पवित्र बाइबिल
ಹಳೆಯ ಒಡಂಬಡಿಕೆ
ಕೀರ್ತನೆಗಳು
58ನೇ ಅಧ್ಯಾಯ
- Verse 1: ಜನನಾಯಕರೇ, ನ್ಯಾಯಬದ್ಧವೊ ನಿಮ್ಮ ತೀರ್ಪುಗಳು I ವ್ಯಾಜ್ಯಗಳನು ಬಗೆಹರಿಸುತ್ತವೆಯೆ ನಿಮ್ಮ ನಿರ್ಣಯಗಳು? II
- Verse 2: ಬದಲಿಗೆ ಕಲ್ಪಿಸುತ್ತೀರಿ ಅಕ್ರಮವನು ಮನದಲಿ I ಧರೆಗೀಯುತ್ತೀರಿ ಹಿಂಸಾಚಾರವನು ತೂಕದಲಿ II
- Verse 3: ದುರುಳರು ದಾರಿತಪ್ಪಿದವರು ಉದರದಿಂದಲೆ I ಸಟೆಯಾಡುವ ಅಕ್ರಮಿಗಳವರು ಹುಟ್ಟಿನಿಂದಲೆ II
- Verse 4: ಸರ್ಪಗಳಂತಾ ಜನ ವಿಷಭರಿತ I ನಾಗರದಂತೆ ಅವರ ಕಿವಿ ಮಂದ II
- Verse 5: ಒಲಿಯದವರ ಕಿವಿ ಪುಂಗಿಯ ನಾದಕೆ I ಮಣಿಯವು ಹಾವಾಡಿಗನ ಮಾಟಕೆ II
- Verse 6: ಮುರಿದುಬಿಡು ಹೇ ದೇವಾ, ಆ ದುರುಳರ ಹಲ್ಲುಗಳನು I ಕಿತ್ತುಬಿಡು ಪ್ರಭು, ಆ ಪ್ರಾಯಸಿಂಹಗಳ ಕೋರೆಗಳನು II
- Verse 7: ಅವರಾಗಲಿ ಬೇಗನೆ ಕಾಣದೆ ಹೋಗುವ ತೊರೆಯಂತೆ I ನಸುಕಿ ನಾಶವಾಗಲಿ ಪಾದದಡಿ ಸಿಲುಕಿದ ಗರಿಕೆಕಣದಂತೆ II
- Verse 8: ನುಸುಳಿ ನುಸುಳಿ ನಶಿಸಿಹೋಗಲಿ ಬಸವನ ಹುಳದಂತೆ I ರವಿಯ ಬೆಳಕನು ಕಾಣದಿರಲಿ ಗರ್ಭವಿಳಿದ ಪಿಂಡದಂತೆ II
- Verse 9: ಹಸುರಿರಲಿ ಒಣಗಿರಲಿ, ಒಲೆ ಪಾಲಾಗಲಿ ಮುಳ್ಳಿನಂತೆ I ನಿಶ್ಯೇಷವಾಗಲಿ ದೇವಕೋಪಾಗ್ನಿಗೆ ಸಿಲುಕಿದಂತೆ II
- Verse 10: ನಲಿವರು ಸಜ್ಜನರು ಈ ಪ್ರತೀಕಾರ ನೋಟದಲಿ I ಕಾಲುತೊಳೆಯುವರವರು ಆ ದುರ್ಜನರ ನೆತ್ತರಲಿ II
- Verse 11: “ನ್ಯಾಯ ನಿರ್ಣಯಿಸುವಂಥ ದೇವನಿಹನು ಜಗದಲಿ I ಸಜ್ಜನರಿಗೆ ಸತ್ಫಲ ಕಟ್ಟಿಟ್ಟ ಬುತ್ತಿ,” ಇದು ನಾಣ್ನುಡಿ II