P. O. C ബൈബിള്
ಹಳೆಯ ಒಡಂಬಡಿಕೆ
ಜ್ಞಾನೋಕ್ತಿಗಳು
15ನೇ ಅಧ್ಯಾಯ
- Verse 1: ಮೃದುವಾದ ಮಾತು ಸಿಟ್ಟನ್ನಾರಿಸುತ್ತದೆ; ಬಿರುಸಾದ ನುಡಿ ಸಿಟ್ಟನ್ನೇರಿಸುತ್ತದೆ.
- Verse 2: ಜ್ಞಾನಿಗಳ ನಾಲಿಗೆ ತಿಳುವಳಿಕೆಯನ್ನು ಸಾರ್ಥಕಪಡಿಸುತ್ತದೆ; ಜ್ಞಾನಹೀನರ ಬಾಯಿ ಮೂರ್ಖತನವನ್ನು ಕಕ್ಕುತ್ತದೆ.
- Verse 3: ಸರ್ವೇಶ್ವರನ ದೃಷ್ಟಿ ಸರ್ವವ್ಯಾಪ್ತ; ಕೆಟ್ಟವರ ಮೇಲೂ ಒಳ್ಳೆಯವರ ಮೇಲೂ ಆತನ ನೋಟ.
- Verse 4: ಸಂತೈಸುವ ನಾಲಿಗೆ ಜೀವವೃಕ್ಷಕ್ಕೆ ಸಮಾನ; ಹಿಂಸಾತ್ಮಕ ನಾಲಿಗೆ ಮನಮುರಿತಕ್ಕೆ ಸಾಧನ.
- Verse 5: ಮೂರ್ಖನು ತಂದೆಯ ಶಿಕ್ಷಣವನ್ನು ನಿರ್ಲಕ್ಷ್ಯ ಮಾಡುತ್ತಾನೆ; ಜಾಣನು ಆತನ ಗದರಿಕೆಯನ್ನೂ ಗಮನಿಸುತ್ತಾನೆ.
- Verse 6: ನೀತಿವಂತನ ಮನೆಯೊಳು ನಿಧಿನಿಕ್ಷೇಪ; ಅನೀತಿವಂತನ ಆದಾಯ ದುಃಖತಾಪ.
- Verse 7: ತಿಳುವಳಿಕೆಯ ಬಿತ್ತನೆ ಜ್ಞಾನಿಗಳ ಬಾಯಿಂದ; ದುರುಳರ ಹೃದಯಕ್ಕೆ ಅದು ಅಸಾಧ್ಯ.
- Verse 8: ದುರುಳರು ಅರ್ಪಿಸುವ ಬಲಿ ಸರ್ವೇಶ್ವರನಿಗೆ ಅಸಹ್ಯ; ಸಜ್ಜನರು ಮಾಡುವ ಪ್ರಾರ್ಥನೆ ಆತನಿಗೆ ಪ್ರಿಯ.
- Verse 9: ದುರುಳರ ನಡತೆ ಸರ್ವೇಶ್ವರನಿಗೆ ಹೇಯ; ನೀತಿವಂತರ ನಡತೆ ಆತನಿಗೆ ಸುಪ್ರಿಯ.
- Verse 10: ಸನ್ಮಾರ್ಗವನ್ನು ತೊರೆದವನಿಗೆ ಬರುವ ಶಿಕ್ಷೆ ಕಠಿಣ ಬುದ್ಧಿವಾದವನ್ನು ಕೇಳಲೊಲ್ಲದವನಿಗೆ ಬರುವುದು ಮರಣ.
- Verse 11: ಸರ್ವೇಶ್ವರನ ಕಣ್ಣಿಗೆ ನರಕಪಾತಾಳಗಳೇ ಬಟ್ಟಬಯಲಾಗಿರಲು; ನರಮಾನವರ ಹೃದಯ ಆತನಿಗೆ ಮುಚ್ಚುಮರೆಯೇ?
- Verse 12: ಕುಚೋದ್ಯನಿಗೆ ಬೇಡ ಬುದ್ಧಿವಾದ; ಅವನಿಗೆ ಬೇಡ ಜ್ಞಾನಿಗಳ ಸತ್ಸಂಘ.
- Verse 13: ಹರ್ಷಹೃದಯದಿಂದ ಮುಖ ಅರಳುವುದು; ಮನೋವ್ಯಥೆಯಿಂದ ಚೈತನ್ಯ ಕುಂದುವುದು.
- Verse 14: ವಿವೇಕಿಯ ಮನ ತಿಳುವಳಿಕೆಯನ್ನು ಅರಸುವುದು; ಮತಿಹೀನನ ಬಾಯಿ ಮೂರ್ಖತನವನ್ನು ಮುಕ್ಕುವುದು.
- Verse 15: ದಲಿತರ ದಿನಗಳೆಲ್ಲ ದುಃಖಭರಿತ; ಹರ್ಷ ಹೃದಯನಿಗೆ ಸದಾ ಹಬ್ಬದಾನಂದ.
- Verse 16: ನೆಮ್ಮದಿಯಿಲ್ಲದ ಸಿರಿಸಂಪತ್ತಿಗಿಂತಲು, ಸರ್ವೇಶ್ವರನ ಭಯಭಕ್ತಿಯಿಂದ ಕೂಡಿದ ಕಿಂಚಿತ್ತೇ ಮೇಲು.
