P. O. C ബൈബിള്
ಹಳೆಯ ಒಡಂಬಡಿಕೆ
ಯೆರೆಮೀಯ
51ನೇ ಅಧ್ಯಾಯ
1 : ಸರ್ವೇಶ್ವರ ಸ್ವಾಮಿ ಹೀಗೆನ್ನುತ್ತಾರೆ: “ಇಗೋ, ನಾನು ಬಾಬಿಲೋನಿನ ಮೇಲೂ ಅದರ ಲೇಬ್ಕಾಮೈ ಪ್ರಜೆಗಳ ಮೇಲೂ ವಿನಾಶಕಾರಿಯಾದ ಗಾಳಿಬೀಸುವಂತೆ ಮಾಡುವೆನು.
2 : ಅನ್ಯಜನರನ್ನು ಬಾಬಿಲೋನಿಗೆ ಕಳುಹಿಸುವೆನು. ಅವರು ಅದನ್ನು ಗಾಳಿಗೆ ತೂರಿಬಿಡುವರು. ನಿಯಮಿತ ವಿಪತ್ಕಾಲದಲ್ಲಿ ಆ ದೇಶಕ್ಕೆ ಮುತ್ತಿಗೆ ಹಾಕಿ ಅದನ್ನು ಬಟ್ಟಬರಿದು ಮಾಡುವರು.
3 : ಅದರ ಧನುರ್ಧಾರಿಗಳಿಗೂ ಕವಚ ಸನ್ನದ್ಧರಿಗೂ ಬಿಲ್ಲುಬಾಣಗಳನ್ನೆಸೆಯಲು ಅವಕಾಶವಿಲ್ಲದಿರಲಿ. ಬಾಬಿಲೋನಿಯದ ಯುವಕರನ್ನು ಉಳಿಸದಿರಿ. ಅದರ ಸೈನಿಕರನ್ನೆಲ್ಲ ನಿಶ್ಶೇಷಮಾಡಿರಿ.
4 : ಬಾಬಿಲೋನಿಯರು ತಮ್ಮ ದೇಶದಲ್ಲೆ ಹತರಾಗಿ ಬೀಳುವರು. ಅದರ ಬೀದಿಗಳಲ್ಲೆ ಕತ್ತಿಗೆ ತುತ್ತಾಗಿ ಮಣ್ಣುಪಾಲಾಗುವರು.
5 : ಇಸ್ರಯೇಲರ ಪರಮ ಪಾವನ ಸ್ವಾಮಿಯಾದ ನನಗೆ ನನ್ನ ಜನರು ಮಾಡಿದ ಅಪರಾಧ ತಮ್ಮ ನಾಡಿನಲ್ಲಿ ತುಂಬಿದ್ದರೂ ಸೇನಾಧೀಶ್ವರ ಸರ್ವೇಶ್ವರನೆಂಬ ದೇವರಾದ ನಾನು ಇಸ್ರಯೇಲನ್ನಾಗಲಿ ಜುದೇಯವನ್ನಾಗಲಿ ತ್ಯಜಿಸಿಬಿಡಲಿಲ್ಲ.
6 : ನೀವು ಬಾಬಿಲೋನಿನಿಂದ ಓಡಿಹೋಗಿ ನಿಮ್ಮ ನಿಮ್ಮ ಪ್ರಾಣಗಳನ್ನು ಉಳಿಸಿಕೊಳ್ಳಿ, ಅದಕ್ಕೆ ಉಂಟಾಗುವ ದಂಡನೆಗೆ ನೀವು ಒಳಗಾಗಬೇಡಿ. ಸರ್ವೇಶ್ವರನಾದ ನಾನು ಮುಯ್ಯಿತೀರಿಸುವ ಕಾಲಬಂದಿದೆ. ಬಾಬಿಲೋನಿಗೆ ತಕ್ಕ ಪ್ರತೀಕಾರ ಮಾಡುವೆನು.
7 : ಬಾಬಿಲೋನ್ ನನ್ನ ಕೈಯಲ್ಲಿರುವ ಹೊನ್ನಿನ ಪಾನಪಾತ್ರೆ. ಲೋಕದವರೆಲ್ಲರು ಅದರಿಂದ ಕುಡಿದು ಮತ್ತರಾದರು. ರಾಷ್ಟ್ರಗಳು ಅದರಿಂದ ದ್ರಾಕ್ಷಾರಸವನ್ನು ಕುಡಿದು ಹುಚ್ಚಾದವು.
8 : ಬಾಬಿಲೋನ್ ತಟ್ಟನೆ ಬಿದ್ದು ಹಾಳಾಯಿತು. ಅದಕ್ಕಾಗಿ ಗೋಳಾಡಿ. ಅದರ ನೋವನ್ನು ನೀಗಿಸಲು ಔಷಧವನ್ನು ತನ್ನಿ. ಒಂದು ವೇಳೆ ಅದು ಗುಣವಾದೀತು!
