ಕನ್ನಡ ಸತ್ಯವೇದವು
ಹೊಸ ಒಡಂಬಡಿಕೆ
ಹಿಬ್ರಿಯರಿಗೆ
10ನೇ ಅಧ್ಯಾಯ
- Verse 1: ಧರ್ಮಶಾಸ್ತ್ರವು ಬರಲಿದ್ದ ಸೌಭಾಗ್ಯದ ಛಾಯೆಯೇ ಹೊರತು ಅದರ ನಿಜಸ್ವರೂಪವಲ್ಲ. ವರ್ಷವರ್ಷವೂ ನಿರಂತರವಾಗಿ ಅದೇ ಬಲಿಗಳು ಅರ್ಪಿತವಾಗುತ್ತಿವೆ. ಹೀಗಿರುವಲ್ಲಿ, ದೇವರನ್ನು ಅರಸಿ ಬರುತ್ತಿರುವವರನ್ನು ಇಂಥ ಬಲಿಗಳಿಂದ ಸಿದ್ಧಿಗೆ ತರಲು ಹೇಗೆ ತಾನೆ ಸಾಧ್ಯ?
- Verse 2: ಹಾಗೆ ಸಿದ್ಧಿಗೆ ತರಲು ಸಾಧ್ಯವಿದ್ದಿದ್ದರೆ ಬಲಿಯರ್ಪಣೆಯು ಎಂದೋ ನಿಂತುಹೋಗುತ್ತಿತ್ತು. ಏಕೆಂದರೆ, ಆಗ ಆರಾಧಕರು ಒಮ್ಮೆಗೇ ಶುದ್ಧಿಹೊಂದಿ ತಾವು ಪಾಪಿಗಳೆಂಬ ಮನವರಿಕೆಯೇ ಇಲ್ಲದೆ ಇರುತ್ತಿದ್ದರು.
- Verse 3: ಬದಲಿಗೆ, ಪ್ರತಿವರ್ಷವೂ ಸಮರ್ಪಿಸಲಾಗುವ ಬಲಿಯರ್ಪಣೆಗಳು ಪಾಪನಿವಾರಣೆ ಆಗದ್ದನ್ನು ಜ್ಞಾಪಕಕ್ಕೆ ತರುತ್ತವೆ.
- Verse 4: ಏಕೆಂದರೆ, ಹೋತ, ಹೋರಿಗಳ ರಕ್ತದಿಂದ ಪಾಪನಿವಾರಣೆ ಅಸಾಧ್ಯ.
- Verse 5: ಆದ್ದರಿಂದಲೇ ಭೂಲೋಕಕ್ಕೆ ಬರಲಿದ್ದ ಕ್ರಿಸ್ತಯೇಸು ದೇವರಿಗೆ ಇಂತೆಂದರು: “ಬಲಿಯರ್ಪಣೆಗಳೂ ಕಾಣಿಕೆಗಳೂ ನಿಮಗೆ ಬೇಡವಾದವು ಎಂದೇ ಅಣಿಮಾಡಿ ಕೊಟ್ಟಿರಿ ನನಗೆ ದೇಹವೊಂದನು.
- Verse 6: ಸರ್ವಾಂಗ ಹೋಮಗಳೂ ಪಾಪಪರಿಹಾರಕ ಬಲಿಗಳೂ ನಿಮಗೆ ತರಲಿಲ್ಲ ತೃಪ್ತಿಯನು.
- Verse 7: ಆಗ ಇಂತೆಂದೆ ನಾನು : ಗ್ರಂಥದ ಸುರುಳಿಯಲಿ ನನ್ನನ್ನು ಕುರಿತು ಬರೆದಿರುವಂತೆ, ಓ ದೇವಾ, ಇಗೋ ನಾ ಬಂದೆ ನಿನ್ನ ಚಿತ್ತವನು ನೆರವೇರಿಸಲೆಂದೇ.”
