P. O. C ബൈബിള്
ಹಳೆಯ ಒಡಂಬಡಿಕೆ
ಆದಿಕಾಂಡ
45ನೇ ಅಧ್ಯಾಯ
- Verse 1: ಇದನ್ನು ಕೇಳಿದ ಮೇಲೆ ತನ್ನ ಪರಿವಾರದವರ ಮುಂದೆ, ತನ್ನನ್ನೇ ಇನ್ನು ತಡೆಹಿಡಿದುಕೊಳ್ಳಲು ಜೋಸೆಫನಿಂದ ಆಗಲಿಲ್ಲ. “ಇಲ್ಲಿಂದ ಎಲ್ಲರನ್ನು ಆಚೆ ಕಳಿಸಿರಿ,” ಎಂದು ಬಾಯ್ತೆರೆದು ಹೇಳಿದ. ಜೋಸೆಫನ ಅಣ್ಣತಮ್ಮಂದಿರಿಗೆ ತನ್ನ ಪರಿಚಯ ಸಿಗುವಂತೆ ಮಾಡುವಾಗ ಇತರರು ಯಾರೂ ಹತ್ತಿರ ಇರಲಿಲ್ಲ.
- Verse 2: ಅವನು ಗಟ್ಟಿಯಾಗಿ ಅತ್ತದ್ದು ಈಜಿಪ್ಟಿನವರಿಗೆ ಕೇಳಿಸಿತು; ಫರೋಹನ ಮನೆಯವರಿಗೂ ಆ ಸುದ್ದಿ ಮುಟ್ಟಿತು.
- Verse 3: ಜೋಸೆಫನು ತನ್ನ ಅಣ್ಣತಮ್ಮಂದಿರಿಗೆ, “ನಾನೇ ಜೋಸೆಫ್! ನನ್ನ ತಂದೆ ಇನ್ನೂ ಇದ್ದಾರೋ?” ಎಂದು ಕೇಳಿದ. ಅವರು ತತ್ತರಗೊಂಡು ಉತ್ತರಿಸಲಾರದೆ ಹೋದರು.
- Verse 4: ಜೋಸೆಫನು, “ಹತ್ತಿರಕ್ಕೆ ಬನ್ನಿ” ಎನ್ನಲು, ಅವರು ಹತ್ತಿರಕ್ಕೆ ಬಂದರು. ಅವನು ಅವರಿಗೆ, “ಈಜಿಪ್ಟ್ ದೇಶಕ್ಕೆ ಹೋಗಲಿ" ಎಂದು ನೀವು ಮಾರಿಬಿಟ್ಟ ನಿಮ್ಮ ತಮ್ಮ ಜೋಸೆಫ್ ನಾನೇ.
- Verse 5: ನೀವು ನನ್ನನ್ನು ಇಲ್ಲಿಗೆ ಮಾರಿದ್ದಕ್ಕಾಗಿ ವ್ಯಸನಪಡಬೇಡಿ, ನಿಮ್ಮನ್ನೇ ನಿಂದಿಸಿಕೊಳ್ಳಬೇಡಿ. ಏಕೆಂದರೆ ಜೀವರಕ್ಷಣೆಗಾಗಿಯೇ ದೇವರು ನನ್ನನ್ನು ನಿಮಗೆ ಮುಂಚಿತವಾಗಿ ಇಲ್ಲಿಗೆ ಕಳುಹಿಸಿದರು.
- Verse 6: ದೇಶಕ್ಕೆ ಬರಗಾಲ ಬಂದು ಈಗಾಗಲೇ ಎರಡು ವರ್ಷಗಳಾದವು. ಇನ್ನೂ ಐದು ವರ್ಷಗಳ ಪರ್ಯಂತರ ಬಿತ್ತುವುದಕ್ಕಾಗಲಿ ಕೊಯ್ಯುವುದಕ್ಕಾಗಲಿ ಅವಕಾಶವಿಲ್ಲ.
