ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ವಿಮೋಚನಕಾಂಡ
23ನೇ ಅಧ್ಯಾಯ
- Verse 1: “ಸುಳ್ಳು ಸುದ್ದಿಯನ್ನು ಹಬ್ಬಿಸಬಾರದು. ದುಷ್ಟರ ಸಹಾಯಕ್ಕಾಗಿ ನ್ಯಾಯ ವಿರುದ್ಧವಾದ ಸಾಕ್ಷಿಯನ್ನು ನುಡಿಯಬಾರದು.
- Verse 2: ಕೆಟ್ಟ ಕಾರ್ಯವನ್ನು ಮಾಡುವವರು ಬಹು ಮಂದಿ ಇದ್ದಾರೆ. ಆದರೂ ನೀವು ಅವರ ಜೊತೆ ಸೇರಬಾರದು. ಬಹು ಮಂದಿಯ ಮಾತಿಗೆ ಒಪ್ಪಿ ನ್ಯಾಯವನ್ನು ಕೆಡಿಸುವ ಸಾಕ್ಷಿಯನ್ನು ಹೇಳಬಾರದು.
- Verse 3: ಅಲ್ಲದೆ ಬಡವನ ಮೇಲಿನ ಕರುಣೆಯಿಂದ ಪಕ್ಷಪಾತದ ತೀರ್ಮಾನವನ್ನು ಮಾಡಬಾರದು.
- Verse 4: “ನಿನ್ನ ವೈರಿಯ ಎತ್ತಾಗಲಿ ಕತ್ತೆಯಾಗಲಿ ತಪ್ಪಿಸಿಕೊಂಡು ತಿರುಗಾಡುವಾಗ ಅದು ನಿನಗೆ ಸಿಕ್ಕಿದರೆ ಅದನ್ನು ಅವನ ಬಳಿಗೆ ಹೊಡೆದುಕೊಂಡು ಹೋಗಿ ಒಪ್ಪಿಸಬೇಕು.
- Verse 5: ನಿನ್ನ ಹಗೆಯವನ ಕತ್ತೆ ಹೊರೆಯನ್ನು ತಾಳದೆ ಕೆಳಗೆ ಬಿದ್ದಿರುವುದನ್ನು ಕಂಡರೆ ಅದನ್ನು ಎಬ್ಬಿಸುವುದಕ್ಕೆ ನಿನಗೆ ಮನಸ್ಸಿಲ್ಲದಿದ್ದರೂ ಅವನಿಗೆ ಸಹಾಯ ಮಾಡಿ ಅದನ್ನು ಎಬ್ಬಿಸಲೇ ಬೇಕು.
- Verse 6: “ನಿಮ್ಮಲ್ಲಿರುವ ಬಡವರು ನ್ಯಾಯಕೋರಿ ಬರುವಾಗ ಅವರಿಗೆ ನೀವು ನ್ಯಾಯ ತಪ್ಪಿಸಬಾರದು. ಮೋಸದ ಕಾರ್ಯದಿಂದ ದೂರವಿರಬೇಕು;
- Verse 7: ನಿರಪರಾಧಿಯೂ ನೀತಿವಂತನೂ ಆದ ವ್ಯಕ್ತಿಗೆ ಮರಣದಂಡನೆ ವಿಧಿಸಲೇಕೂಡದು; ಅಂಥ ದುಷ್ಕೃತ್ಯ ಮಾಡಿದವನಿಗೆ ನಾನು ಶಿಕ್ಷೆ ವಿಧಿಸದೆ ಬಿಡುವುದಿಲ್ಲ.
- Verse 8: ಲಂಚವನ್ನು ತೆಗೆದುಕೊಳ್ಳಬಾರದು. ಲಂಚವು ಕಣ್ಣುಳ್ಳವರನ್ನು ಕುರುಡರನ್ನಾಗಿಸುತ್ತದೆ; ನಿರಪರಾಧಿಗೆ ದೊರಕಬೇಕಾದ ನ್ಯಾಯವನ್ನು ಕೆಡಿಸುತ್ತದೆ.
- Verse 9: “ಪರದೇಶೀಯರನ್ನು ಪೀಡಿಸಬಾರದು. ನೀವು ಕೂಡ ಈಜಿಪ್ಟಿನಲ್ಲಿ ಪರದೇಶೀಯರಾಗಿದ್ದಿರಲ್ಲವೆ? ಅಂಥವರ ಮನೋವ್ಯಥೆ ನಿಮಗೆ ಗೊತ್ತೇ ಇದೆ.
- Verse 10: “ಆರು ವರ್ಷ ನಿಮ್ಮ ಹೊಲಗದ್ದೆಗಳಲ್ಲಿ ಬಿತ್ತನೆಮಾಡಿ ಬೆಳೆತೆಗೆದುಕೊಳ್ಳಿ.
