ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯೆಶಾಯ
38ನೇ ಅಧ್ಯಾಯ
- Verse 1: ಆ ದಿನಗಳಲ್ಲಿ ಹಿಜ್ಕೀಯನು ರೋಗದಿಂದ ಮರಣಾವಸ್ಥೆಯಲ್ಲಿದ್ದನು. ಆಗ ಆಮೋಚನ ಮಗನೂ ಪ್ರವಾದಿಯೂ ಆದ ಯೆಶಾಯನು ಅವನ ಬಳಿಗೆ ಬಂದು, “ನೀನು ಉಳಿಯುವ ಹಾಗಿಲ್ಲ, ಸಾಯಬೇಕಾಗಿದೆ. ಆದುದರಿಂದ ನಿನ್ನ ಸಂಸಾರವನ್ನು ವ್ಯವಸ್ಥೆಮಾಡಬೇಕು ಎಂದು ಸರ್ವೇಶ್ವರ ಹೇಳಿದ್ದಾರೆ,” ಎಂದು ತಿಳಿಸಿದನು.
- Verse 2: ಇದನ್ನು ಕೇಳಿದೊಡನೆ ಹಿಜ್ಕೀಯನು ಗೋಡೆಯ ಕಡೆಗೆ ತಿರುಗಿಕೊಂಡು,
- Verse 3: “ಸರ್ವೇಶ್ವರಾ, ನಿಮಗೆ ಶ್ರದ್ಧೆಯಿಂದಲೂ, ಪ್ರಾಮಾಣಿಕತೆಯಿಂದಲೂ ಸೇವೆಮಾಡಿದ್ದೇನೆ. ನಿಮ್ಮ ದೃಷ್ಟಿಯಲ್ಲಿ ಒಳ್ಳೆಯವನಾಗಿಯೇ ನಡೆದುಕೊಂಡಿದ್ದೇನೆ. ಇದನ್ನು ದಯೆಯಿಂದ ನೆನಪಿಗೆ ತಂದುಕೊಳ್ಳಿ,” ಎಂದು ಬಹಳವಾಗಿ ಕಣ್ಣೀರಿಡುತ್ತಾ ಪ್ರಾರ್ಥನೆ ಮಾಡಿದನು.
- Verse 4: ಆಗ ಸರ್ವೇಶ್ವರ ಯೆಶಾಯನಿಗೆ,
- Verse 5: “ನೀನು ಹೋಗಿ ಹಿಜ್ಕೀಯನಿಗೆ ಹೀಗೆಂದು ತಿಳಿಸು : ‘ನಾನು ನಿನ್ನ ಪ್ರಾರ್ಥನೆಯನ್ನು ಕೇಳಿದ್ದೇನೆ, ನಿನ್ನ ಕಣ್ಣೀರನ್ನು ನೋಡಿದ್ದೇನೆ; ಇಗೋ, ನಿನ್ನ ಆಯುಷ್ಯಕ್ಕೆ ಇನ್ನೂ ಹದಿನೈದು ವರ್ಷಗಳನ್ನು ಸೇರಿಸುತ್ತೇನೆ.
- Verse 6: ನಿನ್ನನ್ನು ಮತ್ತು ಈ ಪಟ್ಟಣವನ್ನು ಅಸ್ಸೀರಿಯದ ಅರಸನ ಕೈಗೆ ಸಿಕ್ಕದಂತೆ ತಪ್ಪಿಸುತ್ತೇನೆ. ಈ ಪಟ್ಟಣವನ್ನು ಉಳಿಸಿ ಕಾಪಾಡುತ್ತೇನೆ’.”
