ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
1 ಸಮುವೇಲನು
18ನೇ ಅಧ್ಯಾಯ
- Verse 1: ದಾವೀದನ ಮತ್ತು ಸೌಲನ ಸಂಭಾಷಣೆ ಮುಗಿಯಿತು. ಇದಾದ ಕೂಡಲೆ ಯೋನಾತಾನನು ಹಾಗು ದಾವೀದನು ಪ್ರಾಣ ಗೆಳೆಯರಾದರು. ಯೋನಾತಾನನು ದಾವೀದನನ್ನು ತನ್ನ ಪ್ರಾಣದಂತೆಯೇ ಪ್ರೀತಿಸತೊಡಗಿದನು.
- Verse 2: ಅಂದಿನಿಂದ ಸೌಲನು ದಾವೀದನನ್ನು ಅವನ ತಂದೆಯ ಮನೆಗೂ ಹೋಗಗೊಡದೆ ತನ್ನ ಬಳಿಯಲ್ಲೇ ಇಟ್ಟುಕೊಂಡನು.
- Verse 3: ಯೋನಾತಾನನು ದಾವೀದನನ್ನು ತನ್ನ ಪ್ರಾಣಸ್ನೇಹಿತನನ್ನಾಗಿ ಪ್ರೀತಿಸುತ್ತಿದ್ದುದರಿಂದ ಅವನೊಂದಿಗೆ ಒಂದು ಒಪ್ಪಂದಮಾಡಿಕೊಂಡನು.
- Verse 4: ಇದಲ್ಲದೆ ತನ್ನ ಮೈಮೇಲಿದ್ದ ನಿಲುವಂಗಿಯನ್ನು, ಯುದ್ಧವಸ್ತ್ರಗಳನ್ನು ಹಾಗು ಕತ್ತಿ, ಬಿಲ್ಲು, ನಡುಕಟ್ಟುಗಳನ್ನು ತೆಗೆದು ದಾವೀದನಿಗೆ ಕೊಟ್ಟನು.
- Verse 5: ದಾವೀದನಾದರೋ ಸೌಲನು ಎಲ್ಲಿಗೆ ಕಳುಹಿಸಿದರೂ ಅಲ್ಲಿಗೆ ಹೋಗಿ ಎಲ್ಲವನ್ನು ವಿವೇಕದಿಂದ ಮಾಡಿ ಯಶಸ್ಸು ಪಡೆಯುತ್ತಿದ್ದನು. ಆದ್ದರಿಂದ ಸೌಲನು ಅವನನ್ನು ಸೇನಾಪತಿಯನ್ನಾಗಿ ನೇಮಿಸಿದನು. ಇದರಿಂದ ಎಲ್ಲ ಅಧಿಕಾರಿಗಳಿಗೂ ಜನಸಾಮಾನ್ಯರಿಗೂ ಸಂತೋಷವಾಯಿತು.
- Verse 6: ದಾವೀದನು ಫಿಲಿಷ್ಟಿಯರನ್ನು ಸಂಹರಿಸಿ ಸರ್ವಸೈನಿಕರೊಡನೆ ಹಿಂದಿರುಗಿ ಬರುವಾಗ ಇಸ್ರಯೇಲರ ಎಲ್ಲ ಪಟ್ಟಣಗಳಿಂದ ಮಹಿಳೆಯರು ಹೊರಗೆ ಬಂದು, ತಾಳ ತಮ್ಮಟೆಗಳನ್ನು ಹಿಡಿದು, ಸಂತೋಷದಿಂದ ಹಾಡುತ್ತಾ, ಕುಣಿಯುತ್ತಾ, ಅರಸ ಸೌಲನನ್ನು ಎದುರುಗೊಂಡರು.
- Verse 7: ಅವರು: ಸೌಲನು ಕೊಂದನು ಸಾವಿರಗಟ್ಟಳೆ ದಾವೀದನೋ ಕೊಂದನು ಹತ್ತುಸಾವಿರಗಟ್ಟಳೆ,” ಎಂದು ಪರಸ್ಪರ ಹಾಡಿದರು.
