ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಸಂಖ್ಯಾಕಾಂಡ
18ನೇ ಅಧ್ಯಾಯ
- Verse 1: ಸರ್ವೇಶ್ವರ ಸ್ವಾಮಿ ಆರೋನನಿಗೆ ಹೀಗೆಂದರು: “ದೇವದರ್ಶನದ ಗುಡಾರದ ವಿಷಯದಲ್ಲಿ ಏನಾದರು ಅಕ್ರಮ ನಡೆದರೆ ನೀನು, ನಿನ್ನ ಸಂತತಿಯವರು ಮತ್ತು ನಿನ್ನ ಕುಲದವರೆಲ್ಲರೂ ಆ ದೋಷದ ಫಲವನ್ನು ಅನುಭವಿಸಬೇಕು. ಯಾಜಕ ಸೇವೆಯ ವಿಷಯದಲ್ಲಿ ಅಕ್ರಮವೇನಾದರೂ ನಡೆದರೆ ನೀನು ಮತ್ತು ನಿನ್ನ ಸಂತತಿಯವರು ಮಾತ್ರ ಆ ದೋಷದ ಫಲವನ್ನು ಅನುಭವಿಸಬೇಕು.
- Verse 2: ನಿನ್ನ ಕುಲದ ಮೂಲ ಪುರುಷನಾದ ಲೇವಿಯ ವಂಶದವರನ್ನು ನಿನ್ನ ಜೊತೆಯಲ್ಲಿರಿಸಿಕೊಂಡು, ನಿನ್ನ ಕೈಕೆಳಗೆ ಸೇವೆಮಾಡಿಸು. ಆದರೆ ಮಂಜೂಷವಿರುವ ಗುಡಾರದ ಮುಂದೆ ನೀನು ಮತ್ತು ನಿನ್ನ ಮಕ್ಕಳು ಮಾತ್ರ ಸೇವೆಮಾಡಬೇಕು.
- Verse 3: ಲೇವಿಯರು ನಿನ್ನ ಅಪ್ಪಣೆ ಮೇರೆಗೆ ನಡೆದು ಇಡೀ ಗುಡಾರವನ್ನು ಕಾಯಬೇಕು. ಆದರೆ ಪವಿತ್ರಸ್ಥಾನದ ವಸ್ತುಗಳ ಹತ್ತಿರವಾಗಲಿ, ಬಲಿಪೀಠದ ಹತ್ತಿರವಾಗಲಿ ಅವರು ಬರಕೂಡದು; ಬಂದರೆ ಅವರು ಮಾತ್ರವಲ್ಲ ನೀವೂ ಕೂಡ ಸಾಯಬೇಕಾಗಬಹುದು.
- Verse 4: ಅವರು ನಿಮ್ಮ ಜೊತೆ ಸೇರಿ ದೇವದರ್ಶನದ ಗುಡಾರವನ್ನು ನೋಡಿಕೊಳ್ಳಲಿ; ಅದರ ಎಲ್ಲ ಪರಿಚರ್ಯವನ್ನು ಮಾಡಲಿ. ಇತರ ಕುಲದವರ ಜೊತೆ ನಿಮಗೆ ಬೇಡ.
- Verse 5: ದೇವಸ್ಥಾನದ ವ್ಯವಹಾರವನ್ನು ಮತ್ತು ಬಲಿಪೀಠವನ್ನು ನೀವೇ ನೋಡಿಕೊಳ್ಳಬೇಕು. ಆಗ ದೇವರ ಕೋಪ ಮತ್ತೆ ಇಸ್ರಯೇಲರ ಮೇಲೆ ಬಾರದು.
- Verse 6: ಇಸ್ರಯೇಲರಲ್ಲಿ ನಿನ್ನ ಕುಲದವರಾದ ಲೇವಿಯರನ್ನು ನಾನೇ ಆರಿಸಿಕೊಂಡಿದ್ದೇನೆ. ಅವರು ಸರ್ವೇಶ್ವರನಿಗೆ ಸಮರ್ಪಿತವಾಗಿ ಕಾಣಿಕೆಯಂತೆ ನಿನ್ನ ವಶದಲ್ಲೇ ಇದ್ದಾರೆ. ದೇವದರ್ಶನದ ಗುಡಾರದ ಪರಿಚರ್ಯವನ್ನು ಅವರೇ ಮಾಡಲಿ.