- Verse 7: ಅದಕ್ಕೆ ಯೆಶಾಯನು, “ಸರ್ವೇಶ್ವರ ನುಡಿದದ್ದನ್ನು ನೆರವೇರಿಸುವರು ಎಂಬುದಕ್ಕೆ ಈ ಗುರುತನ್ನು ಕಾಣುವೆ :
- Verse 8: ಇಗೋ, ಅಹಾಜನು ಕಟ್ಟಿಸಿದ ನೆರಳು ಗಡಿಯಾರದಲ್ಲಿ ಸೂರ್ಯನ ನೆರಳು ಹತ್ತು ಮೆಟ್ಟಲು ಹಿಂದಕ್ಕೆ ಬರುವಂತೆ ಮಾಡುವರು,” ಎಂದು ತಿಳಿಸಿದನು. ಅಂತೆಯೇ ಮುಂದೆ ಹೋಗಿದ್ದ ನೆರಳು ಹತ್ತು ಮೆಟ್ಟಲು ಹಿಂದಕ್ಕೆ ಬಂದಿತು.
- Verse 9: ಜುದೇಯದ ಅರಸ ಹಿಜ್ಕೀಯನು ರೋಗದಿಂದ ಗುಣಹೊಂದಿದಾಗ ಬರೆದ ಸ್ತುತಿಗೀತೆ :
- Verse 10: ನನ್ನ ರೋಗದಲ್ಲಿ ನಾನು ಇಂತೆಂದುಕೊಂಡೆ : ಮಧ್ಯಪ್ರಾಯದಲ್ಲೇ ಮೃತ್ಯುಲೋಕವನ್ನು ಸಮೀಪಿಸಿರುವೆ ನನ್ನ ಆಯುಷ್ಯವನ್ನು ನಾ ಕಳೆದುಕೊಂಡಿರುವೆ.
- Verse 11: ಜೀವಲೋಕದಲ್ಲಿ ಇನ್ನು ದೇವನನ್ನು ಕಾಣೆನೆಂದುಕೊಂಡೆ ಭೂಲೋಕನಿವಾಸಿಗಳಲ್ಲಿ ಒಬ್ಬನನ್ನೂ ನೋಡಲಾರೆನೆಂದುಕೊಂಡೆ.
- Verse 12: ಕುರುಬನು ತನ್ನ ಗುಡಿಸಲನ್ನು ಕಿತ್ತುಹಾಕುವಂತೆ ನೇಯಿಗೆಯವನು ತನ್ನ ಹಾಸನ್ನು ಸುತ್ತುವಂತೆ ಮಗ್ಗದಿಂದ ಅವನು ದಾರವನ್ನು ಕತ್ತರಿಸುವಂತೆ ಬೆಳಗುಬೈಗಿನೊಳಗೆ ನನ್ನ ಆಯುಷ್ಯವನ್ನು ನೀ ಮುಗಿಸುತ್ತಿರುವೆನೆಂದೆ.
- Verse 13: ಸಿಂಹವು ಮೇಲೆಬಿದ್ದು ಮೂಳೆ ಮುರಿದಂತೆ ನನಗಾಗುತ್ತಿತ್ತು ಅತೀವ ಬಾಧೆ, ಆದರೂ ಇರುಳೆಲ್ಲ ಮೊರೆಯಿಡುತ್ತಿದ್ದೆ ಬೆಳಗು ಬೈಗಿನೊಳಗೆ ನೀ ನನ್ನ ಮುಗಿಸುತ್ತಿರುವೆನೆಂದೆ.
- Verse 14: ಕಿಚುಗುಟ್ಟಿದೆ ನಾ ಬಾನಕ್ಕಿ-ಬಕಗಳಂತೆ ಗುಬ್ಬಳಿಸಿದೆ ನಾ ಪಾರಿವಾಳದಂತೆ ಕಂಗೆಟ್ಟೆ, ನಾ ಮೇಲೆ ಮೇಲಕ್ಕೆ ನೋಡುತಾ ಸರ್ವೇಶ್ವರಾ, ನಾನಿರುವೆ ಬಾಧೆಪಡುತಾ ನೀ ಎನಗೆ ನೆರವಾಗಲು ಬಾ ಎನ್ನುತಾ.
