ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯೋಬನ ಗ್ರಂಥ
15ನೇ ಅಧ್ಯಾಯ
- Verse 1: ಆಗ ತೇಮಾನ್ಯನಾದ ಎಲೀಫಜನು ಮತ್ತೆ ಹೀಗೆಂದು ಹೇಳಿದನು:
- Verse 2: “ಬುದ್ಧಿವಂತನು ಗಾಳಿಮಾತನ್ನಾಡುವುದು ಸರಿಯೆ? ಸುಡುಗಾಳಿಯಿಂದ ಹೊಟ್ಟೆ ತುಂಬಿಸಿಕೊಳ್ಳಬಹುದೇ?
- Verse 3: ಅಂಥವನು ನಿಷ್ಪ್ರಯೋಜಕವಾಗಿ ವಾದಿಸುತ್ತಾನೆಯೆ? ನಿರರ್ಥಕವಾಗಿ ವ್ಯಾಜ್ಯವಾಡುತ್ತಾನೆಯೆ?
- Verse 4: ನೀನಾದರೋ ದೇವರ ಭಯಭಕ್ತಿಯನ್ನು ಕೆಡಿಸುತ್ತಿರುವೆ ದೇವರ ಧ್ಯಾನಕ್ಕೆ ಅಡ್ಡಿಬರುತ್ತಿರುವೆ.
- Verse 5: ನಿನ್ನ ಪಾಪವೆ ನಿನಗೆ ಮಾತನು ಕಲಿಸಿಕೊಟ್ಟಿದೆ ಕಪಟಿಗಳಾಡುವ ನುಡಿಯನೆ ನೀನು ಆರಿಸಿಕೊಂಡಿರುವೆ.
- Verse 6: ನಾನಲ್ಲ, ನಿನ್ನ ಬಾಯೇ, ನಿನ್ನನು ಅಪರಾಧಿಯನ್ನಾಗಿಸುತ್ತಿದೆ ನಿನ್ನ ತುಟಿಗಳೇ ನಿನಗೆ ವಿರುದ್ಧ ಸಾಕ್ಷಿಕೊಡುತ್ತಿವೆ.
- Verse 7: ನೀನು ಮನುಜರಿಗೆಲ್ಲ ಆದಿಪುರುಷನೋ? ಬೆಟ್ಟಗಳಿಗಿಂತ ಮುಂಚಿತವಾಗಿ ಹುಟ್ಟಿದವನೋ?
- Verse 8: ದೇವರ ಆಲೋಚನಾಸಭೆಯಲಿ ನೀನು ಭಾಗವಹಿಸಿದ್ದೆಯೋ? ಜ್ಞಾನವೆಂಬುದು ನಿನಗೆ ಮಾತ್ರ ಮೀಸಲೋ?
- Verse 9: ನಮಗೆ ತಿಳಿಯದಿರುವುದು ನಿನಗೆ ತಿಳಿದಿದೆಯೆ? ನಮಗೆ ಅರ್ಥವಾಗದಿರುವುದು ನಿನಗೆ ಅರ್ಥವಾಗಿದೆಯೆ?
- Verse 10: ನಮ್ಮಲ್ಲಿದ್ದಾರೆ ತಲೆ ನರೆತವರು, ವಯೋವೃದ್ಧರು ನಿಮ್ಮಪ್ಪನಿಗಿಂತಲೂ ಹೆಚ್ಚು ಮುದುಕರಾದವರು.
- Verse 11: ಕೇವಲವಾಯಿತೋ ನಿನಗೆ ದೇವರಿತ್ತ ಸಾಂತ್ವನ? ನಿನಗೆ ದೊರೆತ ಮೃದುವಾದ ಹಿತವಚನ?
- Verse 12: ನಿನ್ನ ಹೃದಯ ನಿನ್ನನ್ನು ದೂರ ಒಯ್ದಿದೆ, ಏಕೆ? ನಿನ್ನ ಕಣ್ಣು ಕಿಡಿಕಾರುತ್ತಿದೆ ಏಕೆ?
