ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ವಿಮೋಚನಕಾಂಡ
6ನೇ ಅಧ್ಯಾಯ
- Verse 1: ಅದಕ್ಕೆ ಸರ್ವೇಶ್ವರ ಸ್ವಾಮಿ ಮೋಶೆಗೆ, “ನಾನು ಫರೋಹನಿಗೆ ಮಾಡಲು ಹೋಗುವುದನ್ನು ನೀನು ಇಷ್ಟರಲ್ಲೇ ನೋಡುವೆ. ಅವನು ನನ್ನ ಭುಜಬಲವನ್ನು ಕಂಡು ಅವರನ್ನು ಹೋಗಲು ಬಿಡುವನು. ನನ್ನ ಭುಜಬಲದಿಂದ ಪೀಡಿತನಾಗಿ ಅವರನ್ನು ತನ್ನ ನಾಡಿನಿಂದ ಹೊರಡಿಸುವನು,” ಎಂದರು.
- Verse 2: ದೇವರು ಮೋಶೆಯ ಸಂಗಡ ಮಾತಾಡಿ ಇಂತೆಂದರು:
- Verse 3: “ನಾನು ಸರ್ವೇಶ್ವರ, ಅಬ್ರಹಾಮ, ಇಸಾಕ ಹಾಗು ಯಕೋಬರಿಗೆ ನಾನು ‘ಸರ್ವಶಕ್ತನಾದ ದೇವರು ಎಂಬ ಹೆಸರುಳ್ಳವನಾಗಿ ಕಾಣಿಸಿಕೊಂಡನೇ ಹೊರತು ‘ಸರ್ವೇಶ್ವರ’ ಎಂಬ ನನ್ನ ಹೆಸರಿನಿಂದ ಅವರಿಗೆ ಗೋಚರವಾಗಲಿಲ್ಲ.
- Verse 4: ಅಲ್ಲದೆ ಅವರು ಪ್ರವಾಸಿಗಳಾಗಿ ತಂಗಿದ್ದ ಕಾನಾನ್ ನಾಡನ್ನು ಅವರಿಗೆ ಸ್ವಂತ ನಾಡಾಗಿ ಕೊಡುವೆನೆಂದು ದೃಢವಾಗ್ದಾನ ಮಾಡಿದವನು ನಾನೇ.
- Verse 5: ಈಜಿಪ್ಟಿನವರು ಗುಲಾಮರನ್ನಾಗಿಸಿಕೊಂಡಿರುವ ಇಸ್ರಯೇಲರ ಗೋಳು ನನಗೆ ಕೇಳಿಸಿದೆ. ನಾನು ಮಾಡಿದ ವಾಗ್ದಾನವನ್ನು ನೆನಪಿಗೆ ತಂದುಕೊಂಡಿದ್ದೇನೆ.
- Verse 6: ಆದುದರಿಂದ ನೀನು ಇಸ್ರಯೇಲರಿಗೆ ನನ್ನ ಪರವಾಗಿ ಹೀಗೆಂದು ಹೇಳು: ‘ನಾನೇ ಸರ್ವೇಶ್ವರ. ಈಜಿಪ್ಟಿನವರು ನಿಮ್ಮ ಮೇಲೆ ಹೊರಿಸಿರುವ ದುಡಿಮೆಯನ್ನು ನೀಗಿಸುವೆನು, ದಾಸತ್ವವನ್ನು ತೊಲಗಿಸುವೆನು. ಅವರಿಗೆ ಕಠಿಣಶಿಕ್ಷೆಗಳನ್ನು ವಿಧಿಸುವೆನು, ನಿಮ್ಮನ್ನು ಸಂರಕ್ಷಿಸುವೆನು.
