ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಜ್ಞಾನೋಕ್ತಿಗಳು
19ನೇ ಅಧ್ಯಾಯ
- Verse 1: ಕಪಟವಾಗಿ ಮಾತಾಡುವ ಮೂಢನಿಗಿಂತ ನಿರ್ದೋಷಿಯಾಗಿ ನಡೆವ ಬಡವನೇ ಲೇಸು.
- Verse 2: ಅರಿವಿಲ್ಲದ ಹುರುಪು ಸರಿಯಲ್ಲ; ದುಡುಕುವ ಕಾಲು ದಾರಿತಪ್ಪುವುದು ದಿಟ.
- Verse 3: ಮನುಷ್ಯನ ಬಾಳಿನ ಅಳಿವು ತನ್ನ ಮೂರ್ಖತನದಿಂದ; ಆದರೂ ಅವನು ಸಿಡಿದೇಳುವುದು ಸರ್ವೇಶ್ವರನ ವಿರುದ್ಧ.
- Verse 4: ಧನವಂತನಿಗೆ ಸ್ನೇಹಿತರು ಬಹುಮಂದಿ; ಬಡವನಿಗಿದ್ದ ಗೆಳೆಯನೂ ಪರಾರಿ.
- Verse 5: ಕಳ್ಳಸಾಕ್ಷಿ ದಂಡನೆಯನ್ನು ಪಡೆಯದಿರನು; ಸುಳ್ಳಾಡುವವನು ಅದನ್ನು ತಪ್ಪಿಸಿಕೊಳ್ಳಲಾರನು.
- Verse 6: ಉದಾರಿಯ ಕೃಪೆಕೋರುವವರು ಅನೇಕರು; ದಾನಶೂರನಿಗೆ ಎಲ್ಲರು ಸ್ನೇಹಿತರು.
- Verse 7: ಬಡವನನ್ನು ಬಂಧುಗಳೆಲ್ಲರು ಹಗೆಮಾಡುವರು; ಮಿತ್ರರೋ ಖರೆಯಾಗಿ ಅವನಿಗೆ ದೂರವಾಗುವರು; ಹಿಂಬಾಲಿಸಿ ಬರುವವರು ಅವನ ಬಾಯಿಮಾತನ್ನು ನಂಬರು.
- Verse 8: ಬುದ್ಧಿಯನ್ನು ಗಳಿಸುವವನು ತನಗೆ ತಾನೇ ಗೆಳೆಯನು; ವಿವೇಕವನ್ನು ಕಾಪಾಡುವವನು ಪಡೆಯುವನು ಏಳಿಗೆಯನ್ನು.
- Verse 9: ಕಳ್ಳಸಾಕ್ಷಿ ದಂಡನೆಯನ್ನು ಹೊಂದದಿರನು; ಸುಳ್ಳಾಡುವವನು ಹಾಳಾಗಿ ಹೋಗುವನು.
- Verse 10: ಭೋಗಜೀವನ ಬುದ್ಧಿಹೀನನಿಗೆ ಯೋಗ್ಯವಲ್ಲ; ದೊರೆಗಳ ಮೇಲೆ ದೊರೆತನ ದಾಸನಿಗೆ ತಕ್ಕುದಲ್ಲ.
- Verse 11: ವಿವೇಕಿಯು ಸಿಟ್ಟುಗೊಳ್ಳಲು ತಡಮಾಡುತ್ತಾನೆ; ತಪ್ಪನ್ನು ಕ್ಷಮಿಸುವುದೆಂದರೆ ಅವನಿಗೆ ಹೆಮ್ಮೆ.
- Verse 12: ರಾಜನ ರೋಷ ಸಿಂಹದ ಗರ್ಜನೆಯು; ಅವನ ದಯೆ ಹುಲ್ಲಿನ ಮೇಲಣ ಇಬ್ಬನಿಯು.
- Verse 13: ಬುದ್ಧಿಹೀನನಾದ ಮಗ ತಂದೆಗೆ ತರುತ್ತಾನೆ ಹಾನಿ; ಜಗಳವಾಡುವ ಹೆಂಡತಿ ತಟತಟನೆ ತೊಟ್ಟಿಕ್ಕುವ ಹನಿ.
- Verse 14: ಮನೆಮಾರು, ಆಸ್ತಿಪಾಸ್ತಿ ಬರುತ್ತವೆ ಪಿತ್ರಾರ್ಜಿತವಾಗಿ; ವಿವೇಕಿಯಾದ ಹೆಂಡತಿ ಸಿಕ್ಕುವುದು ಸರ್ವೇಶ್ವರನ ಅನುಗ್ರಹವಾಗಿ.
- Verse 15: ಮೈಗಳ್ಳತನ ಗಾಢನಿದ್ರೆಯಲ್ಲಿ ಮುಳುಗಿಸುವುದು; ಸೋಮಾರಿಯು ಹಸಿವಿನಿಂದ ಬಳಲುವನು.