9 : ಅಲ್ಲಿರುವ ಹೊರನಾಡಿಗರು, ‘ಬಾಬಿಲೋನನ್ನು ಸ್ವಸ್ಥಮಾಡಲು ನಾವು ಪ್ರಯತ್ನಿಸಿದೆವು. ಆದರೆ ಅದು ಸ್ವಸ್ಥವಾಗಲಿಲ್ಲ. ಬಾಬಿಲೋನನ್ನು ಬಿಟ್ಟು ನಾವೆಲ್ಲರು ನಮ್ಮ ನಮ್ಮ ನಾಡುಗಳಿಗೆ ಹೋಗೋಣ. ಅದು ಪಡೆಯಬೇಕಾದ ದಂಡನೆ ಆಕಾಶ ಮುಟ್ಟುವಷ್ಟು ದೊಡ್ಡದು, ಹೌದು, ಅದು ಗಗನದವರೆಗೂ ಬೆಳೆದಿದೆ,” ಎನ್ನುವರು.
10 : ‘ಸರ್ವೇಶ್ವರ ನಮ್ಮ ಧಾರ್ಮಿಕತೆಯನ್ನು ವ್ಯಕ್ತಪಡಿಸಿದ್ದಾರೆ. ನಮ್ಮ ದೇವರಾದ ಸರ್ವೇಶ್ವರ ನಡೆಸಿದ ಮಹತ್ಕಾರ್ಯವನ್ನು ಸಿಯೋನಿನಲ್ಲಿ ಪ್ರಕಟಿಸೋಣ ಬನ್ನಿ’ ಎಂದು ಹೇಳುವರು.”
11 : ಸರ್ವೇಶ್ವರನು ಬಾಬಿಲೋನನ್ನು ಹಾಳುಮಾಡಬೇಕೆಂದು ಉದ್ದೇಶಿಸಿ, ಅದನ್ನು ಮೇದ್ಯರ ಅರಸರು ನಾಶಮಾಡುವಂತೆ ಅವರನ್ನು ಪ್ರೇರೇಪಿಸಿದ್ದಾರೆ. ಆ ನಾಶವು, ಸರ್ವೇಶ್ವರನು ತನ್ನ ಆಲಯವನ್ನು ಕೆಡವಿದವರಿಗೆ ಮಾಡಬೇಕೆಂದಿದ್ದ ಪ್ರತೀಕಾರವೇ ಆಗಿದೆ. ‘ಮೇದ್ಯರೇ, ಬಾಣಗಳನ್ನು ಮಸೆಯಿರಿ, ಯುದ್ಧಸನ್ನದ್ಧರಾಗಿರಿ;
12 : ಬಾಬಿಲೋನಿನ ಕೋಟೆಗೆ ಎದುರಾಗಿ ಧ್ವಜವೆತ್ತಿರಿ. ಪಹರೆಯನ್ನು ಬಲಪಡಿಸಿರಿ. ಕಾವಲುಗಾರರನ್ನು ನಿಲ್ಲಿಸಿರಿ. ಹೊಂಚುಗಾರರನ್ನು ಗೊತ್ತುಮಾಡಿರಿ!’ ಸರ್ವೇಶ್ವರ ಸ್ವಾಮಿ ಬಾಬಿಲೋನಿನವರ ವಿಷಯದಲ್ಲಿ ನುಡಿದಿದ್ದನ್ನು ನೆನಪಿಗೆ ತಂದುಕೊಂಡು ನೆರವೇರಿಸಿದ್ದಾರೆ.
13 : “ಬಹುಜಲಾಶ್ರಯಗಳ ನಡುವೆ ನಿಂತಿರುವ ನಗರಿಯೇ, ಧನಭರಿತ ಪುರಿಯೇ, ನಿನ್ನ ಅಂತ್ಯಕಾಲವು ಬಂದಿದೆ. ನೀನು ಕೊಳ್ಳೆಹೊಡೆದದ್ದು ಸಾಕಾಗಿದೆ.”
14 : ಸೇನಾಧೀಶ್ವರ ಸರ್ವೇಶ್ವರ ತಮ್ಮ ಮೇಲೆ ಆಣೆಯಿಟ್ಟು ಹೇಳುವುದು ಇದು: “ಖಂಡಿತವಾಗಿ ನಾನು ಮಿಡತೆಗಳಷ್ಟು ಅಸಂಖ್ಯ ಜನರಿಂದ ನಿನ್ನನ್ನು ತುಂಬಿಸುವೆನು. ಅವರು ನಿನ್ನ ಮೇಲೆ ಜಯಘೋಷಮಾಡುವರು.”
