पवित्र बाइबिल
ಹಳೆಯ ಒಡಂಬಡಿಕೆ
ಕೀರ್ತನೆಗಳು
7ನೇ ಅಧ್ಯಾಯ
- Verse 1: ನಿನ್ನಾಶ್ರಯವನರಸಿ ಹೇ ಸ್ವಾಮಿ ದೇವಾ, ನಾ ಬಂದಿಹೆನು I ಬೆನ್ನಟ್ಟಿ ಬರುವವರ ಕೈಯಿಂದ ತಪ್ಪಿಸಿ, ಕಾಪಾಡೆನ್ನನು II
- Verse 2: ಇಲ್ಲದಿರೆ ಶತ್ರು ತಿಳಿದಾನು ನನಗೆ ರಕ್ಷಕನಿಲ್ಲವೆಂದು I ಝಲ್ಲನೆ ಸೀಳಿಬಿಟ್ಟಾನು ಸಿಂಹದಂತೆ ಮೇಲೆಬಿದ್ದು II
- Verse 3: ಸ್ವಾಮಿ ದೇವಾ, ನಾನೀಪರಿ ನಡೆದಿರೆ : ಅಕ್ರಮಕ್ಕೆ ಕೈ ಹಾಕಿರೆ I ಮಿತ್ರದ್ರೋಹಿ ಆಗಿರೆ, ನಿಷ್ಕಾರಣ ಶತ್ರು ಸುಲಿಗೆ ಮಾಡಿರೆ II
- Verse 4: ಸ್ವಾಮಿ ದೇವಾ, ನಾನೀಪರಿ ನಡೆದಿರೆ : ಅಕ್ರಮಕ್ಕೆ ಕೈ ಹಾಕಿರೆ I ಮಿತ್ರದ್ರೋಹಿ ಆಗಿರೆ, ನಿಷ್ಕಾರಣ ಶತ್ರು ಸುಲಿಗೆ ಮಾಡಿರೆ II
- Verse 5: ಎನ್ನ ಬೆನ್ನಟ್ಟಿ ಬರಲಿ ವೈರಿ, ಕಾಲಿಂದೆನ್ನ ಮೆಟ್ಟಿ ತುಳಿಯಲಿ I ಎನ್ನ ಮಾನವನು ಮಣ್ಣುಪಾಲಾಗಿಸಲಿ, ನನ್ನನು ಸೋಲಿಸಿಬಿಡಲಿ II
- Verse 6: ಹೇ ಪ್ರಭು, ಎಚ್ಚರಗೊಳ್ಳು : ನ್ಯಾಯವನು ದೇವಾ, ನಿರ್ಣಯಿಸು I ಕೋಪದಿಂದೆದ್ದು ವಿರೋಧಿಗಳ ಕ್ರೋಧವನು ಭಂಗಪಡಿಸು II
- Verse 7: ಸಭೆ ಸೇರಲಿ ಸಕಲ ಜನಾಂಗಗಳು ನಿನ್ನ ಸುತ್ತಲು I ನೀ ಆಸ್ಥಾನವನೇರು, ಅವರನು ಪರಿಪಾಲಿಸಲು II
- Verse 8: ಹೇ ಪ್ರಭು, ಜಗದ ಜನಾಂಗಕೆ ನ್ಯಾಯ ದೊರಕಿಸುವವನು ನೀನು I ನನಗೂ ನ್ಯಾಯ ದೊರಕಿಸು : ನಿರಪರಾಧಿ, ನೀತಿವಂತ ನಾನು II
- Verse 9: ಮಾನವರ ಹೃನ್ಮನವನರಿತಿಹ ಸತ್ಯಸ್ವರೂಪಿ ದೇವಾ, I ದುರುಳರ ಕೆಡುಕನಳಿಸಯ್ಯಾ, ಸತ್ಯವಂತರನು ನೀ ಉಳಿಸಯ್ಯಾ II
- Verse 10: ನನಗೆ ರಕ್ಷೆ ನೀಡುವ ಗುರಾಣಿ, ದೇವನೇ I ನೇರಮನಸ್ಕರಿಗೆ ಸಂರಕ್ಷಣೆ ಆತನೆ II
- Verse 11: ನ್ಯಾಯಕ್ಕನುಸಾರ ತೀರ್ಪನೀಡುವಂಥವನು ದೇವನು I ದುರುಳರ ಮೇಲೆ ದಿನಬಿಡದೆ ಕೋಪವುಳ್ಳವನು ಆತನು II
- Verse 12: ತೀಡುವನು ಕತ್ತಿಯನು, ಹೂಡುವನು ಬಾಣವನು I ಪಡೆಯದಿರೆ ದುರುಳನು ಮನಪರಿವರ್ತನೆಯನು II
- Verse 13: ಸೇರಿಸಿಟ್ಟಿರುವನಾತ ಮಾರಕಾಸ್ತ್ರಗಳನು I ಗುರಿಯಿಟ್ಟು ನಿಂತಿರುವನು ಅಗ್ನಿಬಾಣಗಳನು II
- Verse 14: ಕೇಡನು ಹಡೆಯಲು ದುರುಳನು ಪಡುವ ಬೇನೆಯನು ನೋಡು I ಹಾನಿಯ ಹಡೆವನೆಂದೆಣಿಸಿ ಶೂನ್ಯವ ಹೆರುವುದ ನೋಡು II
- Verse 15: ಗುಣಿಯನು ತೋಡಿದನು; ಮಣ್ಣನು ಹೊರದೂಡಿದನು I ತೋಡಿದ ಗುಣಿಯಲಿ ತಾನೆ ತಟ್ಟನೆ ಬೀಳುವನು II
- Verse 16: ತಾನು ಮಾಡಿದ ಕುತಂತ್ರ ತನ್ನ ತಲೆಗೆ ಗಂಡಾಂತರ I ತಾನು ಕೊಟ್ಟ ಉಪದ್ರವ ತನ್ನ ಬುರುಡೆಗೆ ಅವಾಂತರ II
- Verse 17: ಸತ್ಯಸ್ವರೂಪನಾದ ಸ್ವಾಮಿಗೆ ನನ್ನ ವಂದನೆ I ಪರಾತ್ಪರ ಪ್ರಭುವಿನ ನಾಮಕ್ಕೆ ಸ್ತುತಿಸಂಕೀರ್ತನೆ II