- Verse 16: ದೈವಾಜ್ಞೆಯನ್ನು ಪಾಲಿಸುವವನು ತನ್ನನ್ನೇ ಕಾಪಾಡಿಕೊಳ್ಳುವನು; ದೈವವಾರ್ತೆಯ ಬಗ್ಗೆ ಅಜಾಗ್ರತನಾಗಿರುವವನು ಸಾಯುವನು.
- Verse 17: ಬಡವರಿಗೆ ತೋರುವ ದಯೆ ಸರ್ವೇಶ್ವರನಿಗೆ ಕೊಟ್ಟ ಸಾಲ; ಆ ಉಪಕಾರಕ್ಕೆ ಸರ್ವೇಶ್ವರನಿಂದಲೆ ಪ್ರತ್ಯುಪಕಾರ.
- Verse 18: ತಿದ್ದಿಕೊಳ್ಳುವನೆಂಬ ನಂಬಿಕೆಯಿರುವಾಗಲೆ ಮಗನನ್ನು ಶಿಕ್ಷಿಸು; ಇಲ್ಲವಾದರೆ ಅವನ ಅಳಿವಿಗೆ ನೀನೇ ಕಾರಣವಾಗುವೆ.
- Verse 19: ಕಡುಕೋಪಿ ದಂಡನೆಯನ್ನು ಅನುಭವಿಸಲಿ ಬಿಡು; ಒಮ್ಮೆ ಬಿಡಿಸಿದರೆ, ಬಾರಿಬಾರಿಗೂ ಬಿಡಿಸಬೇಕಾಗುವುದು.
- Verse 20: ಬುದ್ಧಿವಾದವನ್ನು ಕೇಳು, ತಿದ್ದುಪಾಟನ್ನು ಅಂಗೀಕರಿಸು; ಹಾಗೆ ಮಾಡಿದರೆ ಮುಂದಕ್ಕೆ ಜ್ಞಾನಿಯಾಗಿ ಬಾಳುವೆ.
- Verse 21: ಮನುಜನ ಮನದಲ್ಲಿ ಏಳುವ ಯೋಜನೆಗಳು ಹಲವು; ಈಡೇರುವುದಾದರೊ ಸರ್ವೇಶ್ವರನ ಸಂಕಲ್ಪವು.
- Verse 22: ಅತಿಯಾಸೆ ಗತಿಕೇಡು; ಇದ್ದೂ ಇಲ್ಲವೆನ್ನುವವನಿಗಿಂತ ಏನೂ ಇಲ್ಲದವನೆ ಲೇಸು.
- Verse 23: ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವನಿಗೆ ಜೀವಪ್ರಾಪ್ತಿ; ಅಂಥವನು ಸಂತುಷ್ಟನಾಗಿ ಬಾಳುವನು, ಅವನಿಗೆ ಕೇಡು ಸಂಭವಿಸದು.
- Verse 24: ಮೈಗಳ್ಳ ಕೈ ಹಾಕುತ್ತಾನೆ ತುತ್ತಿಗೆ; ಆದರೆ ಎತ್ತಲಾರ ಬಾಯ ಹತ್ತಿರಕ್ಕೆ.
- Verse 25: ಕುಚೋದ್ಯನಿಗೆ ಹೊಡೆ, ಮುಗ್ಧರು ಅದನ್ನು ಕಂಡು ಜಾಣರಾಗುವರು; ಜ್ಞಾನಿಯನ್ನು ಗದರಿಸಿದರೆ ಸಾಕು, ಅವನು ಮತ್ತಷ್ಟು ಜ್ಞಾನಿಯಾಗುವನು.
- Verse 26: ತಂದೆಯನ್ನು ಹೊಡೆದು, ತಾಯಿಯನ್ನು ಓಡಿಸುವ ಮಗನು ನಿಂದೆ ಅವಮಾನಗಳಿಗೆ ತುತ್ತಾಗುವನು.
- Verse 27: ಮಗನೇ, ಉಪದೇಶ ಕೇಳುವುದನ್ನು ನಿಲ್ಲಿಸಬೇಡ; ನಿಲ್ಲಿಸಿದೆಯಾದರೆ ಬುದ್ಧಿಮಾತಿನಿಂದ ವಂಚಿತನಾಗುವೆ.
- Verse 28: ನೀಚಸಾಕ್ಷಿ ನ್ಯಾಯತೀರ್ಪನ್ನು ಮರ್ಯಾದಿಸನು; ದುಷ್ಟಸಾಕ್ಷಿ ದ್ರೋಹವನ್ನೂ ನುಂಗಿಬಿಡುವನು.
- Verse 29: ಕುಚೋದ್ಯನಿಗೆ ಕಾದಿದೆ ನ್ಯಾಯತೀರ್ಪು; ದಡ್ಡನ ಬೆನ್ನಿಗೆ ಬೀಳಲಿದೆ ದೊಣ್ಣೆಪೆಟ್ಟು.