15 : ಆತ ಭೂಮಿಯನ್ನು ನಿರ್ಮಿಸಿದ ಶಕ್ತಿಯಿಂದ ಲೋಕವನ್ನು ಸ್ಥಾಪಿಸಿದ ಜ್ಞಾನದಿಂದ ಆಕಾಶಮಂಡಲವನ್ನು ಹರಡಿದ ವಿವೇಕದಿಂದ.
16 : ಆತನ ಘರ್ಜನೆಗೆ ಆಕಾಶದಲ್ಲಿನ ನೀರು ಭೋರ್ಗರೆಯುತ್ತದೆ ಭುವಿಯ ಕಟ್ಟಕಡೆಯಿಂದ ಮೋಡ ಮೇಲೇರುತ್ತದೆ ಮಳೆಗೋಸ್ಕರ ಮಿಂಚು ಹೊಳೆಯುತ್ತದೆ ಆತನ ಭಂಡಾರದಿಂದ ಗಾಳಿ ಬೀಸುತ್ತದೆ.
17 : ಇದರ ಮುಂದೆ ಜನರು ತಿಳುವಳಿಕೆಯಿಲ್ಲದ ಪಶುಪ್ರಾಯರು ತಾನು ಕೆತ್ತಿದ ವಿಗ್ರಹಕ್ಕಾಗಿ ಹೇಸುವನು ಪ್ರತಿಯೊಬ್ಬ ಅಕ್ಕಸಾಲಿಗನು. ಪೊಳ್ಳು, ಶ್ವಾಸವಿಲ್ಲದವುಗಳು, ಅವನು ಎರಕಹೊಯ್ದ ಪುತ್ತಳಿಗಳು.
18 : ಅವು ವ್ಯರ್ಥವಾದವುಗಳು, ಹಾಸ್ಯಾಸ್ಪದ ಕೃತಿಗಳು, ದಂಡನೆಯ ಕಾಲದಲ್ಲಿ ಅಳಿದುಹೋಗುವಂಥವುಗಳು.
19 : ಯಕೋಬ್ಯರಿಗೆ ಸ್ವಂತವಾದ ದೇವರು ಅವುಗಳ ಹಾಗಲ್ಲ ಆತ ಸಮಸ್ತವನ್ನು ಸೃಷ್ಟಿಸಿದಾತ ಆತನ ಸೊತ್ತು ಇಸ್ರಯೇಲ್ ವಂಶ ‘ಸೇನಾಧೀಶ್ವರ ಸರ್ವೇಶ್ವರ’ ಎಂಬುದು ಆತನ ನಾಮಧೇಯ.
20 : “ಬಾಬಿಲೋನೇ, ನೀನು ನನಗೊಂದು ಯುದ್ಧಾಸ್ತ್ರ, ಒಂದು ಗದೆ. ಈ ಗದೆಯಿಂದ ರಾಷ್ಟ್ರಗಳನ್ನು ಬಡಿದುಬಿಡುವೆನು, ರಾಜ್ಯಗಳನ್ನು ಅಳಿಸಿಬಿಡುವೆನು.
21 : ಈ ಗದೆಯಿಂದ ಒಡೆದುಬಿಡುವೆನು ಕುದುರೆಯನ್ನೂ ಸವಾರನನ್ನೂ,
22 : ರಥವನ್ನೂ ಸಾರಥಿಯನ್ನೂ ಸ್ತ್ರೀಪುರುಷರನ್ನೂ ಬಾಲವೃದ್ಧರನ್ನೂ.
23 : ಈ ಗದೆಯಿಂದ ಒಡೆದುಬಿಡುವೆನು ಕುರುಬನನ್ನೂ ಮಂದೆಯನ್ನೂ ರೈತನನ್ನೂ ನೊಗದೆತ್ತುಗಳನ್ನೂ ದೇಶಾಧಿಪತಿಗಳನ್ನೂ ನಾಡಿನೊಡೆಯರನ್ನೂ.”
24 : “ಆದರೆ ಬಾಬಿಲೋನಿನವರು ಹಾಗು ಅದರ ಕಸ್ದೀಯರು ಸಿಯೋನಿನಲ್ಲಿ ಮಾಡಿದ ಎಲ್ಲ ಕೇಡಿಗೆ ಪ್ರತಿಯಾಗಿ ನಾನು ಅವರೆಲ್ಲರಿಗೆ ಆ ಸಿಯೋನಿನವರ ಕಣ್ಣೆದುರಿಗೇ ಮುಯ್ಯಿ ತೀರಿಸುವೆನು,” ಎನ್ನುತ್ತಾರೆ ಸರ್ವೇಶ್ವರ.