- Verse 8: ಧರ್ಮಶಾಸ್ತ್ರದ ವಿಧಿಗನುಸಾರ ಅರ್ಪಿಸಲಾಗುತ್ತಿದ್ದುವಾದರೂ “ಬಲಿಯರ್ಪಣೆಗಳು, ಕಾಣಿಕೆಗಳು, ದಹನಬಲಿಗಳು ಮತ್ತು ಪಾಪಪರಿಹಾರಕಬಲಿಗಳು ನಿಮಗೆ ಬೇಡವಾದವು; ಇವು ಯಾವುವು ನಿಮಗೆ ತರಲಿಲ್ಲ ತೃಪ್ತಿಯನು,” ಎಂದು ಮೊದಲು ಹೇಳುತ್ತಾರೆ.
- Verse 9: ಅನಂತರ, “ಇಗೋ, ನಾ ಬಂದೆ ನಿಮ್ಮ ಚಿತ್ತವನು ನೆರವೇರಿಸಲೆಂದೇ,” ಎನ್ನುತ್ತಾರೆ. ಹೀಗೆ ಹೊಸದನ್ನು ಸ್ಥಾಪಿಸಲು ಹಳೆಯದನ್ನು ರದ್ದುಮಾಡಿದ್ದಾರೆ.
- Verse 10: ಯೇಸುಕ್ರಿಸ್ತರು ಒಮ್ಮೆಗೇ ಎಲ್ಲಾ ಕಾಲಕ್ಕೂ ತಮ್ಮ ದೇಹವನ್ನು ಸಮರ್ಪಿಸಿ, ದೇವರ ಚಿತ್ತವನ್ನು ನೆರವೇರಿಸಿದ್ದರಿಂದಲೇ ನಾವು ಪುನೀತರಾಗಿದ್ದೇವೆ.
- Verse 11: ಪ್ರತಿಯೊಬ್ಬ ಯಾಜಕನು ಅನುದಿನವೂ ತನ್ನ ಸೇವೆಯನ್ನು ನಿರ್ವಹಿಸುತ್ತಾನೆ. ಆದರೆ ಇವುಗಳಿಂದ ಎಂದಿಗೂ ಪಾಪನಿವಾರಣೆ ಆಗದು.
- Verse 12: ಕ್ರಿಸ್ತಯೇಸು ಪಾಪನಿವಾರಣೆಗೆಂದು ಎಲ್ಲಾ ಕಾಲಕ್ಕೂ ಏಕೈಕ ಬಲಿಯನ್ನು ಅರ್ಪಿಸಿ ದೇವರ ಬಲಪಾರ್ಶ್ವದಲ್ಲಿ ಆಸೀನರಾಗಿದ್ದಾರೆ.
- Verse 13: ಅವರ ಶತ್ರುಗಳು ತಮ್ಮ ಕಾಲಡಿಗೆ ಬರುವತನಕ ಅಲ್ಲೇ ಕಾದಿರುತ್ತಾರೆ.
- Verse 14: ತಾವು ಪುನೀತಗೊಳಿಸಿದವರನ್ನು ಒಂದೇ ಒಂದು ಬಲಿಯರ್ಪಣೆಯಿಂದ ಯೇಸು ನಿರಂತರ ಸಿದ್ಧಿಗೆ ತಂದಿದ್ದಾರೆ.
