ಕನ್ನಡ ಸತ್ಯವೇದವು
ಹೊಸ ಒಡಂಬಡಿಕೆ
ಯೊವಾನ್ನ
14ನೇ ಅಧ್ಯಾಯ
- Verse 1: ಯೇಸು ಸ್ವಾಮಿ ತಮ್ಮ ಮಾತನ್ನು ಮುಂದುವರಿಸುತ್ತಾ ಶಿಷ್ಯರಿಗೆ, “ನೀವು ಹೃದಯದಲ್ಲಿ ಕಳವಳಗೊಳ್ಳದಿರಿ; ದೇವರಲ್ಲಿ ವಿಶ್ವಾಸವಿಡಿ; ನನ್ನಲ್ಲಿಯೂ ವಿಶ್ವಾಸವಿಡಿ.
- Verse 2: ನನ್ನ ಪಿತನ ಆಸ್ಥಾನದಲ್ಲಿ ಅನೇಕ ನಿವಾಸಗಳು ಇವೆ. ಹಾಗಿಲ್ಲದ ಪಕ್ಷದಲ್ಲಿ ನಿಮಗೆ ತಿಳಿಸುತ್ತಿದ್ದೆ. ನಾನು ಹೋಗಿ ನಿಮಗೆ ಸ್ಥಳವನ್ನು ಅಣಿಗೊಳಿಸುತ್ತೇನೆ.
- Verse 3: ಅಣಿಗೊಳಿಸಿದ ಬಳಿಕ ಹಿಂದಿರುಗಿ ಬಂದು ನಿಮ್ಮನ್ನು ಕರೆದೊಯ್ಯುತ್ತೇನೆ. ನಾನಿರುವೆಡೆಯಲ್ಲಿಯೇ ನೀವೂ ಇರಬೇಕು.
- Verse 4: ನಾನು ಹೋಗುವ ಎಡೆಗೆ ಮಾರ್ಗವು ನಿಮಗೆ ತಿಳಿದೇ ಇದೆ,” ಎಂದು ಹೇಳಿದರು.
- Verse 5: ಆಗ ತೋಮನು, “ಪ್ರಭುವೇ, ನೀವು ಎಲ್ಲಿಗೆ ಹೋಗುತ್ತೀರೆಂದು ನಮಗೆ ತಿಳಿಯದು; ಅಂದಮೇಲೆ ಅಲ್ಲಿಗೆ ಹೋಗುವ ಮಾರ್ಗವು ಹೇಗೆ ತಿಳಿದೀತು?” ಎಂದು ಕೇಳಿದನು.
- Verse 6: ಅದಕ್ಕೆ ಯೇಸು, “ಮಾರ್ಗವೂ ಸತ್ಯವೂ ಜೀವವೂ ನಾನೇ. ನನ್ನ ಮುಖಾಂತರ ಬಾರದ ಹೊರತು ಯಾರೂ ಪಿತನ ಬಳಿಗೆ ಬರಲಾರರು.
- Verse 7: ನೀವು ನನ್ನನ್ನು ಅರಿತವರಾಗಿದ್ದರೆ ನನ್ನ ಪಿತನನ್ನು ಕೂಡ ಅರಿಯುತ್ತಿದ್ದಿರಿ. ಈಗಿನಿಂದ ಅವರನ್ನು ನೀವು ಅರಿತವರಾಗಿದ್ದೀರಿ ಹಾಗೂ ಕಂಡೂ ಇದ್ದೀರಿ,” ಎಂದು ನುಡಿದರು.
- Verse 8: ಆಗ ಫಿಲಿಪ್ಪನು, “ಪ್ರಭೂ, ನಮಗೆ ಪಿತನನ್ನು ತೋರಿಸಿ; ಅಷ್ಟೇ ಸಾಕು,” ಎಂದನು.
