पवित्र बाइबिल
ಹಳೆಯ ಒಡಂಬಡಿಕೆ
ಕೀರ್ತನೆಗಳು
104ನೇ ಅಧ್ಯಾಯ
- Verse 1: ಭಜಿಸು ನನ್ನ ಮನವೇ, ಭಜಿಸು, ಪ್ರಭುವನು I ಪ್ರಭು, ನನ್ನ ದೇವಾ, ನೀ ಸರ್ವೋತ್ತಮನು I ಮಹಿಮೆ ಪ್ರತಾಪಗಳಿಂದ ಭೂಷಿತನು II
- Verse 2: ತೊಟ್ಟುಕೊಂಡಿರುವೆ ಬೆಳಕನೇ ಬಟ್ಟೆಯಂತೆ I ಹರಡಿಸಿರುವೆ ಆಗಸವನು ಗುಡಾರದಂತೆ II
- Verse 3: ನಿರ್ಮಿಸಿರುವೆ ನಿನ್ನ ಭವನವನು ಜಲದ ಮೇಲೆ I ಮಾಡುವೆ ಸಂಚಾರ ಮಾರುತನ ರೆಕ್ಕೆಗಳ ಮೇಲೆ I ನಿನಗೆ ರಥವಾಹನಗಳು ಆ ಮುಗಿಲು ಮೋಡಗಳೇ II
- Verse 4: ಗಾಳಿಗಳೇ ನಿನಗೆ ದೂತರುಗಳು I ಅಗ್ನಿಜ್ಞಾಲೆಗಳೇ ಆಳುಗಳು II
- Verse 5: ಬುವಿಯನು ತಳಹದಿಯ ಮೇಲೆ ಸ್ಥಾಪಿಸಿರುವೆ I ಅದೆಂದಿಗೂ ಕದಲದಂತೆ ಮಾಡಿರುವೆ II
- Verse 6: ಅದಕ್ಕೆ ಹೊದಿಸಿರುವೆ ಸಾಗರವೆಂಬ ವಸ್ತ್ರವನು I ಆ ಜಲರಾಶಿಗಳು ಮುಳುಗಿಸಿವೆ ಬೆಟ್ಟಗಳನು II
- Verse 7: ತಲೆದೋರಿತು ಜಲ ನಿನ್ನ ಗದರಿಕೆಗೆ I ಹೆದರಿ ಹಿಂಜರಿಯಿತು ನಿನ್ನ ಗರ್ಜನೆಗೆ II
- Verse 8: ತಲೆದೋರಿದವು ಬೆಟ್ಟಗುಡ್ಡಗಳು I ತುಂಬಿಕೊಂಡವು ಹಳ್ಳಕೊಳ್ಳಗಳು I ಅವೇ ನೀ ನೇಮಿಸಿದ ಸ್ಥಳಗಳು II
- Verse 9: ಗೊತ್ತುಮಾಡಿರುವೆ ಆ ಜಲರಾಶಿಗೆ ಮೇರೆಯನು I ಅವು ಮತ್ತೆ ಮುಚ್ಚದಂತೆ ಮಾಡಿರುವೆ ಭೂಮಿಯನು II
- Verse 10: ಬುಗ್ಗೆಗಳು ಚಿಮ್ಮಿ ಓಡಮಾಡುವೆ ತಗ್ಗುಗಳಲಿ I ನದಿಗಳ ಹರಿಯಮಾಡುವೆ ಗುಡ್ಡಗಳ ನಡುವೆಯಲಿ II
- Verse 11: ನೀರ ನೀಡುವವು ಕುಡಿಯಲಿಕ್ಕೆ ಕಾಡುಮೃಗಗಳಿಗೆ I ದಾಹ ನೀಗಿಸಿಕೊಳ್ಳಲು ಆ ಕಾಡುಕತ್ತೆಗಳಿಗೆ II
- Verse 12: ಅವುಗಳ ಅರುಗಲ್ಲೇ ಇವೆ ಹಕ್ಕಿಗಳ ಗೂಡುಗಳು I ಕೇಳುತಿವೆ ಕೊಂಬೆಗಳಿಂದಾ ಪಕ್ಷಿಗಳ ಕಲರವಗಳು II
- Verse 13: ಮಲೆಗಳ ಮೇಲೆ ಮಳೆಗರೆಯುವೆ ಗಗನದಿಂದ I ತೃಪ್ತಿಗೊಂಡಿದೆ ಪೃಥ್ವಿಯು ನಿನ್ನ ಕೃಪೆಗಳಿಂದ II
- Verse 14: ಮೊಳೆಸುವೆ ಹುಲ್ಲನ್ನು ದನಕರುಗಳಿಗೋಸ್ಕರ I ಬೆಳೆಸುವೆ ಪೈರನು ನರಮಾನವರಿಗೋಸ್ಕರ II
- Verse 15: ಒದಗಿಸುವೆ ಬೇಸಾಯದ ಆಹಾರವನು I ಹೃದಯವನು ಮುದಗೊಳಿಸುವ ದ್ರಾಕ್ಷಾರಸವನು I ಮುಖಕೆ ಮೆರಗನ್ನೀಯುವ ತಿಳಿತೈಲಗಳನು I ದೇಹವನು ಗಟ್ಟಿಮುಟ್ಟಾಗಿಸುವ ರೊಟ್ಟಿಯನು II
- Verse 16: ಜಲವಿದೆ ಲೆಬನೋನಿನ ದೇವದಾರು ವೃಕ್ಷಗಳಿಗೆ I ನೀರು ಬೇಕಾದಷ್ಟಿದೆ ಪ್ರಭು ನೆಟ್ಟ ಮರಗಳಿಗೆ II
