पवित्र बाइबिल
ಹಳೆಯ ಒಡಂಬಡಿಕೆ
ಕೀರ್ತನೆಗಳು
50ನೇ ಅಧ್ಯಾಯ
1 : ದೇವಾಧಿದೇವನಾದ ಪ್ರಭುವಿನ ನುಡಿ ಇಡೀ ಜಗಕೆ I ಆತನ ಸನ್ನಿಧಿಗೆ ಕರೆ, ಪೂರ್ವದಿಂದ ಪಶ್ಚಿಮದವರೆಗೆ II
2 : ಸುರಸುಂದರವಾದ ಸಿಯೋನಿನಿಂದ I ಉದಯಸಿಹನು ದೇವನು ಶೋಭೆಯಿಂದ II
3 : ಬರುತಿಹನು ನಮ್ಮ ದೇವನು, ಇನ್ನು ಸುಮ್ಮನಿರನಾತ I ಆತನ ಮುಂದೆ ಬೆಂಕಿಮಳೆ, ಸುತ್ತಲು ಚಂಡಮಾರುತ II
4 : ಭೂಮ್ಯಾಕಾಶಗಳನು ಕರೆಯುತಿಹನು I ಪ್ರಜೆಗೆ ವಿಧಿಪಾ ತೀರ್ಪನು ನೋಡಲೆಂದು II
5 : “ಬಲಿ ಮೂಲಕ ಒಡಂಬಡಿಕೆ ಗೈದ ಭಕ್ತರನು I ಸಭೆ ಸೇರಿಸಿ ಇಲ್ಲೆನ್ನ ಮುಂದೆ,” ಎನ್ನುತಿಹನು II
6 : ದೇವನೇ ಸತ್ಯಸ್ವರೂಪಿ, ನ್ಯಾಯಾಧಿಪತಿ I ಇದನು ಸಾರಿ ಹೇಳಲಿ ಆಕಾಶ ಪ್ರಕೃತಿ II
7 : “ಎಲೈ ಪ್ರಜೆ ಇಸ್ರಯೆಲ್, ನಾನು ನಿನ್ನ ದೇವರು I ಕಿವಿಗೊಟ್ಟು ಆಲಿಸು ನಾನು ನಿನ್ನ ವಿರುದ್ಧ ವಾದಿಸುವುದನು II
8 : ನಿನ್ನ ಬಲಿಯರ್ಪಣೆಯನು ನಾ ತಪ್ಪೆಣಿಸುತಿಲ್ಲ I ನನ್ನ ಮುಂದಿವೆ ಸತತ ನಿನ್ನ ದಹನಬಲಿಗಳೆಲ್ಲ II
9 : ನಾ ಕೋರುವುದು ನಿನ್ನ ಮನೆಯ ಹೋರಿಗಳನಲ್ಲ I ನಾ ಬಯಸುವುದು ನಿನ್ನ ಮಂದೆಯ ಹೋತಗಳನಲ್ಲ II
10 : ಕಾಡಿನಲ್ಲಿರುವ ಮೃಗಜಂತುಗಳೆಲ್ಲ ನನ್ನವೆ I ಗುಡ್ಡದಲ್ಲಿರುವ ಸಹಸ್ರಾರು ಪಶುಗಳು ನನ್ನವೆ II
11 : ನಾ ಬಲ್ಲೆ ಆಕಾಶದಲ್ಲಿ ಹಾರಾಡುವ ಪಕ್ಷಿಗಳನ್ನೆಲ್ಲ I ನನಗೆ ಸೇರಿವೆ ಅಡವಿಯಲಿ ಓಡಾಡುವ ಜೀವಜಂತುಗಳೆಲ್ಲ II
12 : ನನಗೆ ಹಸಿವಾದರೆ, ನಿಮಗೆ ತಿಳಿಸಬೇಕಿಲ್ಲ I ಜಗವು, ಅದರದೆಲ್ಲವು ನನ್ನವಾಗಿವೆಯಲ್ಲಾ II