25 : “ಲೋಕವನ್ನೆಲ್ಲಾ ನಾಶಮಾಡುವ ಎಲೈ ನಾಶಕ ಪರ್ವತವೇ, ನಾನು ನಿನಗೆ ವಿರುದ್ಧನಾಗಿದ್ದೇನೆ. ನಿನ್ನ ಮೇಲೆ ಕೈಮಾಡಿ, ನಿನ್ನನ್ನು ಬಂಡೆಯ ಮೇಲಿಂದ ಕೆಳಕ್ಕೆ ಉರುಳಿಸುವೆನು. ಸುಟ್ಟ ಬೆಟ್ಟವನ್ನಾಗಿಸುವೆನು.
26 : ಮೂಲೆಗಲ್ಲಿಗಾಗಲಿ, ಅಸ್ತಿವಾರದ ಕಲ್ಲಿಗಾಗಲಿ ಯಾರೂ ನಿನ್ನಿಂದ ಕಲ್ಲನ್ನು ತೆಗೆಯರು. ನೀನು ನಿತ್ಯನಾಶಕ್ಕೆ ಗುರಿಯಾಗುವೆ,” ಎನ್ನುತ್ತಾರೆ ಸರ್ವೇಶ್ವರ.
27 : “ನಾಡಿನಲ್ಲಿ ಧ್ವಜವೆತ್ತಿರಿ, ರಾಜ್ಯಗಳಲ್ಲೆಲ್ಲ ಕೊಂಬೂದಿರಿ, ರಾಷ್ಟ್ರಗಳನ್ನು ಸಜ್ಜುಮಾಡಿರಿ. ಬಾಬಿಲೋನಿನ ಮೇಲೆ ಬೀಳಲಿಕ್ಕೆ ಅರರಾಟ್, ಮಿನ್ನಿ, ಅಷ್ಕೆನಜ್ ಎಂಬ ರಾಷ್ಟ್ರಗಳನ್ನು ಕರೆದುಕೊಳ್ಳಿ. ಸೋಲಿಸಬಲ್ಲ ಸೇನಾಪತಿಯನ್ನು ನೇಮಿಸಿರಿ. ಬಿರುಸಾದ ಅಶ್ವಬಲವನ್ನು ಮಿಡತೆಗಳ ದಂಡಿನೋಪಾದಿ ಬರಮಾಡಿ.
28 : ರಾಷ್ಟ್ರಗಳು, ಮೇದ್ಯರ ಅರಸರು, ಅಧಿಪತಿಗಳು, ಅಧಿಕಾರಿಗಳು, ಅವರ ಕೈಕೆಳಗಿರುವ ಎಲ್ಲ ನಾಡಿನವರು, ಇವರೆಲ್ಲರನ್ನು ಬಾಬಿಲೋನಿಗೆ ವಿರುದ್ಧ ಸಜ್ಜುಗೊಳಿಸಿರಿ.
29 : ಪೊಡವಿ ನೊಂದು ನಡುಗುತ್ತಿದೆ! ಏಕೆಂದರೆ ಬಾಬಿಲೋನ್ ದೇಶ ಹಾಳುಬಿದ್ದು ನಿರ್ಜನವಾಗಲಿ ಎಂದು ಸರ್ವೇಶ್ವರ ಅದರ ವಿಷಯವಾಗಿ ಮಾಡಿಕೊಂಡಿರುವ ಸಂಕಲ್ಪ ಅಚಲವಾಗಿದೆ.
30 : ಬಾಬಿಲೋನಿಯದ ಶೂರರು ಯುದ್ಧಕ್ಕೆ ಹಿಂಜರಿದು ಹೆಂಗಸರಂತೆ, ಹೇಡಿಗಳಂತೆ ತಮ್ಮ ಕೋಟೆಗಳಲ್ಲೆ ನಿಂತಿದ್ದಾರೆ. ಅದರ ಹೆಬ್ಬಾಗಿಲುಗಳು ಮುರಿದುಬಿದ್ದಿವೆ. ಅದರ ಮನೆಗೆ ಬೆಂಕಿಯಿಕ್ಕಲಾಗಿದೆ.
31 : ಒಬ್ಬ ಸುದ್ದಿಗಾರ ಇನ್ನೊಬ್ಬ ಸುದ್ದಿಗಾರನತ್ತ ಓಡುತ್ತಾನೆ. ಒಬ್ಬ ದೂತ ಇನ್ನೊಬ್ಬ ದೂತನತ್ತ ದೌಡಾಯಿಸುತ್ತಾನೆ. ‘ರಾಜಧಾನಿಯನ್ನು ಎಲ್ಲಾ ಕಡೆಯಿಂದಲೂ ಆಕ್ರಮಿಸಿದ್ದಾರೆ.
