊರಕುವ ದೃಢತೆ ಹೆಚ್ಚು.
- Verse 20: ಪಾಪಮಾಡದೆ ಧರ್ಮವನ್ನೇ ಆಚರಿಸುವ ಸತ್ಪುರುಷ ಜಗದಲ್ಲಿ ಇಲ್ಲವೇ ಇಲ್ಲ.
- Verse 21: ಜನರು ಆಡುವ ಮಾತುಗಳನ್ನೆಲ್ಲ ಲಕ್ಷ್ಯಕ್ಕೆ ತೆಗೆದುಕೊಳ್ಳಬೇಡ. ನಿನ್ನ ಆಳೂ ನಿನ್ನನ್ನು ಶಪಿಸುವುದು ಕಿವಿಗೆ ಬೀಳಬಹುದು.
- Verse 22: ನೀನು ಕೂಡ ಅನೇಕ ವೇಳೆ ಇತರರನ್ನು ಶಪಿಸಿದ್ದೀ; ಇದಕ್ಕೆ ನಿನ್ನ ಮನಸ್ಸೇ ಸಾಕ್ಷಿ.
- Verse 23: ಇದನ್ನೆಲ್ಲ ಜ್ಞಾನದಿಂದ ಪರೀಕ್ಷಿಸಿದೆ, ಜ್ಞಾನಿಯಾಗುತ್ತೇನೆಂದು ನಿರ್ಧರಿಸಿಕೊಂಡೆ. ಆದರೆ ಅದು ನನಗೆ ದೂರವಾಯಿತು.
- Verse 24: ಮಹೋನ್ನತವೂ ನಿಗೂಢವೂ ಆದ ತತ್ವವನ್ನು ಅರಿತುಕೊಳ್ಳಬಲ್ಲವರಾರು?
- Verse 25: ನಾನು ಮತ್ತೆ ಜ್ಞಾನವನ್ನೂ ಮೂಲತತ್ವವನ್ನೂ ಹುಡುಕಿ, ವಿಚಾರಿಸಿ, ಗ್ರಹಿಸಿಕೊಳ್ಳಲು ಆಶಿಸಿದೆ; ಅಧರ್ಮವು ಮೂಢತನ, ಅಜ್ಞಾನವು ಹುಚ್ಚುತನ ಎಂದು ತಿಳಿದುಕೊಳ್ಳಲು ಮನಸ್ಸುಮಾಡಿದೆ.
- Verse 26: ಸಾವಿಗಿಂತ ಹೆಚ್ಚು ವಿಷಕರವಾದ ವಿಷಯವೊಂದು ನನಗೆ ಕಂಡುಬಂದಿತು. ಅದು ಯಾವುದೆಂದರೆ - ಕೆಟ್ಟ ಹೆಂಗಸು. ಅವಳು ತೋರಿಸುವ ಪ್ರೀತಿ ಒಂದು ಬೋನು, ಸಿಕ್ಕಿಸಿಕೊಳ್ಳುವ ಒಂದು ಬಲೆ; ಅವಳ ತೋಳುಗಳು ಸಂಕೋಲೆಗಳು. ದೇವರು ಒಲಿದವನು ಅವಳಿಂದ ತಪ್ಪಿಸಿಕೊಳ್ಳುವನು; ಪಾಪಿಯಾದರೋ ಅವಳ ಕೈಗೆ ಸಿಕ್ಕಿಬೀಳುವನು.
- Verse 27: “ಹೌದು, ಒಂದಾದ ಮೇಲೊಂದನ್ನು ಆಲೋಚಿಸಿ ನಾನು ಇದನ್ನು ಕಂಡುಹಿಡಿದೆ” ಎನ್ನುತ್ತಾನೆ ಉಪದೇಶಕ. ಮತ್ತೊಂದು ಸಂಶೋಧನೆಯನ್ನು ಎಷ್ಟು ನಡೆಸಿದರೂ ನನಗೆ ಉತ್ತರ ಸಿಕ್ಕಲಿಲ್ಲ.
- Verse 28: ಸಹಸ್ರಪುರುಷರಲ್ಲಿ ಯೋಗ್ಯ ಎನ್ನ ತಕ್ಕ ಒಬ್ಬನನ್ನು ಕಂಡಿದ್ದರೂ ಕಂಡಿರಬಹುದು; ಮೇಲಾದ ಹೆಂಗಸು ಎನ್ನತಕ್ಕವಳು ಸಿಕ್ಕಲಿಲ್ಲ.
- Verse 29: ಇದೊಂದು ನಿನಗೆ ತಿಳಿದಿರಲಿ: ದೇವರು ಮನುಷ್ಯರನ್ನು ಸಜ್ಜನರನ್ನಾಗಿ ಸೃಷ್ಟಿಸಿದರು; ಮನುಷ್ಯರಾದರೂ ಅನೇಕ ಸಮಸ್ಯೆಗಳನ್ನು ಕಲ್ಪಿಸಿಕೊಂಡಿದ್ದಾರೆ. ನನಗೆ ಕಂಡುಬಂದುದು ಇದುವೇ.