- Verse 7: ನಿಮ್ಮ ಜನ ಧರೆಯಲ್ಲಿ ಉಳಿಯುವಂತೆಯೂ ನೀವು ಈ ವಿಪತ್ತಿಗೆ ಸಿಕ್ಕದೆ ಅಭಿವೃದ್ಧಿಯಾಗುವಂತೆಯೂ ದೇವರು ನನ್ನನ್ನು ನಿಮಗೆ ಮುಂಚಿತವಾಗಿ ಕಳಿಸಿದರು.
- Verse 8: ನನ್ನನ್ನು ಇಲ್ಲಿಗೆ ಕಳಿಸಿದವರು ನೀವಲ್ಲ, ದೇವರೇ. ಅವರು ನನ್ನನ್ನು ಫರೋಹನಿಗೆ ಮಂತ್ರಿಯಾಗಿಯೂ ಅವರ ಆಸ್ಥಾನಕ್ಕೆ ಅಧಿಪತಿಯಾಗಿಯೂ ಈಜಿಪ್ಟ್ ದೇಶಕ್ಕೆ ಸರ್ವಾಧಿಕಾರಿಯಾಗಿಯೂ ಮಾಡಿದ್ದಾರೆ.
- Verse 9: “ನೀವು ನನ್ನ ತಂದೆಯ ಬಳಿಗೆ ಬೇಗನೆ ಹೋಗಿ ಅವರಿಗೆ, ‘ನಿಮ್ಮ ಮಗ ಜೋಸೆಫ್ ಹೀಗೆನ್ನುತ್ತಾನೆ; ‘ದೇವರು ನನ್ನನ್ನು ಈಜಿಪ್ಟ್ ದೇಶಕ್ಕೆ ಮುಖ್ಯಮಂತ್ರಿಯನ್ನಾಗಿ ನೇಮಿಸಿದ್ದಾರೆ. ನೀವು ತಡಮಾಡದೆ ನನ್ನ ಬಳಿಗೆ ಬರಬೇಕು.
- Verse 10: ಗೋಷೆನ್ ಪ್ರಾಂತ್ಯದಲ್ಲಿ ನನ್ನ ಬಳಿಯಲ್ಲೇ ನೀವೂ ನಿಮ್ಮ ಮಕ್ಕಳೂ ಮೊಮ್ಮಕ್ಕಳೂ ದನ, ಕುರಿ ಮೊದಲಾದ ಆಸ್ತಿಪಾಸ್ತಿಗಳ ಸಮೇತ ವಾಸಮಾಡಬಹುದು.
- Verse 11: ಬರಗಾಲ ತೀರುವುದಕ್ಕೆ ಇನ್ನೂ ಐದು ವರ್ಷ ಕಳೆಯಬೇಕಾಗಿದೆ. ಆದುದರಿಂದ ನಿಮಗೂ ನಿಮ್ಮ ಕುಟುಂಬಕ್ಕೂ ನಿಮಗಿರುವ ಸಮಸ್ತಕ್ಕೂ ಬಡತನ ತಟ್ಟದಂತೆ ನಾನು ನಿಮ್ಮನ್ನು ಪೋಷಿಸುತ್ತೇನೆ’, ಎಂದು ಹೇಳಿರುವುದಾಗಿ ತಿಳಿಸಿರಿ.
- Verse 12: “ನಾನೇ ಖುದ್ದಾಗಿ ನಿಮ್ಮ ಸಂಗಡ ಮಾತಾಡಿದ್ದೇನೆ; ಅದಕ್ಕೆ ನೀವೂ ಸಾಕ್ಷಿ: ನನ್ನ ಒಡಹುಟ್ಟಿದ ಬೆನ್ಯಾಮೀನನೂ ಸಾಕ್ಷಿ:
- Verse 13: ಈಜಿಪ್ಟ್ ದೇಶದಲ್ಲಿ ನನಗಿರುವ ಘನತೆ ಗೌರವವನ್ನೂ ನೀವು ಕಂಡದ್ದೆಲ್ಲವನ್ನೂ ತಂದೆಗೆ ತಿಳಿಸಿ, ಬೇಗನೆ ಅವರನ್ನು ಇಲ್ಲಿಗೆ ಕರೆದುಕೊಂಡು ಬನ್ನಿ,” ಎಂದು ಹೇಳಿದನು.