- Verse 13: ದೇವರಿಗೆ ವಿರುದ್ಧ ಕುದಿಯುತ್ತಿರುವೆ ಏಕೆ? ಬಾಯಿಂದ ಮಾತು ಹರಿಯುತ್ತಿವೆ ಏಕೆ?
- Verse 14: ನರನು ಎಷ್ಟರವನು? ಅವನು ಪರಿಶುದ್ಧನಿರಲು ಸಾಧ್ಯವೆ? ಸ್ತ್ರೀಯರಲ್ಲಿ ಹುಟ್ಟಿದವನು ನೀತಿವಂತನಾಗಿರಬಹುದೆ?
- Verse 15: ದೇವರಿಗೋ, ತನ್ನ ದೂತರಲ್ಲೂ ನಂಬಿಕೆಯಿಲ್ಲ ಆಕಾಶವೂ ಆತನ ದೃಷ್ಟಿಯಲ್ಲಿ ನಿರ್ಮಲವಲ್ಲ.
- Verse 16: ಇಂತಿರಲು, ಮತ್ತಷ್ಟೂ ಮಲಿನನಲ್ಲವೆ ನರಮಾನವನು? ಅಸಹ್ಯನು, ಅಕ್ರಮಿಯು, ಕೇಡನ್ನು ನೀರಿನಂತೆ ಕುಡಿಯುವವನು?
- Verse 17: ಕೇಳು ನಾನು ತಿಳಿಸುವ ಈ ಸಂಗತಿಯನು ನಾನು ಕಂಡದ್ದನ್ನೇ ನಿನಗೆ ವಿವರಿಸುವೆನು:
- Verse 18: ಜ್ಞಾನಿಗಳು ತಮ್ಮ ಪೂರ್ವಜರಿಂದ ಕಲಿತಿದ್ದನು ಮುಚ್ಚುಮರೆಯಿಲ್ಲದೆ ಪ್ರಕಟಿಸಿದವುಗಳನು ಕೇಳು - ನಾನು ನಿನಗೆ ತಿಳಿಸುವೆನು:
- Verse 19: ಅವರು ತಮ್ಮ ನಾಡಿನ ಬಾಧ್ಯತೆಯನ್ನು ಕಳೆದುಕೊಂಡವರಲ್ಲ ಪರದೇಶೀಯರು ಅವರ ಮಧ್ಯೆ ಹಾದುಹೋಗುವಂತಿರಲಿಲ್ಲ.
- Verse 20: ಹಿಂಸಾತ್ಮಕನ ವರುಷಗಳು ಎಣಿಸಲಾಗಿವೆ ಆ ದುಷ್ಟನು ಜೀವಮಾನವೆಲ್ಲ ಬಾಧೆಪೀಡಿತನೆ.
- Verse 21: ಭಯಹುಟ್ಟಿಸುವ ಅಪಾಯಗಳ ಸಪ್ಪಳ ಅವನ ಕಿವಿಯಲ್ಲಿ ಸೂರೆಗಾರನ ಧಾಳಿಯ ದಿಗಿಲು ಅವನು ಸುಖವಿರುವಲ್ಲಿ.
- Verse 22: ಕತ್ತಲಿಂದ ಹಿಂದಿರುಗುವ ನಂಬಿಕೆ ಅವನಿಗಿಲ್ಲ ಕತ್ತಿ ತನಗಾಗಿ ಕಾದಿದೆಯೆಂಬುದರಲ್ಲಿ ಸಂದೇಹವಿಲ್ಲ.
- Verse 23: ಹೊಟ್ಟೆಪಾಡಿಗಾಗಿ ಹುಡುಕುತ್ತಾ ಅಲೆದಾಡುತ್ತಾನೆ ಆ ಕತ್ತಲ ದಿನ ಹತ್ತಿರವಿದೆಯೆಂದು ಅರಿತಿದ್ದಾನೆ.
- Verse 24: ಸಂಕಟ - ಪೇಚಾಟ ಅವನನ್ನು ಕಾಡುತ್ತಿರುತ್ತವೆ ಯುದ್ಧಸನ್ನದ್ಧ ರಾಜರಂತೆ ಅವನಿಗೆ ಸೋಲನು ತರುತ್ತವೆ.
