పరిశుద్ధ గ్రంథము
ಹಳೆಯ ಒಡಂಬಡಿಕೆ
1 ಪೂರ್ವಕಾಲದ ಇತಿಹಾಸ
28ನೇ ಅಧ್ಯಾಯ
1 : ದಾವೀದನು ಇಸ್ರಯೇಲರ ಎಲ್ಲ ಪದಾಧಿಕಾರಿಗಳನ್ನು ಅಂದರೆ, ಕುಲ ಅಧ್ಯಕ್ಷರುಗಳು, ಅರಸನ ಸೇವೆಮಾಡುತ್ತಿದ್ದ ವರ್ಗನಾಯಕರು, ಸಹಸ್ರಾಧಿಪತಿಗಳು, ಶತಾಧಿಪತಿಗಳು, ಅರಸನ ದನಕುರಿ ಮೊದಲಾದ ಸೊತ್ತಿನ ಮೇಲ್ವಿಚಾರಕರು, ರಾಜಪುತ್ರ ಪಾಲಕರು, ಕಂಚುಕಿಗಳು, ರಣವೀರರು ಹೀಗೆ ಎಲ್ಲ ಅಧಿಕಾರಿಗಳನ್ನು ಜೆರುಸಲೇಮಿಗೆ ಕರೆಸಿದನು.
2 : ಅವರು ಕೂಡಿಬಂದಾಗ ಅರಸ ದಾವೀದನು ಎದ್ದು ನಿಂತು ಅವರಿಗೆ, “ನನ್ನ ಸಹೋದರರೇ, ಪ್ರಜೆಗಳೇ, ಕೇಳಿ; ಸರ್ವೇಶ್ವರನ ನಿಬಂಧನ ಮಂಜೂಷಕ್ಕಾಗಿ ಹಾಗೂ ನಮ್ಮ ದೇವರ ಪಾದಪೀಠಕ್ಕಾಗಿ ಆಲಯವನ್ನು ಕಟ್ಟಿಸಬೇಕೆಂದು ಮನಸ್ಸುಮಾಡಿ ಎಲ್ಲವನ್ನೂ ಸಿದ್ಧಪಡಿಸಿದೆ.
3 : ಆಗ ದೇವರು ನನಗೆ, ‘ನೀನು ಮಹಾಯುದ್ಧಗಳನ್ನು ನಡೆಸಿ, ಬಹಳ ರಕ್ತವನ್ನು ಸುರಿಸಿದವನು; ನನ್ನ ಹೆಸರಿಗೆ ನೀನು ಆಲಯವನ್ನು ಕಟ್ಟಿಸಬಾರದು,’ ಎಂದು ಹೇಳಿದರು.
4 : “ಇಸ್ರಯೇಲ್ ದೇವರಾದ ಸರ್ವೇಶ್ವರ ನನ್ನ ತಂದೆಯ ಮನೆಯವರೆಲ್ಲರಲ್ಲಿ ನನ್ನನ್ನೇ ಸದಾ ಇಸ್ರಯೇಲರ ಅರಸನಾಗಿರುವುದಕ್ಕೆ ಆರಿಸಿಕೊಂಡರು; ಯೆಹೂದಕುಲ ರಾಜಕುಲವಾಗಬೇಕೆಂದು ನೇಮಿಸಿ ಆ ಕುಲದಲ್ಲಿ ನನ್ನ ತಂದೆಯ ಕುಟುಂಬವನ್ನು ಆರಿಸಿಕೊಂಡರು. ನನ್ನ ತಂದೆಯ ಎಲ್ಲ ಮಕ್ಕಳಲ್ಲಿ ನನ್ನನ್ನೇ ಮೆಚ್ಚಿ, ಇಸ್ರಯೇಲರೆಲ್ಲರ ಅರಸನನ್ನಾಗಿ ಮಾಡಿದರು.