- Verse 8: ಈ ಮಾತುಗಳು ಸೌಲನಿಗೆ ಹಿಡಿಸಲಿಲ್ಲ. ಅವನು ಕೋಪದಿಂದ, “ದಾವೀದನು ಹತ್ತು ಸಾವಿರಗಟ್ಟಳೆ ಕೊಂದನೆಂದೂ ನಾನು ಸಾವಿರಗಟ್ಟಳೆ ಮಾತ್ರ ಕೊಂದೆನೆಂದು ಹಾಡುತ್ತಾರಲ್ಲಾ! ಹಾಗಾದರೆ ಅವನನ್ನು ರಾಜನನ್ನಾಗಿ ಮಾಡುವುದೊಂದೇ ಕಡಿಮೆ!” ಎಂದುಕೊಂಡನು.
- Verse 9: ಅಂದಿನಿಂದ ಸೌಲನು ದಾವೀದನ ಮೇಲೆ ಕಣ್ಣಿಟ್ಟನು.
- Verse 10: ಮಾರನೆಯ ದಿನ ದೇವರಿಂದ ಬಂದ ದುರಾತ್ಮವೊಂದು ಸೌಲನನ್ನು ಆವರಿಸಿತು. ಅವನು ಬುದ್ಧಿಗೆಟ್ಟು ಮನೆಯೊಳಗೇ ಕೂಗಾಡತೊಡಗಿದನು. ಅವನ ಕೈಯಲ್ಲಿ ಒಂದು ಈಟಿ ಇತ್ತು. ವಾಡಿಕೆಯ ಪ್ರಕಾರ ದಾವೀದನು ಕಿನ್ನರಿ ಬಾರಿಸುತ್ತಾ ಇದ್ದನು.
- Verse 11: ಆಗ ಸೌಲನು, “ಗೋಡೆಗೆ ಕಚ್ಚಿಕೊಳ್ಳುವಂತೆ ಈ ದಾವೀದನನ್ನು ತಿವಿಯುವೆನು,” ಎಂದುಕೊಂಡು ಅವನತ್ತ ಈಟಿಯನ್ನು ಎರಡುಸಾರಿ ಎಸೆದನು. ಎರಡು ಸಾರಿಯೂ ದಾವೀದನು ತಪ್ಪಿಸಿಕೊಂಡನು.
- Verse 12: ಸರ್ವೇಶ್ವರ ಸೌಲನನ್ನು ತ್ಯಜಿಸಿ ದಾವೀದನೊಂದಿಗೆ ಇದ್ದರು. ಈ ಕಾರಣಕ್ಕಾಗಿ ಸೌಲನು ದಾವೀದನಿಗೆ ಭಯಪಟ್ಟನು.
- Verse 13: ಅವನನ್ನು ತನ್ನ ಸಾನ್ನಿಧ್ಯ ಸೇವೆಯಿಂದ ತೆಗೆದು ಸೈನ್ಯದ ಒಬ್ಬ ಸಹಸ್ರಾಧಿಪತಿಯನ್ನಾಗಿ ನೇಮಿಸಿದನು. ದಾವೀದನು ದಳಪತಿಯಾಗಿ ಯುದ್ಧಕ್ಕೆ ಹೋಗುತ್ತಾ ಬರುತ್ತಾ ಇದ್ದನು.
- Verse 14: ಸರ್ವೇಶ್ವರ ಅವನೊಂದಿಗೆ ಇದ್ದುದರಿಂದ ಅವನು ಎಲ್ಲ ಕಾರ್ಯಗಳಲ್ಲಿ ವಿವೇಕದಿಂದ ವರ್ತಿಸಿ ಜಯಶಾಲಿಯಾಗುತ್ತಿದ್ದನು.
- Verse 15: ಇದರಿಂದಾಗಿ ಸೌಲನಿಗೆ ಮತ್ತಷ್ಟು ಹೆದರಿಕೆಯುಂಟಾಯಿತು.
- Verse 16: ಆದರೆ ಇಸ್ರಯೇಲರಿಗೆ ಹಾಗು ಯೆಹೂದ್ಯರಿಗೆ ದಾವೀದನ ಮೇಲೆ ಮಿಗಿಲಾದ ಪ್ರೀತಿ. ಏಕೆಂದರೆ ಅವನು ತಮ್ಮ ಸಂಗಡವೇ ಬಂದು ಮುಂದಾಳತ್ವ ವಹಿಸುತ್ತಿದ್ದನು.
