पवित्र बाइबिल
ಹೊಸ ಒಡಂಬಡಿಕೆ
1 ಕೊರಿಂಥಿಯರಿಗೆ
7ನೇ ಅಧ್ಯಾಯ
- Verse 1: ನೀವು ಬರೆದು ಕೇಳಿರುವ ವಿಷಯಗಳ ಬಗ್ಗೆ ನಾನು ಹೇಳುವುದೇನೆಂದರೆ: ಒಬ್ಬ ವ್ಯಕ್ತಿ ಸ್ತ್ರೀಯೊಡನೆ ಲೈಂಗಿಕ ಸಂಪರ್ಕವನ್ನು ಇಟ್ಟುಕೊಳ್ಳದಿರುವುದು ಒಳ್ಳೆಯದು.
- Verse 2: ಲೈಂಗಿಕ ಪ್ರಲೋಭನೆಗಳು ಪ್ರಬಲವಾಗಿರುವುದರಿಂದ ಪ್ರತಿಯೊಬ್ಬನಿಗೂ ಸ್ವಂತ ಸತಿ ಇರಲಿ, ಪ್ರತಿಯೊಬ್ಬಳಿಗೂ ಸ್ವಂತ ಪತಿ ಇರಲಿ.
- Verse 3: ಪತಿಯಾದವನು ತನ್ನ ಸತಿಗೆ ಸಲ್ಲತಕ್ಕ ದಾಂಪತ್ಯ ಕರ್ತವ್ಯಗಳನ್ನು ನೆರವೇರಿಸಲಿ. ಅಂತೆಯೇ, ಸತಿಯಾದವಳು ತನ್ನ ಪತಿಗೆ ಸಲ್ಲತಕ್ಕ ದಾಂಪತ್ಯ ಕರ್ತವ್ಯಗಳನ್ನು ನೆರವೇರಿಸಲಿ.
- Verse 4: ಸತಿಗೆ ತನ್ನ ದೇಹದ ಮೇಲೆ ಅಧಿಕಾರವಿಲ್ಲ. ಆದರೆ ಪತಿಗೆ ಆ ಅಧಿಕಾರವಿದೆ. ಪತಿಗೆ ತನ್ನ ದೇಹದ ಮೇಲೆ ಅಧಿಕಾರವಿಲ್ಲ, ಆದರೆ ಸತಿಗೆ ಆ ಅಧಿಕಾರವಿದೆ.
- Verse 5: ಆದುದರಿಂದ ಸತಿಪತಿಯರು ಒಬ್ಬರಿಗೊಬ್ಬರು ದಾಂಪತ್ಯಕರ್ತವ್ಯಗಳನ್ನು ನೆರವೇರಿಸಲು ನಿರಾಕರಿಸಬಾರದು. ಧ್ಯಾನ, ಪ್ರಾರ್ಥನೆಗಳಲ್ಲಿ ನಿರತರಾಗಿರಲು, ಸ್ವಲ್ಪಕಾಲ ಒಬ್ಬರನ್ನೊಬ್ಬರು ಅಗಲಿರಬಹುದು. ಆದರೆ ಅದಕ್ಕೆ ಪರಸ್ಪರ ಸಮ್ಮತಿ ಇರಬೇಕು. ಅನಂತರ ಒಂದುಗೂಡಬೇಕು. ಇಲ್ಲದೆ ಹೋದರೆ, ನಿಮ್ಮಲ್ಲಿ ಸಂಯಮ ಇಲ್ಲದಿರುವುದನ್ನು ಕಂಡು ಸೈತಾನನು ಪಾಪಕ್ಕೆ ಪ್ರಚೋದಿಸಬಹುದು.
- Verse 6: ಇದು ನನ್ನ ಆಜ್ಞೆಯಲ್ಲ, ಅನುಮತಿಯಷ್ಟೆ.