32 : ರೇವುಗಳನ್ನು ಹಿಡಿದಿದ್ದಾರೆ. ಹುಲ್ಲಿಗೆ ಬೆಂಕಿ ಹಚ್ಚಿದ್ದಾರೆ. ರಣವೀರರು ಭಯಭ್ರಾಂತರಾಗಿದ್ದಾರೆ’ ಎಂದು ಬಾಬಿಲೋನಿನ ಅರಸನಿಗೆ ತಿಳಿಸುತ್ತಾರೆ.
33 : ಬಾಬಿಲೋನ್ ನಗರವು ತುಳಿದು ತುಳಿದು ಸರಿಮಾಡಿದ ಕಣದಂತಿದೆ. ಇಷ್ಟರಲ್ಲೆ ಕೊಯ್ಲುಕಾಲ ಅದಕ್ಕೆ ಸಂಭವಿಸಲಿದೆ; ಇದು ಇಸ್ರಯೇಲರ ದೇವರೂ ಸೇನಾಧೀಶ್ವರನೂ ಆದ ಸರ್ವೇಶ್ವರನ ನುಡಿ.”
34 : ಬಾಬಿಲೋನಿಯದ ಅರಸ ನೆಬೂಕದ್ನೆಚ್ಚರನು ನನ್ನನ್ನು ಮುರಿದು ತಿಂದುಬಿಟ್ಟ ನನ್ನನ್ನು ಕುಡಿದು ಬಿಸಾಡಿದ ಪಾತ್ರೆಯನ್ನಾಗಿಸಿಬಿಟ್ಟ. ಘಟಸರ್ಪದ ಹಾಗೆ ನನ್ನನ್ನು ನುಂಗಿದ ನನ್ನ ರುಚಿಪದಾರ್ಥಗಳಿಂದ ಹೊಟ್ಟೆ ತುಂಬಿಸಿಕೊಂಡ ಮಿಕ್ಕಿದುದನ್ನೆಲ್ಲ ತೊಳೆದು ಎಸೆದುಬಿಟ್ಟ.
35 : ‘ನಮ್ಮ ಪ್ರಾಣವನ್ನು ಹಿಂಡಿದ ದೋಷ ಬಾಬಿಲೋನಿಗೆ ತಟ್ಟಲಿ’ ಎನ್ನುತ್ತದೆ ಸಿಯೋನ್. ‘ನಮ್ಮ ರಕ್ತವನ್ನು ಸುರಿಸಿದ ಅಪರಾಧ ಅದರ ಕಸ್ದೀಯರಿಗೆ ಬಡಿಯಲಿ!’ ಎನ್ನುತ್ತದೆ ಜೆರುಸಲೇಮ್.
36 : ಸರ್ವೇಶ್ವರ ಹೀಗೆನ್ನುತ್ತಾರೆ: “ಇಗೋ, ನಾನು ನಿನ್ನ ಪರವಾಗಿ ವ್ಯಾಜ್ಯಮಾಡಿ ನಿನ್ನನ್ನು ಹಿಂಸಿಸಿದ ರಾಜ್ಯಕ್ಕೆ ಮುಯ್ಯಿತೀರಿಸುವೆನು. ಅದರ ಸರೋವರ ಬತ್ತಿಹೋಗುವಂತೆಯೂ ಅದರ ಪ್ರವಾಹ ಒಣಗಿಹೋಗುವಂತೆಯೂ ಮಾಡುವೆನು.
37 : ಆಗ ಬಾಬಿಲೋನ್ ಹಾಳುದಿಬ್ಬ ಆಗುವುದು. ಗುಳ್ಳೆನರಿಗಳ ಬೀಡಾಗುವುದು. ಅದು ಭಯಭೀತಿಗೂ ಸೀಳು ಪರಿಹಾಸ್ಯಕ್ಕೂ ಆಸ್ಪದವಾಗುವುದು.
38 : ಬಾಬಿಲೋನಿನವರು ಯುವಸಿಂಹಗಳಂತೆ ಒಟ್ಟಿಗೆ ಗರ್ಜಿಸುವರು, ಸಿಂಹದ ಮರಿಗಳಂತೆ ಗುರುಗುಟ್ಟುವರು.
39 : ಅವರು ಹೊಟ್ಟೆಬಾಕರೇ ಸರಿ. ಅವರಿಗೆ ಔತಣವನ್ನು ಸಿದ್ಧಮಾಡುವೆನು. ತಿಂದು ಸಂಭ್ರಮಪಡುವಂತೆ ಮಾಡುವೆನು. ತಲೆಗೇರುವತನಕ ಕುಡಿಸಿ ಎಂದಿಗೂ ಎಚ್ಚರಗೊಳ್ಳದೆ ಚಿರನಿದ್ರೆಯಲ್ಲಿರುವಂತೆ ಮಾಡುವೆನು.