- Verse 14: ಬಳಿಕ ಜೋಸೆಫನು ತನ್ನ ತಮ್ಮ ಬೆನ್ಯಾಮೀನನ ಕೊರಳನ್ನು ಅಪ್ಪಿಕೊಂಡು ಅತ್ತನು.
- Verse 15: ತನ್ನ ಅಣ್ಣಂದಿರಲ್ಲಿ ಪ್ರತಿಯೊಬ್ಬನಿಗೂ ಮುದ್ದಿಟ್ಟು ಅವರನ್ನು ಅಪ್ಪಿಕೊಂಡು ಕಣ್ಣೀರಿಟ್ಟನು. ತರುವಾಯ ಅವರು ಅವನ ಸಂಗಡ ಮಾತನಾಡತೊಡಗಿದರು.
- Verse 16: ಜೋಸೆಫನ ಅಣ್ಣತಮ್ಮಂದಿರು ಬಂದಿರುವ ಸಮಾಚಾರ ಫರೋಹನ ಅರಮನೆಗೆ ತಲುಪಿತು. ಫರೋಹನೂ ಅವನ ಪರಿವಾರದವರೂ ಅದನ್ನು ಕೇಳಿ ಸಂತೋಷಪಟ್ಟರು.
- Verse 17: ಫರೋಹನು ಜೋಸೆಫನನ್ನು ಕರೆಸಿ, “ನೀನು ನಿನ್ನ ಸಹೋದರರಿಗೆ ತಿಳಿಸಬೇಕಾದ ನನ್ನ ಆಜ್ಞೆ ಇದು: ‘ನೀವು ನಿಮ್ಮ ವಾಹಕಪಶುಗಳ ಮೇಲೆ ಸಾಮಾನುಗಳನ್ನು ಹೇರಿ ಕಾನಾನ್ ನಾಡಿಗೆ ಹೋಗಿ, ಅಲ್ಲಿಂದ
- Verse 18: ನಿಮ್ಮ ತಂದೆಯನ್ನೂ ಕುಟುಂಬದವರನ್ನೂ ನನ್ನ ಬಳಿಗೆ ಕರೆದುಕೊಂಡು ಬರತಕ್ಕದ್ದು. ಈಜಿಪ್ಟ್ ದೇಶದಲ್ಲಿ ನಿಮಗೆ ಅತ್ಯುತ್ತಮವಾದ ಭೂಮಿಯನ್ನು ಕೊಡುವೆನು. ನೀವು ಈ ದೇಶದ ಸುಖಸಂಪತ್ತನ್ನು ಅನುಭವಿಸಬಹುದು.”
- Verse 19: ನಿನ್ನ ಸಹೋದರರಿಗೆ ಈ ಆಜ್ಞೆಯನ್ನೂ ತಿಳಿಸು: ‘ನೀವು ನಿಮ್ಮ ಮಡದಿ ಮಕ್ಕಳನ್ನು ಕರೆದುತರಲು ಈಜಿಪ್ಟ್ ದೇಶದ ಬಂಡಿಗಳನ್ನು ತೆಗೆದುಕೊಂಡುಹೋಗಿರಿ: ನಿಮ್ಮ ತಂದೆಯನ್ನು ತಂದು ಸೇರಿಸಿರಿ.
- Verse 20: ಆಸ್ತಿಪಾಸ್ತಿಗಳ ವಿಷಯದಲ್ಲಿ ನೀವು ಚಿಂತಿಸಬೇಕಾಗಿಲ್ಲ. ಈಜಿಪ್ಟ್ ದೇಶದ ಅತ್ಯುತ್ತಮವಾದುವುಗಳು ನಿಮ್ಮದಾಗುವುವು'."
- Verse 21: ಯಕೋಬನ ಮಕ್ಕಳು ಅದೇ ಮೇರೆಗೆ ಮಾಡಿದರು. ಫರೋಹನ ಅಪ್ಪಣೆಯ ಪ್ರಕಾರ ಜೋಸೆಫನು ಅವರಿಗೆ ಬಂಡಿಗಳನ್ನೂ ಮಾರ್ಗಕ್ಕೆ ಬೇಕಾದ ಆಹಾರವನ್ನೂ ಕೊಡಿಸಿದನು.