- Verse 25: ದೇವರಿಗೆ ವಿರುದ್ಧ ಅವನು ಮುಷ್ಠಿ ತೋರಿದನಲ್ಲವೆ? ಸರ್ವಶಕ್ತನನು ಧಿಕ್ಕರಿಸುತಾ ಶೂರನಂತೆ ಮೆರೆದನಲ್ಲವೆ?
- Verse 26: ಗಟ್ಟಿಮುಟ್ಟಾದ ಗುರಾಣಿಯನ್ನು ಹಿಡಿದುಕೊಂಡೇ ಆತನ ಮೇಲೆ ಬೀಳಲು ತಲೆ ನಿಮಿರಿ ಓಡಿದನಲ್ಲವೆ?
- Verse 27: ಕೊಬ್ಬೇರಿತ್ತು ಅವನ ಮೋರೆಯಲಿ ಬೊಜ್ಜು ಬೆಳೆದಿತ್ತು ಅವನ ಸೊಂಟದಲಿ.
- Verse 28: ಹಾಳುಮಾಡಿದ್ದ ಪಟ್ಟಣಗಳಲ್ಲೆ ಅವನು ಸೇರಿಕೊಂಡಿದ್ದ ಯಾರೂ ವಾಸಮಾಡದೆ ದಿಬ್ಬವಾಗಿ ಮಾರ್ಪಟ್ಟಿದ್ದ ಶಾಪಗ್ರಸ್ತ ಮನೆಗಳಲ್ಲಿ ವಾಸಮಾಡಿಕೊಂಡಿದ್ದ.
- Verse 29: ಇಂಥವನು ಸಿರಿವಂತನಾಗಿ ಉಳಿಯನು ಅವನ ಆಸ್ತಿ ಸ್ಥಿರವಾಗಿ ನಿಲ್ಲದು ಅವನು ಧರೆಯಲ್ಲಿ ಬೇರೂರಿ ಬೆಳೆಯನು.
- Verse 30: ಕತ್ತಲೊಳಗಿಂದ ಪಾರಾಗನವನು ಸುಡುವುದು ಕಿಚ್ಚು ಅವನ ಕೊಂಬೆಯನು ಬಡಿದೊಯ್ಯುವುದು ಗಾಳಿ ಅದರ ಫಲವನು.
- Verse 31: ವ್ಯರ್ಥವಾದುದನು ನಂಬಿ ಅವನು ಮೋಸಹೋಗದಿರಲಿ ಇಲ್ಲವಾದರೆ ಅವನಿಗೆ ಸಿಗುವ ಪ್ರತಿಫಲ ವ್ಯರ್ಥವೇ ಸರಿ.
- Verse 32: ಅವನ ಬುಡ ಒಣಗುವುದು ಕಾಲಕ್ಕೆ ಮುಂಚೆ ಪಚ್ಚೆಪಸಿರಾಗದು ಅವನ ಕೊಂಬೆ.
- Verse 33: ಅವನಾಗುವನು ಮಾಗದ ಹಣ್ಣನ್ನು ಕಳೆದುಕೊಂಡ ದ್ರಾಕ್ಷಿಬಳ್ಳಿಯಂತೆ ಹೂಗಳನ್ನು ಉದುರಿಸಿಕೊಂಡ ಓಲಿವ್ ಎಣ್ಣೆ ಮರದಂತೆ.
- Verse 34: ದುರುಳರ ಸಂಘವದು ಬರಡಾದುದು ಸುಡುವುದು ಬೆಂಕಿ ಲಂಚಕೋರರ ಗುಡಾರವನು.
- Verse 35: ಉದರದಲ್ಲಿ ವಂಚನೆಯನ್ನು ಗರ್ಭಧರಿಸುವರು ಕೇಡನು ಹಡೆವೆನೆಂದೆಣಿಸಿ ಶೂನ್ಯವ ಹೆರುವುದ ನೋಡು.