- Verse 15: ಇದನ್ನು ಕುರಿತು ಪವಿತ್ರಾತ್ಮರು ಕೂಡ ನಮಗೆ ಸಾಕ್ಷಿಕೊಡುತ್ತಾರೆ:
- Verse 16: “ಆ ದಿನಗಳು ಬಂದಮೇಲೆ ನಾನು ಅವರೊಡನೆ ಮಾಡಿಕೊಳ್ಳುವ ಒಡಂಬಡಿಕೆ ಹೀಗಿರುವುದು : ನನ್ನ ಆಜ್ಞೆಗಳನ್ನು ಅವರ ಹೃದಯದಲ್ಲಿ ನಾಟಿಸುವೆನು; ಅವರ ಮನದಲ್ಲಿ ಬರೆಯುವೆನು.” ಎಂದು ಹೇಳಿದ ನಂತರವೇ,
- Verse 17: “ಅವರ ಪಾಪಗಳನ್ನೂ ತಪ್ಪುನೆಪ್ಪುಗಳನ್ನೂ ನೆನಪಿಗೆ ತಂದುಕೊಳ್ಳೆನು,” ಎಂದಿದ್ದಾರೆ.
- Verse 18: ಪಾಪಗಳ ಕ್ಷಮಾಪಣೆಯಾದ ಬಳಿಕ ಪಾಪಪರಿಹಾರಕಬಲಿಯ ಅವಶ್ಯಕತೆ ಇಲ್ಲ.
- Verse 19: ಹೀಗಿರುವಲ್ಲಿ, ಪ್ರಿಯ ಸಹೋದರರೇ, ಯೇಸುಸ್ವಾಮಿ ತಮ್ಮ ದೇಹವೆಂಬ ತೆರೆಯ ಮೂಲಕ ನಮಗೆ ಹೊಸದಾದ ಸಜ್ಜೀವಮಾರ್ಗವನ್ನು ತೆರೆದಿಟ್ಟಿದ್ದಾರೆ.
- Verse 20: ಅದರ ಮೂಲಕ ಗರ್ಭಗುಡಿಯನ್ನು ಧೈರ್ಯದಿಂದ ಪ್ರವೇಶಿಸುವ ಹಕ್ಕು ಅವರ ರಕ್ತಧಾರೆಯಿಂದಲೇ ನಮಗೆ ದೊರೆತಿದೆ.
- Verse 21: ದೇವರ ಮನೆತನದ ಮೇಲೆ ಅಧಿಕಾರವಿರುವ ಶ್ರೇಷ್ಠಯಾಜಕ ನಮಗಿದ್ದಾರೆ.
- Verse 22: ಆದಕಾರಣ, ನಾವು ಕೆಟ್ಟ ಮನಸ್ಸಾಕ್ಷಿಯನ್ನು ತೊರೆದ ಹೃದಯದಿಂದಲೂ ಪುಣ್ಯಜಲದಿಂದ ತೊಳೆದ ದೇಹದಿಂದಲೂ ಕೂಡಿದವರಾಗಿ ಶುದ್ಧ ಅಂತರಂಗದಿಂದಲೂ ಪೂರ್ಣವಿಶ್ವಾಸದಿಂದಲೂ ದೇವರ ಬಳಿಗೆ ಸಾಗೋಣ.
- Verse 23: ಕೊಟ್ಟ ಮಾತನ್ನು ದೇವರು ಮೀರುವುದಿಲ್ಲ. ಆದ್ದರಿಂದ ನಾವು ನಿವೇದಿಸುವ ನಂಬಿಕೆ ನಿರೀಕ್ಷೆಯಲ್ಲಿ ಚಂಚಲರಾಗದೆ ಸದೃಢರಾಗಿರೋಣ.
- Verse 24: ಪರಸ್ಪರ ಹಿತಚಿಂತಕರಾಗಿರೋಣ; ಪ್ರೀತಿಸಬೇಕು, ಒಳಿತನ್ನು ಮಾಡಬೇಕು ಎಂದು ಒಬ್ಬರನ್ನೊಬ್ಬರು ಹುರಿದುಂಬಿಸೋಣ.
