P. O. C ബൈബിള്
ಹಳೆಯ ಒಡಂಬಡಿಕೆ
ಆದಿಕಾಂಡ
11ನೇ ಅಧ್ಯಾಯ
- Verse 1: ಭೂಜನರೆಲ್ಲರಿಗೂ ಇದ್ದುದು ಒಂದೇ ಭಾಷೆ, ಒಂದೇ ನುಡಿ.
- Verse 2: ಅವರು ಪೂರ್ವದಿಕ್ಕಿಗೆ ಪ್ರಯಾಣಮಾಡುತ್ತಾ ಇದ್ದಾಗ ಬಾಬಿಲೋನಿಯ ಕಾಡಿನ ಬಯಲು ಸೀಮೆ ಸಿಕ್ಕಿತು. ಅವರು ಅಲ್ಲೇ ನೆಲೆಸಲು ತೊಡಗಿದರು.
- Verse 3: “ಬನ್ನಿ, ಒಳ್ಳೊಳ್ಳೆ ಸುಟ್ಟ ಇಟ್ಟಿಗೆಗಳನ್ನು ಮಾಡೋಣ;
- Verse 4: ಒಂದು ಪಟ್ಟಣವನ್ನು ಕಟ್ಟೋಣ; ಆಕಾಶವನ್ನು ಮುಟ್ಟುವಂಥ ಗೋಪುರವನ್ನು ನಿರ್ಮಿಸಿ ಪ್ರಖ್ಯಾತಿ ಪಡೆಯೋಣ. ಹೀಗೆ ಮಾಡಿದರೆ ನಾವು ಜಗದಲ್ಲೆಲ್ಲಾ ಚದರಿಹೋಗುವುದಕ್ಕೆ ಆಸ್ಪದವಿರುವುದಿಲ್ಲ” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು. ಕಟ್ಟುವಾಗ ಕಲ್ಲಿಗೆ ಬದಲಾಗಿ ಇಟ್ಟಿಗೆಯನ್ನೂ ಗಾರೆಗೆ (ಸುಣ್ಣಕ್ಕೆ) ಬದಲಾಗಿ ಕಲ್ಲರಗನ್ನೂ ಉಪಯೋಗಿಸಿದರು.
- Verse 5: ನರಮಾನವರು ಕಟ್ಟುತ್ತಿದ್ದ ಆ ಪಟ್ಟಣವನ್ನು ಹಾಗೂ ಗೋಪುರವನ್ನು ನೋಡಲು ಸರ್ವೇಶ್ವರ ಸ್ವಾಮಿ ಇಳಿದು ಬಂದರು.
- Verse 6: ನೋಡಿದ ಮೇಲೆ, “ಇವರು ಒಂದೇ ಜನಾಂಗ; ಇವರೆಲ್ಲರಿಗೂ ಒಂದೇ ಭಾಷೆ. ಇದು ಇವರು ಕೈಗೊಂಡಿರುವ ಕಾರ್ಯದ ಪ್ರಾರಂಭ ಮಾತ್ರ. ಮುಂದಕ್ಕೆ ಇವರು ಏನು ಬೇಕಾದರೂ ಮಾಡಿಯಾರು!
- Verse 7: ನಾವು ಹೋಗಿ ಇವರಲ್ಲಿ ಒಬ್ಬರ ಮಾತು ಒಬ್ಬರಿಗೆ ತಿಳಿಯದಂತೆ ಇವರ ಭಾಷೆಯನ್ನು ಗಲಿಬಿಲಿಗೊಳಿಸೋಣ,” ಎಂದರು.
