ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಪ್ರಲಾಪಗಳು
4ನೇ ಅಧ್ಯಾಯ
- Verse 1: ಅಕಟಕಟಾ! ಎಷ್ಟು ಮಸುಕಾಗಿದೆ ಬಂಗಾರ ಎಷ್ಟು ಕಾಂತಿಹೀನವಾಗಿಬಿಟ್ಟಿವೆ ಅಪ್ಪಟ ಚಿನ್ನ! ಪವಿತ್ರಾಲಯದ ಕಲ್ಲುಗಳೂ ಬಿದ್ದಿವೆ ಚೆಲ್ಲಾಪಿಲ್ಲಿಯಾಗಿ ಬೀದಿಬೀದಿಗಳ ಬದಿಯಲ್ಲಿ ರಾಶಿರಾಶಿಯಾಗಿ!
- Verse 2: ಅಯ್ಯೋ, ಅಪರಂಜಿಯಂತೆ ಅಮೂಲ್ಯವಾಗಿದ್ದ ಸಿಯೋನ್ ಪ್ರಜೆ ಇಂದು ಬೇಡವೆಂದು ಬಿಸಾಡಿದ ಕುಂಬಾರನ ಮಣ್ಣುಮಡಕೆ! ಅಮೂಲ್ಯವಾಗಿದ್ದರು ಸಿಯೋನಿನ ಪ್ರಜೆಗಳು ಅಪರಂಜಿಯಂತೆ ಅಯ್ಯೋ ಈಗ ಅವರಾಗಿಹರು ಕುಂಬಾರನೆ ಬಿಸಾಡಿದ ಮಡಕೆಯಂತೆ.
- Verse 3: ಮರಿಗಳಿಗೆ ಮೊಲೆಕೊಟ್ಟು ಹಾಲುಣಿಸುತ್ತವೆ ನರಿಗಳು ನನ್ನ ಜನರು ಆಗಿಹರು ಕಾಡಿನ ಉಷ್ಟ್ರಪಕ್ಷಿಯಂತೆ ಕ್ರೂರಿಗಳು.
- Verse 4: ದಾಹದಿಂದ ಸೇದುಹೋಗಿದೆ ಮೊಲೆಕೂಸಿನ ನಾಲಿಗೆ ಅನ್ನವಿಕ್ಕುವರಾರೂ ಇಲ್ಲ, ಹಂಬಲಿಸುವ ಆ ಹಸುಳೆಗಳಿಗೆ.
- Verse 5: ಮೃಷ್ಟಾನ್ನ ಉಣ್ಣುತ್ತಿದ್ದವರು ದಿಕ್ಕೆಟ್ಟು ಅಲೆಯುತ್ತಿರುವರು ಚಿಕ್ಕಂದಿನಿಂದಲೆ ನಾರುಮಡಿಯನ್ನು ತೊಡುತ್ತಿದ್ದವರು ತಿಪ್ಪೆಗಳನ್ನು ಅಪ್ಪಿಕೊಳ್ಳುವ ಗತಿಗೆ ಇಳಿದಿರುವರು.
- Verse 6: ‘ಸೊದೋಮ್’ ಊರು ಹಾಳಾಯಿತು ಕ್ಷಣಮಾತ್ರದಲ್ಲೆ ಅದರ ಮೇಲೆ ಯಾರೂ ಕೈಮಾಡದೆಯೇ. ಅದಕ್ಕಿಂತಲೂ ಹೆಚ್ಚಾಯಿತಲ್ಲಾ ನನ್ನ ಜನರ ಅಧರ್ಮ!
- Verse 7: ನನ್ನ ಜನತೆಯ ಮಹನೀಯರು ಹಿಮಕ್ಕಿಂತ ಶುಭ್ರ, ಹಾಲಿಗಿಂತ ಬಿಳುಪು. ಅವರ ದೇಹದ ಬಣ್ಣ ಹವಳವನ್ನು ಮೀರಿತ್ತು ಅವರ ರೂಪ ಇಂದ್ರನೀಲ ಮಣಿಯಂತೆ ಅಂದವಾಗಿತ್ತು.