- Verse 7: ಎಲ್ಲರೂ ನಾನಿರುವಂತೆ ಇರಬೇಕೆಂಬುದು ನನ್ನ ಅಭಿಲಾಷೆ. ಆದರೆ ದೇವರು ಪ್ರತಿಯೊಬ್ಬನಿಗೂ ವಿಶಿಷ್ಟ ವರವನ್ನು ದಯಪಾಲಿಸಿದ್ದಾರೆ. ಒಬ್ಬನಿಗೆ ಒಂದು ವರವಾದರೆ, ಮತ್ತೊಬ್ಬನಿಗೆ ಇನ್ನೊಂದು ವರವುಂಟು.
- Verse 8: ಅವಿವಾಹಿತರಿಗೂ ವಿಧವೆಯರಿಗೂ ನನ್ನ ಬುದ್ಧಿಮಾತು ಯಾವುದೆಂದರೆ; ನಾನಿರುವಂತೆಯೇ ಇರುವುದು ಅವರಿಗೆ ಒಳ್ಳೆಯದು.
- Verse 9: ಅವರಿಗೆ ಸಂಯಮ ಇಲ್ಲದಿದ್ದರೆ ಮದುವೆಮಾಡಿಕೊಳ್ಳಲಿ. ಕಾಮತಾಪದಿಂದ ಬೆಂದುಹೋಗುವುದಕ್ಕಿಂತ ಮದುವೆಮಾಡಿಕೊಳ್ಳುವುದೇ ಲೇಸು.
- Verse 10: ವಿವಾಹಿತರಿಗೆ ನನ್ನದೊಂದು ಆಜ್ಞೆ: ನಿಜಕ್ಕೂ ಇದು ನನ್ನದಲ್ಲ, ಪ್ರಭುವಿನ ಆಜ್ಞೆ. ಸತಿಯು ತನ್ನ ಪತಿಯನ್ನು ಬಿಟ್ಟಗಲದಿರಲಿ.
- Verse 11: ಒಂದು ವೇಳೆ ಅಗಲಿದರೆ ಮತ್ತೆ ಮದುವೆಯಾಗದಿರಲಿ. ಇಲ್ಲವೆ, ತನ್ನ ಪತಿಯೊಂದಿಗೆ ಸಂಧಾನಮಾಡಿಕೊಳ್ಳಲಿ. ಅಂತೆಯೇ ಪತಿಯಾದವನು ತನ್ನ ಸತಿಯನ್ನು ಬಿಟ್ಟುಬಿಡದಿರಲಿ.
- Verse 12: ಮಿಕ್ಕವರಿಗೆ ನಾನು ಹೇಳುವುದೇನೆಂದರೆ: ಇದು ನನ್ನ ಮಾತು, ಪ್ರಭುವಿನದಲ್ಲ: ಒಬ್ಬ ಸಹೋದರನಿಗೆ ಕ್ರೈಸ್ತವಿಶ್ವಾಸಿಯಲ್ಲದ ಸತಿ ಇದ್ದರೆ, ಆಕೆ ಅವನೊಡನೆ ದಾಂಪತ್ಯ ಜೀವನ ನಡೆಸಲು ಒಪ್ಪಿದರೆ, ಆಕೆಯನ್ನು ಬಿಟ್ಟುಬಿಡಬಾರದು.
- Verse 13: ಹಾಗೆಯೇ ಒಬ್ಬ ಕ್ರೈಸ್ತ ಸಹೋದರಿಗೆ ಕ್ರೈಸ್ತವಿಶ್ವಾಸಿಯಲ್ಲದ ಪತಿ ಇದ್ದು ಅವನು ಆಕೆಯೊಂದಿಗೆ ದಾಂಪತ್ಯಜೀವನ ನಡೆಸಲು ಒಪ್ಪಿದರೆ, ಆಕೆ ಅವನನ್ನು ಬಿಟ್ಟುಬಿಡಬಾರದು.
