ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಜ್ಞಾನೋಕ್ತಿಗಳು
12ನೇ ಅಧ್ಯಾಯ
- Verse 1: ಶಿಸ್ತನ್ನು ಹಾರೈಸುವವನು ಶಿಕ್ಷಣ ಪ್ರಿಯನು; ತಿದ್ದುವಿಕೆಯನ್ನು ಹಗೆಮಾಡುವವನು ಪಶುಪ್ರಾಯನು.
- Verse 2: ಒಳ್ಳೆಯವನು ಸರ್ವೇಶ್ವರನ ದಯೆಯನ್ನು ಗಳಿಸುವನು; ಕೆಟ್ಟವನ ಕುಯುಕ್ತಿ ದೈವಖಂಡನೆಯನ್ನು ಪಡೆಯುವುದು.
- Verse 3: ದುಷ್ಟತನದಿಂದ ಯಾವನೂ ಸ್ಥಿರತೆಯನ್ನು ಗಳಿಸಿಲ್ಲ; ಶಿಷ್ಟನ ಬೇರನ್ನು ಯಾರೂ ಕದಲಿಸುವಂತಿಲ್ಲ.
- Verse 4: ಗುಣವಂತ ಸತಿ ಗಂಡನ ತಲೆಗೆ ಕಿರೀಟ; ಲಜ್ಜೆಗೆಟ್ಟ ಹೆಂಡತಿ ಆತನ ಎಲುಬಿಗೆ ಕ್ಷಯ.
- Verse 5: ಸತ್ಪುರುಷನ ಉದ್ದೇಶ ನ್ಯಾಯಯುತ; ದುಷ್ಟರ ಆಲೋಚನೆ ಮೋಸಭರಿತ.
- Verse 6: ದುರುಳರ ಮಾತು ಜೀವಕ್ಕೆ ಉರುಳು; ಸಜ್ಜನರ ಮಾತು ಪ್ರಾಣಕ್ಕೆ ನೆರವು.
- Verse 7: ದುರ್ಜನರು ನೆಲಕ್ಕುರುಳಿ ನಿರ್ಮೂಲರಾಗುವರು; ಸಜ್ಜನರ ತಲೆಮಾರು ಸ್ಥಿರವಾಗಿ ನಿಲ್ಲುವುದು.
- Verse 8: ಬುದ್ಧಿವಂತನನ್ನು ಅವರ ಬುದ್ಧಿಗೆ ತಕ್ಕಂತೆ ಜನ ಹೊಗಳುವರು; ವಕ್ರಬುದ್ಧಿಯುಳ್ಳವನನ್ನಾದರೊ ಅವರು ತೆಗಳುವರು.
- Verse 9: ಹೊಟ್ಟೆಗಿಲ್ಲದೆ ಜಟ್ಟಿಯೆನಿಸಿಕೊಳ್ಳುವವನಿಗಿಂತ ಕಷ್ಟದಿಂದ ದುಡಿವ ಸಾಧಾರಣ ಬಂಟನೆ ಲೇಸು.
- Verse 10: ಒಳ್ಳೆಯವನು ದನಕರುಗಳಿಗೂ ದಯೆ ತೋರುವನು; ಕೆಟ್ಟವನು ತೋರುವ ಕರುಣೆಯು ಕ್ರೂರತನವಾಗುವುದು.
- Verse 11: ಉತ್ತು ವ್ಯವಸಾಯ ಮಾಡುವವನು ಹೊಟ್ಟೆತುಂಬ ಉಣ್ಣುವನು; ವ್ಯರ್ಥಕಾರ್ಯಗಳಲ್ಲಿ ಆಸಕ್ತಿಯುಳ್ಳವನು ಮತಿಹೀನನು.
- Verse 12: ಕೆಡುಕರ ಕೋಟೆ ಪುಡಿಪುಡಿಯಾಗುವುದು; ಒಳ್ಳೆಯವರ ಬುಡ ಫಲಬಿಡುವುದು.
- Verse 13: ಮಾತಿನ ದೋಷದಿಂದ ಕೆಡುಕನು ಬೋನಿಗೆ ಬೀಳುವನು; ನೀತಿವಂತನು ಆಪತ್ತಿನಿಂದ ತಪ್ಪಿಸಿಕೊಳ್ಳುವನು.