- Verse 15: ನುಡಿದಂತೆ ಪ್ರಭೂ ನೆರವೇರಿಸಿಹನು; ನಾನೇನು ಹೇಳಲಿ; ಮುಳುಗಿದೆ ನನ್ನಾತ್ಮ ದುಃಖಸಾಗರದಲಿ ನಿದ್ರೆಯಿಲ್ಲದೆ ಸೊರಗುತಿದೆ ನನ್ನ ಜೀವಮಾನವಿಡೀ.
- Verse 16: ಸರ್ವೇಶ್ವರಾ, ಮಾನವನ ಜೀವನ ಇಂತಿದೆ, ಇವುಗಳಿಂದಲೇ ನನ್ನ ಆತ್ಮ ಚೇತನಗೊಳ್ಳುತಿದೆ, ನೀನೀಗ ಗುಣಪಡಿಸು, ನಾ ಬಾಳುವೆ.
- Verse 17: ನಾ ಪಟ್ಟ ದುಃಖವು ನನ್ನ ಸುಖಕ್ಕಾಗಿಯೇ ನನ್ನಾತ್ಮವನ್ನು ನಾಶಕೂಪದಿಂದ ರಕ್ಷಿಸಿದ್ದು ನಿನ್ನ ಪ್ರೀತಿಯೇ; ನನ್ನ ಪಾಪಗಳನ್ನೆಲ್ಲಾ ನೀ ಹಾಕಿರುವೆ ನಿನ್ನ ಬೆನ್ನ ಹಿಂದೆ.
- Verse 18: ಸತ್ತವರು ನಿನ್ನನ್ನು ಕೀರ್ತಿಸರು ಪಾತಾಳದವರು ನಿನ್ನನ್ನು ಸ್ತುತಿಸರು ಅಧೋಲೋಕಕ್ಕೆ ಇಳಿದುಹೋದವರು ನಿನ್ನ ಸತ್ಯಸಂಧತೆಯನ್ನು ಆಶ್ರಯಿಸರು.
- Verse 19: ಜೀವಂತನು, ಜೀವಂತನು ಮಾತ್ರವೇ ನಿನ್ನ ಸ್ತುತಿಮಾಡುವಂತೆ ನಾನಿಂದು ನಿನ್ನನ್ನು ಜೀವಂತನಾಗಿ ಸ್ತುತಿಮಾಡುತ್ತಿರುವೆ ನಿನ್ನ ಸತ್ಯಸಂಧತೆಯನ್ನು ಮಕ್ಕಳಿಗೆ ಬೋಧಿಸುವನು ತಂದೆ.
- Verse 20: ಸರ್ವೇಶ್ವರಾ, ನೀ ನನ್ನ ಉದ್ಧಾರಕ ಹೊಗಳುವೆ ನಿನ್ನ ನಾ ತಂತಿವಾದ್ಯ ಸಮೇತ ದಿನನಿತ್ಯ, ನಿನ್ನಾಲಯದೊಳು, ಜೀವವಿರುವ ತನಕ.
- Verse 21: ಯೆಶಾಯನು ಹಿಜ್ಕೀಯನಿಗೆ ಅಂಜೂರದ ಹಣ್ಣುಗಳ ಅಡೆಯನ್ನು ತರಿಸಿ, ‘ನಿನ್ನ ಕುರುವಿನ ಮೇಲೆ ಕಟ್ಟು, ಆಗ ನೀನು ಗುಣಹೊಂದುವೆ,” ಎಂದು ಹೇಳಲು
- Verse 22: ಹಿಜ್ಕೀಯನು, “ನಾನು ಗುಣಹೊಂದಿ ಸರ್ವೇಶ್ವರ ಸ್ವಾಮಿಯ ಆಲಯವನ್ನು ಸೇರುವೆನು ಎಂಬುದಕ್ಕೆ ಗುರುತೇನು?” ಎಂದು ಕೇಳಿದನು.