5 : ನನಗೆ ದಯಪಾಲಿಸಿದ ಅನೇಕ ಮಕ್ಕಳಲ್ಲಿ ನನ್ನ ಮಗ ಸೊಲೊಮೋನನನ್ನು ಸರ್ವೇಶ್ವರನ ರಾಜ್ಯಸಿಂಹಾಸನವಾಗಿರುವ ಇಸ್ರಯೇಲ್ ಸಿಂಹಾಸನದ ಮೇಲೆ ಕುಳ್ಳಿರಿಸುವುದಕ್ಕೆ ಆರಿಸಿಕೊಂಡರು.
6 : ‘ನಿನ್ನ ಮಗ ಸೊಲೊಮೋನನೇ ನನ್ನ ಆಲಯವನ್ನೂ ಅದರ ಪ್ರಾಕಾರಗಳನ್ನೂ ಕಟ್ಟಿಸುವನು. ಅವನು ನನಗೆ ಮಗನಾಗಿ ಇರಬೇಕೆಂದು ಅವನನ್ನು ಆರಿಸಿಕೊಂಡಿದ್ದೇನೆ; ನಾನು ಅವನಿಗೆ ತಂದೆಯಾಗಿ ಇರುವೆನು.
7 : ಅವನು ಈಗಿನಂತೆ ಯಾವಾಗಲೂ ನನ್ನ ಆಜ್ಞಾವಿಧಿಗಳನ್ನು ಕೈಗೊಂಡು ನಡೆಯುವುದಾದರೆ ಅವನ ರಾಜ್ಯವನ್ನು ಸದಾಕಾಲವೂ ಸ್ಥಿರಪಡಿಸುವೆನು’ ಎಂದು ಅವರು ನನಗೆ ಹೇಳಿದ್ದಾರೆ.
8 : “ನಿಮ್ಮ ದೇವರಾದ ಸರ್ವೇಶ್ವರನ ಎಲ್ಲಾ ಆಜ್ಞೆಗಳನ್ನು ಧ್ಯಾನಿಸಿ ಕೈಗೊಳ್ಳಬೇಕೆಂದು ಸರ್ವೇಶ್ವರನ ಸಮಾಜವಾದ ಸಮಸ್ತ ಇಸ್ರಯೇಲರ ಮುಂದೆ, ನಮ್ಮ ದೇವರಿಗೆ ಕೇಳಿಸುವಂತೆ, ನಿಮ್ಮನ್ನು ಎಚ್ಚರಿಸುತ್ತೇನೆ. ಹಾಗೆ ಮಾಡಿದರೆ ಈ ಒಳ್ಳೆಯ ನಾಡು ಸದಾಕಾಲ ನಿಮ್ಮ ಮತ್ತು ನಿಮ್ಮ ಸಂತಾನದವರ ಸೊತ್ತಾಗಿರುವುದು.
9 : “ನನ್ನ ಮಗ ಸೊಲೊಮೋನನೇ, ನೀನಂತೂ ನಿನ್ನ ತಂದೆಯ ದೇವರನ್ನು ಅರಿತುಕೊಂಡು ಪೂರ್ಣಹೃದಯದಿಂದ ಹಾಗೂ ಮನಸ್ಸಂತೋಷದಿಂದ ಅವರೊಬ್ಬರಿಗೇ ಸೇವೆ ಸಲ್ಲಿಸು. ಸರ್ವೇಶ್ವರನು ಎಲ್ಲಾ ಹೃದಯಗಳನ್ನು ಶೋಧಿಸುವವರೂ ಎಲ್ಲಾ ಮನಸ್ಸಂಕಲ್ಪಗಳನ್ನು ಬಲ್ಲವರೂ ಆಗಿದ್ದಾರೆ. ನೀನು ಅವರನ್ನು ಆರಿಸಿದರೆ ಅವರು ನಿನಗೆ ಸಿಗುವರು; ಅವರನ್ನು ಬಿಟ್ಟರೆ ನಿನ್ನನ್ನು ಶಾಶ್ವತವಾಗಿ ತಳ್ಳಿಬಿಡುವರು.
