पवित्र बाइबिल
ಹಳೆಯ ಒಡಂಬಡಿಕೆ
ಕೀರ್ತನೆಗಳು
21ನೇ ಅಧ್ಯಾಯ
- Verse 1: ಅರಸಗೆ ಹರ್ಷವಾಯಿತು ಪ್ರಭು, ನೀ ತೋರಿದ ಪರಾಕ್ರಮಕ್ಕಾಗಿ I ಪರಮಾನಂದಗೊಂಡನವನು, ನೀನಿತ್ತ ವಿಜಯೋತ್ಸವಕ್ಕಾಗಿ II
- Verse 2: ಆತನ ಮನದಾಸೆಯನು ನೀ ಪೂರೈಸಿದೆ I ಆತನಧರ ಬಯಕೆಯನು ಅನುಗ್ರಹಿಸಿದೆ II
- Verse 3: ನೀನಾತನನು ಸ್ವಾಗತಿಸಿದೆ ಶುಭಾಶಯದೊಂದಿಗೆ I ಚಿನ್ನದ ಕಿರೀಟವನು ಮುಡಿಸಿದೆ ಆತನ ಶಿರಸ್ಸಿಗೆ II
- Verse 4: ಕೋರಿದನಾತನು ಜೀವಮಾನಕಾಲವನು I ನೀನಿತ್ತೆ ಯುಗಯುಗಾಂತರದಾಯುಷ್ಯವನು II
- Verse 5: ನಿನ್ನ ನೆರವಿಂದೇರಿತು ಆತನ ಘನತೆ I ಶೋಭೆ, ಪ್ರಭಾವಗಳ ನೀನವನಿಗಿತ್ತೆ II
- Verse 6: ಅಮರ ಭಾಗ್ಯಗಳನು ನೀನನುಗ್ರಹಿಸಿದೆ I ಶ್ರೀಸನ್ನಿಧಿಯಲಾತನನು ತೋಷಗೊಳಿಸಿದೆ II
- Verse 7: ಅರಸನಿಗಿದೆ ಭರವಸೆ ಪ್ರಭುವಿನಲಿ I ಅವನಚಲನು, ಪರಾತ್ಪರನ ಕೃಪೆಯಲಿ II
- Verse 8: ಶತ್ರುಗಳೆಲ್ಲರು ಸಿಕ್ಕಿಹೋಗುವರು ನಿನ್ನ ಕೈಗೆ I ಹಗೆಗಳೆಲ್ಲ ಸಿಕ್ಕಿಬೀಳುವರು ನಿನ್ನ ಬಲಗೈಗೆ II
- Verse 9: ಅಗ್ನಿಕುಂಡವಾಗುವರವರು ನೀ ಪ್ರತ್ಯಕ್ಷನಾದಾಗ I ಕಬಳಿಸುವುದು ಕೋಪಾಗ್ನಿ, ಭಸ್ಮವಾಗ್ವರು ಪ್ರಭು ಬಂದಾಗ II
- Verse 10: ನಿರ್ಮೂಲಮಾಡುವೆ ನೀನವರ ಸಂತಾನವನು ಧರೆಯಿಂದ I ಕುಡಿಯಿಲ್ಲದಾಗಿಸುವೆ ಅವರನು ಮಾನವರ ಮಧ್ಯದಿಂದ II
- Verse 11: ತಂತ್ರೋಪಾಯಗಳ ಕಲ್ಪಿಸಿದರೂ ನಡೆಯದು I ಕೇಡನು ನಿನಗೆ ಬಗೆದರೂ ಅದು ಕೈಗೂಡದು II
- Verse 12: ಬಾಣ ಹೂಡಿ ಅವರ ಹಣೆಗೆ ನೀ ಬಿಡುವೆ I ಬೆನ್ನುಮಾಡಿ ಅವರೋಡುವಂತೆ ಮಾಡುವೆ II
- Verse 13: ಹೇ ಪ್ರಭು, ಪರಾಕ್ರಮ ತೋರಿ, ಪರಮಪದಗಳಿಸಿಕೊ I ಕೀರ್ತಿಸುತ ನಿನ್ನ ಸಾಮರ್ಥ್ಯವನು, ಪೊಗಳುವೆನಿದೊ II