- Verse 11: “ಆದರೆ ಏಳನೆಯ ವರ್ಷ ಆ ಭೂಮಿಯನ್ನು ಬೀಳುಬಿಡಿ. ನಿಮ್ಮ ನಾಡಿನ ಬಡವರು ಅದರಲ್ಲಿ ತಾನಾಗಿ ಬೆಳೆಯುವುದನ್ನು ತಿನ್ನಲಿ. ಮಿಕ್ಕದ್ದನ್ನು ಕಾಡುಮೃಗಗಳು ಮೇಯಲಿ. ನಿಮ್ಮ ದ್ರಾಕ್ಷಿತೋಟಗಳಲ್ಲಿ ಹಾಗೂ ಎಣ್ಣೇ ಮರ ತೋಪುಗಳ ವಿಷಯದಲ್ಲೂ ಅದೇ ರೀತಿಯಾಗಿ ಮಾಡಿ.
- Verse 12: ವಾರದಲ್ಲಿ ನೀವು ಆರು ದಿವಸ ಕೆಲಸಮಾಡಿ. ಏಳನೆಯ ದಿವಸ ಯಾವ ಕೆಲಸವನ್ನೂ ಮಾಡದಿರಿ. ಆ ದಿನ ನಿಮ್ಮ ಎತ್ತುಗಳು, ಕತ್ತೆಗಳು, ದಾಸದಾಸಿಯರು ಹಾಗೂ ಪರದೇಶೀಯರು ವಿಶ್ರಮಿಸಿಕೊಳ್ಳಲಿ.
- Verse 13: “ನಾನು ನಿಮಗೆ ವಿಧಿಸಿದ್ದನ್ನೆಲ್ಲ ಜಾಗರೂಕತೆಯಿಂದ ಅನುಸರಿಸಿ ನಡೆಯಿರಿ. ಬೇರೆ ಯಾವ ದೇವರ ಹೆಸರನ್ನು ಸ್ಮರಿಸಬೇಡಿ, ಉಚ್ಚರಿಸಲೂ ಬೇಡಿ.
- Verse 14: “ನೀವು ವರ್ಷಕ್ಕೆ ಮೂರು ಸಾರಿ ನನಗೆ ಹಬ್ಬ ಮಾಡಬೇಕು.
- Verse 15: ಹುಳಿಯಿಲ್ಲದ ರೊಟ್ಟಿ ತಿನ್ನುವ ಹಬ್ಬ ಒಂದು. ನಾನು ನಿಮಗೆ ಆಜ್ಞಾಪಿಸಿದಂತೆ ಚೈತ್ರಮಾಸದ ನಿಗದಿಯಾದ ಕಾಲದಲ್ಲಿ ಏಳು ದಿವಸವೂ ಹುಳಿಯಿಲ್ಲದ ರೊಟ್ಟಿಯನ್ನು ತಿನ್ನಬೇಕು. ಏಕೆಂದರೆ ಆ ಮಾಸದಲ್ಲೇ ನೀವು ಈಜಿಪ್ಟಿನಿಂದ ಹೊರಟುಬಂದದ್ದು. ನನ್ನ ಸನ್ನಿಧಿಗೆ ಬರುವ ಪ್ರತಿಯೊಬ್ಬನು ಕಾಣಿಕೆಯಿಲ್ಲದೆ ಬರೀ ಕೈಯಲ್ಲಿ ಬರಕೂಡದು.
- Verse 16: “ಅಲ್ಲದೆ ನೀವು ಬಿತ್ತನೆ ಮಾಡಿದ ಹೊಲಗದ್ದೆಗಳಲ್ಲಿ ಮೊದಲನೆಯ ಫಲ ದೊರೆತಾಗ ಸುಗ್ಗಿಯ ಹಬ್ಬವನ್ನು ಆಚರಿಸಬೇಕು. ವರ್ಷದ ಕೊನೆಯಲ್ಲಿ ಅಂದರೆ ಹೊಲ ತೋಟಗಳಿಂದ ನೀವು ಬೆಳೆಯನ್ನು ಕೂಡಿಸುವಾಗ, ಸುಗ್ಗಿಯ (ಫಲಸಂಗ್ರಹದ) ಹಬ್ಬವನ್ನು ಆಚರಿಸಬೇಕು.
- Verse 17: ಹೀಗೆ ವರ್ಷಕ್ಕೆ ಮೂರು ಸಾರಿ ನಿಮ್ಮ ಗಂಡಸರೆಲ್ಲರು ಸರ್ವೇಶ್ವರನೂ ದೇವರೂ ಆದ ನನ್ನ ಸನ್ನಿಧಿಗೆ ಬರಬೇಕು.