- Verse 25: ಸಭೆ ಸೇರುವ ರೂಢಿಯನ್ನು ಕೆಲವರು ಕೈಬಿಟ್ಟಿದ್ದಾರೆ. ನಾವು ಹಾಗೆ ಮಾಡದಿರೋಣ. ನಿಮಗೆ ತಿಳಿದಿರುವಂತೆ ಪ್ರಭು ಪ್ರತ್ಯಕ್ಷರಾಗುವ ದಿನವು ಸಮೀಪಿಸುತ್ತಿರುವುದರಿಂದ ಮತ್ತಷ್ಟು ಹೆಚ್ಚಾಗಿ ಒಬ್ಬರನ್ನೊಬ್ಬರು ಪ್ರೋತ್ಸಾಹಿಸೋಣ.
- Verse 26: ನಾವು ಸತ್ಯವನ್ನು ಅರಿತವರಾದ ಮೇಲೂ ಬೇಕುಬೇಕಾಗಿ ಪಾಪಮಾಡುತ್ತಲೇ ಇದ್ದರೆ, ಪಾಪಪರಿಹಾರಕ್ಕೆ ಇನ್ನು ನಮಗೆ ಬೇರೆ ಯಾವ ಬಲಿಯೂ ಇರುವುದಿಲ್ಲ;
- Verse 27: ಬದಲಿಗೆ, ಅತ್ಯಂತ ಭಯದಿಂದ ಎದುರುನೋಡಬೇಕಾದ ದಂಡನಾತೀರ್ಪು ಹಾಗೂ ದೇವರ ಶತ್ರುಗಳನ್ನು ದಹಿಸುವ ಉಗ್ರಕೋಪಾಗ್ನಿ - ಇವುಗಳು ಮಾತ್ರ ನಮಗೆ ಉಳಿದಿರುತ್ತವೆ.
- Verse 28: ಮೋಶೆಯ ಆಜ್ಞಾವಿಧಿಗಳನ್ನು ಉಲ್ಲಂಘಿಸಿದವನು, ಇಬ್ಬರು ಅಥವಾ ಮೂವರು ಸಾಕ್ಷಿಗಳು ನೀಡುವ ಸಾಕ್ಷ್ಯದ ಆಧಾರದ ಮೇಲೆ ಕರುಣೆಯಿಲ್ಲದೆ ಮರಣದಂಡನೆಗೆ ಗುರಿ ಆಗುತ್ತಾನೆ.
- Verse 29: ಹೀಗಿರುವಲ್ಲಿ, ದೇವರ ಪುತ್ರನನ್ನು ತುಚ್ಛೀಕರಿಸುವವನೂ ತನ್ನನ್ನು ಶುದ್ಧೀಕರಿಸಿದ ಹಾಗು ಒಡಂಬಡಿಕೆಯನ್ನು ಸ್ಥಿರಪಡಿಸುವ ರಕ್ತವನ್ನು ತೃಣೀಕರಿಸುವವನೂ ವರಪ್ರಸಾದವನ್ನು ತರುವ ಪವಿತ್ರಾತ್ಮ ಅವರನ್ನು ತಿರಸ್ಕರಿಸುವವನೂ ಎಂಥಾ ಕ್ರೂರದಂಡನೆಗೆ ಗುರಿ ಆಗುತ್ತಾನೆಂದು ನೀವೇ ಯೋಚಿಸಿನೋಡಿ!
- Verse 30: “ಮುಯ್ಯಿಗೆ ಮುಯ್ಯಿ ತೀರಿಸುವುದು ನನ್ನ ಕೆಲಸ; ನಾನೇ ಪ್ರತೀಕಾರವನ್ನು ಸಲ್ಲಿಸುವೆನು,” ಎಂದು ಹೇಳಿದವರು ಯಾರೆಂದು ಬಲ್ಲೆವು. ಅಲ್ಲದೆ, “ಸರ್ವೇಶ್ವರ ತಮ್ಮ ಪ್ರಜೆಗಳಿಗೆ ನ್ಯಾಯತೀರ್ಪನ್ನು ನೀಡುವರು,” ಎಂದೂ ಹೇಳಲಾಗಿದೆ.