- Verse 22: ಅದೂ ಅಲ್ಲದೆ, ಪ್ರತಿಯೊಬ್ಬನಿಗೂ ಶ್ರೇಷ್ಠವಾದ ಹೊಸ ಬಟ್ಟೆಗಳನ್ನು ಕೊಟ್ಟನು. ಬೆನ್ಯಾಮೀನನಿಗಾದರೋ ಮುನ್ನೂರು ಬೆಳ್ಳಿನಾಣ್ಯಗಳನ್ನು ಹಾಗು ಐದು ಶ್ರೇಷ್ಠವಾದ ಹೊಸಬಟ್ಟೆಗಳನ್ನು ಕೊಟ್ಟನು.
- Verse 23: ತನ್ನ ತಂದೆಗೆ ಈಜಿಪ್ಟ್ ದೇಶದ ಒಳ್ಳೊಳ್ಳೆಯ ವಸ್ತುಗಳನ್ನೂ ಹತ್ತು ಗಂಡು ಕತ್ತೆಗಳ ಮೇಲೆ ಹೇರಿಸಿದನು. ಅವನ ಪ್ರಯಾಣಕ್ಕೆ ಹತ್ತು ಹೆಣ್ಣು ಕತ್ತೆಗಳ ಮೇಲೆ ದವಸಧಾನ್ಯಗಳನ್ನೂ ಇತರ ಆಹಾರಪದಾರ್ಥಗಳನ್ನೂ ಕಳಿಸಿಕೊಟ್ಟನು.
- Verse 24: ತನ್ನ ಅಣ್ಣತಮ್ಮಂದಿರಿಗೆ, “ದಾರಿಯಲ್ಲಿ ಜಗಳವಾಡಬೇಡಿ” ಎಂದು ಬುದ್ಧಿ ಹೇಳಿ, ಅವರನ್ನು ಬೀಳ್ಕೊಟ್ಟನು. ಅವರು ಹೊರಟುಹೋದರು.
- Verse 25: ಅವರು ಈಜಿಪ್ಟ್ ದೇಶವನ್ನು ಬಿಟ್ಟು ಕಾನಾನ್ ನಾಡನ್ನು ಸೇರಿದರು.
- Verse 26: ತಂದೆ ಯಕೋಬನ ಬಳಿಗೆ ಬಂದು, “ಜೋಸೆಫನು ಇನ್ನೂ ಜೀವದಿಂದಿದ್ದಾನೆ; ಅವನೇ ಈಜಿಪ್ಟ್ ದೇಶದ ಪ್ರಧಾನಮಂತ್ರಿ” ಎಂದು ಅರುಹಿದರು. ಅವನು ಅದನ್ನು ಕೇಳಿ ಸ್ತಬ್ಧನಾದ; ಅವರನ್ನು ನಂಬಲೇ ಇಲ್ಲ.
- Verse 27: ಆದರೆ ಜೋಸೆಫನು ಹೇಳಿಕಳಿಸಿದ ಎಲ್ಲ ಮಾತುಗಳನ್ನು ಕೇಳಿ, ತನ್ನ ಪ್ರಯಾಣಕ್ಕಾಗಿ ಅವನಿಂದ ಬಂದಿದ್ದ ಬಂಡಿಗಳನ್ನು ನೋಡಿ ಅವರ ತಂದೆ ಯಕೋಬನಿಗೆ ಹೊಸ ಜೀವ ಬಂದಿತು.
- Verse 28: ಕೊನೆಗೆ ಯಕೋಬನು, “ನನ್ನ ಮಗ ಜೋಸೆಫ್ ಜೀವದಿಂದಿದ್ದಾನೆ, ನನಗೆ ಅಷ್ಟೇ ಸಾಕು! ನಾನು ಸಾಯುವುದಕ್ಕೆ ಮುಂಚೆ ಹೋಗಿ ಅವನನ್ನು ನೋಡುತ್ತೇನೆ,” ಎಂದನು.