- Verse 9: ಅದಕ್ಕೆ ಉತ್ತರವಾಗಿ ಯೇಸು, “ನಾನು ಇಷ್ಟುಕಾಲ ನಿಮ್ಮೊಡನೆ ಇದ್ದರೂ ನಾನು ಯಾರೆಂಬುದನ್ನು ನೀನು ಅರಿತುಕೊಳ್ಳಲಿಲ್ಲವೆ? ನನ್ನನ್ನು ನೋಡಿದವನು ಪಿತನನ್ನೇ ನೋಡಿದವನಾಗಿದ್ದಾನೆ. ಹೀಗಿರುವಾಗ, ಫಿಲಿಪ್ಪನೇ, ‘ನಮಗೆ ಪಿತನನ್ನು ತೋರಿಸಿ’ ಎಂದು ಹೇಗೆ ಕೇಳುತ್ತೀ?
- Verse 10: ನಾನು ಪಿತನಲ್ಲಿ ಇದ್ದೇನೆ, ಪಿತನು ನನ್ನಲ್ಲಿ ಇದ್ದಾರೆ. ಇದನ್ನು ನೀನು ವಿಶ್ವಾಸಿಸುವುದಿಲ್ಲವೇ? ನಾನು ನಿಮಗೆ ಹೇಳುವ ಮಾತುಗಳನ್ನು ನನ್ನಷ್ಟಕ್ಕೆ ನಾನೇ ಆಡುತ್ತಿಲ್ಲ. ಪಿತನೇ ನನ್ನಲ್ಲಿದ್ದುಕೊಂಡು ತಮ್ಮ ಕಾರ್ಯವನ್ನು ಸಾಧಿಸುತ್ತಾರೆ.
- Verse 11: ‘ನಾನು ಪಿತನಲ್ಲಿ ಇದ್ದೇನೆ. ಪಿತನು ನನ್ನಲ್ಲಿ ಇದ್ದಾರೆ,’ ಎನ್ನುವ ನನ್ನ ಮಾತುಗಳನ್ನು ವಿಶ್ವಾಸಿಸಿರಿ; ಇಲ್ಲವೇ, ನಾನು ಸಾಧಿಸಿದ ಸುಕೃತ್ಯಗಳ ನಿಮಿತ್ತದಿಂದಾದರೂ ವಿಶ್ವಾಸಿಸಿರಿ.
- Verse 12: ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನನ್ನಲ್ಲಿವಿಶ್ವಾಸವುಳ್ಳವನು ನಾನು ಸಾಧಿಸುವ ಕಾರ್ಯಗಳನ್ನು ಆತನೂ ಸಾಧಿಸುವನು. ಅಷ್ಟೇ ಏಕೆ, ಅವುಗಳಿಗಿಂತಲೂ ಮಹತ್ತಾದುವುಗಳನ್ನು ಸಾಧಿಸುವನು. ಏಕೆಂದರೆ ನಾನು ಪಿತನ ಬಳಿಗೆ ಹೋಗುತ್ತೇನೆ.
- Verse 13: ಇದಲ್ಲದೆ ನೀವು ನನ್ನ ಹೆಸರಿನಲ್ಲಿ ಕೇಳಿಕೊಳ್ಳುವುದನ್ನೆಲ್ಲಾ ಮಾಡುತ್ತೇನೆ. ಹೀಗೆ ಪಿತನಿಗೆ ಪುತ್ರನಲ್ಲಿ ಮಹಿಮೆ ಉಂಟಾಗುವುದು.
- Verse 14: ಹೌದು, ನನ್ನ ಹೆಸರಿನಲ್ಲಿ ನೀವು ಏನನ್ನು ಕೇಳಿದರೂ ನಾನು ಅದನ್ನು ಮಾಡಿಯೇ ತೀರುವೆನು.
- Verse 15: ನೀವು ನನ್ನನ್ನು ಪ್ರೀತಿಸುವವರಾಗಿದ್ದರೆ ನನ್ನ ಆಜ್ಞೆಗಳನ್ನು ಕೈಗೊಂಡು ನಡೆಯುವಿರಿ.
- Verse 16: ನಾನೂ ಪಿತನನ್ನು ಕೇಳಿಕೊಳ್ಳುವೆನು; ಅವರು ನಿಮಗೆ ಬೇರೊಬ್ಬ ಪೋಷಕರನ್ನು ಕೊಡುವರು. ಇವರು ನಿಮ್ಮೊಡನೆ ಯಾವಾಗಲೂ ಇರುವರು.
