ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
4ನೇ ಅಧ್ಯಾಯ
1 : ಸತ್ಯಸ್ವರೂಪನಾದ ದೇವಾ, ಭಕ್ತನ ಮೊರೆಗೆ ಸದುತ್ತರ ಪಾಲಿಸೊ I ಆಪತ್ತಿನಲ್ಲಿ ಆಶ್ರಯವಿತ್ತ ದೇವಾ, ಎನ್ನ ಪ್ರಾರ್ಥನೆಯ ಆಲಿಸೊ II
2 : ಎಲೆ ಮಾನವ, ಎಲ್ಲಿಯತನಕ ಕೆಡಿಸುವೆ ಎನ್ನ ಘನತೆಯ? I ಅದೆಷ್ಟು ಕಾಲ ಹುರುಳಿಲ್ಲದನು ಬಯಸಿ ಅರಸುವೆ ಹುಸಿಯ? II
3 : ಭಕ್ತನನು ಪ್ರಭು ಪ್ರತ್ಯೇಕಿಸಿಕೊಂಡನೆಂದು ತಿಳಿದುಕೊ I ನಾ ಮೊರೆಯಿಟ್ಟಾಗ ಆತ ಕಿವಿಗೊಡುವನೆಂದು ಅರಿತುಕೊ II
4 : ಕೋಪಗೊಂಡರೂ ದೂರವಿರು ಪಾಪದಿಂದ I ಶಯನದಲ್ಲಿದ್ದರೂ ಧ್ಯಾನಿಸು ಹೃದಯದಿಂದ II
5 : ಅರ್ಪಿಸಿರಿ ಯೋಗ್ಯ ಬಲಿಗಳನೆ I ಇಡಿರಿ ಭರವಸೆ ಪ್ರಭುವಿನಲೆ II
6 : “ಒಳಿತು ಮಾಳ್ಪರೆಲ್ಲಿ!” ಎಂದು ಕೇಳುತಿಹರು ಜನತೆ I ಬೆಳಗಿಸಲಿ ನಮ್ಮನು, ಓ ಪ್ರಭು, ನಿನ್ನ ಮೊಗದ ಘನತೆ II
7 : ಧಾನ್ಯದ್ರಾಕ್ಷಿಗಳ ಸುಗ್ಗಿಸಂತಸಕ್ಕಿಂತಲು I ಮಿಗಿಲಾನಂದ ತುಂಬಿಸಿರುವೆ ನೀ ಎನ್ನೆದೆಯೊಳು II
8 : ಮಲಗಿ ನಿದ್ರಿಸುವೆನು ನಾ ನಿಶ್ಚಿಂತನಾಗಿ I ಪ್ರಭು ನೀ ಕಾಯುವೆ ಎನ್ನ ಸುರಕ್ಷಿತನಾಗಿ II