P. O. C ബൈബിള്
ಹಳೆಯ ಒಡಂಬಡಿಕೆ
ಕೀರ್ತನೆಗಳು
94ನೇ ಅಧ್ಯಾಯ
- Verse 1: ಹೇ ಪ್ರಭು, ಮುಯ್ಯಿತೀರಿಸುವ ದೇವಾ I ಮುಯ್ಯಿತೀರಿಸಲು ಎದ್ದುಬಾರಯ್ಯಾ II
- Verse 2: ಪ್ರಭೂ, ಲೋಕದ ನ್ಯಾಯಾಧಿಪತಿ I ಏಳು, ಗರ್ವಿಗಳಿಗೆ ಮಾಡು ತಕ್ಕಶಾಸ್ತಿ II
- Verse 3: ಎಲ್ಲಿಯವರೆಗೆ ಪ್ರಭು, ಎಲ್ಲಿಯವರೆಗೆ? I ದುರುಳರು ಹಿಗ್ಗುತ್ತಲೆ ಇರಬೇಕು ಹೀಗೆ? II
- Verse 4: ಉಬ್ಬಿಹೋಗಿಹರು ಕೆಡುಕರೆಲ್ಲರು I ಜಂಬ ಕೊಚ್ಚಿಕೊಳ್ಳುತ್ತಿಹರು ಅವರು II
- Verse 5: ನಸುಕಿ ಹಾಕುತಿಹರು ನಿನ್ನ ಪ್ರಜೆಯನು I ಹಿಂಸಿಸುತಿಹರು ನಿನ್ನ ಸ್ವಕೀಯರನು II
- Verse 6: ವಧಿಸುತಿಹರು ವಿಧವೆಯರನು, ಪರದೇಶಿಯರನು I ಹತ್ಯಮಾಡುತಿಹರು ಗತಿಯಿಲ್ಲದ ಅನಾಥರನು II
- Verse 7: ಅವರಾಡಿಕೊಳ್ಳುತಿಹರು ಪ್ರಭು ನೋಡನೆಂದು I ಯಕೋಬ್ಯರ ಸ್ವಾಮಿದೇವ ವಿಚಾರಿಸನೆಂದು II
- Verse 8: ಮೂರ್ಖರೇ, ನಿಮಗೆ ಜ್ಞಾನೋದಯವಾಗುವುದಾವಾಗ? I ಪಶುಪ್ರಾಯರಾದ ಪ್ರಜೆಗಳು ಗಮನಿಸುವುದಾವಾಗ? II
- Verse 9: ಕಿವಿಮಾಡಿದವನು ಕೇಳದಿರುವನೋ? I ಕಣ್ಣುಕೊಟ್ಟವನು ನೋಡದಿರುವನೋ? II
- Verse 10: ರಾಷ್ಟ್ರಗಳನು ಖಂಡಿಸುವವನು ದಂಡಿಸದಿರುವನೋ? I ಮನುಜರಿಗೆ ಬುದ್ಧಿಕಲಿಸುವವನು ಬುದ್ಧಿಹೀನನೋ? II
- Verse 11: ಮನುಜರಾಲೋಚನೆಗಳು ತಿಳಿದೇ ಇವೆ ಪ್ರಭುವಿಗೆ I ಉಸಿರಿನಷ್ಟೇ ವ್ಯರ್ಥವೆಂದು ಗೊತ್ತಿದೆ ಆತನಿಗೆ II
- Verse 12: ಪ್ರಭು, ನಿನ್ನಿಂದ ಶಿಕ್ಷಿತನಾದ ಮಾನವ ಧನ್ಯ I ನಿನ್ನಿಂದ ಧರ್ಮೋಪದೇಶ ಪಡೆದವನು ಧನ್ಯ II
- Verse 13: ನೆಮ್ಮದಿ ನೀಡುವೆ ಅವನು ಸಂಕಟದಲಿರುವಾಗ I ದುರುಳರಿಗೆ ನೀನು ಗುಂಡಿಯನು ತೋಡುವಾಗ II
- Verse 14: ತಳ್ಳಿಬಿಡಲು ಪ್ರಭು ತನ್ನ ಜನರನು I ಕೈಬಿಡನವನು ತನ್ನ ಸ್ವಕೀಯರನು II
- Verse 15: ನ್ಯಾಯತೀರ್ಪು ಮರಳಿ ತಿರುಗುವುದು ನೀತಿಯತ್ತ I ನೇರಮನಸ್ಕರೆಲ್ಲ ಮಾಡುವರು ಅದನು ಸಮರ್ಥ II
- Verse 16: ದುರುಳರಿಗೆದುರಾಗಿ ನನ್ನ ಪಕ್ಷ ವಹಿಸುವರಾರು? I ಕೆಡುಕರಿಗೆ ವಿರುದ್ಧ ನನ್ನ ಪರ ನಿಲ್ಲುವವರಾರು? II
- Verse 17: ನನಗಿಲ್ಲದಿದ್ದರೆ ಪ್ರಭುವಿನ ಮರುಕ I ಮನೆಯಾಗುತ್ತಿತ್ತೆನಗೆ ಅಧೋಲೋಕ II
- Verse 18: ನನ್ನ ಕಾಲು ಜಾರಿಹೋಯಿತು ಎನ್ನುವುದರೊಳಗೆ I ನಿನ್ನ ಅಚಲ ಪ್ರೀತಿ, ಪ್ರಭು ನೆರವಾಯಿತೆನಗೆ II
- Verse 19: ನನ್ನ ಅಂತರಂಗದಲಿ ಏಳಲು ಆಂದೋಲನ I ತಂದಿತೆನ್ನ ಮನಕೆ ಆನಂದ ನಿನ್ನ ಸಾಂತ್ವನ II
- Verse 20: ಅನ್ಯಾಯಸ್ಥಾಪಕರಿಗೂ ನಿನಗೂ ಸಂಬಂಧವೆಲ್ಲಿ I ಕೇಡನು ಕಲ್ಪಿಸುತ್ತಾರವರು ಶಾಸನದ ಹೆಸರಿನಲ್ಲಿ II
- Verse 21: ಹೊಂಚುಹಾಕುವರವರು ನೀತಿವಂತರ ಪ್ರಾಣಕೆ I ಮರಣಶಿಕ್ಷೆ ವಿಧಿಸುವರವರು ನಿರಪರಾಧಿಗಳಿಗೆ II
- Verse 22: ನನಗೋ ಪ್ರಭುವೇ ಕಲ್ಲು ಕೋಟೆ I ನನಗಾಶ್ರಯ ನೀಡುವ ಪೊರೆಬಂಡೆ II
- Verse 23: ದಂಡಿಸುವನಾ ಕೆಡುಕರನು ಅವರ ಕೆಟ್ಟತನಕ್ಕಾಗಿ I ನಿರ್ಮೂಲ ಮಾಡುವನಾ ಜನರ ದುಷ್ಟತನಕ್ಕಾಗಿ I ನಮ್ಮೊಡೆಯ ದೇವನು ಸಂಹರಿಸಿಬಿಡುವನು ಈ ಕಾರಣಕ್ಕಾಗಿ II