40 : ಕುರಿ, ಟಗರು, ಹೋತಗಳ ಹಾಗೆ ಅವರನ್ನು ವಧ್ಯಸ್ಥಾನಕ್ಕೆ ಬರಮಾಡುವೆನು. ಇದು ಸರ್ವೇಶ್ವರನಾದ ನನ್ನ ನುಡಿ.”
41 : ಏನು, ಶೇಷಕ್ ಶತ್ರುವಶವಾಯಿತೆ? ಲೋಕಪ್ರಸಿದ್ಧ ನಗರ ಶರಣಾಗತವಾಯಿತೆ?
42 : ರಾಷ್ಟ್ರಗಳ ಕಣ್ಣಿಗೆ ಬಾಬಿಲೋನ್ ಭೀಕರವಾಗಿಬಿಟ್ಟಿದೆ, ಸಮುದ್ರವೆ ಬಾಬಿಲೋನಿಯದ ಮೇಲೆ ನುಗ್ಗಿಬಿಟ್ಟಿದೆ, ಲೆಕ್ಕವಿಲ್ಲದ ತೆರೆಗಳು ಆ ರಾಜ್ಯವನ್ನು ಮುಚ್ಚಿಬಿಟ್ಟಿವೆ.
43 : ಕಾಡು, ಕಗ್ಗಾಡು, ಬೆಂಗಾಡು ಆಗಿವೆ ಅದರ ನಗರಗಳು. ಆ ದೇಶದೊಳು ಯಾರೂ ವಾಸಿಸರು, ಯಾವ ನರಪ್ರಾಣಿಯೂ ಹಾದುಹೋಗದು.
44 : “ಬಾಬಿಲೋನಿಯದ ಬೇಲ್ದೇವತೆಯನ್ನು ದಂಡಿಸುವೆನು. ಅದು ನುಂಗಿದ್ದನ್ನು ಅದರ ಬಾಯಿಂದಲೇ ಕಕ್ಕಿಸುವೆನು. ಪ್ರವಾಹವಾಗಿ ಅಲ್ಲಿಗೆ ಬರುತ್ತಿದ್ದ ಸಕಲ ದೇಶೀಯರು ಇನ್ನು ಬಾರರು. ಆ ಬಾಬಿಲೋನಿನ ಪೌಳಿಗೋಡೆ ಇನ್ನು ಬಿದ್ದುಹೋಗುವುದು.
45 : ನನ್ನ ಜನರೇ, ಬಾಬಿಲೋನನ್ನು ಬಿಟ್ಟು ಹೊರಡಿ. ನನ್ನ ಕೋಪಾಗ್ನಿಯಿಂದ ತಪ್ಪಿಸಿಕೊಳ್ಳಿ.
46 : ನಿಮ್ಮ ಎದೆ ಕುಂದದಿರಲಿ. ನಾಡಿನಲ್ಲಿ ಕಿವಿಗೆ ಬೀಳುವ ಸುದ್ದಿ ನಿಮ್ಮನ್ನು ಹೆದರಿಸದಿರಲಿ. ಒಂದು ವರ್ಷ ಒಂದು ಸುದ್ದಿಯಾದರೆ ಮತ್ತೊಂದು ವರ್ಷ ಮತ್ತೊಂದು ಸುದ್ದಿ. ಹಿಂಸಾಚಾರ ಪ್ರಬಲವಾಗುತ್ತಿದೆ ನಾಡಿನಲ್ಲಿ. ಅಧಿಕಾರಿಗೆ ಅಧಿಕಾರಿಯೇ ವಿರೋಧಿ ಅಲ್ಲಿ.
47 : ಇಗೋ ಬಾಬಿಲೋನಿಯದ ವಿಗ್ರಹಗಳನ್ನು ದಂಡಿಸುವ ದಿನಗಳು ಬರಲಿವೆ. ಆ ನಾಡೆಲ್ಲ ನಾಚಿಕೆಗೆ ಈಡಾಗುವುದು. ಅದರ ಪ್ರಜೆಗಳು ಅದರಲ್ಲೇ ಹತರಾಗಿ ಬೀಳುವರು.
48 : ಆಗ ಭೂಮಿ ಆಕಾಶಗಳೂ ಅಲ್ಲಿನ ಸಮಸ್ತವೂ ಬಾಬಿಲೋನಿನ ನಾಶ ನೋಡಿ ಜಯಘೋಷಮಾಡುವುವು. ಹಾಳುಮಾಡುವರು, ಉತ್ತರದಿಂದ ಬಂದು ಹಾಳುಮಾಡುವರು.
49 : ಹತರಾದ ಇಸ್ರಯೇಲರೇ, ಬಾಬಿಲೋನಿಯದ ಹಿತಕ್ಕಾಗಿ ಬಹುಜನ ಹತರಾದರು. ಅಂತೆಯೇ ಬಾಬಿಲೋನ್ ಹತವಾಗುವುದು. ಸರ್ವೇಶ್ವರನಾದ ನನ್ನ ನುಡಿ ಇದು.”