- Verse 18: “ನನಗೆ ಬಲಿಯನ್ನು ಅರ್ಪಿಸುವಾಗ ಆ ಬಲಿ ಪ್ರಾಣಿಯ ರಕ್ತದೊಡನೆ ಹುಳಿಯಾದ ಹಿಟ್ಟನ್ನು ಸಮರ್ಪಿಸಬಾರದು. ನನ್ನ ಹಬ್ಬದಲ್ಲಿ ನೀವು ನನಗೆ ಸಮರ್ಪಿಸಬೇಕಾದ ಪ್ರಾಣಿಯ ಕೊಬ್ಬನ್ನು ಮಾರನೆಯ ದಿನದವರೆಗೂ ಇಡಲೇಕೂಡದು.
- Verse 19: “ನಿಮ್ಮ ಬೆಳೆಯ ಪ್ರಥಮ ಫಲದಲ್ಲಿ ಅತಿಶ್ರೇಷ್ಠವಾದುದ್ದನ್ನು ನಿಮ್ಮ ದೇವರೂ ಸರ್ವೇಶ್ವರನೂ ಆದ ನನ್ನ ಮಂದಿರಕ್ಕೆ ತರಬೇಕು. "ಮರಿಯನ್ನು ಅದರ ತಾಯಿಯ ಹಾಲಿನಲ್ಲಿ ಬೇಯಿಸಬಾರದು.
- Verse 20: “ಇಗೋ, ದಾರಿಯಲ್ಲಿ ನಿಮ್ಮನ್ನು ಕಾಪಾಡುವುದಕ್ಕೆ ಹಾಗು ನಾನು ಗೊತ್ತುಮಾಡಿರುವ ಸ್ಥಳಕ್ಕೆ ನಿಮ್ಮನ್ನು ಕರೆದುತರುವುದಕ್ಕೆ ಒಬ್ಬ ದೂತನನ್ನು ನಿಮ್ಮ ಮುಂದೆ ಕಳಿಸುತ್ತೇನೆ.
- Verse 21: ನೀವು ಆತನಲ್ಲಿ ಲಕ್ಷ್ಯವಿಟ್ಟು ಮಾತಿಗೆ ಕಿವಿಗೊಡಬೇಕು. ಆತನಿಗೆ ಅವಿಧೇಯರಾಗಿ ಇರಬಾರದು. ಏಕೆಂದರೆ ಆತ ಬರುವುದು ನನ್ನ ಹೆಸರಿನಲ್ಲಿ. ನೀವು ಅವಿಧೇಯರಾದರೆ ಆತ ನಿಮ್ಮನ್ನು ಕ್ಷಮಿಸಲಾರನು.
- Verse 22: ನೀವು ಆತನ ಮಾತನ್ನು ಶ್ರದ್ಧೆಯಿಂದ ಆಲಿಸಿ, ನನ್ನ ಆಶೆಗಳನ್ನೆಲ್ಲ ಪಾಲಿಸಿದರೆ ನಾನು ನಿಮ್ಮ ಶತ್ರುಗಳಿಗೆ ಶತ್ರುವಾಗಿಯೂ ನಿಮ್ಮನ್ನು ಪೀಡಿಸುವವರನ್ನು ಪೀಡಿಸುವವನಾಗಿಯೂ ಇರುವೆನು.
- Verse 23: ನನ್ನ ದೂತನು ನಿಮ್ಮ ಮುಂದೆ ನಡೆದು ಅಮೋರಿಯರು, ಹಿತ್ತಿಯರು, ಪೆರಿಜೀಯರು, ಕಾನಾನ್ಯರು, ಹಿವ್ವಿಯರು ಹಾಗೂ ಯೆಬೂಸಿಯರು ಇರುವ ನಾಡಿಗೆ ನಿಮ್ಮನ್ನು ಸೇರಿಸುವನು. ಅವರನ್ನಾದರೋ ನಾನು ನಿರ್ಮೂಲ ಮಾಡುವೆನು.
- Verse 24: ಅವರ ದೇವತೆಗಳನ್ನು ನೀವು ನಮಸ್ಕರಿಸಬಾರದು, ಪೂಜಿಸಬಾರದು ಮಾತ್ರವಲ್ಲ ಅವರ ಆಚರಣೆಗಳನ್ನು ಅನುಸರಿಸಲೇಬಾರದು. ಆ ಜನಗಳನ್ನು ನಿರ್ಮೂಲ ಮಾಡಿ ವಿಗ್ರಹಸ್ತಂಭಗಳನ್ನು ನಾಶಮಾಡಬೇಕು.
- Verse 25: ನಿಮ್ಮ ದೇವರೂ ಸರ್ವೇಶ್ವರನೂ ಆದ ನನ್ನೊಬ್ಬನನ್ನೇ ಆರಾಧಿಸಬೇಕು. ಆಗ ನಿಮ್ಮ ಅನ್ನಪಾನಗಳನ್ನು ಆಶೀರ್ವದಿಸುವೆನು. ನಿಮ್ಮೊಳಗೆ ಯಾವ ವ್ಯಾಧಿಯೂ ಇರದಂತೆ ಮಾಡುವೆನು.