- Verse 7: ನಾನು ನಿಮ್ಮನ್ನು ನನ್ನ ಪ್ರಜೆಯಾಗಿ ಮಾಡುವೆನು; ನಾನು ನಿಮ್ಮ ದೇವರಾಗಿರುವೆನು. ಈಜಿಪ್ಟಿನವರು ಹೊರಿಸುವ ದುಡಿಮೆಯನ್ನು ನಾನು ನಿಮ್ಮಿಂದ ಬಿಡಿಸಿದಾಗ ಸರ್ವೇಶ್ವರ ಎಂಬ ನಾನೇ ನಿಮ್ಮ ದೇವರೆಂದು ನಿಮಗೆ ತಿಳಿದುಬರುವುದು.
- Verse 8: ಇದಲ್ಲದೆ ಅಬ್ರಹಾಮ, ಇಸಾಕ ಮತ್ತು ಯಕೋಬರಿಗೆ ಕೊಡುವೆನೆಂದು ಪ್ರಮಾಣ ಪೂರ್ವಕವಾಗಿ ಹೇಳಿದ ನಾಡಿಗೆ ನಿಮ್ಮನ್ನು ಸೇರಿಸುವೆನು. ಅದನ್ನು ನಿಮಗೆ ಸ್ವಂತ ನಾಡಾಗಿ ಕೊಡುವೆನು. ಸರ್ವೇಶ್ವರನು ನಾನೇ’ ಎಂದು ಅವರಿಗೆ ಹೇಳು,” ಎಂದರು.
- Verse 9: ಮೋಶೆ ಈ ಮಾತುಗಳನ್ನು ಇಸ್ರಯೇಲರಿಗೆ ತಿಳಿಸಿದನು. ಆದರೂ ಅವನ ಮಾತಿಗೆ ಕಿವಿಗೊಡಲಿಲ್ಲ. ಏಕೆಂದರೆ ಅವರ ಮನಸ್ಸು ಅಷ್ಟು ಕುಗ್ಗಿಹೋಗಿತ್ತು, ಅವರ ದಾಸತ್ವ ಅಷ್ಟು ಕ್ರೂರವಾಗಿತ್ತು.
- Verse 10: ಆಗ ಸರ್ವೇಶ್ವರ ಮೋಶೆಯ ಸಂಗಡ ಮಾತನಾಡಿ,
- Verse 11: “ನೀನು ಈಜಿಪ್ಟಿನವರ ಅರಸ ಫರೋಹನ ಬಳಿಗೆ ಹೋಗು. ಅವನಿಗೆ, ‘ಇಸ್ರಯೇಲರು ನಿನ್ನ ದೇಶದಿಂದ ಹೊರಟು ಹೋಗುವುದಕ್ಕೆ ಅಪ್ಪಣೆಕೊಡಬೇಕು’ ಎಂದು ಹೇಳು,” ಎಂದರು.
- Verse 12: ಅದಕ್ಕೆ ಮೋಶೆ ಸರ್ವೇಶ್ವರನ ಸನ್ನಿಧಿಯಲ್ಲಿ, “ಆಲಿಸಬೇಕು, ಇಸ್ರಯೇಲರೇ ನನ್ನ ಮಾತನ್ನು ಕೇಳಲಿಲ್ಲ; ಇನ್ನು ಫರೋಹನು ಕಿವಿಗೊಟ್ಟಾನೆ? ನನಗಾದರೂ ಚುರುಕಾದ ನಾಲಿಗೆಯಿಲ್ಲ,” ಎಂದನು.
- Verse 13: ಸರ್ವೇಶ್ವರ ಮೋಶೆ ಮತ್ತು ಆರೋನರ ಸಂಗಡ ಮಾತಾಡಿ ಇಸ್ರಯೇಲರನ್ನು ಈಜಿಪ್ಟ್ ದೇಶದಿಂದ ಬರಮಾಡಬೇಕೆಂದು ಅವರಿಗೆ ಆಜ್ಞಾಪಿಸಿ ಅವರನ್ನು ಇಸ್ರಯೇಲರ ಬಳಿಗೂ ಅರಸ ಫರೋಹನ ಬಳಿಗೂ ಕಳಿಸಿದರು.