- Verse 17: ಸತ್ಯಸ್ವರೂಪಿಯಾದ ಪವಿತ್ರಾತ್ಮನೇ ಈ ಪೋಷಕ. ಲೋಕವು ಇವರನ್ನು ಬರಮಾಡಿಕೊಳ್ಳದು. ಏಕೆಂದರೆ ಲೋಕ ಇವರನ್ನು ಕಾಣುವುದೂ ಇಲ್ಲ, ಅರಿತುಕೊಳ್ಳುವುದೂ ಇಲ್ಲ. ಆದರೆ ನೀವು ಇವರನ್ನು ಅರಿಯುವಿರಿ. ಕಾರಣ, ಇವರು ನಿಮ್ಮೊಂದಿಗೂ ನಿಮ್ಮಲ್ಲಿಯೂ ನೆಲಸಿರುವರು.
- Verse 18: ನಾನು ನಿಮ್ಮನ್ನು ಅನಾಥರನ್ನಾಗಿ ಬಿಟ್ಟುಹೋಗುವುದಿಲ್ಲ. ನಿಮ್ಮ ಬಳಿಗೆ ಪುನಃ ಬರುತ್ತೇನೆ.
- Verse 19: ಇನ್ನು ತುಸುಕಾಲವಾದ ನಂತರ ಲೋಕವು ನನ್ನನ್ನು ಕಾಣದು. ಆದರೆ ನೀವು ನನ್ನನ್ನು ಕಾಣುವಿರಿ. ನಾನು ಜೀವಿಸುವವನಾಗಿರುವುದರಿಂದ ನೀವೂ ಜೀವಿಸುವಿರಿ.
- Verse 20: ನಾನು ನನ್ನ ಪಿತನಲ್ಲಿ ಇರುವೆನು; ನೀವು ನನ್ನಲ್ಲಿ ಇರುವಿರಿ ಮತ್ತು ನಾನು ನಿಮ್ಮಲ್ಲಿ ಇರುವೆನು. ಇದನ್ನು ಆ ದಿನದಂದು ನೀವು ಅರಿತುಕೊಳ್ಳುವಿರಿ.
- Verse 21: ನನ್ನ ಆಜ್ಞೆಗಳನ್ನು ಅಂಗೀಕರಿಸಿ ಅವುಗಳ ಪ್ರಕಾರ ನಡೆಯುವವನೇ ನನ್ನನ್ನು ಪ್ರೀತಿಸುವವನು. ನನ್ನನ್ನು ಪ್ರೀತಿಸುವವನು ನನ್ನ ಪಿತನಿಗೂ ಪ್ರಿಯನಾಗಿರುವನು. ನಾನೂ ಅವನನ್ನು ಪ್ರೀತಿಸಿ ನನ್ನನ್ನೇ ಅವನಿಗೆ ಸಾಕ್ಷಾತ್ಕರಿಸಿಕೊಡುವೆನು.”
- Verse 22: ಆಗ ಯೂದನು, (ಈತ ಇಸ್ಕರಿಯೋತಿನ ಯೂದನಲ್ಲ) “ಪ್ರಭೂ, ನೀವು ಈ ಲೋಕಕ್ಕೆ ನಿಮ್ಮನ್ನು ಸಾಕ್ಷಾತ್ಕರಿಸಿಕೊಳ್ಳದೆ ನಮಗೆ ಮಾತ್ರ ಸಾಕ್ಷಾತ್ಕರಿಸಿಕೊಳ್ಳುತ್ತೀರಲ್ಲಾ, ಏಕೆ?” ಎಂದು ಕೇಳಿದನು.
- Verse 23: ಆಗ ಯೇಸು, “ನನ್ನನ್ನು ಪ್ರೀತಿಸುವವನು ನನ್ನ ಮಾತನ್ನು ಕೈಗೊಂಡು ನಡೆಯುವನು. ಅವನನ್ನು ನನ್ನ ಪಿತನೂ ಪ್ರೀತಿಸುವರು ಮತ್ತು ನಾವಿಬ್ಬರೂ ಅವನ ಬಳಿ ಬಂದು ಅವನಲ್ಲಿ ನೆಲೆಸುವೆವು.