- Verse 26: ನಿಮ್ಮ ನಾಡಿನಲ್ಲಿ ಗರ್ಭಸ್ರಾವವಾಗಲಿ ಬಂಜೆತನವಾಗಲಿ ಇರುವುದಿಲ್ಲ. ನಿಮಗೆ ಪೂರ್ಣವಾದ ಆಯುಸ್ಸನ್ನು ಕೊಡುವೆನು.
- Verse 27: ನೀವು ಹೋಗುವ ಎಲ್ಲ ಕಡೆಯಲ್ಲಿಯೂ ನಾನು ಜನಗಳ ಮನಸ್ಸಿನಲ್ಲಿ ಹೆದರಿಕೆಯನ್ನು ಹುಟ್ಟಿಸಿ, ಕಳವಳವನ್ನು ಉಂಟುಮಾಡಿ, ನಿಮ್ಮನ್ನು ವಿರೋಧಿಸುವವರು ಓಡಿಹೋಗುವಂತೆ ಮಾಡುವೆನು.
- Verse 28: ನಿಮಗೆ ಮುಂಚಿತವಾಗಿ ಕಣಜದ ಹುಳುಗಳನ್ನು ಕಳಿಸುವೆನು. ಅವು, ಆ ಹಿವ್ವಿಯರು, ಕಾನಾನ್ಯರು ಹಾಗೂ ಹಿತ್ತಿಯರು ನಿಮ್ಮ ಮುಂದೆ ನಿಲ್ಲದಂತೆ ಓಡಿಸಿ ಬಿಡುವವು.
- Verse 29: ಆದರೆ ನಾನು ಒಂದೇ ವರ್ಷದೊಳಗೆ ಅವರೆಲ್ಲರನ್ನು ಅಲ್ಲಿಂದ ಹೊರಡಿಸುವುದಿಲ್ಲ. ಏಕೆಂದರೆ ಆ ನಾಡಿನಲ್ಲಿ ಜನರು ಕಡಿಮೆಯಾಗುವುದರಿಂದ ಕಾಡುಮೃಗಗಳು ಹೆಚ್ಚಿ ನಿಮಗೆ ತೊಂದರೆಗೆ ಕಾರಣವಾಗಬಹುದು.
- Verse 30: ನೀವು ಅಭಿವೃದ್ಧಿಯಾಗಿ ನಾಡಿನಲ್ಲೆಲ್ಲಾ ತುಂಬಿಕೊಳ್ಳುವ ತನಕ ಅವರನ್ನು ಸ್ವಲ್ಪ ಸ್ವಲ್ಪವಾಗಿ ಹೊರಡಿಸುತ್ತಿರುವೆನು.
- Verse 31: ಕೆಂಪು ಸಮುದ್ರದಿಂದ ಫಿಲಿಷ್ಟಿಯರ ದೇಶದ ಬಳಿಯಿರುವ ಸಮುದ್ರದವರೆಗೂ ಮತ್ತು ಈ ಮರುಭೂಮಿಯಿಂದ ಯೂಫ್ರೆಟೀಸ್ ಮಹಾ ನದಿಯವರೆಗೂ ಇರುವ ನಾಡನ್ನೆಲ್ಲಾ ನಿಮಗೆ ನೇಮಿಸಿ ಅದರಲ್ಲಿರುವ ನಿವಾಸಿಗಳನ್ನು ನಿಮಗೆ ಅಧೀನಪಡಿಸುವೆನು.
- Verse 32: ನೀವು ಅವರೊಡನೆಯಾಗಲಿ, ಅವರ ದೇವತೆಗಳೊಡನೆಯಾಗಲಿ ಯಾವ ವಿಧವಾದ ಒಪ್ಪಂದವನ್ನೂ ಮಾಡಿಕೊಳ್ಳಬಾರದು.
- Verse 33: ಅವರು ನಿಮ್ಮ ನಾಡಿನಲ್ಲಿ ವಾಸವಾಗಿರಬಾರದು. ವಾಸವಾಗಿದ್ದರೆ ನನಗೆ ವಿರೋಧವಾಗಿ ನಿಮ್ಮಲ್ಲಿ ದ್ರೋಹಬುದ್ಧಿಯನ್ನು ಹುಟ್ಟಿಸಬಹುದು. ನೀವು ಅವರ ದೇವತೆಗಳನ್ನು ಪೂಜಿಸಿದರೆ ಆ ಪೂಜೆಯೆ ನಿಮಗೆ ಉರುಲಾಗುವುದು.