- Verse 17: ಗೂಡುಕಟ್ಟಿಕೊಳ್ಳುವುವು ಹಕ್ಕಿಗಳಾ ಮರಗಳಲಿ I ವಾಸಮಾಡುವುವು ಕೊಕ್ಕರೆಗಳು ತುರಾಯಿಮರಗಳಲಿ II
- Verse 18: ಬೆಟ್ಟಗುಡ್ಡಗಳಿವೆ ಕಾಡುಕುರಿಗಳಿಗೆ I ಬಂಡೆಬಿರುಕುಗಳಿವೆ ಬೆಟ್ಟದ ಮೊಲಗಳಿಗೆ II
- Verse 19: ಋತು ಸೂಚನೆಗಾಗಿ ನೀ ನಿರ್ಮಿಸಿದೆ ಚಂದ್ರನನು I ಸೂರ್ಯ ಬಲ್ಲನು ತನ್ನಸ್ತಮಾನದ ವೇಳೆಯನು II
- Verse 20: ರಾತ್ರಿಯಾಗುತ್ತದೆ ನೀ ಕತ್ತಲನು ಬರಮಾಡಲು I ತಿರುಗಾಡುತ್ತವೆ ಆಗ ಕಾಡಿನ ಜೀವಜಂತುಗಳು II
- Verse 21: ಗರ್ಜಿಸುತ್ತವೆ ಪ್ರಾಯಸಿಂಹಗಳು ಬೇಟೆಗಾಗಿ I ದೇವರನ್ನು ಎದುರು ನೋಡುತ್ತವೆ ಆಹಾರಕ್ಕಾಗಿ II
- Verse 22: ಮರಳುತ್ತವೆ ಸೂರ್ಯೋದಯವಾಗಲು I ತಂತಮ್ಮ ಗವಿಗುಹೆಗಳಲಿ ಮಲಗಲು II
- Verse 23: ಹೊರಡುತ್ತಾನಾಗ ಮಾನವ ಕೆಲಸಕೆ I ದುಡಿಯುತ್ತಾನೆ ಸಾಯಂಕಾಲದವರೆಗೆ II
- Verse 24: ಸೃಜಿಸಿರುವೆ ಎಲ್ಲವನು ಸುಜ್ಞಾನದಿಂದ I ಜಗವೆಲ್ಲ ತುಂಬಿದೆ ನಿನ್ನ ಸೃಷ್ಟಿಯಿಂದ II
- Verse 25: ಸಮುದ್ರವಿದೊ ಎಷ್ಟು ಅಪಾರ, ಅದೆಷ್ಟು ವಿಶಾಲ I ಅದರಲ್ಲಿರುವ ಸಣ್ಣ-ದೊಡ್ಡ ಜೀವಿಗಳಿಗೆ ಲೆಕ್ಕವಿಲ್ಲ II
- Verse 26: ಓಡಾಡುತ್ತವದರೊಳು ಹಡಗುಗಳು I ನೀನುಂಟುಮಾಡಿದ ತಿಮಿಂಗಿಲಗಳು II
- Verse 27: ಸಕಾಲದಲೊದಗಿಸುವೆ ಆಹಾರವನು I ನಂಬಿಕೊಂಡಿವೆ ಆ ಜೀವಿಗಳು ನಿನ್ನನು II
- Verse 28: ನೀ ನೀಡಲು ಕೂಡಿಸಿಟ್ಟುಕೊಳ್ಳುವುವು I ನೀ ಕೈತೆರೆಯಲು ಸಂತೃಪ್ತಿಪಡುವುವು II
- Verse 29: ತಲ್ಲಣಗೊಳ್ಳುವುವು ನೀ ಮುಖ ಮರೆಮಾಡಿಕೊಳ್ಳಲು I ಮಣ್ಣುಪಾಲಾಗುವುವು ನೀನವುಗಳ ಉಸಿರನಡಗಿಸಲು II
- Verse 30: ನೀ ಉಸಿರನ್ನೂದಲು ಹೊಸದಾಗುವುವು I ಪುನಶ್ಚೇತನಗೊಳ್ಳುವುದು ಜಗವೆಲ್ಲವು II
- Verse 31: ಸ್ವಾಮಿದೇವನ ಮಹಿಮೆಯಿರಲಿ ಶಾಶ್ವತವಾಗಿ I ಆತ ಸಂತೋಷಿಸಲಿ ತನ್ನ ಸುಕೃತ್ಯಗಳಿಗಾಗಿ II
- Verse 32: ನಡುಗುತ್ತದೆ ಭೂಮಂಡಲ ಆತನ ಕೃತ್ಯಕೆ I ಹೊಗೆಕಾರುತ್ತದೆ ಪರ್ವತ ಆತನ ಸ್ಪರ್ಶಕೆ II
- Verse 33: ಪ್ರಭುವನು ನಾ ಹೊಗಳಿ ಹಾಡುವೆನು ಬಾಳಿನೊಳೆಲ್ಲ I ನನ್ನ ದೇವನನು ಭಜಿಸುವೆನು ನಾ ಜೀವಮಾನವೆಲ್ಲ II
- Verse 34: ಆತನಿಗೊಲಿಯಲಿ ನನ್ನ ಧ್ಯಾನ I ಆತನಲೇ ಹರ್ಷಿಸಲಿ ನನ್ನ ಮನ II
- Verse 35: ದಹಿಸಿಹೋಗಲಿ ಧರೆಯಿಂದ ದುಷ್ಟರು I ನಿರ್ಮೂಲವಾಗಲಿ ಸಕಲ ದುರುಳರು I ಪ್ರಭುವನು ನನ್ನ ಮನ ಸ್ತುತಿಸಲಿ I ಪ್ರಭುವಿಗೆ ಸ್ತುತಿಸ್ತೋತ್ರವಾಗಲಿ II