50 : “ಕತ್ತಿಯಿಂದ ತಪ್ಪಿಸಿಕೊಂಡವರೇ, ಸುಮ್ಮನೆ ನಿಂತುಕೊಳ್ಳದೆ ನಡೆಯಿರಿ. ದೂರವಿರುವಾಗಲು ಸರ್ವೇಶ್ವರನನ್ನು ಸ್ಮರಿಸಿರಿ. ಜೆರುಸಲೇಮನ್ನು ಕುರಿತು ಮನಸ್ಸಾರೆ ಹಂಬಲಿಸಿರಿ.
51 : ‘ನಿಂದೆಯನ್ನು ಕೇಳಿ ನಾವು ಲಜ್ಜೆಗೊಂಡೆವು, ಮ್ಲೇಚ್ಛರು ಸರ್ವೇಶ್ವರನ ಪವಿತ್ರಾಲಯವನ್ನು ಪ್ರವೇಶಿಸಿದ್ದರಿಂದ ಅವಮಾನವು ನಮ್ಮ ಮುಖವನ್ನು ಆವರಿಸಿದೆ,’ ಎನ್ನುತ್ತೀರೋ?
52 : ಸರ್ವೇಶ್ವರನಾದ ನಾನು ಹೇಳುವುದನ್ನು ಕೇಳಿ: “ಬರಲಿವೆ ಬಾಬಿಲೋನಿನ ವಿಗ್ರಹಗಳನ್ನು ದಂಡಿಸುವ ದಿನಗಳು. ಆಗ ಆ ದೇಶದೊಳೆಲ್ಲ ನರಳಾಡುವರು ಗಾಯಗೊಂಡವರು.
53 : ಬಾಬಿಲೋನ್ ಆಕಾಶದ ತನಕ ಬೆಳೆದರೂ ಎತ್ತರವಾದ, ಬಲವಾದ ಕೋಟೆಕಟ್ಟಿ ಭದ್ರಪಡಿಸಿಕೊಂಡರೂ ನನ್ನ ಅಪ್ಪಣೆಯ ಮೇರೆಗೆ ಜನರು ಹಾಳುಮಾಡುವರು; ಅದರ ಮೇಲೆ ಬೀಳುವರು. ಸರ್ವೇಶ್ವರನಾದ ನನ್ನ ನುಡಿ ಇದು.”
54 : “ಇಗೋ ಕೇಳಿಬರುತ್ತಿದೆ ಬಾಬಿಲೋನಿನಿಂದ ಕೂಗಾಟ! ಆ ಬಾಬಿಲೋನಿಯರ ದೇಶದಿಂದ ಮಹಾ ವಿನಾಶದ ಕಿರುಚಾಟ!
55 : ಬಾಬಿಲೋನನ್ನು ನಾನು ಹಾಳುಮಾಡಿಬಿಡುತ್ತೇನೆ ಅದರ ಸದ್ದುಗದ್ದಲವನ್ನು ಅಡಗಿಸಿಬಿಡುತ್ತೇನೆ. ಮಹಾ ಜಲಪ್ರವಾಹಗಳು ಭೋರ್ಗರೆಯುವಂತೆ ಅಲೆ ಅಲೆಯಾಗಿ ಬಂದ ಶತ್ರುಗಳು ಘೋಷಿಸಿ ಆರ್ಭಟಿಸುತ್ತಿದ್ದಾರೆ.
56 : ವಿನಾಶಕಾರನು ಬಂದೆರಗಿದ್ದಾನೆ ಬಾಬಿಲೋನಿನ ಮೇಲೆ ಅದರ ಶೂರರೋ ಸೆರೆಯಾಗಿಬಿಟ್ಟಿದ್ದಾರೆ ಅವರ ಬಿಲ್ಲುಗಳೋ ಮುರಿದುಹೋಗಿವೆ. ಸರ್ವೇಶ್ವರನು ಮುಯ್ಯಿತೀರಿಸುವ ದೇವರು ಆತ ಪ್ರತಿಕ್ರಿಯೆ ವ್ಯಕ್ತಪಡಿಸದೆ ಇರನು.
57 : ಬಾಬಿಲೋನಿನ ರಾಜ್ಯಪಾಲರು, ಮಂತ್ರಿಗಳು, ಅಧಿಪತಿಗಳು, ಅಧಿಕಾರಿಗಳು, ಯೋಧರು, ಇವರೆಲ್ಲರಿಗೆ ತಲೆಗೇರುವ ತನಕ ಕುಡಿಸುವೆನು. ಅವರು ಎಂದೆಂದಿಗೂ ಎಚ್ಚರಗೊಳ್ಳದೆ ಚಿರನಿದ್ರೆ ಮಾಡುವರು ಎನ್ನುತ್ತಾರೆ ಸೇನಾಧೀಶ್ವರ ಸರ್ವೇಶ್ವರನೆಂಬ ರಾಜಾಧಿರಾಜರು.”