- Verse 14: ಏಕೆಂದರೆ, ಕ್ರೈಸ್ತವಿಶ್ವಾಸಿಯಾದ ಸತಿಯ ಮುಖಾಂತರ ಪತಿ ದೇವಜನರೊಂದಿಗೆ ಸಂಬಂಧಪಡೆಯುತ್ತಾನೆ. ಅಂತೆಯೇ ಕ್ರೈಸ್ತವಿಶ್ವಾಸಿಯಾದ ಪತಿಯ ಮುಖಾಂತರ ಸತಿ ದೇವಜನರೊಂದಿಗೆ ಸಂಬಂಧಪಡೆಯುತ್ತಾಳೆ. ಇಲ್ಲದಿದ್ದರೆ ನಿಮ್ಮ ಮಕ್ಕಳು ಅಪವಿತ್ರರಾಗುತ್ತಿದ್ದರು. ಈಗಲಾದರೋ ಅವರು ದೇವಜನರೊಂದಿಗೆ ಸಂಬಂಧ ಉಳ್ಳವರಾಗಿದ್ದಾರೆ.
- Verse 15: ಒಂದು ವೇಳೆ, ವಿಶ್ವಾಸವಿಲ್ಲದ ಸತಿಯಾಗಲಿ, ಪತಿಯಾಗಲಿ ಬೇರ್ಪಟ್ಟುಹೋಗಬೇಕೆಂದಿದ್ದರೆ ಹೋಗಲಿ. ಇಂಥ ಸಂದರ್ಭಗಳಲ್ಲಿ ಕ್ರೈಸ್ತ ಸಹೋದರನು, ಇಲ್ಲವೆ ಸಹೋದರಿಯು ವಿವಾಹ ಬಂಧನದಿಂದ ವಿಮುಕ್ತರಾಗುತ್ತಾರೆ. ಏಕೆಂದರೆ, ದೇವರು ನಿಮ್ಮನ್ನು ಶಾಂತಿಸಮಾಧಾನದಿಂದ ಬಾಳಲು ಕರೆದಿದ್ದಾರೆ.
- Verse 16: ಅದೂ ಅಲ್ಲದೆ ಸ್ತ್ರೀಯೇ, ಕ್ರೈಸ್ತವಿಶ್ವಾಸಿಯಲ್ಲದ ನಿನ್ನ ಪತಿಯನ್ನು ಉದ್ಧಾರಮಾಡುವೆಯೆಂದು ಹೇಗೆ ಹೇಳಬಲ್ಲೆ? ಪುರುಷನೇ, ಕ್ರೈಸ್ತವಿಶ್ವಾಸಿಯಲ್ಲದ ನಿನ್ನ ಸತಿಯನ್ನು ಉದ್ಧಾರಮಾಡುವೆಯೆಂದು ಹೇಗೆ ಹೇಳಬಲ್ಲೆ?
- Verse 17: ದೇವರ ಕರೆಗೆ ಮತ್ತು ಪ್ರಭು ನೀಡಿರುವ ವರದಾನಗಳಿಗೆ ಅನುಗುಣವಾಗಿ ಪ್ರತಿಯೊಬ್ಬನೂ ಬಾಳುವೆ ನಡೆಸಲಿ. ಎಲ್ಲ ಸಭೆಗಳಿಗೂ ನಾನಿದನ್ನೇ ವಿಧಿಸಿದ್ದೇನೆ.
- Verse 18: ಸುನ್ನತಿಮಾಡಿಸಿಕೊಂಡವನು ದೇವರ ಕರೆಹೊಂದಿದ್ದರೆ ಅವನು ಸುನ್ನತಿಮಾಡಿಸಿಕೊಂಡದ್ದಕ್ಕಾಗಿ ಚಿಂತಿಸಬೇಕಾಗಿಲ್ಲ. ಸುನ್ನತಿ ಮಾಡಿಸಿಕೊಳ್ಳದವನು ದೇವರ ಕರೆಹೊಂದಿದ್ದರೆ ಅವನು ಸುನ್ನತಿ ಮಾಡಿಸಿಕೊಳ್ಳುವ ಅವಶ್ಯಕತೆಯಿಲ್ಲ.
