ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
115ನೇ ಅಧ್ಯಾಯ
- Verse 1: ನಮಗಲ್ಲ ಹೇ ಪ್ರಭು, ನಮಗಲ್ಲ ಮಹಿಮೆ I ನಿನ್ನ ನಾಮಕೇ ಸಲ್ಲಲಿ ಆ ಮಹಿಮೆ I ನಿನ್ನ ನೀತಿ ಸತ್ಯತೆಗಳ ನಿಮಿತ್ತವೆ II
- Verse 2: ಅನ್ಯಜನರು ನುಡಿಯುವುದೆಂತು : I “ಅವರ ದೇವರೆಲ್ಲಿ?” ಎಂದು II
- Verse 3: ಪರದಲ್ಲಿಹನು ನಮ್ಮ ದೇವನು I ಗೈವನು ತನಗಿಷ್ಟ ಬಂದುದನು II
- Verse 4: ಅವರ ವಿಗ್ರಹ ಬರೀ ಬೆಳ್ಳಿ ಬಂಗಾರ I ಅವು ಮಾನವನ ಕೈ ಕೆಲಸಗಳು ಮಾತ್ರ II
- Verse 5: ಬಾಯಿದ್ದರೂ ಅವು ಮಾತಾಡುವುದಿಲ್ಲ I ಕಣ್ಣುಗಳಿದ್ದರೂ ಅವು ಕಾಣುವುದಿಲ್ಲ II
- Verse 6: ಕಿವಿಯಿದ್ದರೂ ಅವು ಕೇಳುವುದಿಲ್ಲ I ಮೂಗಿದ್ದರೂ ಅವು ಮೂಸುವುದಿಲ್ಲ I ಗಂಟಲೊಳು ಅವಕೆ ಶಬ್ದವೇ ಇಲ್ಲ II
- Verse 7: ಕೈಯಿದ್ದರೂ ಅವು ಮುಟ್ಟುವುದಿಲ್ಲ I ಕಾಲಿದ್ದರೂ ಅವು ನಡೆಯುವುದಿಲ್ಲ II
- Verse 8: ಅವುಗಳಂತಾಗುವರು ಅವುಗಳನು ಮಾಡುವವರು I ಅವುಗಳಂತಾಗುವರು ಅವುಗಳನು ನಂಬುವವರು II
- Verse 9: ಪ್ರಭುವಿನಲ್ಲಿದೆ ಭರವಸೆ ಇಸ್ರಯೇಲ್ ಜನರಿಗೆ I ಆತನೇ ಸಹಾಯಕ, ರಕ್ಷಾಕವಚ ಅವರಿಗೆ II
- Verse 10: ಪ್ರಭುವಿನಲ್ಲಿದೆ ಭರವಸೆ ಆರೋನನ ಕುಲಕೆ I ಆತನೇ ಸಹಾಯಕ, ರಕ್ಷಾಕವಚ ಅವರಿಗೆ II
- Verse 11: ಪ್ರಭುವಿನಲ್ಲಿದೆ ಭರವಸೆ ಆತನ ಭಕ್ತಜನರಿಗೆ I ಆತನೇ ಸಹಾಯಕ, ರಕ್ಷಾಕವಚ ಅವರಿಗೆ II
- Verse 12: ಆಶೀರ್ವದಿಸುವನು ಪ್ರಭು ಮರೆಯದೆ ನಮ್ಮನು I ಇಸ್ರಯೇಲ್ ವಂಶವನು, ಆರೋನನ ಕುಲವನು II
- Verse 13: ಆಶೀರ್ವದಿಸುವನು ಪ್ರಭು ತನ್ನಲಿ ಭಯಭಕ್ತಿಯುಳ್ಳವರನು I ಚಿಕ್ಕವರು ದೊಡ್ಡವರೆನ್ನದೆ ಭಯಭಕ್ತಿಯುಳ್ಳವರನು II
- Verse 14: ವೃದ್ಧಿಗೊಳಿಸಲಿ ಪ್ರಭುವು ನಿಮ್ಮನು I ವೃದ್ಧಿಗೊಳಿಸಲಿ ನಿಮ್ಮ ಮಕ್ಕಳನು II
- Verse 15: ಇಹಪರಗಳನು ಉಂಟುಮಾಡಿದ ಪ್ರಭುವಿಂದ I ಲಭಿಸುವಂತಾಗಲಿ ನಿಮಗೆ ಆಶೀರ್ವಾದ II
- Verse 16: ಪ್ರಭುವಿಗೆ ಸ್ವಂತವಾದುದು ಪರಲೋಕ I ನರರಿಗೆ ಕೊಟ್ಟಿಹನಾತನು ಭೂಲೋಕ II
- Verse 17: ಸ್ತುತಿಸುವುದಿಲ್ಲ ಸತ್ತವರಾರೂ ಪ್ರಭುವನು I ಕೀರ್ತಿಸರು ಪಾತಾಳಕ್ಕಿಳಿವವರು ಆತನನು II
- Verse 18: ನಾವಾದರೋ ಪ್ರಭುವನು ಹೊಗಳಿ ಹಾಡುವೆವು I ಇಂದಿಗೂ ಎಂದೆಂದಿಗೂ ಹೊಗಳಿ ಹಾಡುವೆವು II ಅಲ್ಲೆಲೂಯ.