58 : ಸೇನಾಧೀಶ್ವರ ಸರ್ವೇಶ್ವರ ಹೀಗೆನ್ನುತ್ತಾರೆ: ಬಾಬಿಲೋನಿನ ದೊಡ್ಡ ಪೌಳಿಗೋಡೆ ಪೂರ್ಣವಾಗಿ ನೆಲಸಮವಾಗುವುದು. ಅದರ ಉನ್ನತ ದ್ವಾರಗಳು ಬೆಂಕಿಯಿಂದ ಸುಟ್ಟುಹೋಗುವುವು ರಾಷ್ಟ್ರಗಳು ದುಡಿದದ್ದು ಬೆಂಕಿಗೆ ತುತ್ತಾಗುವುದು.”
59 : ಮಸ್ಸೇಯನ ಮೊಮ್ಮಗನೂ ನೇರೀಯನ ಮಗನೂ ಆದ ಸೆರಾಯನು ಜುದೇಯದ ಅರಸ ಚಿದ್ಕೀಯನ ಆಳ್ವಿಕೆಯ ನಾಲ್ಕನೆಯ ವರ್ಷದಲ್ಲಿ ಚಿದ್ಕೀಯನೊಡನೆ ಬಾಬಿಲೋನಿಗೆ ಪ್ರಯಾಣಮಾಡಿದನು. ಆಗ ಪ್ರವಾದಿ ಯೆರೆಮೀಯನು ಸೆರಾಯನಿಗೆ ಒಂದು ಅಪ್ಪಣೆಯನ್ನು ಕೊಟ್ಟನು.
60 : ಸೆರಾಯನು ಸರಬರಾಯಿನ ಕಾರಬಾರಿ. ಯೆರೆಮೀಯನು ಬಾಬಿಲೋನಿಗೆ ಸಂಭವಿಸತಕ್ಕ ಎಲ್ಲ ಕೇಡಿನ ವಿಷಯವನ್ನು, ಅಂದರೆ ಬಾಬಿಲೋನಿನ ಸಂಬಂಧವಾಗಿ ಹಿಂದೆ ಲಿಖಿತವಾದ ಎಲ್ಲ ಸಂಗತಿಗಳನ್ನು, ಒಂದು ಗ್ರಂಥವಾಗಿ ಬರೆದು ಸೆರಾಯನಿಗೆ ಹೀಗೆಂದು ಹೇಳಿದನು:
61 : “ನೋಡು, ನೀನು ಬಾಬಿಲೋನನ್ನು ತಲುಪಿದ ಮೇಲೆ ಈ ಮಾತುಗಳನ್ನೆಲ್ಲ ತಕ್ಕವರಿಗೆ ಓದಿ ಹೇಳು.
62 : ಬಳಿಕ, ‘ಸರ್ವೇಶ್ವರಾ, ನೀವು ಈ ಸ್ಥಳವನ್ನು ನಿರ್ಮೂಲಮಾಡಲು ಉದ್ದೇಶಿಸಿ, ಇದು ಜನರಿಗೂ ಜಾನುವಾರುಗಳಿಗೂ ನೆಲೆಯಾಗದೆ ಸದಾಕಾಲ ಹಾಳಾಗಿಯೇ ಉಳಿಯಲಿ ಎಂದು ನುಡಿದಿದ್ದೀರಲ್ಲಾ!’ ಎಂದು ಅರಿಕೆಮಾಡು.
63 : ಈ ಸುರುಳಿಯನ್ನು ಓದಿ ಮುಗಿಸಿದ ಮೇಲೆ ಇದಕ್ಕೆ ಕಲ್ಲುಕಟ್ಟಿ ಯೂಫ್ರೆಟಿಸ್ ನದಿಯ ಮಧ್ಯೆ ಎಸೆದುಬಿಡು.
64 : ಆಮೇಲೆ, ‘ಸರ್ವೇಶ್ವರ ಸ್ವಾಮಿ ಬಾಬಿಲೋನಿಗೆ ಬರಮಾಡುವ ವಿಪತ್ತಿನಿಂದ ಈ ನಗರ ಹೀಗೆಯೇ ಮುಳುಗುವುದು, ಮತ್ತೆ ಏಳದು,’ ಎಂದು ಹೇಳು.” ಇಲ್ಲಿಗೆ ಯೆರೆಮೀಯನ ಪ್ರವಾದನೆ ಮುಗಿಯಿತು.