- Verse 19: ಸುನ್ನತಿ ಮಾಡಿಸಿಕೊಳ್ಳುವುದೋ ಅಥವಾ ಮಾಡಿಸಿಕೊಳ್ಳದಿರುವುದೋ ಮುಖ್ಯವಲ್ಲ, ದೇವರ ಆಜ್ಞೆಗಳಿಗೆ ವಿಧೇಯನಾಗಿರುವುದೇ ಮುಖ್ಯ.
- Verse 20: ದೇವರು ಕರೆದಾಗ ಒಬ್ಬನು ಯಾವ ಸ್ಥಿತಿಯಲ್ಲಿದ್ದನೋ ಅದೇ ಸ್ಥಿತಿಯಲ್ಲಿ ಮುಂದುವರಿಯಲಿ.
- Verse 21: ದೇವರು ಕರೆದಾಗ ನೀನು ದಾಸ್ಯದಲ್ಲಿದ್ದೆಯೋ? ಚಿಂತೆಯಿಲ್ಲ. ಆದರೆ ಸ್ವತಂತ್ರನಾಗುವ ಅವಕಾಶ ದೊರೆತರೆ ಅದನ್ನು ಬಿಡಬೇಡ.
- Verse 22: ಪ್ರಭುವಿನಿಂದ ಕರೆಹೊಂದಿದವನು ದಾಸನಾಗಿದ್ದರೂ ಪ್ರಭುವಿನಲ್ಲಿ ಅವನು ಸ್ವತಂತ್ರನೆ. ಅದೇ ಮೇರೆಗೆ ಸ್ವತಂತ್ರನಾದವನು ಕ್ರಿಸ್ತಯೇಸುವಿನಿಂದ ಕರೆಹೊಂದಿದ್ದರೆ ಅವನು ಕ್ರಿಸ್ತಯೇಸುವಿನ ದಾಸನೇ ಆಗುತ್ತಾನೆ.
- Verse 23: ನಿಮ್ಮನ್ನು ಕ್ರಯಕ್ಕೆ ಕೊಳ್ಳಲಾಗಿದೆ. ಆದ್ದರಿಂದ ಮಾನವರಿಗೆ ದಾಸರಾಗಬೇಡಿ.
- Verse 24: ಪ್ರಿಯ ಸಹೋದರರೇ, ದೇವರು ಕರೆದಾಗ ಒಬ್ಬನು ಯಾವ ಸ್ಥಿತಿಯಲ್ಲಿ ಇದ್ದನೋ ಅದೇ ಸ್ಥಿತಿಯಲ್ಲಿ ದೇವರೊಂದಿಗೆ ಮುನ್ನಡೆಯಲಿ.
- Verse 25: ಅವಿವಾಹಿತರ ಬಗ್ಗೆ ಪ್ರಭುವಿನಿಂದ ಬಂದ ಕಟ್ಟಳೆ ಯಾವುದೂ ನನ್ನಲ್ಲಿಲ್ಲ. ಪ್ರಭುವಿನ ಕೃಪೆಯಿಂದ ನಂಬಿಕೆಗೆ ಅರ್ಹನಾದ ವ್ಯಕ್ತಿಯಂತೆ ನನ್ನ ಅಭಿಪ್ರಾಯಗಳನ್ನು ನಿಮ್ಮ ಮುಂದೆ ಇಡುತ್ತೇನೆ.
- Verse 26: ಇಂದಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಒಬ್ಬನು ತಾನು ಇದ್ದ ಸ್ಥಿತಿಯಲ್ಲೇ ಇರುವುದು ಉತ್ತಮವೆಂದು ಭಾವಿಸುತ್ತೇನೆ.
- Verse 27: ನಿನಗೆ ವಿವಾಹವಾಗಿದೆಯೋ? ವಿವಾಹ ವಿಚ್ಛೇದನಕ್ಕೆ ಯತ್ನಿಸಬೇಡ. ನೀನು ಅವಿವಾಹಿತನೋ? ವಿವಾಹವಾಗಲು ಅವಸರಪಡಬೇಡ.