- Verse 8: ಅಂತೆಯೇ ಮಾಡಿ ಅವರನ್ನು ಅಲ್ಲಿಂದ ಜಗದೆಲ್ಲೆಡೆಗೆ ಚದರಿಸಿಬಿಟ್ಟರು. ಜನರು ಆ ಪಟ್ಟಣ ಕಟ್ಟುವುದನ್ನು ನಿಲ್ಲಿಸಿಬಿಟ್ಟರು
- Verse 9: ಹೀಗೆ ಸರ್ವೇಶ್ವರ ಇಡೀ ಜಗತ್ತಿನ ಭಾಷೆಯನ್ನು ಗಲಿಬಿಲಿಗೊಳಿಸಿ ಅಲ್ಲಿಂದ ಜನರನ್ನು ಜಗದೆಲ್ಲೆಡೆಗೆ ಚದರಿಸಿದ ಕಾರಣ ಆ ಪಟ್ಟಣಕ್ಕೆ ‘ಬಾಬೆಲೋನ್’ ಎಂದು ಹೆಸರಾಯಿತು.
- Verse 10: ಶೇಮನ ವಂಶವೃಕ್ಷ; ಜಲಪ್ರಳಯ ಕಳೆದು ಎರಡು ವರ್ಷಗಳಾದ ಮೇಲೆ ಶೇಮನಿಗೆ ಅರ್ಪಕ್ಷದನು ಹುಟ್ಟಿದನು. ಆಗ ಶೇಮನಿಗೆ 100 ವರ್ಷ ವಯಸ್ಸು.
- Verse 11: ಅನಂತರ ಶೇಮನು ಗಂಡುಹೆಣ್ಣು ಮಕ್ಕಳನ್ನು ಪಡೆದು 500 ವರ್ಷ ಬದುಕಿದ್ದನು.
- Verse 12: ಮೂವತ್ತೈದು ವರ್ಷದವನಾಗಿದ್ದ ಅರ್ಪಕ್ಷದನಿಗೆ ಶೆಲಹನು ಹುಟ್ಟಿದನು.
- Verse 13: ಅನಂತರ ಅರ್ಪಕ್ಷದನು ಗಂಡುಹೆಣ್ಣು ಮಕ್ಕಳನ್ನು ಪಡೆದು ನಾನೂರ ಮೂರು ವರ್ಷ ಬದುಕಿದ್ದನು.
- Verse 14: ಮೂವತ್ತು ವರ್ಷದವನಾಗಿದ್ದ ಶೆಲಹನಿಗೆ ಎಬರನು ಹುಟ್ಟಿದನು.
- Verse 15: ಅನಂತರ ಗಂಡುಹೆಣ್ಣು ಮಕ್ಕಳನ್ನು ಪಡೆದು 403 ವರ್ಷ ಬದುಕಿದ್ದನು.
- Verse 16: ಮೂವತ್ತನಾಲ್ಕು ವರ್ಷದವನಾಗಿದ್ದ ಎಬರನಿಗೆ ಪೆಲೆಗನು ಹುಟ್ಟಿದನು.
- Verse 17: ಅನಂತರ ಗಂಡುಹೆಣ್ಣು ಮಕ್ಕಳನ್ನು ಪಡೆದು 430 ವರ್ಷ ಬದುಕಿದ್ದನು.
- Verse 18: ಮೂವತ್ತು ವರ್ಷದವನಾಗಿದ್ದ ಪೆಲೆಗನಿಗೆ ರೆಗೂವನು ಹುಟ್ಟಿದನು.
- Verse 19: ಅನಂತರ ಪೆಲೆಗನು ಗಂಡುಹೆಣ್ಣು ಮಕ್ಕಳನ್ನು ಪಡೆದು 290 ವರ್ಷ ಬದುಕಿದ್ದನು.
- Verse 20: ಮೂವತ್ತೆರಡು ವರ್ಷದವನಾಗಿದ್ದ ರೆಗೂವನಿಗೆ ಸೆರೂಗನು ಹುಟ್ಟಿದನು.
- Verse 21: ಅನಂತರ ರೆಗೂವನು ಗಂಡುಹೆಣ್ಣು ಮಕ್ಕಳನ್ನು ಪಡೆದು 207 ವರ್ಷ ಬದುಕಿದ್ದನು.
- Verse 22: ಮೂವತ್ತು ವರ್ಷದವನಾಗಿದ್ದ ಸೆರೂಗನಿಗೆ ನಾಹೋರನು ಹುಟ್ಟಿದನು.