- Verse 7: ನೀನು ಮತ್ತು ನಿನ್ನ ಸಂತತಿಯವರು ಯಾಜಕ ಕರ್ತವ್ಯಗಳನ್ನು ಕೈಗೊಂಡು ಬಲಿಪೀಠದ ಮತ್ತು ಗರ್ಭಗುಡಿಯ ಸೇವೆಯನ್ನು ನಡೆಸಬೇಕು. ಅವುಗಳ ಪರಿಚರ್ಯವನ್ನು ನೀವೇ ಮಾಡಬೇಕು. ಯಾಜಕ ಪದವಿಯನ್ನು ನಿಮಗೆ ಅನುಗ್ರಹಿಸಿದ್ದೇನೆ. ಇತರರು ಅದಕ್ಕೆ ಕೈಹಾಕಬಾರದು. ಹಾಕಿದರೆ ಅಂಥವರಿಗೆ ಮರಣಶಿಕ್ಷೆಯಾಗಬೇಕು.”
- Verse 8: ಸರ್ವೇಶ್ವರ ಆರೋನನಿಗೆ ಹೀಗೆಂದು ಆಜ್ಞಾಪಿಸಿದರು: “ಇಸ್ರಯೇಲರು ನನಗಾಗಿ ಮೀಸಲಾಗಿಟ್ಟು ಸಮರ್ಪಿಸುವ ಪದಾರ್ಥಗಳನ್ನೆಲ್ಲ ಅಂದರೆ ಪ್ರತಿಷ್ಠಾಪಿತವಾದ ವಸ್ತುಗಳನ್ನೆಲ್ಲಾ ನಿನಗೂ ನಿನ್ನ ಸಂತತಿಯವರಿಗೂ ದಾನಮಾಡಿದ್ದೇನೆ. ಅವು ಸದಾಕಾಲ ನಿಮಗೆ ಸಲ್ಲಬೇಕಾದ ಪಾಲು.
- Verse 9: ಅಗ್ನಿಯಲ್ಲಿ ದಹನಮಾಡದೆ ಉಳಿಸುವ ಮಹಾಪರಿಶುದ್ಧ ಪದಾರ್ಥಗಳೆಲ್ಲ ಅಂದರೆ ಇಸ್ರಯೇಲರು ನನಗೆ ಸಮರ್ಪಿಸುವ ಎಲ್ಲ ಧಾನ್ಯ ದ್ರವ್ಯ, ನೈವೇದ್ಯ ದ್ರವ್ಯ, ಪಾಪ ಪರಿಹಾರಕ ಬಲಿ, ಪ್ರಾಯಶ್ಚಿತ್ತ ಬಲಿಕಾಣಿಕೆ, ಇವುಗಳಲ್ಲಿ ದಹನವಾಗದೆ ಉಳಿದ ಭಾಗಗಳು ಮಹಾಪರಿಶುದ್ಧವಾದುವುಗಳು. ಅವು ನಿನಗೂ ನಿನ್ನ ಸಂತತಿಯವರಿಗೂ ಸಲ್ಲತಕ್ಕವು.
- Verse 10: ಅವುಗಳಲ್ಲಿ ಅತಿ ಪವಿತ್ರವಾದುವುಗಳನ್ನು ನೀವೇ ಊಟಮಾಡಬೇಕು. ನಿಮ್ಮಲ್ಲಿರುವ ಗಂಡಸರೆಲ್ಲರೂ ಅವುಗಳನ್ನು ತಿನ್ನಬಹುದು. ಅವು ಅತಿ ಪವಿತ್ರವಾದುವು; ಎಂಬುದನ್ನು ತಿಳಿದಿರಬೇಕು.
- Verse 11: “ಇದಲ್ಲದೆ ಇಸ್ರಯೇಲರು ನನಗೆ ಮೀಸಲಾಗಿಟ್ಟು ಅರ್ಪಿಸುವ ದ್ರವ್ಯಗಳು, ನೈವೇದ್ಯವಾಗಿ ನಿವಾಳಿಸುವ ದ್ರವ್ಯಗಳೂ ನಿಮಗೆ ಸಲ್ಲಬೇಕು. ಇವು ನಿನಗೂ ನಿನ್ನ ಸಂತತಿಯವರಾದ ಸ್ತ್ರೀಪುರುಷರೆಲ್ಲರಿಗೂ ಶಾಶ್ವತ ನಿಯಮವಾಗಿ ಸಲ್ಲಬೇಕೆಂದು ಅನುಗ್ರಹಿಸಿದ್ದೇನೆ. ಇವುಗಳನ್ನು ನಿಮ್ಮ ಮನೆಗಳಲ್ಲಿ ಶುದ್ಧರಾದವರೆಲ್ಲರೂ ಊಟಮಾಡಬಹುದು.