13 : ಹೋರಿಗಳ ಮಾಂಸವನು ನಾ ಭುಜಿಸುವುದುಂಟೆ? I ಹೋತಗಳ ರಕ್ತವನು ನಾ ಕುಡಿಯುವುದುಂಟೇ? II
14 : ದೇವರಿಗೆ ಧನ್ಯವಾದವೆ ನಿನ್ನ ಬಲಿಯರ್ಪಣೆಯಾಗಿರಲಿ I ಪರಾತ್ಪರನಿಗೆ ಮಾಡಿದ ಹರಕೆಗಳು ಸಮರ್ಪಿತವಾಗಲಿ II
15 : ಕಷ್ಟದಲಿ ಮೊರೆಯಿಡೆ, ನೆರವಾಗುವೆ I ಆಗ ನೀ ನನ್ನನು ಕೊಂಡಾಡುವೆ II
16 : ದುರ್ಜನರಿಗೆ ದೇವ ಹೇಳುವನು ಇಂತೆಂದು I “ನನ್ನ ವಿಧಿಗಳ ಪಠಿಸುವ ಹಕ್ಕು ನಿಮಗೆಂತು? I ನನ್ನ ನಿಬಂಧನೆಗಳ ನೀವು ಜಪಿಸುವುದೆಂತು?” II
17 : ನನ್ನ ಮಾತುಗಳನು ನೀವು ತಾತ್ಸಾರ ಮಾಡುತ್ತೀರಿ I ನನ್ನ ತಿದ್ದುಪಾಟುಗಳನು ನೀವು ಧಿಕ್ಕರಿಸುತ್ತೀರಿ II
18 : ಕಂಡೊಡನೆ ಬೇಕು ನಿಮಗೆ ಚೋರರ ಕೂಟ I ಸಾಕಾಗಿಲ್ಲ ನಿಮಗೆ ಜಾರರ ಒಡನಾಟ II
19 : ನಿಮ್ಮ ಬಾಯನ್ನಾಳುತ್ತದೆ ಕೆಡುಕುತನ I ನಿಮ್ಮ ನಾಲಿಗೆ ನೇಯುತ್ತದೆ ಕಪಟತನ II
20 : ಸೋದರನಿಗೆ ವಿರುದ್ಧ ಸುಳ್ಳಾಡಲು ಕೂರುತ್ತೀರಿ I ಒಡಹುಟ್ಟಿದವರಿಗೆ ಎದುರಾಗಿ ಚಾಡಿಹೇಳುತ್ತೀರಿ II
21 : ನೀವಿದನ್ನೆಲ್ಲ ಮಾಡಿದರೂ ನಾ ಮೌನಿಯೆನ್ನುವಿರಾ? I ನಾ ಕೂಡ ನಿಮ್ಮಂಥವನು ಎಂದುಕೊಂಡಿರಾ? II ನಿಮ್ಮ ದುಷ್ಟತನವನು ಕಣ್ಮುಂದೆಯಿಡುವೆನು I ನೀವು ಅಪರಾಧಿಗಳೆಂದು ಸ್ಥಾಪಿಸದೆಬಿಡೆನು II
22 : ದೇವನ ನೆನೆಯದವರೇ, ನೀಡಿರಿ ಗಮನವನು I ಇಲ್ಲವಾದರೆ ಛಿನ್ನಛಿನ್ನವಾಗಿಸಿಬಿಟ್ಟೇನು I ನನ್ನ ಕೈಯಿಂದ ತಪ್ಪಿಸುವವರಾರು ನಿಮ್ಮನು? II
23 : ಧನ್ಯವಾದದ ಬಲಿಯನರ್ಪಿಸುವವನೇ ನನಗೆ ಸನ್ಮಾನಿತನು I ಸನ್ಮಾರ್ಗ ಹಿಡಿದವನಿಗೆ ತೋರುವೆ ಪರಮ ಜೀವೋದ್ಧಾರವನು II