- Verse 31: ಜೀವಸ್ವರೂಪರಾದ ದೇವರ ಕೈಯಲ್ಲಿ ಸಿಕ್ಕಿಬೀಳುವುದು ಅದೆಷ್ಟು ಭಯಂಕರ!
- Verse 32: ನಿಮ್ಮ ಹಿಂದಿನ ದಿನಗಳನ್ನು ನೆನಪಿಗೆ ತಂದುಕೊಳ್ಳಿ: ನಿಮಗೆ ಜ್ಞಾನೋದಯವಾದ ತರುವಾಯ, ಕಷ್ಟಸಂಕಟಗಳಿಂದ ಕೂಡಿದ ಹೋರಾಟವನ್ನು ಎದುರಿಸಿದಿರಿ!
- Verse 33: ಕೆಲವೊಮ್ಮೆ ಬಹಿರಂಗವಾಗಿ ಹಿಂಸೆಬಾಧೆಗಳಿಗೂ ನಿಂದೆ ಅವಮಾನಗಳಿಗೂ ಗುರಿಯಾದಿರಿ; ಮತ್ತೆ ಕೆಲವೊಮ್ಮೆ ನಿಮ್ಮಂತೆ ಸಂಕಟಪಡುವವರ ಸಂಗಡ ಸಹಭಾಗಿಗಳಾದಿರಿ;
- Verse 34: ಸೆರೆಯಾಳುಗಳಿಗೆ ಸಂತಾಪ ತೋರಿಸಿದಿರಿ, ನಿಮ್ಮ ಸೊತ್ತನ್ನು ಸುಲಿಗೆಮಾಡಿದಾಗ ಸಂತೋಷದಿಂದ ಬಿಟ್ಟುಕೊಟ್ಟಿರಿ. ಏಕೆಂದರೆ, ಇದಕ್ಕೂ ಶ್ರೇಷ್ಠವಾದ ಹಾಗೂ ಶಾಶ್ವತವಾದ ಸೊತ್ತು ನಿಮಗಿದೆಯೆಂದು ಚೆನ್ನಾಗಿ ಅರಿತಿದ್ದಿರಿ.
- Verse 35: ಆ ದೃಢ ನಂಬಿಕೆಯನ್ನು ಕಳೆದುಕೊಳ್ಳಬೇಡಿ; ಅದರ ಪ್ರತಿಫಲ ಮಹತ್ತಾದುದು.
- Verse 36: ದೇವರ ಚಿತ್ತವನ್ನು ನೆರವೇರಿಸಿ, ಅವರು ವಾಗ್ದಾನಮಾಡಿರುವುದನ್ನು ಪಡೆದುಕೊಳ್ಳುವಂತೆ, ನೀವೂ ದೃಢಮನಸ್ಕರಾಗಿರಬೇಕು.
- Verse 37: ಏಕೆಂದರೆ : “ಇನ್ನು ಅಲ್ಪ, ಅತ್ಯಲ್ಪ ಕಾಲದಲ್ಲೇ ಬರುವಾತನು ಬಂದೇ ಬರುವನು, ವಿಳಂಬಮಾಡನು.
- Verse 38: ಸಜ್ಜನರಾದ ನನ್ನ ಭಕ್ತರು ವಿಶ್ವಾಸದಿಂದಲೇ ಬಾಳುವರು ಅವರು ಹಿಂಜರಿದರಾದರೆ ಮೆಚ್ಚೆನು ನಾನವರನು,” ಎನ್ನುತ್ತದೆ ಪವಿತ್ರಗ್ರಂಥ.
- Verse 39: ಆದರೆ ನಾವು ಹಿಮ್ಮೆಟ್ಟಿ ಹಾಳಾಗುವ ಜನರಲ್ಲ; ವಿಶ್ವಾಸವುಳ್ಳವರಾಗಿ ಜೀವೋದ್ಧಾರವನ್ನು ಪಡೆಯುವವರು.