- Verse 12: “ಇಸ್ರಯೇಲರು ನನಗೆ ಸಮರ್ಪಿಸುವ ಪ್ರಥಮ ಫಲಗಳು, ಅಂದರೆ ಎಣ್ಣೆ, ದ್ರಾಕ್ಷಾರಸ, ಧಾನ್ಯ, ಇವುಗಳಲ್ಲಿ ಶ್ರೇಷ್ಠವಾದುದು ನಿನಗೇ ಸಿಗಬೇಕೆಂದು ವಿಧಿಸಿದ್ದೇನೆ.
- Verse 13: ಆ ಜನರು ತಮ್ಮ ನಾಡಿನ ಎಲ್ಲ ಬೆಳೆಗಳಲ್ಲಿ ನನಗೆ ತರುವ ಪ್ರಥಮ ಫಲಗಳು ನಿನಗೇ ಸಲ್ಲಬೇಕು. ನಿಮ್ಮ ಮನೆಗಳಲ್ಲಿ ಶುದ್ಧರಾಗಿರುವ ಎಲ್ಲರೂ ಅವುಗಳನ್ನು ಊಟಮಾಡಬಹುದು.
- Verse 14: ಅವರು ನನಗೆ ಹರಕೆಮಾಡಿ ಅರ್ಪಿಸಿಕೊಡುವ ಪ್ರತಿಯೊಂದು ನಿನಗೆ ದಕ್ಕಬೇಕು.
- Verse 15: “ಮನುಷ್ಯರಲ್ಲೇ ಆಗಲಿ, ಪಶುಗಳಲ್ಲೇ ಆಗಲಿ, ಅವರು ನನಗೆ ಸಮರ್ಪಿಸುವ ಸಕಲ ಪ್ರಾಣಿಗಳಲ್ಲಿ ಚೊಚ್ಚಲಿನದು ನಿನಗೆ ಸಲ್ಲಬೇಕು. ಆದರೆ ಮನುಷ್ಯರ ಚೊಚ್ಚಲು ಮಕ್ಕಳಿಗೂ ಅಪವಿತ್ರವಾದ ಪಶುಗಳ ಮರಿಗಳಿಗೂ ಬದಲಾಗಿ ನೀನು ಈಡನ್ನು ತೆಗೆದುಕೊಂಡು ಅವುಗಳನ್ನು ಬಿಟ್ಟುಬಿಡಬೇಕು.
- Verse 16: ಹೀಗೆ ಬಿಟ್ಟುಬಿಡಬೇಕಾದ ಶಿಶುಗಳು ಒಂದು ತಿಂಗಳಿನ ಪ್ರಾಯಕ್ಕೆ ಬಂದಾಗಲೆ ಗೊತ್ತಾದ ಈಡನ್ನು ಅಂದರೆ ದೇವರ ಸೇವೆಗೆ ನಿಗದಿಯಾದ ಇಪ್ಪತ್ತು ‘ಗೇರಾ’ ತೂಕದ ನಾಣ್ಯದ ಮೇರೆಗೆ ಐದು ಶೆಕೆಲ್ ನಾಣ್ಯವನ್ನು ತೆಗೆದುಕೊಂಡು ಅವುಗಳನ್ನು ಬಿಟ್ಟುಬಿಡು.
- Verse 17: ಹಸುವಿನ ಮತ್ತು ಆಡುಕುರಿಗಳ ಚೊಚ್ಚಲು ಮರಿಗಳನ್ನು ಬಿಡಕೂಡದು. ಅವು ದೇವರ ಸೊತ್ತು. ಆದ್ದರಿಂದ ಅವುಗಳ ರಕ್ತವನ್ನು ಬಲಿಪೀಠದ ಮೇಲೆ ಚಿಮುಕಿಸು; ಅವುಗಳ ಕೊಬ್ಬನ್ನು ಬಲಿಕಾಣಿಕೆಯಾಗಿ ದಹಿಸು.
- Verse 18: ಅವುಗಳ ಮಾಂಸ ಹಾಗೂ ನೈವೇದ್ಯವಾಗಿ ಆರತಿಯೆತ್ತುವ ಎದೆ ಮತ್ತು ಬಲತೊಡೆ ನಿನಗೆ ಸಲ್ಲಬೇಕು.