- Verse 17: ಒಂದು ದಿನ ಸೌಲನು, “ಇವನು ನನ್ನ ಕೈಯಿಂದ ಸಾಯಬಾರದು; ಫಿಲಿಷ್ಟಿಯರ ಕೈಯಿಂದಲೇ ಸಾಯಲಿ,” ಎಂದು ಒಂದು ಉಪಾಯ ಹೂಡಿದನು. ದಾವೀದನಿಗೆ, “ನೀನು ನನ್ನ ವೀರನಾಗಿ ಹೋಗಿ ಸರ್ವೇಶ್ವರನ ಯುದ್ಧಗಳನ್ನು ನಡೆಸು; ನಾನು ನನ್ನ ಹಿರಿಯ ಮಗಳಾದ ಮೇರಬಳನ್ನು ನಿನಗೆ ಮದುವೆಮಾಡಿಕೊಡುತ್ತೇನೆ,” ಎಂದನು.
- Verse 18: ಅದಕ್ಕೆ ದಾವೀದನು, “ಅರಸರ ಅಳಿಯನಾಗಲು ನಾನು ಎಷ್ಟರವನು? ಇಸ್ರಯೇಲರಲ್ಲಿ ನನ್ನ ಕುಲವಾಗಲಿ, ಕುಟುಂಬವಾಗಲಿ ಎಷ್ಟರದು?” ಎಂದನು.
- Verse 19: ಮದುವೆಮಾಡಿಕೊಡುವ ಸಮಯ ಬಂದಾಗ ಸೌಲನು ತನ್ನ ಮಗಳು ಮೇರಬಳನ್ನು ದಾವೀದನಿಗೆ ಬದಲಾಗಿ, ಮೆಹೋಲದ ಅದ್ರಿಯೇಲ್ ಎಂಬವನಿಗೆ ಕೊಟ್ಟು ಮದುವೆಮಾಡಿದನು.
- Verse 20: ಇತ್ತ ಸೌಲನ ಮಗಳಾದ ಮೀಕಲಳು ದಾವೀದನನ್ನು ಪ್ರೀತಿಸತೊಡಗಿದಳು. ಈ ವಿಷಯ ಸೌಲನಿಗೆ ತಿಳಿದುಬಂದಾಗ ಅವನಿಗೆ ಸಂತೋಷ ಆಯಿತು.
- Verse 21: “ಇವಳನ್ನು ಅವನಿಗೆ ಕೊಡುತ್ತೇನೆ. ಈಕೆ ಅವನಿಗೆ ಉರುಲಾಗಿರಬಲ್ಲಳು; ಫಿಲಿಷ್ಟಿಯರ ಕೈಗೆ ಇವನು ಸಿಕ್ಕಿಬೀಳುವಂತೆ ಮಾಡಬಲ್ಲಳು,” ಎಂದುಕೊಂಡನು. ದಾವೀದನಿಗೆ, “ನೀನು ನನ್ನ ಅಳಿಯನಾಗಲು ಎರಡನೇ ಸಂದರ್ಭ ಬಂದೊದಗಿದೆ,” ಎಂದು ಹೇಳಿದನು.
- Verse 22: ಅಲ್ಲದೆ ತನ್ನ ಸೈನಿಕರಿಗೆ, "ನೀವು ದಾವೀದನಿಗೆ, 'ಅರಸರು ನಿಮ್ಮನ್ನು ಮೆಚ್ಚಿಕೊಂಡಿದ್ದಾರೆ; ಅವರ ಎಲ್ಲ ಸೇವಕರಿಗೂ ನಿಮ್ಮ ಮೇಲೆ ಪ್ರೀತಿಯಿದೆ; ನೀವು ಅರಸರ ಅಳಿಯರಾಗಲೇಬೇಕು,” ಎಂದು ಪುಸಲಾಯಿಸಿರಿ,” ಎಂದು ಗುಟ್ಟಾಗಿ ತಿಳಿಸಿದನು.
- Verse 23: ಅಂತೆಯೇ ಆ ಸೇವಕರು ದಾವೀದನಿಗೆ ತಿಳಿಯಪಡಿಸಿದರು. ಅದಕ್ಕೆ ದಾವೀದನು, “ಅರಸರ ಅಳಿಯನಾಗುವುದು ಅಷ್ಟು ಸಾಧಾರಣ ಸಂಗತಿ ಎಂದು ನೆನೆಸುತ್ತೀರೋ? ನಾನೊಬ್ಬ ಬಡವ, ದೀನದಲಿತ,” ಎಂದುಬಿಟ್ಟನು.