10 : ಆದುದರಿಂದ ಎಚ್ಚರಿಕೆ! ಸರ್ವೇಶ್ವರ ತನಗೋಸ್ಕರ ಪವಿತ್ರಾಲಯವನ್ನು ಕಟ್ಟಬೇಕೆಂದು ನಿನ್ನನ್ನು ಆರಿಸಿಕೊಂಡಿದ್ದಾರೆ; ಧೈರ್ಯದಿಂದ ಕೆಲಸಕ್ಕೆ ಕೈಹಚ್ಚು,” ಎಂದನು.
11 : ತರುವಾಯ ದಾವೀದನು ತನ್ನ ಮಗ ಸೊಲೊಮೋನನಿಗೆ ದೇವಾಲಯದ ಮಂಟಪ, ಉಗ್ರಾಣಗಳು, ಭಂಡಾರಗಳು, ಮೇಲುಪ್ಪರಿಗೆಗಳು, ಒಳಗಣ ಕೋಣೆಗಳು, ಕೃಪಾಸನಮಂದಿರ, ಇವುಗಳ ನಕ್ಷೆಯನ್ನು ಕೊಟ್ಟನು. ಸರ್ವೇಶ್ವರನ ಆಲಯದ ಅಂಗಳಗಳು,
12 : ಸುತ್ತಣ ಕೋಣೆಗಳು, ದೇವಾಲಯದ ಭಂಡಾರಗಳು, ಪ್ರತಿಷ್ಠಿತ ವಸ್ತುಗಳ ಭಂಡಾರಗಳು ಇವುಗಳ ವಿಷಯವಾಗಿ ವಿವರಿಸಿದನು.
13 : ಯಾಜಕರ ಮತ್ತು ಲೇವಿಯರ ವರ್ಗಗಳು, ಸರ್ವೇಶ್ವರನ ಆಲಯದಲ್ಲಿ ನಡೆಯ ತಕ್ಕ ಎಲ್ಲಾ ಆರಾಧನೆ,
14 : ಆರಾಧನೆಯ ಎಲ್ಲಾ ಸಾಮಗ್ರಿಗಳು, ಇವುಗಳ ಬಗ್ಗೆ ತಾವು ನಿರ್ಣಯಿಸಿಕೊಂಡದ್ದೆಲ್ಲವನ್ನೂ ವಿವರವಾಗಿ ತಿಳಿಸಿದನು.
15 : ಇದಲ್ಲದೆ, ಆರಾಧನೆಯ ಆಯಾ ಆಚಾರಗಳಲ್ಲಿ ಉಪಯೋಗಿಸಬೇಕಾದ ಎಲ್ಲ ಸಾಮಾನುಗಳ ಬೆಳ್ಳಿ, ಬಂಗಾರದ ತೂಕ ಅಂದರೆ, ಬಂಗಾರದ ಹಣತೆಗಳಿರುವ ಬಂಗಾರದ ಪ್ರತಿಯೊಂದು ದೀಪಸ್ತಂಭದ ತೂಕ, ಬೇರೆ ಬೇರೆ ಕೆಲಸಗಳಿಗೆ ಉಪಯೋಗವಾಗುವ ಪ್ರತಿಯೊಂದು ಬೆಳ್ಳಿಯ ದೀಪಸ್ತಂಭದ ಮತ್ತು ಅದರ ಹಣತೆಗಳ ತೂಕ,
16 : ಮೀಸಲು ರೊಟ್ಟಿಗಳನ್ನಿಡುವ ಪ್ರತಿಯೊಂದು ಮೇಜಿಗೆ ಉಪಯೋಗಿಸಬೇಕಾದ ಬಂಗಾರದ ತೂಕ, ಬೆಳ್ಳಿಯ ಮೇಜುಗಳ ಬೆಳ್ಳಿಯ ತೂಕ,