- Verse 19: “ಇಸ್ರಯೇಲರು ನನಗೆ ಮೀಸಲಾಗಿಟ್ಟು ಸಮರ್ಪಿಸುವ ಪವಿತ್ರ ವಸ್ತುಗಳೆಲ್ಲಾ ನಿನಗೂ ನಿನ್ನ ಸಂತತಿಯವರಾದ ಸ್ತ್ರೀಪುರುಷರಿಗೂ ಸಲ್ಲಬೇಕು. ಸದಾಕಾಲಕ್ಕೂ ಇದನ್ನು ನಾನು ನಿನಗೆ ಅನುಗ್ರಹಿಸಿದ್ದೇನೆ. ಇದು ನನ್ನ ಸನ್ನಿಧಿಯಲ್ಲಿ ನಿನ್ನೊಡನೆ ಮತ್ತು ನಿನ್ನ ಸಂತತಿಯೊಡನೆ ಮಾಡಿಕೊಂಡ ಶಾಶ್ವತವಾದ ಉಪ್ಪಿನ ಒಡಂಬಡಿಕೆ.”
- Verse 20: ಇದಲ್ಲದೆ ಸರ್ವೇಶ್ವರ ಆರೋನನಿಗೆ ಹೀಗೆಂದರು: “ಇಸ್ರಯೇಲರ ನಾಡಿನಲ್ಲಿ ನಿನ್ನ ಸ್ವಂತ ಸೊತ್ತಾಗಿ ಯಾವ ಆಸ್ತಿಯೂ ಇರುವುದಿಲ್ಲ; ಅವರೊಂದಿಗೆ ನಿನಗೆ ಯಾವ ಪಾಲೂ ಇರುವುದಿಲ್ಲ. ಇಸ್ರಯೇಲರ ನಡುವೆ ನಾನೇ ನಿನಗೆ ಆಸ್ತಿಪಾಸ್ತಿ, ಪಾಲುಪಸುಗೆ.”
- Verse 21: “ಇಗೋ, ಇಸ್ರಯೇಲರಿಂದ ಸಕಲ ಪದಾರ್ಥಗಳ ಹತ್ತನೆಯ ಪಾಲನ್ನು ಗೊತ್ತುಮಾಡಿ ಲೇವಿಯರಿಗೆ ಕೊಟ್ಟಿದ್ದೇನೆ. ದೇವದರ್ಶನದ ಗುಡಾರದ ಪರಿಚರ್ಯವನ್ನು ಮಾಡುವ ಅವರಿಗೆ ಇದು ಸಲ್ಲತಕ್ಕ ಸಂಭಾವನೆ.
- Verse 22: ಇನ್ನು ಮುಂದೆ ಇಸ್ರಯೇಲರು ಪಾಪಮಾಡಿ ಸಾವಿಗೆ ತುತ್ತಾಗದಂತೆ ದೇವದರ್ಶನದ ಗುಡಾರದ ಹತ್ತಿರಕ್ಕೆ ಬರಕೂಡದು.
- Verse 23: ಆ ಗುಡಾರದ ಪರಿಚರ್ಯವನ್ನು ಮಾಡಬೇಕಾದವರು ಲೇವಿಯರೇ. ಅದರ ಸಂಬಂಧವಾಗಿ ಅವರು ಮಾಡುವ ಪಾಪದ ಫಲವನ್ನು ಅವರೇ ಅನುಭವಿಸಲಿ. ಇದು ನಿಮಗೂ ನಿಮ್ಮ ಸಂತತಿಯವರಿಗೂ ಒಂದು ಶಾಶ್ವತವಾದ ನಿಯಮವಾಗಿರಲಿ. ಲೇವಿಯರಿಗೆ ಇಸ್ರಯೇಲರಲ್ಲಿ ಶಾಶ್ವತ ಸೊತ್ತು ಇರುವುದಿಲ್ಲ.
- Verse 24: ಇಸ್ರಯೇಲರು ನನಗೆ ಮೀಸಲಾಗಿಟ್ಟು ಸಮರ್ಪಿಸುವ ಹತ್ತನೆಯ ಪಾಲನ್ನು ಅವರಿಗೆ ಸೊತ್ತಾಗಿ ಕೊಟ್ಟಿದ್ದೇನೆ. ಆದುದರಿಂದಲೇ ಇತರ ಇಸ್ರಯೇಲರಿಗೆ ಪಾಲು ದೊರಕುವಂತೆ ಅವರಿಗೆ ಪಾಲು ದೊರಕುವುದಿಲ್ಲವೆಂದು ಒತ್ತಿಹೇಳಿದ್ದೇನೆ.”