- Verse 24: ನನ್ನನ್ನು ಪ್ರೀತಿಸದೆ ಇರುವವನು ನನ್ನ ಮಾತನ್ನು ಕೈಗೊಂಡು ನಡೆಯುವುದಿಲ್ಲ. ನೀವು ಕೇಳುತ್ತಿರುವ ಮಾತು ನನ್ನದಲ್ಲ, ನನ್ನನ್ನು ಕಳುಹಿಸಿದ ಪಿತನದೇ.
- Verse 25: ನಾನು ನಿಮ್ಮೊಡನೆ ಇರುವಾಗಲೇ ಇದನ್ನೆಲ್ಲಾ ನಿಮಗೆ ಹೇಳಿದ್ದೇನೆ.
- Verse 26: ಆದರೆ ಪಿತನು ನನ್ನ ಹೆಸರಿನಲ್ಲಿ ಕಳುಹಿಸಿಕೊಡುವ ಪೋಷಕರಾದ ಪವಿತ್ರಾತ್ಮ ನಿಮಗೆ ಎಲ್ಲವನ್ನೂ ಬೋಧಿಸಿ ನಾನು ಹೇಳಿರುವುದನ್ನೆಲ್ಲಾ ನಿಮ್ಮ ನೆನಪಿಗೆ ತರುವರು.
- Verse 27: ನಾನು ಶಾಂತಿಸಮಾಧಾನವನ್ನು ನಿಮಗೆ ಬಿಟ್ಟುಹೋಗುತ್ತೇನೆ; ನನ್ನ ಶಾಂತಿಸಮಾಧಾನವನ್ನು ನಿಮಗೆ ಕೊಡುತ್ತೇನೆ. ಈ ಲೋಕವು ಕೊಡುವ ರೀತಿಯಲ್ಲಿ ನಾನದನ್ನು ನಿಮಗೆ ಕೊಡುವುದಿಲ್ಲ. ನೀವು ಹೃದಯದಲ್ಲಿ ಕಳವಳಗೊಳ್ಳದಿರಿ, ಭಯಪಡಬೇಡಿ.
- Verse 28: ನಾನು ಹೊರಟುಹೋಗುತ್ತೇನೆಂದೂ ಮತ್ತೆ ನಿಮ್ಮ ಬಳಿಗೆ ಬರುತ್ತೇನೆಂದೂ ನಾನು ಹೇಳಿದ್ದನ್ನು ನೀವು ಕೇಳಿದ್ದೀರಿ. ನೀವು ನನ್ನನ್ನು ಪ್ರೀತಿಸುವವರಾಗಿದ್ದರೆ ನಾನು ಪಿತನ ಬಳಿಗೆ ಹೋಗುತ್ತಿರುವುದನ್ನು ಕುರಿತು ಹಿಗ್ಗುತ್ತಿದ್ದಿರಿ. ಏಕೆಂದರೆ ಪಿತ ನನಗಿಂತಲೂ ಶ್ರೇಷ್ಠರು.
- Verse 29: ಇದೆಲ್ಲಾ ಈಡೇರುವಾಗ ನೀವು ವಿಶ್ವಾಸಿಸುವಂತೆ ಅದು ಈಡೇರುವುದಕ್ಕೆ ಮುಂಚೆಯೇ ನಿಮಗೆ ತಿಳಿಯಪಡಿಸಿದ್ದೇನೆ.
- Verse 30: ಇಹದ ಲೋಕಾಧಿಪತಿ ಬರುವ ಸಮಯವಾಯಿತು. ಇನ್ನು ಬಹಳ ಹೊತ್ತು ನಾನು ನಿಮ್ಮೊಡನೆ ಮಾತನಾಡಲು ಕಾಲಾವಕಾಶವಿಲ್ಲ. ನನ್ನ ಮೇಲೆ ಅವನಿಗೆ ಯಾವ ಅಧಿಕಾರವೂ ಇಲ್ಲ.
- Verse 31: ಆದರೆ ನಾನು ಪಿತನನ್ನು ಪ್ರೀತಿಸುತ್ತೇನೆಂಬುದನ್ನೂ ಅವರು ವಿಧಿಸಿದಂತೆಯೇ ಮಾಡುತ್ತೇನೆ ಎಂಬುದನ್ನೂ ಲೋಕವು ತಿಳಿಯಬೇಕು. ಏಳಿ, ಇಲ್ಲಿಂದ ಹೋಗೋಣ,” ಎಂದರು.