17 : ಚೊಕ್ಕ ಬಂಗಾರದ ಮುಳ್ಳು, ಬೋಗುಣಿ, ಹೂಜಿಗಳ ಮತ್ತು ಬೆಳ್ಳಿಬಂಗಾರದ ಆಯಾ ಪಾತ್ರೆಗಳ ತೂಕ,
18 : ಧೂಪವೇದಿಗೆ ಉಪಯೋಗಿಸಬೇಕಾದ ಚೊಕ್ಕಬಂಗಾರದ ತೂಕ ಎಷ್ಟೆಷ್ಟು ಇರಬೇಕೆಂಬುದನ್ನು ವಿವರಿಸಿದನು. ಹರಡಿದ ರೆಕ್ಕೆಗಳಿಂದ ಸರ್ವೇಶ್ವರನ ನಿಬಂಧನ ಮಂಜೂಷವನ್ನು ಮರೆಮಾಡುವ ಬಂಗಾರದ ಕೆರೂಬಿವಾಹನದ ನಕ್ಷೆಯನ್ನು ಕೊಟ್ಟನು.
19 : ಆ ನಕ್ಷೆಗಳಲ್ಲಿ ಸೂಚಿಸಿದ ಎಲ್ಲಾ ಕೆಲಸಗಳ ಕುರಿತ ಜ್ಞಾನ ತನಗೆ ಸರ್ವೇಶ್ವರನ ಲೇಖನದಿಂದಲೇ ಪ್ರಾಪ್ತವಾಯಿತೆಂದು ಹೇಳಿದನು.
20 : ಆಮೇಲೆ ದಾವೀದನು ತನ್ನ ಮಗ ಸೊಲೊಮೋನನಿಗೆ, “ಸ್ಥಿರಚಿತ್ತನಾಗಿರು, ಧೈರ್ಯದಿಂದಿರು, ಕೆಲಸಕ್ಕೆ ಕೈಹಾಕು; ಅಂಜಬೇಡ, ಕಳವಳಗೊಳ್ಳಬೇಡ. ನನ್ನ ದೇವರಾಗಿರುವ ಸರ್ವೇಶ್ವರಸ್ವಾಮಿ ನಿನ್ನೊಂದಿಗೆ ಇರುತ್ತಾರೆ; ಅವರು ತಮ್ಮ ಆಲಯದ ಎಲ್ಲಾ ಕೆಲಸ ತೀರುವವರೆಗೂ ನಿನ್ನನ್ನು ಕೈಬಿಡುವುದಿಲ್ಲ, ತೊರೆಯುವುದಿಲ್ಲ.
21 : ಇಗೋ, ಯಾಜಕರ ಮತ್ತು ಲೇವಿಯರ ವರ್ಗಗಳವರು ಅಗತ್ಯವಾದ ಎಲ್ಲ ದೇವಾಲಯ ಸಂಬಂಧ ಕೆಲಸವನ್ನು ಮಾಡುವುದಕ್ಕೆ ಸಿದ್ಧರಾಗಿದ್ದಾರೆ. ಯಾವ ಕೆಲಸವಿದ್ದರೂ ಎಲ್ಲವನ್ನೂ ಜಾಣತನದಿಂದ ಮಾಡುವುದಕ್ಕೆ ಸಿದ್ಧಮನಸ್ಸುಳ್ಳವರು ನಿನ್ನ ಹತ್ತಿರ ಇದ್ದಾರೆ. ಅಧಿಪತಿಗಳೂ ಎಲ್ಲಾ ಪ್ರಜೆಗಳೂ ನಿನ್ನ ಆಜ್ಞೆಗೆ ವಿಧೇಯರಾಗಿರುವರು,” ಎಂದು ಹೇಳಿದನು.