- Verse 14: ಅವರ ಗೋತ್ರಗಳ ಮೂಲಪುರುಷರು ಇವರು: ಇಸ್ರಯೇಲನ ಜ್ಯೇಷ್ಠ ಪುತ್ರನಾದ ರೂಬೇನನಿಗೆ ಹನೋಕ್, ಫಲ್ಲು, ಹೆಚ್ರೋನ್ ಮತ್ತು ಕರ್ಮೀ ಎಂಬವರು ಮಕ್ಕಳು. ಇವರೇ ರೂಬೇನನಿಂದ ಉಂಟಾದ ಗೋತ್ರಗಳಿಗೆ ಮೂಲ ಪುರುಷರು.
- Verse 15: ಸಿಮೆಯೋನನಿಗೆ ಯೆಮೂಯೇಲ್, ಯಾಮೀನ್, ಓಹದ್, ಯಾಕೀನ್, ಚೋಹರ್ ಮತ್ತು ಕಾನಾನ್ಯ ಮಹಿಳೆಯಿಂದ ಹುಟ್ಟಿದ ಸೌಲ ಎಂಬವರು ಮಕ್ಕಳು. ಇವರೇ ಸಿಮೆಯೋನನಿಂದ ಉಂಟಾದ ಗೋತ್ರಗಳಿಗೆ ಮೂಲಪುರುಷರು.
- Verse 16: ವಂಶಾವಳಿಗಳ ಪ್ರಕಾರ ಲೇವಿಯ ಮಕ್ಕಳು ಇವರು - ಗೇರ್ಷೋನ್, ಕೆಹಾತ್ ಮತ್ತು ಮೆರಾರೀ. ಲೇವಿ ನೂರಮೂವತ್ತೇಳು ವರ್ಷ ಬದುಕಿದ್ದನು.
- Verse 17: ಗೋತ್ರಗಳನ್ನು ಸ್ಥಾಪಿಸಿದ ಗೇರ್ಷೋನನ ಮಕ್ಕಳು ಲಿಬ್ನೀ ಮತ್ತು ಶಿಮ್ಮೀ ಎಂಬವರು.
- Verse 18: ಕೆಹಾತನ ಮಕ್ಕಳು - ಅಮ್ರಾಮ್, ಇಚ್ಹಾರ್, ಹೆಬ್ರೋನ್ ಮತ್ತು ಉಜ್ಜೀಯೇಲ್. ಕೆಹಾತನು ನೂರ ಮೂವತ್ತ ಮೂರು ವರ್ಷ ಬದುಕಿದ್ದನು.
- Verse 19: ಮೆರಾರೀಯ ಮಕ್ಕಳು - ಮಹ್ಲೀ, ಮೂಷೀ ಎಂಬವರು. ವಂಶಾವಳಿಗಳ ಪ್ರಕಾರ ಲೇವಿಯಿಂದುಂಟಾದ ಗೋತ್ರಗಳು ಇವೇ.
- Verse 20: ಅಮ್ರಾಮನು ತನ್ನ ಸೋದರತ್ತೆಯಾದ ಯೋಕಬೆದಳನ್ನು ಮದುವೆಮಾಡಿಕೊಂಡನು. ಆಕೆ ಅವನಿಗೆ ಆರೋನನನ್ನು ಮತ್ತು ಮೋಶೆಯನ್ನು ಹೆತ್ತಳು. ಅಮ್ರಾಮನು ನೂರಮೂವತ್ತೇಳು ವರ್ಷ ಬದುಕಿದ್ದನು.
- Verse 21: ಇಚ್ಹಾರನ ಮಕ್ಕಳು - ಕೋರಹ, ನೆಫೆಗೆ ಮತ್ತು ಜಿಕ್ರೀ.
- Verse 22: ಉಜ್ಜೀಯೇಲನ ಮಕ್ಕಳು - ಮೀಷಾಯೇಲ್, ಎಲ್ಚಾಫಾನ್ ಸಿತ್ರೀ.