- Verse 28: ಹಾಗೇನಾದರೂ ನೀನು ವಿವಾಹ ಮಾಡಿಕೊಂಡರೆ ಅದು ಪಾಪವಲ್ಲ. ಅಂತೆಯೇ, ಅವಿವಾಹಿತ ಸ್ತ್ರೀಯೊಬ್ಬಳು ವಿವಾಹ ಮಾಡಿಕೊಂಡರೆ ಅದು ಪಾಪವಲ್ಲ. ಆದರೆ ದಂಪತಿಗಳಿಗೆ ತಾಪತ್ರಯಗಳು ಅನೇಕ. ಇವುಗಳು ನಿಮ್ಮನ್ನು ಬಾಧಿಸದಿರಲೆಂಬುದೇ ನನ್ನ ಹಾರೈಕೆ.
- Verse 29: ಪ್ರಿಯ ಸಹೋದರರೇ, ನನ್ನ ಅಭಿಪ್ರಾಯ ಇದು: ಉಳಿದಿರುವ ಕಾಲವು ಕೊಂಚ ಮಾತ್ರ. ಆದ್ದರಿಂದ ಮದುವೆಯಾದವರು ಮದುವೆಯಾಗದವರೋ ಎಂಬಂತೆ ನಡೆದುಕೊಳ್ಳಲಿ.
- Verse 30: ದುಃಖಿತರು ದುಃಖವಿಲ್ಲದವರಂತೆ, ಸಂತೋಷಭರಿತರು ಸಂತೋಷರಹಿತರಂತೆ ಹಾಗು ಕೊಂಡುಕೊಳ್ಳುವವರು ಕೊಂಡದ್ದು ತಮ್ಮದಲ್ಲವೋ ಎಂಬಂತೆ ನಡೆದುಕೊಳ್ಳಲಿ.
- Verse 31: ಲೋಕದ ವ್ಯವಹಾರದಲ್ಲಿ ಇರುವವರು ಅದರಲ್ಲಿಯೇ ತಲ್ಲೀನರಾಗದಿರಲಿ. ಏಕೆಂದರೆ, ಲೋಕದ ರೂಪರೇಷೆಗಳು ಗತಿಸಿಹೋಗುತ್ತವೆ.
- Verse 32: ನೀವು ಚಿಂತೆಯಿಲ್ಲದೆ ಇರಬೇಕೆಂಬುದೇ ನನ್ನ ಇಷ್ಟ. ಮದುವೆಯಾಗದವನು ಪ್ರಭುವಿನ ಸೇವೆಯಲ್ಲಿ ತತ್ಪರನಾಗಿರುತ್ತಾನೆ; ಪ್ರಭುವನ್ನು ಮೆಚ್ಚಿಸಲು ಶ್ರಮಿಸುತ್ತಾನೆ.
- Verse 33: ಮದುವೆ ಆದವನು ಲೋಕವ್ಯವಹಾರಗಳಲ್ಲಿ ಮಗ್ನನಾಗುತ್ತಾನೆ. ತನ್ನ ಸತಿಯನ್ನು ಮೆಚ್ಚಿಸಲು ಪ್ರಯತ್ನಿಸುತ್ತಾನೆ.
- Verse 34: ಅಂಥವನು ಉಭಯ ಸಂಕಟಕ್ಕೆ ಸಿಕ್ಕಿಕೊಳ್ಳುತ್ತಾನೆ. ಮದುವೆಯಾಗದ ಮಹಿಳೆ ಅಥವಾ ಕನ್ನಿಕೆ ಪ್ರಭುವಿನ ಸೇವೆಯಲ್ಲಿ ನಿರತಳಾಗಿರುತ್ತಾಳೆ. ದೇಹಾತ್ಮಗಳೆರಡನ್ನೂ ಪ್ರಭುವಿಗೆ ಮೀಸಲಾಗಿಡುತ್ತಾಳೆ. ಆದರೆ ವಿವಾಹಿತ ಸ್ತ್ರೀ ಲೋಕವ್ಯವಹಾರಗಳಲ್ಲಿ ಮಗ್ನಳಾಗಿರುತ್ತಾಳೆ. ತನ್ನ ಪತಿಯನ್ನು ಮೆಚ್ಚಿಸಲು ಪ್ರಯತ್ನಿಸುತ್ತಾಳೆ.
