पवित्र बाइबिल
ಹಳೆಯ ಒಡಂಬಡಿಕೆ
ಕೀರ್ತನೆಗಳು
96ನೇ ಅಧ್ಯಾಯ
1 : ಹೊಸಗೀತೆಯನು ಹಾಡಿರಿ ಪ್ರಭುವಿಗೆ I ವಿಶ್ವವೆಲ್ಲವು ಹಾಡಲಿ ಆತನಿಗೆ II
2 : ಪ್ರಭುವಿಗೆ ಹಾಡಿರಿ, ಆತನ ನಾಮವನು ಕೊಂಡಾಡಿರಿ I ಆತನ ಮುಕ್ತಿಮಾರ್ಗವನು ಪ್ರತಿನಿತ್ಯವೂ ಸಾರಿರಿ II
3 : ಪ್ರಸಿದ್ಧಪಡಿಸಿರಿ ಆತನ ಘನತೆಯನು ರಾಷ್ಟ್ರಗಳಿಗೆ I ಆತನದ್ಭುತ ಕಾರ್ಯಗಳನು ಸಕಲ ಜನಾಂಗಗಳಿಗೆ II
4 : ಏಕೆನೆ ಮಹಾತ್ಮನು ಪ್ರಭು, ಬಲು ಸ್ತುತ್ಯರ್ಹನು I ಸಕಲ ದೇವರುಗಳಿಗಿಂತಲೂ ಘನಗಂಭೀರನು II
5 : ಶೂನ್ಯ ಪ್ರತಿಮೆಗಳು ಅನ್ಯರಾಷ್ಟ್ರಗಳ ದೇವರುಗಳೆಲ್ಲ I ಪ್ರಭುವಿನಿಂದಲೇ ಉಂಟಾಯಿತು ಆಕಾಶಮಂಡಲವೆಲ್ಲ II
6 : ಇವೆ ಮಹಿಮೆ, ಮಹತ್ವ, ಆತನ ಸನ್ನಿಧಿಯಲಿ I ಶಕ್ತಿಸೌಂದರ್ಯ ಆತನ ಗರ್ಭಗುಡಿಯಲಿ II
7 : ಶಕ್ತಿಸಾಮರ್ಥ್ಯ ಪ್ರಭುವಿನದೇ ಎಂದು I ಜಗದ ರಾಷ್ಟ್ರಗಳು ಘನಪಡಿಸಲಿ ಆತನನು ಎಂದೆಂದು II
8 : ಆತನ ನಾಮಕೆ ತನ್ನಿ ಘನತೆಗೌರವವನು I ಆತನ ಮಂದಿರಕೆ ಬನ್ನಿ ಕಾಣಿಕೆ ಹೊತ್ತು II
9 : ಪ್ರಭುವಿಗೆ ಮಣಿಯಿರಿ ಪವಿತ್ರ ವಸ್ತ್ರಧಾರಿಗಳಂತೆ I ಅಂಜಿಕೆಯಿಂದ ನಡುಗಲಿ ಜಗವಿಡೀ ಆತನ ಮುಂದೆ I
10 : ಪ್ರಭು ರಾಜನೆಂದು ಸಾರಿರಿ ರಾಷ್ಟ್ರಗಳಿಗೆ I ಕದಲದ ಸ್ಥಿರತೆಯನು ಇತ್ತಿಹನು ಧರೆಗೆ I ನ್ಯಾಯವಾದ ತೀರ್ಪು ಕೊಡುವನು ಜನಾಂಗಕೆ II
11 : ಹರ್ಷಿಸಲಿ ಆಕಾಶವು, ಸಂತೋಷಿಸಲಿ ಭೂಲೋಕವು I ಗರ್ಜಿಸಲಿ ಸಮುದ್ರವು ಮತ್ತು ಅದರೊಳಿರುವುದೆಲ್ಲವು II
12 : ಉಲ್ಲಾಸಿಸಲಿ ಹೊಲಗದ್ದೆಗಳು, ಪೈರುಪಚ್ಚೆಗಳು I ಹರ್ಷಧ್ವನಿಗೈಯಲಿ ಕಾಡಿನ ಫಲವೃಕ್ಷಗಳು II
13 : ಪ್ರಭು ಧರೆಗೆ ನ್ಯಾಯತೀರಿಸಲು ಬಂದೇ ಬರುವನು ಖರೆಯಾಗಿ I ಜಗಕು, ಜನತೆಗು ತೀರ್ಪಿಡುವನು ನೀತಿನಿಯಮಾನುಸಾರವಾಗಿ II