- Verse 14: ಮಾತುಬಲ್ಲವನು ಬದುಕುವನು ಸಂತುಷ್ಟನಾಗಿ; ಕೈಯಿರುವವನು ಬಾಳುವನು ಬಹು ಮಾನಿತನಾಗಿ.
- Verse 15: ಮೂರ್ಖನ ನಡತೆ ಸ್ವಂತ ಮೆಚ್ಚುಗೆಗೆ; ಬುದ್ಧಿವಂತ ಕಿವಿಗೊಡುವನು ಉಚಿತಾಲೋಚನೆಗೆ.
- Verse 16: ಮೂರ್ಖನ ಸಿಟ್ಟು ತಟ್ಟನೆ ರಟ್ಟಾಗುವುದು; ಜಾಣನು ನಿಂದೆಯನ್ನು ಮರೆಮಾಚುವನು.
- Verse 17: ಸತ್ಯವಾದಿ ಪ್ರಾಮಾಣಿಕ ಸಾಕ್ಷಿ; ಸುಳ್ಳು ಸಾಕ್ಷಿ ಕಪಟ ವಾಚಾಳಿ.
- Verse 18: ಕತ್ತಿ ಇರಿತದಂತೆ ದುಡುಕನ ಮಾತು; ಹುಣ್ಣಿಗೆ ಮದ್ದುಹಾಕಿದಂತೆ ಜ್ಞಾನಿಗಳ ಮಾತು.
- Verse 19: ಸತ್ಯವಾದಿಯ ಮಾತು ಶಾಶ್ವತ; ಮಿಥ್ಯವಾದಿಯ ಮಾತು ಕ್ಷಣಿಕ.
- Verse 20: ಕೇಡನ್ನು ಕಲ್ಪಿಸುವವರ ಮನದಲ್ಲಿ ಮೋಸ; ಒಳಿತನ್ನು ಬಯಸುವವರ ಮನದಲ್ಲಿ ಉಲ್ಲಾಸ.
- Verse 21: ಸಜ್ಜನರಿಗೆ ಸಂಭವಿಸದು ಯಾವ ಕೆಡುಕು; ದುರ್ಜನರಿಗೆ ತುಂಬಿತುಳುಕುವುದು ಕೇಡು.
- Verse 22: ಮಿಥ್ಯವಾದಿಗಳು ಸರ್ವೇಶ್ವರನಿಗೆ ಹೇಸು; ಸತ್ಯವಾದಿಗಳು ಆತನಿಗೆ ಲೇಸು.
- Verse 23: ಜಾಣನು ತನ್ನ ಜ್ಞಾನವನ್ನು ಮುಚ್ಚಿಡುವನು; ಮೂಢನು ತನ್ನ ಮೂರ್ಖತನವನ್ನು ಪ್ರಕಟಿಸುವನು.
- Verse 24: ಚೂಟಿಯಾದವನು ಆಳುವನು ಯಜಮಾನನಾಗಿ; ಮೈಗಳ್ಳನು ಬಾಳುವನು ಗುಲಾಮನಾಗಿ.
- Verse 25: ಚಿಂತೆ ಮನಸ್ಸನ್ನು ಕುಗ್ಗಿಸುತ್ತದೆ; ಸವಿಮಾತು ಅದನ್ನು ಹಿಗ್ಗಿಸುತ್ತದೆ.
- Verse 26: ನೀತಿವಂತ ನೆರೆಯವನಿಗೆ ದಾರಿತೋರಿಸುವನು; ಅನೀತಿವಂತನು ಅವನಿಗೆ ದಾರಿ ತಪ್ಪಿಸುವನು.
- Verse 27: ಮೈಗಳ್ಳನು ಬೇಟೆಯಾಡಿದ್ದನ್ನೂ ಬೇಯಿಸನು; ಚೂಟಿಯಾದವನ ಪಾಲಿಗೆ ಬರುವುದು ಸಂಪತ್ತು.
- Verse 28: ಸನ್ಮಾರ್ಗದಿಂದ ಜೀವಲಾಭ; ದುರ್ಮಾರ್ಗದಿಂದ ಮರಣ ಪ್ರಾಪ್ತಿ.