- Verse 35: ನಿಮ್ಮನ್ನು ಬಂಧಿಸಲು ಅಲ್ಲ, ಬೆಂಬಲಿಸಲು ಇದನ್ನು ಹೇಳುತ್ತಿದ್ದೇನೆ. ನೀವು ಸಜ್ಜನರಾಗಿ ನಡೆದುಕೊಂಡು, ಭಿನ್ನಭಾವವಿಲ್ಲದೆ ಪ್ರಭುವಿನ ಪಾದಸೇವೆ ಮಾಡಬೇಕೆಂಬುದೇ ನನ್ನ ಆಶೆ.
- Verse 36: ಒಬ್ಬನು ತನಗೆ ನಿಶ್ಚಿತವಾದ ಕನ್ಯೆಯೊಡನೆ ಅನುಚಿತ ರೀತಿಯಲ್ಲಿ ವರ್ತಿಸುತ್ತಿರಬಹುದು; ಅವನಿಗೆ ಸಂಯಮ ತಪ್ಪುವಂತಿದ್ದರೆ, ತಾನು ಆಶಿಸುವಂತೆ ಅವನು ಮದುವೆಮಾಡಿಕೊಳ್ಳಲಿ, ಅದು ಪಾಪವಲ್ಲ.
- Verse 37: ಆದರೆ ಅವನು ಯಾರ ಒತ್ತಾಯಕ್ಕೂ ಮಣಿಯದೆ ದೃಢಚಿತ್ತನಾಗಿದ್ದು, ತನಗೆ ನಿಶ್ಚಿತಳಾದ ಕನ್ಯೆಯೊಡನೆ ಮದುವೆಯಾಗುವುದು ಬೇಡವೆಂದು ತೀರ್ಮಾನಿಸಿಕೊಂಡರೆ ಮತ್ತು ತನ್ನ ಸಂಯಮವನ್ನು ಹತೋಟಿಯಲ್ಲಿಟ್ಟುಕೊಂಡಿದ್ದರೆ ಅವನು ಅಂತೆಯೇ ಮಾಡಲಿ. ಹೀಗೆ, ಮದುವೆ ಆಗದೆ ಇರುವುದು ಒಳ್ಳೆಯದು.
- Verse 38: ಈ ರೀತಿ ನಿಶ್ಚಯವಾದ ಕನ್ಯೆಯನ್ನು ಮದುವೆಮಾಡಿಕೊಳ್ಳುವುದು ಒಳ್ಳೆಯದೇ, ಮದುವೆ ಮಾಡಿಕೊಳ್ಳದಿರುವುದು ಇನ್ನಷ್ಟು ಒಳ್ಳೆಯದೇ.
- Verse 39: ಪತಿ ಬದುಕಿರುವವರೆಗೂ ಸತಿ ಅವನಿಗೆ ಬಂಧಿತಳು. ಅವನು ಸತ್ತರೆ ತಾನು ಇಷ್ಟಪಟ್ಟವನನ್ನು ಮತ್ತೆ ಮದುವೆ ಆಗಲು ಸ್ವತಂತ್ರಳು. ಆದರೆ ಅವನು ಕ್ರೈಸ್ತವಿಶ್ವಾಸಿಯಾಗಿರಬೇಕು.
- Verse 40: ಆಕೆ ವಿವಾಹವಾಗದೆ ಹಾಗೇ ಉಳಿದರೆ ಹೆಚ್ಚು ಭಾಗ್ಯವಂತಳು. ಇದು ನನ್ನ ಅಭಿಪ್ರಾಯ. ಆದರೂ ದೇವರ ಆತ್ಮದ ಪ್ರೇರಣೆಯಿಂದ ಇದನ್ನು ಹೇಳುತ್ತಿದ್ದೇನೆ, ಎಂಬುದೇ ನನ್ನ ನಂಬಿಕೆ.