- Verse 17: ದ್ವೇಷವಿರುವಲ್ಲಿ ಕೊಬ್ಬಿದ ಮಾಂಸಭೋಜನಕ್ಕಿಂತ, ಪ್ರೀತಿಯಿರುವಲ್ಲಿ ಸೊಪ್ಪಿನ ಊಟವೇ ಲೇಸು.
- Verse 18: ಉಗ್ರಕೋಪಿ ವ್ಯಾಜ್ಯವೆಬ್ಬಿಸುತ್ತಾನೆ; ದೀರ್ಘಶಾಂತನು ಜಗಳ ತೀರಿಸುತ್ತಾನೆ.
- Verse 19: ಸೋಮಾರಿಯ ದಾರಿ ಮುಳ್ಳಿನ ಬೇಲಿ; ಸಜ್ಜನರ ಮಾರ್ಗ ರಾಜಬೀದಿ.
- Verse 20: ಬುದ್ಧಿವಂತ ಮಗ ತಂದೆಯನ್ನು ಸಂತೋಷಗೊಳಿಸುತ್ತಾನೆ; ಬುದ್ಧಿಹೀನನು ಹೆತ್ತ ತಾಯಿಯನ್ನು ತಿರಸ್ಕರಿಸುತ್ತಾನೆ.
- Verse 21: ಬುದ್ಧಿಹೀನನು ಮೂರ್ಖತನದಲ್ಲಿ ಆನಂದಿಸುತ್ತಾನೆ; ಬುದ್ಧಿವಂತನು ಸನ್ಮಾರ್ಗದಲ್ಲಿ ಮುಂದುವರಿಯುತ್ತಾನೆ.
- Verse 22: ಆಲೋಚನೆಯಿಲ್ಲದೆ ಉದ್ದೇಶಗಳು ಈಡೇರವು; ಹಲವಾರು ಆಲೋಚನಾಪರರಿರುವಲ್ಲಿ ಅವು ಕೈಗೂಡುವುವು.
- Verse 23: ಸದುತ್ತರ ಕೊಡುವವನಿಗೆ ಎಷ್ಟೋ ಸಂತೋಷ; ಸಮಯೋಚಿತ ವಚನ ಎಷ್ಟೋ ಸ್ವಾರಸ್ಯ.
- Verse 24: ವಿವೇಕಿಗಳ ಮಾರ್ಗ ಏರಿಸುವುದು ಸಜ್ಜೀವಕ್ಕೆ; ಅದನ್ನು ಕೈಗೊಳ್ಳುವವರು ಇಳಿಯರು ಪಾತಾಳಕ್ಕೆ.
- Verse 25: ಗರ್ವಿಷ್ಠನ ಮನೆಯನ್ನು ಸರ್ವೇಶ್ವರ ಕೆಡವಿಬಿಡುವನು; ವಿಧವೆಯ ಎಲ್ಲೆ ಮೇರೆಯನ್ನು ಸುಭದ್ರಪಡಿಸುವನು.
- Verse 26: ದುರುಳರ ಕುಯುಕ್ತಿ ಸರ್ವೇಶ್ವರನಿಗೆ ಅಸಹ್ಯ; ಸಜ್ಜನರ ಸುಸೂಕ್ತಿ ಆತನಿಗೆ ಪ್ರಿಯ.
- Verse 27: ಸೂರೆಮಾಡುವವನು ಸ್ವಂತ ಮನೆಗೇ ಕೇಡುಮಾಡುತ್ತಾನೆ; ಲಂಚವನ್ನು ದ್ವೇಷಿಸುವವನು ಸುಖವಾಗಿ ಬಾಳುತ್ತಾನೆ.
- Verse 28: ಸಜ್ಜನರು ಸಮಾಲೋಚಿಸಿ ಉತ್ತರಿಸುತ್ತಾರೆ; ದುರ್ಜನರು ಕೆಟ್ಟದ್ದನ್ನು ಕಕ್ಕುತ್ತಿರುತ್ತಾರೆ.
- Verse 29: ಸರ್ವೇಶ್ವರನು ದುರುಳರಿಗೆ ದೂರ; ನೀತಿವಂತರ ಪ್ರಾರ್ಥನೆಗೆ ಹತ್ತಿರ.
- Verse 30: ಹಸನ್ಮುಖ ಕಂಡಾಗ ಹೃದಯಕ್ಕೆ ಆನಂದ; ಶುಭಸಮಾಚಾರದಿಂದ ದೇಹಕ್ಕೆ ಉತ್ತೇಜನ.
- Verse 31: ಹಿತಕರ ಬುದ್ಧಿವಾದಕ್ಕೆ ಕಿವಿಗೊಡುವವನು ಸಜ್ಜನರ ಸತ್ಸಂಘದಲ್ಲಿ ಪಾಲ್ಗೊಳ್ಳುವನು.
- Verse 32: ಶಿಸ್ತನ್ನು ನಿರಾಕರಿಸುವವನು ತನ್ನನ್ನೇ ತೃಣೀಕರಿಸುತ್ತಾನೆ; ಬುದ್ಧಿವಾದವನ್ನು ಅಂಗೀಕರಿಸುವವನು ಜ್ಞಾನ ಹೊಂದುತ್ತಾನೆ.
- Verse 33: ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವರಿಗೆ ಜ್ಞಾನೋದಯ; ಘನತೆಗೌರವಕ್ಕೆ ಮುಂಚೆ ಸವಿನಯ.