పరిశుద్ధ గ్రంథము
ಹಳೆಯ ಒಡಂಬಡಿಕೆ
ಕೀರ್ತನೆಗಳು
47ನೇ ಅಧ್ಯಾಯ
1 : ಸರ್ವ ಜನಾಂಗಗಳೇ, ಚಪ್ಪಾಳೆ ಹೊಡೆಯಿರಿ I ಸರ್ವೇಶ್ವರನಿಗೆ ಜಯಜಯ ಘೋಷ ಮಾಡಿರಿ II
2 : ಪರಾತ್ಪರನಾದ ಪ್ರಭುವು ಘನಗಂಭೀರನು I ಪ್ರಪಂಚಕ್ಕೆಲ್ಲ ರಾಜಾಧಿರಾಜನು II
3 : ಜನಾಂಗಗಳನಾತ ನಮಗಧೀನಪಡಿಸಿಹನು I ರಾಷ್ಟ್ರಗಳನು ನಮಗೆ ಪಾದಪೀಠವಾಗಿಸಿಹನು II
4 : ಆಯ್ದನಾಡನು ಸೊತ್ತಾಗಿ ನೀಡಿದನೆಮಗೆ I ಪ್ರತಿಷ್ಠಿತರು ನಾವು, ಆತನೊಲಿದ ಯಕೋಬಿಗೆ II
5 : ಏರಿದನು ಪ್ರಭು ಜಯಜಯಕಾರದೊಂದಿಗೆ I ಆರೋಹಣವಾದನು ತುತೂರಿನಾದ ಜೊತೆಗೆ II
6 : ಕೀರ್ತಿಸಿರಿ, ನಮ್ಮ ದೇವನನು ಸಂಕೀರ್ತಿಸಿರಿ I ಕೀರ್ತಿಸಿರಿ, ನಮ್ಮ ರಾಜನನು ಸಂಕೀರ್ತಿಸಿರಿ II
7 : ದೇವನು ಭೂಮಂಡಲಕ್ಕೆಲ್ಲಾ ಒಡೆಯನು I ಕೀರ್ತನೆಯಿಂದ ಕೊಂಡಾಡಿರಿ ಆತನನು II
8 : ವಹಿಸಿಕೊಂಡನು ದೇವನು ಸರ್ವಾಧಿಪತ್ಯ I ಅಲಂಕರಿಸಿಹನು ತನ್ನ ಪೂಜ್ಯ ಗದ್ದುಗೆಯ II
9 : ಒಟ್ಟುಗೂಡಿ ಬಂದರು ಪ್ರಜೆಯ ಪ್ರಮುಖರು I ಅಬ್ರಹಾಮನ ದೇವಜನರೊಡನೆ ಸೇರಿಕೊಂಡರು II ಭೂಪಾಲರೆಲ್ಲರೂ ದೇವರಿಗೆ ಅಧೀನರು I ಸರ್ವೋನ್ನತನು, ಸಾರ್ವಭೌಮನು ದೇವರು II