- Verse 8: ಈಗ ಅವರ ಮುಖ ಕಾರ್ಮೋಡಕ್ಕಿಂತ ಕಪ್ಪು ಬೀದಿಗಳಲ್ಲಿ ನೋಡುತ್ತಿದ್ದವರಿಗೆ ಅವರ ಗುರುತೂ ಸಿಗದು. ಅವರ ಚರ್ಮ ಎಲುಬುಗಳಿಗೆ ಅಂಟಿಕೊಂಡಿದೆ ಅದಕ್ಕೆ ಸುಕ್ಕು ಹಿಡಿದಿದೆ; ಒಣಗಿ ಕಟ್ಟಿಗೆಯಾಗಿದೆ.
- Verse 9: ಹಸಿವೆಯಿಂದ ಹತರಾದವರಿಗಿಂತ ಖಡ್ಗದಿಂದ ಹತರಾದವರು ಲೇಸು. ತುತ್ತಾದರು ಅವರು ಕ್ಷಾಮಕ್ಕೆ ಕ್ಷಯಿಸಿಹೋದರು ನೆಲದ ಗೆಡ್ಡೆಗೆಣಸೂ ಸಿಗದೆ.
- Verse 10: ಕರುಣಾಮಯಿಗಳಾದ ಹೆಂಗಳೆಯರು ತಮ್ಮ ಕಂದಮ್ಮಗಳನ್ನು ಸ್ವಂತ ಕೈಯಿಂದ ಬೇಯಿಸಿದರು. ನನ್ನ ಜನರ ಪರಿವಿನಾಶದ ಕಾಲದೊಳು ತಮ್ಮ ತಾಯಿಗಳಿಗೆ ತಿಂಡಿಯಾದರು ಆ ಹಸುಳೆಗಳು.
- Verse 11: ಸುರಿಸಿದ್ದಾನೆ ಸರ್ವೇಶ್ವರ ತನ್ನ ರೋಷಾಗ್ನಿಯನ್ನು ತೀರಿಸಿಕೊಂಡಿದ್ದಾನೆ ತನ್ನ ಉಗ್ರಕೋಪವನ್ನು. ಆತ ಹೊತ್ತಿಸಿದ ಬೆಂಕಿಗೆ ಸಿಯೋನಿನ ಅಸ್ತಿವಾರ ಆಹುತಿಯಾಗಿದೆ.
- Verse 12: ವೈರಿಗಳೂ ವಿರೋಧಿಗಳೂ ಜೆರುಸಲೇಮಿನ ಬಾಗಿಲೊಳಗೆ ಕಾಲಿಡುವರೆಂದು ವಿಶ್ವದ ರಾಜರಾಗಲಿ, ನಿವಾಸಿಗಳಾಗಲಿ ನಂಬಿರಲಿಲ್ಲ ಯಾರೂ.
- Verse 13: ನಗರದ ನಡುವೆಯೇ ಆದ ನೀತಿವಂತರ ರಕ್ತಪಾತದಿಂದ ಯಾಜಕರು, ಪ್ರವಾದಿಗಳು ಎಸಗಿದ ಈ ಪಾಪದೋಷಗಳಿಂದ ಬಂದೊದಗಿತು ಈ ಪರಿತಾಪವೆಲ್ಲ.
- Verse 14: ಕುರುಡರಂತೆ ಬೀದಿಗಳಲ್ಲಿ ಅಲೆಯುತ್ತಿಹರು ಆ ಯಾಜಕರು ಮತ್ತು ಪ್ರವಾದಿಗಳು. ಅವರ ಬಟ್ಟೆಯನ್ನೂ ಯಾರೂ ಮುಟ್ಟರು ಏಕೆಂದರೆ ರಕ್ತದಿಂದ ಅವರು ಕಳಂಕಿತರಾಗಿಹರು.
- Verse 15: ಅವರನ್ನು ನೋಡುವವರೂ “ತೊಲಗಿರಿ, ನೀವು ಅಶುದ್ಧರು ನಡೆಯಿರಿ, ನಡೆಯಿರಿ, ಮುಟ್ಟಬೇಡಿ” ಎಂದು ಕೂಗುತ್ತಿರುವರು. ಅವರು ಓಡಿ ಅನ್ಯನಾಡುಗಳಲ್ಲಿ ಅಲೆಯುತ್ತಿರಲು “ಇವರು ಇನ್ನು ಇಲ್ಲಿ ತಂಗಕೂಡದು” ಎನ್ನುತಿಹರು ಅಲ್ಲಿನ ನಾಡಿಗರು.