- Verse 23: ಅನಂತರ ಸೆರೂಗನು ಗಂಡುಹೆಣ್ಣು ಮಕ್ಕಳನ್ನು ಪಡೆದು 200 ವರ್ಷ ಬದುಕಿದ್ದನು.
- Verse 24: ಇಪ್ಪತ್ತೊಂಭತ್ತು ವರ್ಷದವನಾಗಿದ್ದ ನಾಹೋರನಿಗೆ ತೆರಹನು ಹುಟ್ಟಿದನು.
- Verse 25: ಅನಂತರ ನಾಹೋರನು ಗಂಡುಹೆಣ್ಣು ಮಕ್ಕಳನ್ನು ಪಡೆದು 190 ವರ್ಷ ಬದುಕಿದ್ದನು.
- Verse 26: ಎಪ್ಪತ್ತು ವರ್ಷದವನಾದ ತೆರಹನಿಗೆ ಅಬ್ರಾಮ, ನಾಹೋರ ಮತ್ತು ಹಾರಾನ ಎಂಬ ಮಕ್ಕಳು ಹುಟ್ಟಿದರು.
- Verse 27: ತೆರಹನ ವಂಶವೃಕ್ಷ: ತೆರಹನಿಗೆ ಅಬ್ರಾಮ, ನಾಹೋರ, ಹಾರಾನ ಇವರು ಹುಟ್ಟಿದರು. ಹಾರಾನನಿಗೆ ಲೋಟನು ಹುಟ್ಟಿದನು.
- Verse 28: ಹಾರಾನನು, ತನ್ನ ಜನ್ಮಭೂಮಿಯಲ್ಲಿ, ಬಾಬಿಲೋನಿನ ಊರ್ ಎಂಬ ಪಟ್ಟಣದಲ್ಲಿ, ತನ್ನ ತಂದೆಯಾದ ತೆರಹನು ಜೀವದಿಂದಿರುವಾಗಲೇ ಸತ್ತನು.
- Verse 29: ಅಬ್ರಾಮನು ಮತ್ತು ನಾಹೋರನು ಮದುವೆಮಾಡಿಕೊಂಡರು. ಅಬ್ರಾಮನ ಹೆಂಡತಿಯ ಹೆಸರು ಸಾರಯಳು, ನಾಹೋರನ ಹೆಂಡತಿಯ ಹೆಸರು ಮಿಲ್ಕಾ; ಈಕೆ ಹಾರಾನನ ಮಗಳು; ಹಾರಾನನು ಮಿಲ್ಕಳಿಗು ಹಾಗೂ ಇಸ್ಕಳಿಗು ತಂದೆ.
- Verse 30: ಸಾರಯಳು ಬಂಜೆ, ಆಕೆಗೆ ಮಕ್ಕಳಿರಲಿಲ್ಲ.
- Verse 31: ತೆರಹನು ತನ್ನ ಮಗನಾದ ಅಬ್ರಾಮನನ್ನು ಮತ್ತು ತನಗೆ ಮೊಮ್ಮಗನೂ ಹಾರಾನನಿಗೆ ಮಗನೂ ಆದ ಲೋಟನನ್ನೂ ಹಾಗು ತನಗೆ ಸೊಸಯೂ ಅಬ್ರಾಮನಿಗೆ ಹೆಂಡತಿಯೂ ಆದ ಸಾರಯಳನ್ನೂ ಕರೆದುಕೊಂಡು ಬಾಬಿಲೋನಿನ ಊರ್ ಎಂಬ ಪಟ್ಟಣವನ್ನು ಬಿಟ್ಟು ಕಾನಾನ್ ನಾಡಿಗೆ ತೆರಳಿದನು. ಅವರು ಹಾರಾನ್ ಎಂಬ ಪಟ್ಟಣವನ್ನು ತಲುಪಿ ಅಲ್ಲಿ ವಾಸಮಾಡಿಕೊಂಡರು.
- Verse 32: ತೆರಹನು ಅಲ್ಲಿ ಮೃತನಾದನು. ಆಗ ಅವನಿಗೆ ಇನ್ನೂರ ಐದು ವರ್ಷವಾಗಿತ್ತು.