ಕನ್ನಡ ಸತ್ಯವೇದವು
ಹೊಸ ಒಡಂಬಡಿಕೆ
1 ಥೆಸಲೋನಿಯರಿಗೆ
5ನೇ ಅಧ್ಯಾಯ
- Verse 1: ಸಹೋದರರೇ, ಇದೆಲ್ಲ ನಡೆಯಲಿರುವ ಸಮಯ ಸಂದರ್ಭಗಳನ್ನು ಕುರಿತು ನಿಮಗೆ ಬರೆಯುವ ಅವಶ್ಯಕತೆಯಿಲ್ಲ.
- Verse 2: ರಾತ್ರಿಯಲ್ಲಿ ಕಳ್ಳನು ಬರುವ ಹಾಗೆ ಪ್ರಭುವಿನ ದಿನವು ಬರುವುದೆಂದು ನೀವು ಚೆನ್ನಾಗಿ ಬಲ್ಲಿರಿ.
- Verse 3: ಎಲ್ಲವೂ ಶಾಂತ, ಸುಭದ್ರವೆಂದು ಜನರು ಎಣಿಸುತ್ತಿರುವಾಗಲೇ, ಗರ್ಭಿಣಿಗೆ ಪ್ರಸವವೇದನೆ ಉಂಟಾಗುವಂತೆ, ವಿನಾಶವು ಫಕ್ಕನೆ ಅವರ ಮೇಲೆ ಬಂದೆರಗುವುದು. ಇದರಿಂದ ಯಾರೂ ತಪ್ಪಿಸಿಕೊಳ್ಳುವಂತಿಲ್ಲ.
- Verse 4: ಸಹೋದರರೇ, ಕಳ್ಳನಂತೆ ಆ ದಿನವು ನಿಮ್ಮನ್ನು ದಿಗ್ಭ್ರಮೆಗೊಳಿಸದಿರಲಿ. ಏಕೆಂದರೆ, ನೀವಿನ್ನು ಅಂಧಕಾರಕ್ಕೆ ಸೇರಿದವರಲ್ಲ. ಆ ದಿನವು ದಿಢೀರನೆ ನಿಮ್ಮ ಮೇಲೆ ಬರಬಾರದು.
- Verse 5: ನೀವೆಲ್ಲರೂ ಬೆಳಕಿನ ಹಾಗೂ ಹಗಲಿನ ಮಕ್ಕಳು. ನಾವು ಕತ್ತಲೆಗಾಗಲಿ, ರಾತ್ರಿಗಾಗಲಿ ಸೇರಿದವರಲ್ಲ.
- Verse 6: ಅಂದ ಮೇಲೆ, ಇತರರಂತೆ ನಾವು ನಿದ್ದೆಮಾಡದೆ ಎಚ್ಚರವಾಗಿದ್ದು ಸ್ವಸ್ಥಚಿತ್ತರಾಗಿ ವರ್ತಿಸೋಣ.
- Verse 7: ನಿದ್ರೆಯೂ ಕುಡುಕತನವೂ ರಾತ್ರಿಗೆ ಸಂಬಂಧಿಸಿದವುಗಳು.
- Verse 8: ನಾವು ಹಗಲಿಗೆ ಸೇರಿದವರಾದುದರಿಂದ ಸ್ವಸ್ಥಚಿತ್ತದಿಂದ ಇರೋಣ. ವಿಶ್ವಾಸ ಹಾಗೂ ಪ್ರೀತಿ ನಮಗೆ ವಕ್ಷಕವಚವಾಗಬೇಕು. ಜೀವೋದ್ಧಾರದ ನಿರೀಕ್ಷೆ ನಮಗೆ ಶಿರಸ್ತ್ರಾಣವಾಗಿರಬೇಕು.
- Verse 9: ಕೋಪಾಗ್ನಿಗೆ ನಾವು ಗುರಿಯಾಗಬೇಕೆಂದಲ್ಲ, ನಮ್ಮ ಪ್ರಭು ಯೇಸುಕ್ರಿಸ್ತರಲ್ಲಿ ನಾವು ಜೀವೋದ್ಧಾರ ಹೊಂದಬೇಕೆಂಬುದೇ ದೈವೇಚ್ಛೆ.
- Verse 10: ಯೇಸುಕ್ರಿಸ್ತರು ಮರಳಿ ಬರುವಾಗ, ನಾವು ಮೃತರಾಗಿದ್ದರೂ ಜೀವಂತವಾಗಿದ್ದರೂ ಅವರೊಡನೆಯೇ ನಾವು ಜೀವಿಸಬೇಕೆಂದೆ ನಮಗಾಗಿ ಅವರು ಸಾವನ್ನಪ್ಪಿದರು.
- Verse 11: ಆದುದರಿಂದ ನೀವು ಈಗ ನಡೆದುಕೊಳ್ಳುತ್ತಿರುವಂತೆ, ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿ, ಒಬ್ಬರ ಭಕ್ತಿಯನ್ನೊಬ್ಬರು ವೃದ್ಧಿಗೊಳಿಸಿರಿ.
