పరిశుద్ధ గ్రంథము
ಹಳೆಯ ಒಡಂಬಡಿಕೆ
ಕೀರ್ತನೆಗಳು
20ನೇ ಅಧ್ಯಾಯ
1 : ಸಂಕಟ ಬಂದಾಗ, ಪ್ರಭು ನಿನಗೆ ಕಿವಿಗೊಡಲಿ I ಯಕೋಬ ದೇವರ ನಾಮ, ನಿನ್ನ ಕಾಪಾಡಲಿ II
2 : ನೆರವು ನೀಡಲಾತ ಪವಿತ್ರಾಲಯದಿಂದ I ನಿನಗೊತ್ತಾಸೆ ಬರಲಿ, ಸಿಯೋನ್ ಶಿಖರದಿಂದ II
3 : ನೆನಸಿಕೊಳ್ಳಲಾತ ನೀನರ್ಪಿಸಿದ ಕಾಣಿಕೆಗಳನು I ಒಲಿದು ಸ್ವೀಕರಿಸಲಿ, ನೀನಿತ್ತಾ ಯಜ್ಞಬಲಿಗಳನು II
4 : ನೆರವೇರಿಸಲಿ ಆತ ನಿನ್ನಿಷ್ಟಾರ್ಥಗಳನು I ಪೂರೈಸಲಿ ಪ್ರಭು ನಿನ್ನಭೀಪ್ಸೆಗಳೆಲ್ಲವನು II
5 : ಜಯಘೋಷ ಮಾಡುವೆವು, ನಿನ್ನ ಗೆಲುವಿನ ನಿಮಿತ್ತ I ಧ್ವಜ ಹಾರಿಪೆವು, ಎಮ್ಮ ದೇವನ ನಾಮದ ನಿಮಿತ್ತ I ನಿನ್ನ ಕೋರಿಕೆಗಳೆಲ್ಲವನು, ಕೈಗೂಡಿಸಲಿ ಆತ II
6 : ಒದಗುವನು ಪ್ರಭುವು ಅಭಿಷಿಕ್ತನಿಗೆ I ಓಗೊಡುವನು ಸ್ವರ್ಗದಿಂದಾತನಿಗೆ I ಗೆಲುವನೀವನು ಭುಜಬಲದಿಂದವನಿಗೆ II
7 : ಹೆಚ್ಚಳಪಡುತಿಹರು ಕೆಲವರು ರಥಗಳಲಿ, ಹಲವರು ಅಶ್ವಗಳಲಿ I ಹೆಮ್ಮೆಪಡುತಿಹೆವು ನಾವಾದರೋ, ನಮ್ಮ ದೇವರ ನಾಮದಲಿ II
8 : ಕೆಳಗಿಳಿವರವರು, ಕುಸಿದು ಬೀಳುವರವರು I ಏಳುವೆವು, ಸ್ಥಿರನಿಲ್ಲುವೆವು ನಾವೆಲ್ಲರು II
9 : ಜಯವ ನೀಡು ಪ್ರಭು, ಅರಸನಿಗೆ I ಕಿವಿಗೊಡು ನೀ, ನಮ್ಮ ಪ್ರಾರ್ಥನೆಗೆ II