- Verse 16: ಸರ್ವೇಶ್ವರನ ದೃಷ್ಟಿ ಅವರನ್ನು ಚದರಿಸಿದೆ ಇನ್ನು ಆತ ತೋರನು ಅವರಿಗೆ ಕರುಣೆ. ಯಾಜಕರಾದರೂ ಅವರಿಗೆ ಮರ್ಯಾದೆ ತಪ್ಪಿಹೋಗಿದೆ ಹಿರಿಯರಾದರೂ ಅವರಿಗೆ ಆದರಣೆ ಇಲ್ಲದಿದೆ.
- Verse 17: ಮಬ್ಬಾಯಿತು ಕಣ್ಣು ವ್ಯರ್ಥವಾಗಿ ನೆರವನ್ನು ನಿರೀಕ್ಷಿಸುತ ರಕ್ಷಿಸಲಾಗದ ರಾಷ್ಟ್ರಕ್ಕಾಗಿ ಕೋವರದಲ್ಲಿ ಕಾದು ನೋಡುತ.
- Verse 18: ಶತ್ರು ನಮ್ಮನ್ನು ಹೆಜ್ಜೆಹೆಜ್ಜೆಗೂ ಹುಡುಕುತ್ತಿದ್ದುದರಿಂದ ಹಾದಿಬೀದಿಗಳಲ್ಲಿ ಸಂಚಾರಮಾಡಲೂ ಆಗುತ್ತಿರಲಿಲ್ಲ. ನಮಗೆ ಕಾಲವು ತೀರಿತು, ಅಂತ್ಯವು ಸಮೀಪಿಸಿತು; ಹೌದು, ನಮ್ಮ ಅಂತ್ಯವು ಬಂದೇಬಿಟ್ಟಿತು!
- Verse 19: ಹದ್ದುಗಳ ವೇಗದಿಂದ ಹಿಂದಟ್ಟಿಬಂದರು ನಮ್ಮನ್ನು ಬೆನ್ನಟ್ಟಿ ಬೆಟ್ಟಗಳನ್ನೇರಿದರು ಅರಣ್ಯಗಳಲ್ಲಿ ನಮಗಾಗಿ ಹೊಂಚುಹಾಕಿದರು.
- Verse 20: ಯಾವನನ್ನು ಕುರಿತು ನಾವು: “ನಮ್ಮ ಬಾಳಿನ ಉಸಿರು, ದೇವರಿಂದ ಅಭಿಷಿಕ್ತನು, ಇವನ ಆಶ್ರಯದಿಂದಲೆ ರಾಷ್ಟ್ರಗಳ ನಡುವೆ ನಮಗೆ ಉಳಿವು” ಎಂದುಕೊಂಡೆವೋ ಅಂಥವನೇ ಸಿಕ್ಕಿಬಿದ್ದಿದ್ದಾನೆ ಹಗೆಗಳು ತೋಡಿದ ಗುಳಿಯೊಳಗೆ!
- Verse 21: ‘ಊಚ’ ಮತ್ತು ‘ಎದೋಮ್’ ನಾರೀಮಣಿಗಳೇ, ಸಂತೋಷಿಸಿ ಉಲ್ಲಾಸಿಸುತ್ತಿರುವಿರಿ ಅಲ್ಲವೇ? ಆದರೆ ಖಂಡಿತ ಬರುವುದು ಕಹಿಪಾನದ ಪಾತ್ರೆ ನಿಮ್ಮ ಪಾಲಿಗೆ ಅಮಲೇರಿ ಬೆತ್ತಲೆಯಾಗುವ ಗತಿ ಬಂದೇಬರುವುದು ನಿಮಗೆ!
- Verse 22: ‘ಸಿಯೋನ್’ ನಾರಿಮಣಿಯೇ, ನಿನ್ನ ದೋಷದ ಫಲವನ್ನು ಅನುಭವಿಸಿ ಆಗಿದೆ. ಸರ್ವೇಶ್ವರನು ಮತ್ತೆ ಒಯ್ಯನು ನಿನ್ನನ್ನು ಸೆರೆಗೆ. ‘ಎದೋಮ್’ ನಾರಿಮಣಿಯೇ, ನಿನ್ನ ದೋಷದ ನಿಮಿತ್ತ ಸರ್ವೇಶ್ವರನು ನಿನ್ನನ್ನು ದಂಡಿಸುವನು ನಿನ್ನ ಪಾಪಾಕ್ರಮಗಳನ್ನು ಬಯಲಿಗೆ ಎಳೆಯುವನು.