- Verse 24: ದಾವೀದನ ಪ್ರತಿಕ್ರಿಯೆಯನ್ನು ಸೇವಕರು ಸೌಲನಿಗೆ ತಿಳಿಸಿದರು.
- Verse 25: ಆಗ ಅವನು, “ನೀವು ಹೋಗಿ ದಾವೀದನಿಗೆ, ‘ಅರಸರು ಯಾವ ದಕ್ಷಿಣೆಯನ್ನೂ ಬಯಸುವುದಿಲ್ಲ; ಆದರೆ ಅವರ ಶತ್ರುಗಳಿಗೆ ಮುಯ್ಯಿತೀರಿಸಿ ಅವರಲ್ಲಿನ ನೂರುಮಂದಿಯ ಮುಂದೊಗಲನ್ನು ತಂದುಕೊಟ್ಟರೆ ಸಾಕೆನ್ನುತ್ತಾರೆ’ ಎಂದು ತಿಳಿಸಿರಿ,” ಎಂದು ಆಜ್ಞಾಪಿಸಿದನು. (ದಾವೀದನನ್ನು ಫಿಲಿಷ್ಟಿಯರ ಕೈಯಿಂದಲೇ ಕೊಲ್ಲಿಸಬೇಕೆಂಬುದು ಅವನ ಉದ್ದೇಶವಾಗಿತ್ತು.)
- Verse 26: ಸೇವಕರು ದಾವೀದನಿಗೆ ಹಾಗೆಯೇ ತಿಳಿಸಿದಾಗ ಅರಸನ ಅಳಿಯನಾಗಲು ಅವನು ಸಮ್ಮತಿಸಿದನು.
- Verse 27: ನೇಮಕವಾದ ದಿನಗಳು ಮುಗಿಯುವ ಮೊದಲೇ ತನ್ನ ಸೈನಿಕರೊಡನೆ ಹೊರಟು ಫಿಲಿಷ್ಟಿಯರ ದೇಶಕ್ಕೆ ಹೋಗಿ, ಅಲ್ಲಿನ ಇನ್ನೂರು ಮಂದಿಯನ್ನು ಕೊಂದು, ಮುಂದೊಗಲುಗಳನ್ನು ತಂದು ಅರಸನ ಅಳಿಯನಾಗಲು ಬೇಕಾಗಿದ್ದ ಲೆಕ್ಕಾಚಾರವನ್ನು ಪೂರ್ತಿ ಆಗಿ ಒಪ್ಪಿಸಿದನು. ಆಗ ಸೌಲನು ತನ್ನ ಮಗಳು ಮೀಕಲಳನ್ನು ದಾವೀದನಿಗೆ ಮದುವೆಮಾಡಿಕೊಟ್ಟನು.
- Verse 28: ಸರ್ವೇಶ್ವರ ದಾವೀದನೊಂದಿಗಿದ್ದಾರೆಂದು ಸೌಲನಿಗೆ ಮನದಟ್ಟಾಯಿತು. ತನ್ನ ಮಗಳು ಅವನನ್ನು ಬಹಳವಾಗಿ ಪ್ರೀತಿಸುತ್ತಾಳೆಂದು ಸಹ ಗೊತ್ತಾಯಿತು.
- Verse 29: ಈ ಕಾರಣ ಅವನ ಭಯ ಮತ್ತಷ್ಟೂ ಅಧಿಕವಾಯಿತು; ದಾವೀದನನ್ನು ತನ್ನ ಜೀವಮಾನ ಪರಿಯಂತ ವೈರಿಯೆಂದು ಭಾವಿಸತೊಡಗಿದನು.
- Verse 30: ಫಿಲಿಷ್ಟಿಯ ರಾಜರು ಯುದ್ಧಕ್ಕೆ ಬಂದಾಗಲೆಲ್ಲ ಸೌಲನ ಸೇನಾಪತಿಗಳಲ್ಲಿ ದಾವೀದನೇ ಅತ್ಯಧಿಕ ಜಯಶೀಲನಾಗಿ ಹಿಂದಿರುಗುತ್ತಿದ್ದನು. ಈ ಕಾರಣ ಅವನ ಹೆಸರು ಸುಪ್ರಸಿದ್ಧವಾಯಿತು.