- Verse 12: ಸಹೋದರರೇ, ನಿಮ್ಮೊಡನೆ ದುಡಿಯುತ್ತಾ ಪ್ರಭುವಿನ ಹೆಸರಿನಲ್ಲಿ ನಿಮಗೆ ಅಧಿಕಾರಿಗಳೂ ಮಾರ್ಗದರ್ಶಕರೂ ಆಗಿರುವವರಿಗೆ ತಕ್ಕ ಸನ್ಮಾನವನ್ನು ಸಲ್ಲಿಸಿರಿ.
- Verse 13: ಅವರು ನಿರ್ವಹಿಸುವ ಕಾರ್ಯದ ನಿಮಿತ್ತ ಅವರನ್ನು ಅತ್ಯಧಿಕ ಪ್ರೀತಿಯಿಂದ ಗೌರವಿಸಿರಿ. ನಿಮ್ಮನಿಮ್ಮೊಳಗೆ ಸಮಾಧಾನದಿಂದಿರಿ.
- Verse 14: ಸಹೋದರರೇ, ಮೈಗಳ್ಳರಿಗೆ ಬುದ್ಧಿಹೇಳಿರಿ; ಮನಗುಂದಿದವರಿಗೆ ಧೈರ್ಯ ತುಂಬಿರಿ; ದುರ್ಬಲರಿಗೆ ನೆರವಾಗಿರಿ; ಎಲ್ಲರೊಡನೆ ಸಹನೆಯಿಂದಿರಿ. ಇದು ನಮ್ಮ ಪ್ರಬೋಧನೆ.
- Verse 15: ಕೆಡುಕಿಗೆ ಪ್ರತಿಯಾಗಿ ಕೆಡುಕು ಮಾಡದೆ ಎಚ್ಚರದಿಂದಿರಿ. ಯಾವಾಗಲೂ ಒಬ್ಬರಿಗೊಬ್ಬರು ಮಾತ್ರವಲ್ಲದೆ ಎಲ್ಲರಿಗೂ ಹಿತವನ್ನೇ ಮಾಡಿರಿ.
- Verse 16: ಸದಾ ಹರ್ಷಚಿತ್ತರಾಗಿರಿ.
- Verse 17: ಎಡೆಬಿಡದೆ ಪ್ರಾರ್ಥಿಸಿರಿ.
- Verse 18: ಎಲ್ಲಾ ಸಂದರ್ಭಗಳಲ್ಲೂ ಉಪಕಾರಸ್ಮರಣೆಮಾಡಿರಿ. ಕ್ರಿಸ್ತಯೇಸುವಿನಲ್ಲಿ ದೇವರು ನಿಮ್ಮಿಂದ ಇಚ್ಛಿಸುವುದು ಇದನ್ನೇ.
- Verse 19: ಪವಿತ್ರಾತ್ಮರನ್ನು ನಿಶ್ಚೇತನಗೊಳಿಸಬೇಡಿ.
- Verse 20: ಪ್ರವಾದನೆಗಳನ್ನು ಅಲ್ಲಗಳೆಯದಿರಿ.
- Verse 21: ಅವುಗಳನ್ನೆಲ್ಲಾ ಪರಿಶೋಧಿಸಿ ಒಳ್ಳೆಯದನ್ನು ಅಂಗೀಕರಿಸಿ,
- Verse 22: ಕೆಟ್ಟದ್ದನ್ನೆಲ್ಲಾ ಬಿಟ್ಟುಬಿಡಿ.
- Verse 23: ಶಾಂತಿದಾಯಕ ದೇವರು ನಿಮ್ಮನ್ನು ಪೂರ್ಣವಾಗಿ ಪಾವನಗೊಳಿಸಲಿ. ನಮ್ಮ ಪ್ರಭು ಯೇಸು ಪುನರಾಗಮಿಸುವಾಗ ನಿಮ್ಮ ಆತ್ಮ, ಪ್ರಾಣ, ದೇಹ - ಇವುಗಳು ದೋಷರಹಿತವಾಗಿಯೂ ಸ್ವಸ್ಥವಾಗಿಯೂ ಇರುವಂತೆ ನಿಮ್ಮನ್ನು ಕಾಪಾಡಲಿ.
- Verse 24: ನಿಮ್ಮನ್ನು ಕರೆದ ದೇವರು ಇದನ್ನು ಈಡೇರಿಸುವರು; ಏಕೆಂದರೆ, ದೇವರು ನಂಬಿಕಸ್ಥರು.
- Verse 25: ಸಹೋದರರೇ, ನಮಗಾಗಿಯೂ ಪ್ರಾರ್ಥಿಸಿರಿ.
- Verse 26: ಪವಿತ್ರವಾದ ಮುದ್ದಿಟ್ಟು ಸಹೋದರರೆಲ್ಲರನ್ನು ವಂದಿಸಿರಿ.
- Verse 27: ಈ ಪತ್ರವನ್ನು ಎಲ್ಲ ಸಹೋದರರಿಗೂ ಓದಿಹೇಳಬೇಕೆಂದು ಪ್ರಭುವಿನ ಹೆಸರಿನಲ್ಲಿ ವಿಧಿಸುತ್ತಿದ್ದೇನೆ.
- Verse 28: ನಮ್ಮ ಪ್ರಭುವಾದ ಯೇಸುಕ್ರಿಸ್ತರ ಅನುಗ್ರಹ ನಿಮ್ಮಲ್ಲಿರಲಿ!