- Verse 23: ಆರೋನನು ಅಮ್ಮೀನಾದಾಬನ ಮಗಳೂ ನಹಶೋನನ ತಂಗಿಯೂ ಆದ ಎಲೀಶೇಬಳನ್ನು ಮದುವೆಮಾಡಿಕೊಂಡನು. ಆಕೆಯಲ್ಲಿ ಅವನಿಗೆ ನಾದಾಬ್, ಅಬೀಹೂ, ಎಲ್ಲಾಜಾರ್ ಮತ್ತು ಈತಾಮಾರ್ ಎಂಬವರು ಹುಟ್ಟಿದರು.
- Verse 24: ಕೋರಹನ ಮಕ್ಕಳು - ಅಸ್ಸೀರ್, ಎಲ್ಕಾನಾ ಮತ್ತು ಅಬಿಯಾಸಾಫ್. ಇವರೇ ಕೋರಹೀಯರ ಗೋತ್ರಸ್ಥಾಪಕರು.
- Verse 25: ಆರೋನನ ಮಗನಾದ ಎಲ್ಲಾಜಾರನು ಪೂಟಿಯೇಲನ ಮಕ್ಕಳಲ್ಲಿ ಒಬ್ಬಾಕೆಯನ್ನು ಮದುವೆಮಾಡಿಕೊಂಡನು. ಆಕೆ ಅವನಿಗೆ ಫಿನೇಹಾಸನನ್ನು ಹೆತ್ತಳು. ಅವರವರ ಗೋತ್ರದ ಮೇರೆಗೆ ಇವರೇ ಲೇವಿಯರ ಪೂರ್ವಿಕರು.
- Verse 26: “ತಮ್ಮ ತಮ್ಮ ಗೋತ್ರದ ಪ್ರಕಾರ ಇಸ್ರಯೇಲ್ ಜನರನ್ನು ಈಜಿಪ್ಟ್ ದೇಶದಿಂದ ಕರೆದುಕೊಂಡು ಬರುವುದಕ್ಕೆ ಸರ್ವೇಶ್ವರನಿಂದ ಆಜ್ಞೆಹೊಂದಿದ ಆರೋನ್ ಮತ್ತು ಮೋಶೆ ಇವರೇ.
- Verse 27: ಇಸ್ರಯೇಲರನ್ನು ಈಜಿಪ್ಟ್ ದೇಶದಿಂದ ಹೊರಗೆ ಬರಮಾಡುವುದಕ್ಕಾಗಿ ಈಜಿಪ್ಟಿನ ಅರಸ ಫರೋಹನ ಸಂಗಡ ಮಾತಾಡಿದಂಥ ಮೋಶೆ ಮತ್ತು ಆರೋನರು ಇವರೇ.
- Verse 28: ಸರ್ವೇಶ್ವರ ಸ್ವಾಮಿ ಈಜಿಪ್ಟ್ ದೇಶದಲ್ಲಿ ಮೋಶೆಯ ಸಂಗಡ ಮಾತಾಡಿ,
- Verse 29: “ನಾನು ಸರ್ವೇಶ್ವರ; ನಾನು ನಿನಗೆ ಹೇಳುವುದನ್ನೆಲ್ಲ ನೀನು ಈಜಿಪ್ಟಿನ ಅರಸ ಫರೋಹನ ಸನ್ನಿಧಿಯಲ್ಲಿ ಹೇಳಬೇಕು,” ಎಂದರು.
- Verse 30: ಅದಕ್ಕೆ ಮೋಶೆ, “ಸ್ವಾಮೀ, ನಾನು ಮಾತಾಡುವುದರಲ್ಲಿ ಜಾಣನಲ್ಲ, ಫರೋಹನು ನನ್ನ ಮಾತನ್ನು ಹೇಗೆ ಕೇಳುತ್ತಾನೆ?” ಎಂದನು.