- Verse 25: ಸರ್ವೇಶ್ವರ ಮೋಶೆಗೆ ಹೀಗೆಂದರು:
- Verse 26: “ಲೇವಿಯರಿಗೆ ನೀನು ಇಂತೆಂದು ಆಜ್ಞಾಪಿಸು - ‘ನಿಮ್ಮ ಸ್ವಂತಕ್ಕಾಗಿ ನಾನು ಗೊತ್ತುಮಾಡಿರುವ ಹತ್ತನೆಯ ಒಂದು ಪಾಲನ್ನು ಇಸ್ರಯೇಲರಿಂದ ನೀವು ತೆಗೆದುಕೊಳ್ಳುವಾಗ ಅದರಲ್ಲಿ ಹತ್ತನೆಯ ಒಂದು ಪಾಲನ್ನು ಪ್ರತ್ಯೇಕಿಸಿ ಸರ್ವೇಶ್ವರನಿಗೆ ಸಮರ್ಪಿಸಬೇಕು.
- Verse 27: ಹೀಗೆ ನೀವು ಸಮರ್ಪಿಸುವ ಹತ್ತನೆಯ ಪಾಲು, ಕಣದಲ್ಲಿನ ದವಸದಿಂದ ಹಾಗೂ ದ್ರಾಕ್ಷಿತೊಟ್ಟಿಯ ರಸದಿಂದ ಬರಬೇಕಾದ ದಶಾಂಶವೆಂದು ಪರಿಗಣಿತವಾಗುವುದು.
- Verse 28: ಇಸ್ರಯೇಲರಿಂದ ನಿಮಗೆ ಸಲ್ಲುವ ಹತ್ತನೆಯ ಒಂದು ಪಾಲಿನಲ್ಲಿ ನೀವು ಸರ್ವೇಶ್ವರನಿಗೆ ಹತ್ತನೆಯ ಒಂದು ಭಾಗವನ್ನು ಪ್ರತ್ಯೇಕಿಸಿ ಯಾಜಕ ಆರೋನನಿಗೆ ಒಪ್ಪಿಸಬೇಕು.
- Verse 29: ನಿಮಗೆ ಕೊಡಲಾಗುವ ಸಕಲ ಪದಾರ್ಥಗಳಲ್ಲಿ ಉತ್ತಮ ಭಾಗವನ್ನೇ, ಅಂದರೆ ದೇವರ ವಸ್ತುವಾಗುವುದಕ್ಕೆ ಯೋಗ್ಯವಾದ ಭಾಗವನ್ನೇ ಸರ್ವೇಶ್ವರನಿಗೆ ಮೀಸಲಾಗಿಟ್ಟು ಸಮರ್ಪಿಸಬೇಕು.
- Verse 30: “ಲೇವಿಯರಿಗೆ ಮತ್ತೆ ಹೀಗೆಂದು ತಿಳಿಸು: “ನಿಮಗೆ ದೊರಕಿದ್ದರಲ್ಲಿ ಉತ್ತಮವಾದುದನ್ನೇ ಪ್ರತ್ಯೇಕಿಸಿ ಸಮರ್ಪಿಸಿದ ಮೇಲೆ ಮಿಕ್ಕದ್ದನ್ನು ಕಣದಲ್ಲಿನ ದವಸ ಹಾಗೂ ದ್ರಾಕ್ಷಿತೊಟ್ಟಿಯ ರಸವೆಂದು ಭಾವಿಸಿ ನೀವು ಉಪಯೋಗಿಸಿಕೊಳ್ಳಬಹುದು.
- Verse 31: ನೀವು ಮತ್ತು ನಿಮ್ಮ ಮನೆಯವರು ಅದನ್ನು ಯಾವ ಸ್ಥಳದಲ್ಲಿಯಾದರೂ ಊಟಮಾಡಬಹುದು. ದೇವದರ್ಶನದ ಗುಡಾರದ ಪರಿಚರ್ಯವನ್ನು ಮಾಡಿದ್ದಕ್ಕೆ ಅದು ನಿಮಗೆ ಪ್ರತಿಫಲ.
- Verse 32: ಅದರಲ್ಲಿ ಉತ್ತಮಭಾಗವನ್ನು ಸರ್ವೇಶ್ವರನಿಗೆ ಮೀಸಲಾಗಿಟ್ಟ ನಂತರ ಮಿಕ್ಕದ್ದನ್ನು ಊಟಮಾಡುವುದರಿಂದ ಯಾವ ದೋಷಕ್ಕೂ ನೀವು ಗುರಿಯಾಗುವುದಿಲ್ಲ. ಇಸ್ರಯೇಲರು ಸಮರ್ಪಿಸುವ ಪವಿತ್ರ ವಸ್ತುಗಳನ್ನು ಅಪವಿತ್ರಗೊಳಿಸಬೇಡಿ; ಇಲ್ಲವಾದರೆ ಸಾಯುವಿರಿ.”